38 ವರ್ಷಗಳ ಬಳಿಕ ಲೆಫೆಬ್ವ್ರೆಯ ಭಿನ್ನಮತದ ಘಟನೆ ಪುನರಾವರ್ತನೆಯಾಯಿತು.
ವ್ಯಾಟಿಕನ್ ವರದಿ
ಆರ್ಚ್‌ಬಿಷಪ್ ಮಾರ್ಸೆಲ್ ಲೆಫೆಬ್ವ್ರೆ ಸ್ಥಾಪಿಸಿದ ಸಂತ Xನೇ ಪಿಯಸ್ ರವರು ಯಾಜಕರ ಸಹೋದರತ್ವದ ಇತಿಹಾಸವು ಕಥೋಲಿಕ ಧರ್ಮ ಸಭೆಯೊಂದಿಗೆ ದೀರ್ಘಕಾಲದ ಉದ್ವಿಗ್ನ ಸಂಬಂಧಗಳಿಂದ ಕೂಡಿದೆ. ಧರ್ಮ ಸಭೆಯು ಹಲವಾರು ಬಾರಿ ಸಂವಾದ, ಸಮನ್ವಯ ಮತ್ತು ಪುನರ್ಮಿಲನಕ್ಕಾಗಿ ಉದಾರ ಪ್ರಯತ್ನಗಳನ್ನು ನಡೆಸಿದರೂ, ಜಗದ್ಗುರುಗಳ ಅನುಮತಿಯಿಲ್ಲದೆ ಹಾಗೂ ಅವರ ಇಚ್ಛೆಗೆ ವಿರುದ್ಧವಾಗಿ ಬಿಷಪ್‌ಗಳ ಸಮರ್ಪಣೆಯನ್ನು ನಡೆಸಿದ ಕಾರಣ, ಈ ಸಹೋದರತ್ವವು ಮತ್ತೊಮ್ಮೆ ರೋಮಿನ ಧರ್ಮ ಸಭೆಯೊಂದಿಗಿನ ಪೂರ್ಣ ಐಕ್ಯತೆಯಿಂದ ದೂರವಾಯಿತು. ಇದರ ಪರಿಣಾಮವಾಗಿ ಬಿಷಪ್‌ಗಳು, ಯಾಜಕರು ಹಾಗೂ ಈ ಸಹೋದರತ್ವಕ್ಕೆ ಔಪಚಾರಿಕವಾಗಿ ಬದ್ಧರಾಗಿರುವ ವಿಶ್ವಾಸಿಗಳ ಮೇಲೆ ಗಂಭೀರ ಕ್ಯಾನನ್ ಕಾನೂನು ಪರಿಣಾಮಗಳು ಉಂಟಾಗಿವೆ.
ಜಗದ್ಗುರು ಸಂತ VIನೇ ಪೌಲರ ಕಾಲದಿಂದಲೇ ಈ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಅನೇಕ ಪ್ರಯತ್ನಗಳು ನಡೆದವು. 1970ರಲ್ಲಿ ಸ್ಥಾಪಿತವಾದ ಸಹೋದರತ್ವವು ಆರಂಭದಲ್ಲಿ ಧರ್ಮ ಸಭೆಯ ಅನುಮೋದನೆ ಪಡೆದಿದ್ದರೂ, ನಂತರ ಎರಡನೇ ವ್ಯಾಟಿಕನ್ ಮಹಾಸಭೆಯ ಬೋಧನೆಗಳು ಹಾಗೂ ನವೀಕೃತ ರೋಮಿನ ಲಿಟುರ್ಜಿಯನ್ನು ಆರ್ಚ್‌ಬಿಷಪ್ ಲೆಫೆಬ್ವ್ರೆ ತಿರಸ್ಕರಿಸಿದರು. ಜಗದ್ಗುರು VIನೇ ಪೌಲರು ಹಲವು ಬಾರಿ ಪತ್ರ ಬರೆದು, ಪ್ರತಿನಿಧಿಗಳನ್ನು ಕಳುಹಿಸಿ ಸಂವಾದ ನಡೆಸಿದರೂ, ಲೆಫೆಬ್ವ್ರೆ ತಮ್ಮ ನಿಲುವನ್ನು ಬದಲಿಸಲಿಲ್ಲ. ಕೊನೆಗೆ ಅವರಿಗೆ ಒಂದು ದಿವಿನಿಸ್ ಅಮಾನತು ವಿಧಿಸಲಾಯಿತು, ಆದರೂ ಅವರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು.
ಜಗದ್ಗುರು ಸಂತ ದ್ವಿತೀಯ ಜಾನ್ ಪಾಲ್ ರವರ ಕಾಲದಲ್ಲಿ ಪುನರ್ಮಿಲನದ ಹೊಸ ಆಶಾಕಿರಣ ಮೂಡಿತು. 1988ರಲ್ಲಿ ಕಾರ್ಡಿನಲ್ ಜೋಸೆಫ್ ರಾಟ್ಸಿಂಗರ್ (ನಂತರದ ಜಗದ್ಗುರು XVIನೇ ಬೆನೆಡಿಕ್ಟ್ ) ಅವರ ಮಧ್ಯಸ್ಥಿಕೆಯಲ್ಲಿ ಸಿದ್ಧಾಂತಾತ್ಮಕ ಒಪ್ಪಂದಕ್ಕೂ ಸಹಿ ಹಾಕಲಾಯಿತು. ಆದರೆ ಕೆಲವೇ ದಿನಗಳಲ್ಲಿ ಲೆಫೆಬ್ವ್ರೆ ತಮ್ಮ ನಿರ್ಧಾರವನ್ನು ಬದಲಿಸಿ, ಜಗದ್ಗುರುಗಳ ಅನುಮತಿಯಿಲ್ಲದೆ ನಾಲ್ವರು ಯಾಜಕರನ್ನು ಬಿಷಪ್‌ಗಳಾಗಿ ಸಮರ್ಪಿಸಿದರು. ಈ ಕ್ರಮವನ್ನು ಭಿನ್ನಮತೀಯ ಕೃತ್ಯವೆಂದು ಘೋಷಿಸಿ, ಸಂಬಂಧಪಟ್ಟವರ ಮೇಲೆ ಸ್ವಯಂ ಬಹಿಷ್ಕಾರದ ಶಿಕ್ಷೆ ಜಾರಿಯಾಯಿತು.
ನಂತರ ಜಗದ್ಗುರು XVIನೇ ಬೆನೆಡಿಕ್ಟ್ ರವರು ಪುನರ್ಮಿಲನಕ್ಕಾಗಿ ಮಹತ್ವದ ಹೆಜ್ಜೆಗಳನ್ನು ಇಟ್ಟರು. 2007ರಲ್ಲಿ ಪಾರಂಪರಿಕ ಲಿಟುರ್ಜಿಯ ಆಚರಣೆಗೆ ಹೆಚ್ಚಿನ ಅವಕಾಶ ನೀಡಿದರು. 2009ರಲ್ಲಿ 1988ರಲ್ಲಿ ಬಹಿಷ್ಕೃತರಾಗಿದ್ದ ನಾಲ್ವರು ಬಿಷಪ್‌ಗಳ ಮೇಲಿನ ಬಹಿಷ್ಕಾರವನ್ನು ಹಿಂತೆಗೆದು ಸಂವಾದಕ್ಕೆ ಹೊಸ ಅವಕಾಶ ಕಲ್ಪಿಸಿದರು. ಬಳಿಕ ಜಗದ್ಗುರು ಫ್ರಾನ್ಸಿಸ್ ರವರು ಕರುಣೆಯ ಮಹಾಜೂಬಿಲಿ ಸಂದರ್ಭದಲ್ಲಿ ಈ ಸಹೋದರತ್ವದ ಯಾಜಕರಿಗೆ ಪಾಪನಿವೇದನೆ ಕೇಳುವ ಮತ್ತು ಮಾನ್ಯವಾಗಿ ಕ್ಷಮಾಪಣೆ ನೀಡುವ ವಿಶೇಷ ಅಧಿಕಾರವನ್ನು ನೀಡಿ, ವಿಶ್ವಾಸಿಗಳ ಆಧ್ಯಾತ್ಮಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಸೌಹಾರ್ದದ ಪ್ರಯತ್ನ ಮಾಡಿದರು.
ಆದಾಗ್ಯೂ, 2026ರಲ್ಲಿ ಸಹೋದರತ್ವವು ಮತ್ತೆ ಹೊಸ ಬಿಷಪ್‌ಗಳನ್ನು ಸಮರ್ಪಿಸುವ ನಿರ್ಧಾರ ಕೈಗೊಂಡಿತು. ನಂಬಿಕೆಯ ಸಿದ್ಧಾಂತಕ್ಕಾಗಿ ಇರುವ ಡಿಕಾಸ್ಟರಿಯು ಸಂವಾದಕ್ಕಾಗಿ ಹೊಸ ಮಾರ್ಗವನ್ನು ಪ್ರಸ್ತಾಪಿಸಿ, ಬಿಷಪ್ ಸಮರ್ಪಣೆಗಳನ್ನು ಮುಂದೂಡುವಂತೆ ಮನವಿ ಮಾಡಿತು. ಜಗದ್ಗುರು ಲಿಯೋರವರು ಹಲವು ಬಾರಿ ಎಚ್ಚರಿಕೆ ಮತ್ತು ಮನವಿಗಳನ್ನು ಮಾಡಿದರೂ, ಸಹೋದರತ್ವವು ಅವುಗಳನ್ನು ಲೆಕ್ಕಿಸದೆ ತನ್ನ ಯೋಜನೆಯನ್ನು ಜಾರಿಗೊಳಿಸಿತು. ಇದರ ಪರಿಣಾಮವಾಗಿ ಮತ್ತೊಮ್ಮೆ ಭಿನ್ನಮತದ ಪರಿಸ್ಥಿತಿ ಉಂಟಾಯಿತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಧರ್ಮ ಸಭೆ ತನ್ನ ಬಾಗಿಲುಗಳನ್ನು ಇನ್ನೂ ತೆರೆದೆಯೇ ಇಟ್ಟಿದ್ದು, ಪೂರ್ಣ ಐಕ್ಯತೆಗೆ ಮರಳಲು ಬಯಸುವ ಎಲ್ಲರನ್ನು ಪ್ರೀತಿ ಮತ್ತು ಕಾಳಜಿಯಿಂದ ಸ್ವಾಗತಿಸುವುದಾಗಿ ಪುನರುಚ್ಚರಿಸಿದೆ. ಅದೇ ಸಮಯದಲ್ಲಿ, ಎಲ್ಲಾ ವಿಶ್ವಾಸಿಗಳು ಜಗದ್ಗುರುಗಳು, ಅವರೊಂದಿಗೆ ಐಕ್ಯತೆಯಲ್ಲಿರುವ ಬಿಷಪ್‌ಗಳು ಹಾಗೂ ವಿಶ್ವವ್ಯಾಪಿ ಕಥೋಲಿಕ ಧರ್ಮಸಭೆಯೊಂದಿಗೆ ದೃಢವಾದ ಐಕ್ಯತೆಯಲ್ಲಿ ಉಳಿಯುವಂತೆ ಕರೆ ನೀಡಿದೆ.