ಹುಡುಕಿ

2026.07.14 Global Nobel Laureates Assembly 11

ಬೋರ್ಗೊ ಲೌದಾತೋ ಸಿ'ನಲ್ಲಿ ಅಣ್ವಸ್ತ್ರ ಯುದ್ಧ ಮತ್ತು ಕೃತಕ ಬುದ್ಧಿಮತ್ತೆ ಕುರಿತು ನೊಬೆಲ್ ಪ್ರಶಸ್ತಿ ವಿಜೇತರು ಹಾಗೂ ತಜ್ಞರ ಚರ್ಚೆ.

ಜುಲೈ 14ರಂದು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಬೊರ್ಗೊ ಲೌದಾತೋ ಸಿ'ಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಅಣ್ವಸ್ತ್ರ ಯುದ್ಧ ಕುರಿತ ಜಾಗತಿಕ ನೊಬೆಲ್ ಪ್ರಶಸ್ತಿ ವಿಜೇತರ ಮಹಾಸಭೆಯ ಮೊದಲ ದಿನದ ಕಾರ್ಯಕ್ರಮ ಆರಂಭಗೊಂಡಿತು. ಈ ಮಹಾಸಭೆಯು ನೊಬೆಲ್ ಪ್ರಶಸ್ತಿ ವಿಜೇತರು, ವಿವಿಧ ಕ್ಷೇತ್ರಗಳ ತಜ್ಞರು, ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗೂ ಇತರ ಗಣ್ಯರನ್ನು ಒಂದೆಡೆ ಸೇರಿಸಿ, ನಮ್ಮ ಜಗತ್ತಿನ ಮೇಲೆ ಪರಿಣಾಮ ಬೀರುತ್ತಿರುವ ಅತ್ಯಂತ ಗಂಭೀರ ಸವಾಲುಗಳ ಕುರಿತು ಆಳವಾದ ಚಿಂತನೆ ಮತ್ತು ಸಂವಾದ ನಡೆಸಲು ಪ್ರೇರೇಪಿಸಿತು.

ವ್ಯಾಟಿಕನ್ ವರದಿ

ಜುಲೈ 14ರಂದು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಪಾಪರ ಉದ್ಯಾನವನದ  ಬೊರ್ಗೊ ಲೌದಾತೋ ಸಿ' ಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಅಣ್ವಸ್ತ್ರ ಯುದ್ಧ ಕುರಿತ ಜಾಗತಿಕ ನೊಬೆಲ್ ಪ್ರಶಸ್ತಿ ವಿಜೇತರ ಮಹಾಸಭೆ ಆರಂಭವಾಯಿತು. ಜುಲೈ 16ರವರೆಗೆ ನಡೆಯಲಿರುವ ಈ ಮೂರು ದಿನಗಳ ಮಹಾಸಭೆಯಲ್ಲಿ 200ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ವಿಜೇತರು, ಮಾಜಿ ರಾಷ್ಟ್ರಾಧ್ಯಕ್ಷರು, ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿ, ಮಾನವಕುಲ ಎದುರಿಸುತ್ತಿರುವ ಗಂಭೀರ ಸವಾಲುಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಈ ಸಭೆಗೆ  ಜಗದ್ಗುರು XIVನೇ ಲಿಯೋರವರು ಭವ್ಯ ಮಾನವೀಯತೆ ಎಂಬ ವಿಶ್ವಪತ್ರಿಕೆ ಸ್ಫೂರ್ತಿಯಾಗಿದೆ.

ಈ ಮಹಾಸಭೆಯ ಮುಖ್ಯ ಉದ್ದೇಶ ಕೃತಕ ಬುದ್ಧಿಮತ್ತೆ, ಅಣ್ವಸ್ತ್ರಗಳು, ಸ್ವಾಯತ್ತ ಶಸ್ತ್ರಾಸ್ತ್ರಗಳು ಹಾಗೂ ಹೊಸ ಡಿಜಿಟಲ್ ತಂತ್ರಜ್ಞಾನಗಳ ಯುಗದಲ್ಲಿ ಮಾನವ ಘನತೆ, ಶಾಂತಿ ಮತ್ತು ಸಮಗ್ರ ಅಭಿವೃದ್ಧಿಯನ್ನು ಕಾಪಾಡುವ ಮಾರ್ಗಸೂಚಿಗಳನ್ನು ರೂಪಿಸುವುದಾಗಿದೆ. ಸಭೆಯ ಕೊನೆಯಲ್ಲಿ "ರೋಮ್ ಘೋಷಣೆ"ಗೆ ಸಹಿ ಹಾಕಲಾಗಲಿದ್ದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಆಡಳಿತ ಮತ್ತು ಶಾಂತಿಯುತ ಬಳಕೆಗೆ ಮಾರ್ಗದರ್ಶಕ ತತ್ವಗಳನ್ನು ಜಗತ್ತಿಗೆ ನೀಡುವ ನಿರೀಕ್ಷೆಯಿದೆ.

ಉದ್ಘಾಟನಾ ಭಾಷಣದಲ್ಲಿ ಸಮಗ್ರ ಮಾನವ ಅಭಿವೃದ್ಧಿಗಾಗಿ ಡಿಕಾಸ್ಟರಿಯ ಪ್ರೊ-ಪ್ರಿಫೆಕ್ಟ್ ಕಾರ್ಡಿನಲ್ ಫಾಬಿಯೊ ಬಾಜ್ಜಿಯೋರವರು, ಜಾಗತಿಕ ರಾಜಕೀಯ ಉದ್ವಿಗ್ನತೆ, ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಸ್ವಾಯತ್ತ ತಂತ್ರಜ್ಞಾನಗಳ ನಡುವೆ ಮಾನವಕುಲಕ್ಕೆ ಸಾಮಾನ್ಯ ಮೌಲ್ಯಗಳು ಮತ್ತು ನೈತಿಕ ತತ್ವಗಳ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹೇಳಿದರು. ತಂತ್ರಜ್ಞಾನದ ಬೆಳವಣಿಗೆ ಮಾನವೀಯ ಮೌಲ್ಯಗಳೊಂದಿಗೆ ಸಾಗಬೇಕಾದರೆ ವಿವಿಧ ಕ್ಷೇತ್ರಗಳ ನಡುವೆ ನಿರಂತರ ಸಂವಾದ ಅತ್ಯಗತ್ಯ ಎಂದು ಅವರು ಒತ್ತಿಹೇಳಿದರು.

ಡೊಮಸ್ ಕಮ್ಯೂನಿಸ್ ಪ್ರತಿಷ್ಠಾನದ ಅಧ್ಯಕ್ಷ ಕಾರ್ಡಿನಲ್ ಸಿಲ್ವಾನೋ ಮರಿಯಾ ತೋಮಾಸಿ ರವರು, ಈ ಸಭೆ ಕೇವಲ ಅಪಾಯಗಳನ್ನು ವಿಶ್ಲೇಷಿಸಲು ಮಾತ್ರವಲ್ಲ, ಮಾನವಕುಲದಲ್ಲಿ ಇನ್ನೂ ಭರವಸೆ ಜೀವಂತವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಲು ಆಯೋಜಿಸಲಾಗಿದೆ ಎಂದು ಹೇಳಿದರು. ಭವಿಷ್ಯದ ಪೀಳಿಗೆಗಳು, ಮಾನವಕುಲ ತನ್ನ ಅಪಾರ ಶಕ್ತಿಯನ್ನು ಮುಖಾಮುಖಿ ಘರ್ಷಣೆಗೆ ಅಲ್ಲ, ಸಹಕಾರ, ಸಂವಾದ ಮತ್ತು ಶಾಂತಿಗಾಗಿ ಬಳಸಲು ನಿರ್ಧರಿಸಿತು ಎಂದು ಹೇಳುವಂತಾಗಬೇಕು ಎಂದು ಅವರು ಕರೆ ನೀಡಿದರು.

ಜಗದ್ಗುರು ಲಿಯೋರವರು ಭವ್ಯ ಮಾನವೀಯತೆ ವಿಶ್ವಪತ್ರಿಕೆಯನ್ನು ಆಧಾರವಾಗಿಟ್ಟುಕೊಂಡ ಉದ್ಘಾಟನಾ ಅಧಿವೇಶನದಲ್ಲಿ ಹಲವಾರು ಗಣ್ಯರು ಮಾತನಾಡಿದರು. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹಾಗೂ ಕೊಲಂಬಿಯಾದ ಮಾಜಿ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸಾಂತೋಸ್ ರವರು, ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸುವ ಪರಿಣಾಮಕಾರಿ ಆಡಳಿತ ವ್ಯವಸ್ಥೆಯಿಲ್ಲದೆ ಅದು ಮಾನವ ಘನತೆ ಮತ್ತು ನ್ಯಾಯಕ್ಕೆ ಸೇವೆ ಸಲ್ಲಿಸುವ ಶಕ್ತಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಬಾಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಮುಹಮ್ಮದ್ ಯೂನಸ್ ರವರು, ಹೊಸ ನಾಗರಿಕತೆಯ ನಿರ್ಮಾಣದಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

ದಿನದ ಉಳಿದ ಅಧಿವೇಶನಗಳಲ್ಲಿ ಕೃತಕ ಬುದ್ಧಿಮತ್ತೆ ಮಾನವನ ನಿಯಂತ್ರಣವನ್ನು ಮೀರುವ ಸಾಧ್ಯತೆ, ಅದರ ನೈತಿಕ ಸವಾಲುಗಳು ಮತ್ತು ಅಣ್ವಸ್ತ್ರಗಳ ಅಪಾಯಗಳ ಕುರಿತು ಚರ್ಚೆಗಳು ನಡೆದವು. ನೊಬೆಲ್ ಪ್ರಶಸ್ತಿ ವಿಜೇತೆ ಮರಿಯಾ ರೆಸ್ಸಾ ಸೇರಿದಂತೆ ಹಲವು ತಜ್ಞರು ಹಾಗೂ ಎಐ ಸಂಶೋಧಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ತಂತ್ರಜ್ಞಾನವು ಮಾನವಕುಲದ ಹಿತ, ಶಾಂತಿ ಮತ್ತು ಹೊಣೆಗಾರಿಕೆಯ ದಾರಿಯಲ್ಲಿ ಸಾಗಬೇಕೆಂದು ಕರೆ ನೀಡಿದರು.

14 ಜುಲೈ 2026, 17:29