ಹುಡುಕಿ

ದತ್ತಿ ಸೇವಾ ವಿಭಾಗದಿಂದ ವಿತರಿಸಲಾದ ಮಾನವೀಯ ನೆರವು. ದತ್ತಿ ಸೇವಾ ವಿಭಾಗದಿಂದ ವಿತರಿಸಲಾದ ಮಾನವೀಯ ನೆರವು.  (AFP or licensors)

ಜಗದ್ಗುರುಗಳ ಅಂತರರಾಷ್ಟ್ರೀಯ ದತ್ತಿ ಸೇವೆ: ವಿಶ್ವದ ದುಃಖಿತರಿಗೆ ನೆರವಿನ ಹಸ್ತ.

ದತ್ತಿ ಸೇವೆಯ ಡಿಕಾಸ್ಟರಿಯ ಮೂಲಕ ನೆರವೇರುತ್ತಿರುವ ಜಗದ್ಗುರು XIVನೇ ಲಿಯೋರವರು ದತ್ತಿ ಸೇವೆಗೆ ಭೌಗೋಳಿಕ ಗಡಿಗಳಿಲ್ಲ. ಉಕ್ರೇನ್ ಹಾಗೂ ಮಧ್ಯಪ್ರಾಚ್ಯದಂತಹ ಯುದ್ಧಪೀಡಿತ ಪ್ರದೇಶಗಳಿಗೆ ನಿರಂತರ ನೆರವು ನೀಡುತ್ತಿರುವುದರ ಜೊತೆಗೆ, ವಿಶ್ವದ ಎಲ್ಲಾ ಐದು ಖಂಡಗಳಲ್ಲಿಯೂ ಮಾನವೀಯ ನೆರವನ್ನು ತಲುಪಿಸುವ ಕಾರ್ಯವನ್ನು ಧರ್ಮ ಸಭೆ ಮುಂದುವರಿಸಿದೆ.

ವ್ಯಾಟಿಕನ್ ವರದಿ

"ದತ್ತಿ ಕಾರ್ಯವನ್ನು ಮುಂದೂಡಲು ಸಾಧ್ಯವಿಲ್ಲ" ಎಂದು ಜಗದ್ಗುರು XIVನೇ ಲಿಯೋರವರು ಜೂನ್ 6ರಂದು ಸ್ಪೇನಿನ ತಮ್ಮ ಪ್ರೇಷಿತರ ಪ್ರವಾಸದ ಮೊದಲ ದಿನ ಮ್ಯಾಡ್ರಿಡ್‌ನ ಸೆಡಿಯಾ 24 ಹೊರಾಸ್ ಸಾಮಾಜಿಕ ಯೋಜನೆಯ ಸಿಬ್ಬಂದಿ ಮತ್ತು ಫಲಾನುಭವಿಗಳನ್ನು ಉದ್ದೇಶಿಸಿ ಹೇಳಿದರು. ಆ ಮಾತುಗಳು ಕೇವಲ ಸಂದೇಶವಾಗಿ ಉಳಿಯದೆ, ವಿಶ್ವದಾದ್ಯಂತ ಸಂಕಷ್ಟದಲ್ಲಿರುವ ಜನರ ಬದುಕಿನಲ್ಲಿ ನೈಜ ಸಹಾಯವಾಗಿ ರೂಪುಗೊಂಡಿವೆ. ದತ್ತಿ ಸೇವೆಯ ಡಿಕಾಸ್ಟರಿಯ ಮೂಲಕ ಜಗದ್ಗುರುಗಳು ಆಹಾರ, ಔಷಧಿ ಮತ್ತು ಮಾನವೀಯ ನೆರವನ್ನು ತಲುಪಿಸುತ್ತಿದ್ದು, ಅವರ ಪ್ರೀತಿ ಮತ್ತು ಕಾಳಜಿಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ.

ಜಗದ್ಗುರುಗಳ ಧರ್ಮದಾನಾಧಿಕಾರಿ ಆಗಿರುವ ಆಗಸ್ಟಿನಿಯನ್ ಆರ್ಚ್‌ಬಿಷಪ್ ಲೂಯಿಸ್ ಮರಿನ್ ದೆ ಸಾನ್ ಮಾರ್ಟಿನ್ ರವರು, "ಐಕ್ಯತೆಯು ಯಾವುದೇ ಗಡಿಗಳನ್ನು ಅರಿಯುವುದಿಲ್ಲ, ನೋವು ಮತ್ತು ತುರ್ತು ಅಗತ್ಯವಿರುವ ಎಲ್ಲೆಡೆ ಅದು ತಲುಪಬೇಕು" ಎಂದು ಹೇಳಿದ್ದಾರೆ. ಆದ್ದರಿಂದ ನೆರವನ್ನು ತ್ವರಿತವಾಗಿ, ಪರಿಣಾಮಕಾರಿಯಾಗಿ ಮತ್ತು ಸಮನ್ವಯದಿಂದ ತಲುಪಿಸಲಾಗುತ್ತಿದೆ. ವಿಶೇಷವಾಗಿ ಬಡವರು ಮತ್ತು ನಿರ್ಗತಿಕರು ಪವಿತ್ರ ಪಿತೃಗಳ ಸಾನ್ನಿಧ್ಯ ಮತ್ತು ಧರ್ಮ ಸಭೆಯ ಪ್ರೀತಿಯ ಅಪ್ಪುಗೆಯನ್ನು ಅನುಭವಿಸಬೇಕು ಎಂಬುದು ಇದರ ಉದ್ದೇಶವಾಗಿದೆ.

ಈ ದತ್ತಿ ಸೇವೆಯ ಮೂಲಕ ಉಕ್ರೇನ್, ಗಾಜಾ ಮತ್ತು ಲೆಬನಾನ್‌ನಂತಹ ಯುದ್ಧಪೀಡಿತ ಪ್ರದೇಶಗಳಿಗೆ ನಿರಂತರ ನೆರವು ಒದಗಿಸಲಾಗುತ್ತಿದೆ. ಅದಷ್ಟೇ ಅಲ್ಲದೆ, ಸೈಪ್ರಸ್, ಜಾರ್ಜಿಯಾ, ಸಿರಿಯಾ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿಯೂ ಆಶ್ರಯಾರ್ಥಿಗಳು, ಪ್ರವಾಹ ಸಂತ್ರಸ್ತರು ಹಾಗೂ ರೋಹಿಂಗ್ಯಾ ನಿರಾಶ್ರಿತರಿಗೆ ಆಹಾರ, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಹೀಗೆ ಪೋಪ್ ಲಿಯೋ ಅವರ ದತ್ತಿ ಸೇವೆ ದುಃಖದ ಭೂಪಟವನ್ನು ಅನುಸರಿಸಿ ಯುರೋಪ್‌ನಿಂದ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಇತರ ಪ್ರದೇಶಗಳವರೆಗೆ ವ್ಯಾಪಿಸಿದೆ.

ಆಫ್ರಿಕಾದಲ್ಲಿಯೂ ಜಗದ್ಗುರುಗಳ ದತ್ತಿ ಸೇವೆ ವಿವಿಧ ರೂಪಗಳಲ್ಲಿ ಮುಂದುವರಿದಿದೆ. ಬುರ್ಕಿನಾ ಫಾಸೊದಲ್ಲಿ ಸ್ಥಳಾಂತರಗೊಂಡ ಜನರಿಗೆ ಆರೋಗ್ಯ ಸೇವೆ, ಕೀನ್ಯಾದಲ್ಲಿ ಬೀದಿ ಮಕ್ಕಳ ಆಶ್ರಯ ಕೇಂದ್ರಕ್ಕೆ ನೆರವು, ಮಡಗಾಸ್ಕರ್‌ನಲ್ಲಿ ಚಂಡಮಾರುತ ಸಂತ್ರಸ್ತರಿಗೆ ಪುನರ್ವಸತಿ, ಜಾಂಬಿಯಾದಲ್ಲಿ ಬರಪೀಡಿತ ಕುಟುಂಬಗಳಿಗೆ ಆಹಾರ ನೆರವು ಮತ್ತು ಟಾಂಜಾನಿಯಾದಲ್ಲಿ ಪಾದ್ರಿಯನ್ನು ರಕ್ಷಿಸುವ ವೇಳೆ ಕಾಲು ಕಳೆದುಕೊಂಡ ವ್ಯಕ್ತಿಗೆ ಕೃತಕ ಕಾಲಿನ ವ್ಯವಸ್ಥೆ ಸೇರಿದಂತೆ ಅನೇಕ ಮಾನವೀಯ ಕಾರ್ಯಗಳಿಗೆ ಬೆಂಬಲ ನೀಡಲಾಗಿದೆ.

ಅಮೆರಿಕ ಖಂಡದಲ್ಲಿಯೂ ಅರ್ಜೆಂಟೀನಾ, ಹೈಟಿ ಮತ್ತು ವೆನೆಜುವೆಲಾದಲ್ಲಿ ಜಗದ್ಗುರುಗಳ ನೆರವು ನಿರಂತರವಾಗಿ ತಲುಪುತ್ತಿದೆ. ಚಂಡಮಾರುತ ಮತ್ತು ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್‌ನಿರ್ಮಾಣ, ಬಡ ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ. ತುರ್ತು ಪರಿಹಾರ ನೀಡುವುದಷ್ಟೇ ಅಲ್ಲದೆ, ದಾರಿದ್ರ್ಯ ಮತ್ತು ಅನ್ಯಾಯದ ಮೂಲ ಕಾರಣಗಳನ್ನು ನಿವಾರಿಸುವ ಪ್ರಯತ್ನವೂ ಧರ್ಮ ಸಭೆಯ ದತ್ತಿ ಸೇವೆಯ ಪ್ರಮುಖ ಉದ್ದೇಶವಾಗಿದೆ. "ಪ್ರೀತಿಯೇ ಕ್ರೈಸ್ತ ಜೀವನದ ಕೀಲಿಕೈ, ಸುವಾರ್ತೆಯಿಂದ ಪ್ರೇರಿತವಾದ ದತ್ತಿ ಕಾರ್ಯವು ಸಂಕಷ್ಟದಲ್ಲಿರುವ ಸಹೋದರ ಸಹೋದರಿಯರ ನೋವು ಮತ್ತು ಆಶಯಗಳನ್ನು ಹಂಚಿಕೊಳ್ಳಲು ನಮ್ಮನ್ನು ಪ್ರತಿದಿನ ಕರೆಯುತ್ತದೆ" ಎಂದು ಆರ್ಚ್‌ಬಿಷಪ್ ಲೂಯಿಸ್ ಮರಿನ್ ದೆ ಸಾನ್ ಮಾರ್ಟಿನ್ ಹೇಳಿದ್ದಾರೆ.

28 ಜುಲೈ 2026, 16:53