ಹುಡುಕಿ

ಪಿಯಾತ್ರೋ ಪಾರೋಲಿನ್. ಪಿಯಾತ್ರೋ ಪಾರೋಲಿನ್.  (ANSA)

ಉಕ್ರೇನ್‌ನಲ್ಲಿ ಶಾಂತಿ ಇನ್ನೂ ದೂರವಾಗಿರುವ ನಡುವೆಯೇ, ಇರಾನ್‌ನೊಂದಿಗೆ ಹೊಸದಾಗಿ ಮಾತುಕತೆಗಳನ್ನು ಪುನರಾರಂಭಿಸುವಂತೆ ಕಾರ್ಡಿನಲ್ ಪ್ಯಾರೋಲಿನ್ ಕರೆ ನೀಡಿದರು.

ಪುಸ್ತಕವೊಂದರ ಅನಾವರಣ ಸಮಾರಂಭದ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ, ಇರಾನ್‌ನೊಂದಿಗೆ ಮಾತುಕತೆ ಮತ್ತು ಸಂವಾದವನ್ನು ಪುನರಾರಂಭಿಸುವ ಕುರಿತು ಆಶಾಭಾವನೆ ವ್ಯಕ್ತಪಡಿಸಿ, ಅದು "ಆ ದೇಶದ ಹಾಗೂ ಇಡೀ ವಿಶ್ವದ ಹಿತಕ್ಕಾಗಿ" ಅಗತ್ಯವಾಗಿದೆ ಎಂದು ಹೇಳಿದರು. ಇದೇ ರೀತಿಯ ಸಂವಾದ ಮತ್ತು ಶಾಂತಿ ಪ್ರಯತ್ನಗಳು ಗಾಜಾದಲ್ಲಿಯೂ ಮುಂದುವರಿಯಬೇಕೆಂದು ಅವರು ಆಶಿಸಿದರು.

ವ್ಯಾಟಿಕನ್ ವರದಿ

"ದುರದೃಷ್ಟವಶಾತ್, ನಾವು ವಿರುದ್ಧ ದಿಕ್ಕಿನತ್ತ ಸಾಗುತ್ತಿದ್ದೇವೆ ಎಂಬ ಭಾವನೆ ನನಗಿದೆ. ಶಾಂತಿಯ ಸಾಧ್ಯತೆಗಳು ಕಾಣಿಸದಂತಿರುವಾಗ, ಉದ್ವಿಗ್ನತೆ ಮಾತ್ರ ಹೆಚ್ಚುತ್ತಲೇ ಇದೆ." ಎಂದು ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪ್ಯಾರೋಲಿನ್ ಹೇಳಿದರು.

ಬುಧವಾರ, ಜುಲೈ 22ರಂದು, ಜಗದ್ಗುರುಗಳ ಅಧಿಕಾರ ಸ್ಥಳದ ಇಟಲಿಯ ರಾಯಭಾರ ಕಚೇರಿಯಾದ ಪಲಾಜ್ಜೊ ಬೊರೊಮೆಯೊದಲ್ಲಿ ನಡೆದ ಆಂಟೋನಿಯೊ ಪ್ರೆಜಿಯೋಸಿರವರ ಶಾಂತಿಯ ಈಸ್ಟರ್: ಸಂತ ಜಾನ್ ಇಪ್ಪತ್ತಮೂರರಿಂದ ಜಗದ್ಗುರು XIVನೇ ಲಿಯೋರವರವರೆಗೆ– 2033ರ ಜೂಬಿಲಿಯತ್ತ ಕೃತಿಯ ಅನಾವರಣ ಸಮಾರಂಭದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಉಕ್ರೇನ್ ಯುದ್ಧದ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಕಾರ್ಡಿನಲ್ ಪ್ಯಾರೋಲಿನ್ ರವರು, ಯುದ್ಧಪೀಡಿತ ಉಕ್ರೇನ್‌ನಿಂದ ಇತ್ತೀಚೆಗೆ ಮರಳಿದ ರಾಷ್ಟ್ರಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರ ಮಾಹಿತಿಯನ್ನು ಉಲ್ಲೇಖಿಸಿ, "ಭಾನುವಾರ ಮತ್ತು ಸೋಮವಾರ ನಡುವಿನ ರಾತ್ರಿ ನಡೆದ ದಾಳಿಯು ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿತ್ತು" ಎಂದು ಹೇಳಿದರು.

ಇರಾನ್‌ನೊಂದಿಗೆ ಮಾತುಕತೆಗಳು ಪುನರಾರಂಭವಾಗಲಿ

ಇರಾನ್ ಕುರಿತು ಮಾತನಾಡಿದ ಕಾರ್ಡಿನಲ್ ಪ್ಯಾರೋಲಿನ್ ರವರು, ಹಿಂದಿನ ತಿಳುವಳಿಕೆ ಒಪ್ಪಂದ ಇನ್ನು ಜಾರಿಯಲ್ಲಿಲ್ಲ ಎಂದು ಹೇಳಿ, ಬೆಳೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

"ಇದು ಹೇಗೆ ಅಂತ್ಯಗೊಳ್ಳುತ್ತದೆ ಎಂಬುದು ನನಗೆ ತಿಳಿದಿಲ್ಲ. ಬಹುಶಃ ಕೆಲವೇ ಜನರಿಗೆ ತಿಳಿದಿರಬಹುದು—ಅಥವಾ ಯಾರಿಗೂ ತಿಳಿದಿರದಿರಬಹುದು," ಎಂದು ಅವರು ಹೇಳಿದರು. ಹಿಂದೆ ಸಹಿಯಾಗಿದ್ದ ಒಪ್ಪಂದವು ಫಲಪ್ರದವಾಗಲಿದೆ ಎಂಬ ನಿರೀಕ್ಷೆ ಇತ್ತು ಎಂದು ಅವರು ನೆನಪಿಸಿದರು.

"ಆ ದೇಶದ ಹಿತಕ್ಕಾಗಿ ಮಾತ್ರವಲ್ಲ, ಇಡೀ ವಿಶ್ವದ ಹಿತಕ್ಕಾಗಿಯೂ ಶಾಶ್ವತ ಒಪ್ಪಂದವೊಂದನ್ನು ತಲುಪಲು ಮಾತುಕತೆಗಳು ಪುನರಾರಂಭವಾಗಲಿ ಎಂಬುದು ನನ್ನ ಆಶಯ. ಏಕೆಂದರೆ ಇಂತಹ ಪರಿಸ್ಥಿತಿಗಳು ವಿಶ್ವಶಾಂತಿಗೆ ಅಪಾಯವನ್ನುಂಟುಮಾಡುತ್ತವೆ," ಎಂದು ಅವರು ಹೇಳಿದರು.

"ಗೋಡೆಗಳಿಗೆ ಬೇಡ, ಸೇತುವೆಗಳಿಗೆ ಹೌದು"

ಗಾಜಾ ಪ್ರದೇಶದಲ್ಲಿ ಇಟಲಿಯ ಸೇನೆಯು ಗೋಡೆ ನಿರ್ಮಿಸುತ್ತಿದೆ ಎಂಬ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ಡಿನಲ್ ಪ್ಯಾರೋಲಿನ್ ರವರು, ಜಗದ್ಗುರುಗಳ ಅಧಿಕಾರ ಸ್ಥಳದ ನಿಲುವನ್ನು ಪುನರುಚ್ಚರಿಸಿದರು.

"ನಮ್ಮ ನಿಲುವನ್ನು ಒಂದು ಘೋಷವಾಕ್ಯದಲ್ಲಿ ಹೇಳಬಹುದು: 'ಗೋಡೆಗಳಿಗೆ ಬೇಡ, ಸೇತುವೆಗಳಿಗೆ ಹೌದು'," ಎಂದು ಅವರು ಹೇಳಿದರು. ಇದೇ ತತ್ವವು ಈ ಉಪಕ್ರಮದ ಕುರಿತು ವ್ಯಾಟಿಕನ್‌ನ ಮೌಲ್ಯಮಾಪನವನ್ನೂ ಪ್ರತಿಬಿಂಬಿಸುತ್ತದೆ ಎಂದು ಅವರು ವಿವರಿಸಿದರು.

"ಹಿಂಸಾಚಾರ ಎಂದಿಗೂ ಫಲಪ್ರದವಲ್ಲ"

2021ರಲ್ಲಿ ತನ್ನ ಆಭರಣ ಅಂಗಡಿಯಲ್ಲಿ ನಡೆದ ದರೋಡೆಯ ನಂತರ ಇಬ್ಬರು ದರೋಡೆಕೋರರನ್ನು ಗುಂಡಿಕ್ಕಿ ಕೊಂದು, ಮತ್ತೊಬ್ಬನಿಗೆ ಗಾಯಗೊಳಿಸಿದ್ದಕ್ಕಾಗಿ ಶಿಕ್ಷೆಗೆ ಗುರಿಯಾದ ಇಟಲಿಯ ಆಭರಣ ವ್ಯಾಪಾರಿ ಮಾರಿಯೋ ರೊಗ್ಗೆರೊ ಪ್ರಕರಣದ ಹಿನ್ನೆಲೆ ಹಾಗೂ ಬೊಲೊನಿಯಾ ನಗರದಲ್ಲಿ ಪೊಲೀಸ್ ಸಿಬ್ಬಂದಿಯಿಂದ ನೆಲಕ್ಕೆ ಬೀಳಿಸಲ್ಪಟ್ಟ ನಂತರ ಮೃತಪಟ್ಟ ಅಬ್ದೆರ್ರಹಿಮ್ ಫಕೀರ್ ರವರ ಸಾವಿನ ಬಳಿಕ ನಡೆದ ಹಿಂಸಾಚಾರದ ಕುರಿತು ಸಹ ಕಾರ್ಡಿನಲ್ ಪ್ಯಾರೋಲಿನ್ ಪ್ರತಿಕ್ರಿಯಿಸಿದರು.

"ಏನಾಯಿತು ಎಂಬುದರ ಸತ್ಯ ಹೊರಬರಲಿ ಎಂಬುದೇ ನನ್ನ ಆಶಯ," ಎಂದು ಅವರು ಹೇಳಿದರು. ಅಗತ್ಯ ತನಿಖೆಗಳು "ಶಾಂತ ವಾತಾವರಣದಲ್ಲಿ, ಖಂಡಿತವಾಗಿಯೂ ಯಾವುದೇ ಹಿಂಸಾಚಾರವಿಲ್ಲದೆ" ನಡೆಯಬೇಕು ಎಂದು ಅವರು ಒತ್ತಿಹೇಳಿದರು.

"ಹಿಂಸಾಚಾರ ಎಂದಿಗೂ ಫಲಪ್ರದವಾಗುವುದಿಲ್ಲ," ಎಂದು ಅವರು ಸೇರಿಸಿದರು.

ಶಾಂತಿಯನ್ನು ಉತ್ತೇಜಿಸುವಲ್ಲಿ ಧರ್ಮ ಸಭೆಯ ಪಾತ್ರ

ಇಟಲಿಯ ಸಾರ್ವಜನಿಕ ಚರ್ಚೆಯಲ್ಲಿ ಇತ್ತೀಚೆಗೆ ಕಂಡುಬಂದ ಕಟುವಾದ ಭಾಷಣಗಳ ನಡುವೆಯೂ, ಸಂವಾದ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಧರ್ಮ ಸಭೆಯ ಬದ್ಧತೆಯನ್ನು ಕಾರ್ಡಿನಲ್ ಪ್ಯಾರೋಲಿನ್ ಪುನರುಚ್ಚರಿಸಿದರು.

"ಧರ್ಮ ಸಭೆ ಜನರಿಗೆ ಉಪಯುಕ್ತವಾಗುವಂತಹ ಮಾತುಗಳನ್ನೇ ಮುಂದುವರಿಸಿಕೊಂಡು ಹೇಳುತ್ತದೆ," ಎಂದು ಅವರು ಹೇಳಿದರು. ಬೀಜ ಬಿತ್ತುವವನ ರೂಪಕವನ್ನು ನೆನಪಿಸಿಕೊಂಡ ಅವರು, "ಆ ಮಾತುಗಳು ಉತ್ತಮ ಫಲ ನೀಡಲಿ" ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

"ಈ ಸಂದೇಶವನ್ನು ಪುನಃ ಪುನಃ ಸಾರಲು ಧರ್ಮ ಸಭೆ ಎಂದಿಗೂ ಆಯಾಸಪಡುವುದಿಲ್ಲ. ಫಲಿತಾಂಶ ಏನೇ ಆಗಿರಲಿ, ಶಾಂತಿಯುತ ಮತ್ತು ಸೌಹಾರ್ದಯುತ ಸಹಬಾಳ್ವೆಗೆ ಅತ್ಯಗತ್ಯವಾದ ಈ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸುವುದು ಸರಿಯಾದ ಕಾರ್ಯ," ಎಂದು ಅವರು ಸಮಾರೋಪಗೊಳಿಸಿದರು.

ಶಾಂತಿಯ ಧರ್ಮ ಸಭೆ ಧ್ಯೇಯದ ಕುರಿತು ಚಿಂತನೆ

ಆಂಟೋನಿಯೊ ಪ್ರೆಜಿಯೋಸಿ ಅವರ ಈಸ್ಟರ್: ಸಂತ ಜಾನ್ ಇಪ್ಪತ್ತಮೂರರಿಂದ ಜಗದ್ಗುರು XIVನೇ ಲಿಯೋರವರವರೆಗೆ– 2033ರ ಜೂಬಿಲಿಯತ್ತ ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರಲ್ಲಿ ಕಾರ್ಡಿನಲ್ ಪ್ಯಾರೋಲಿನ್ ರವರು ಕೂಡ ಒಬ್ಬರಾಗಿದ್ದರು. ಎರಡನೇ ವ್ಯಾಟಿಕನ್ ಮಹಾಸಭೆಯ ನಂತರದ ಜಗದ್ಗುರುಗಳ ಅವಧಿಯೆಲ್ಲಾ ಧರ್ಮ ಸಭೆ ಶಾಂತಿಗಾಗಿ ನಡೆಸಿಕೊಂಡು ಬಂದ ನಿರಂತರ ಬದ್ಧತೆಯ ಕುರಿತು ಅವರು ಆಳವಾದ ಚಿಂತನೆ ಮಂಡಿಸಿದರು.

ಪೇತ್ರನ ಉತ್ತರಾಧಿಕಾರಿಗಳ ನಡುವೆ ಒಂದು "ರಿಲೇ ಓಟ" ನಡೆಯುತ್ತಿರುವಂತೆ ಅವರು ಚಿತ್ರಿಸಿದರು. ಪ್ರತಿಯೊಬ್ಬ ಜಗದ್ಗುರುಗಳು ತಮ್ಮ ಮಾತುಗಳ ಮೂಲಕವೂ, ಸಂವಾದ, ಸೌಹಾರ್ದತೆ ಮತ್ತು ಶಾಂತಿಗಾಗಿ ಕೈಗೊಂಡ ಸ್ಪಷ್ಟ ಕಾರ್ಯಗಳ ಮೂಲಕವೂ ಅಂತರರಾಷ್ಟ್ರೀಯ ಸೌಹಾರ್ದತೆಯ "ಮೊಸಾಯಿಕ್" ಚಿತ್ರಕ್ಕೆ ಹೊಸ "ಹೆಂಚು" ಸೇರಿಸಿದ್ದಾರೆ ಎಂದು ಅವರು ಹೇಳಿದರು.

23ನೇ ಸಂತ ಜಾನರಪೇಸೆಮ್ ಇನ್ ಟೆರ್ರಿಸ್, ಆರನೇ ಸಂತ ಪೌಲರು "ಇನ್ನು ಯುದ್ಧ ಬೇಡ!" ಎಂಬ ಮನವಿ, ಜಗದ್ಗುರು ಫ್ರಾನ್ಸಿಸ್ ರವರ "ತುಂಡು ತುಂಡಾಗಿ ನಡೆಯುತ್ತಿರುವ ವಿಶ್ವಯುದ್ಧ" ಎಂಬ ಎಚ್ಚರಿಕೆ ಹಾಗೂ ಜಗದ್ಗುರು XIVನೇ ಲಿಯೋರವರು"ಯುದ್ಧವು ಮಾನವತೆಗೆ ಎಂದಿಗೂ ಯೋಗ್ಯವಲ್ಲ" ಎಂಬ ದೃಢ ಸಂದೇಶವನ್ನು ಉಲ್ಲೇಖಿಸಿದ ಕಾರ್ಡಿನಲ್ ಪ್ಯಾರೋಲಿನ್ ರವರು, ಧರ್ಮ ಸಭೆ "ಶಾಂತಿಯ ಈಸ್ಟರ್" ಎಂಬ ಸಂದೇಶವನ್ನು ಮುಂದುವರಿಸಿ ಸಾರಬೇಕೆಂದು ಹೇಳಿದರು.

ಅಲ್ಲದೆ, ಪ್ರೆಜಿಯೋಸಿ ಅವರ ಕೃತಿಯ ಐಕ್ಯ ಕ್ರೈಸ್ತ  ಆಯಾಮವನ್ನು ವಿಶೇಷವಾಗಿ ಉಲ್ಲೇಖಿಸಿದ ಅವರು, 2033ರ ವಿಶೇಷ ಜೂಬಿಲಿಯತ್ತ ಸಾಗುವ ಈ ಪಯಣವು ಕ್ರೈಸ್ತರ ನಡುವೆ ಹೆಚ್ಚಿನ ಏಕತೆಯನ್ನು ಬೆಳೆಸಲಿ ಹಾಗೂ ಸಂವಾದ, ರಾಜತಾಂತ್ರಿಕತೆ ಮತ್ತು ಸೌಹಾರ್ದತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.

22 ಜುಲೈ 2026, 21:00