ಹುಡುಕಿ

ಕೀವ್‌ನ ಮೈದಾನ್ ಸ್ಮಾರಕದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್. ಕೀವ್‌ನ ಮೈದಾನ್ ಸ್ಮಾರಕದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್. 

ಬೆರ್ಡಿಚಿವ್‌ನಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್: ಕಾರ್ಮೆಲ್ ಮಾತೆಯವರ ಬಳಿ ಶಾಂತಿಗಾಗಿ ಪ್ರಾರ್ಥನೆ.

ಉಕ್ರೇನ್‌ನ ಬೆರ್ಡಿಚಿವ್‌ನಲ್ಲಿರುವ ಕಾರ್ಮೆಲ್ ಬೆಟ್ಟದ ಮಾತೆಯವರ ಪುಣ್ಯಕ್ಷೇತ್ರದಲ್ಲಿ, ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರು ಉಕ್ರೇನ್‌ನಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಆಧ್ಯಾತ್ಮಿಕ ಸಾಮೀಪ್ಯವು ವಿಶ್ವಾಸಿಗಳೊಂದಿಗಿದೆ ಎಂದು ಅವರು ಭರವಸೆ ನೀಡಿದರು ಹಾಗೂ ದೇವರಲ್ಲಿ ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ವಿಶ್ವಾಸಿಗಳನ್ನು ಉತ್ತೇಜಿಸಿದರು.

ವ್ಯಾಟಿಕನ್ ವರದಿ

ಉಕ್ರೇನ್‌ನ ರಾಜಧಾನಿ ಕೀವ್‌ನಿಂದ ಸುಮಾರು ಎರಡು ಗಂಟೆಗಳ ದೂರದಲ್ಲಿರುವ ಬೆರ್ಡಿಚಿವ್‌ನ ಕಾರ್ಮೆಲ್ ಮಾತೆಯವರ ರಾಷ್ಟ್ರೀಯ ಪುಣ್ಯಕ್ಷೇತ್ರದಲ್ಲಿ, ಲ್ಯಾಟಿನ್ ಸಂಪ್ರದಾಯದ ಕಥೋಲಿಕ ಧರ್ಮ ಸಭೆಯ ರಚನೆಗಳು ಮರುಸ್ಥಾಪನೆಯಾಗಿ 35 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಸೇರಿದ್ದರು. ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪುಣ್ಯಕ್ಷೇತ್ರದ ಆವರಣದಲ್ಲಿ ಬಯಲು ಪ್ರದೇಶದಲ್ಲಿ ಪವಿತ್ರ ಬಲಿಪೂಜೆ ನೆರವೇರಿತು. ಆರಂಭದಲ್ಲಿ ಮಳೆ ಸುರಿದರೂ ನಂತರ ಹವಾಮಾನ ತಿಳಿಯಾಗಿ, ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಈ ವರ್ಷವು ಸಂತ ದ್ವಿತೀಯ ಜಾನ್ ಪಾಲರ ಉಕ್ರೇನ್ ಭೇಟಿಯ 25ನೇ ವಾರ್ಷಿಕೋತ್ಸವದ ಸ್ಮರಣೆಯ ಸಂದರ್ಭವೂ ಆಗಿದೆ.

ಜಗದ್ಗುರು ಲಿಯೋರವರ ವಿಶೇಷ ಪ್ರತಿನಿಧಿಯಾಗಿ ಉಕ್ರೇನ್‌ಗೆ ಭೇಟಿ ನೀಡಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರು, ಕಾರ್ಮೆಲ್ ಮಾತೆಯವರ ಪುಣ್ಯಕ್ಷೇತ್ರದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಪ್ರಭೋಧನೆಯ ಆರಂಭದಲ್ಲಿ ಅವರು ಜಗದ್ಗುರುಗಳ ಶುಭಾಶಯಗಳು ಹಾಗೂ ಆಧ್ಯಾತ್ಮಿಕ ಸಾಮೀಪ್ಯವನ್ನು ವಿಶ್ವಾಸಿಗಳಿಗೆ ತಿಳಿಸಿದರು. "ದೇವರೇ ಶಾಂತಿಯ ಮಾರ್ಗವನ್ನು ತಿಳಿದಿರುವವರು ಆದ್ದರಿಂದ ನಾವು ಎಂದಿಗೂ ನಿರಾಶರಾಗದೆ, ಪ್ರಾರ್ಥನೆಯಲ್ಲಿ ಸ್ಥಿರವಾಗಿರಬೇಕು" ಎಂದು ಅವರು ಕರೆ ನೀಡಿದರು. ಉಕ್ರೇನ್‌ಗೆ ನ್ಯಾಯಯುತ ಹಾಗೂ ಶಾಶ್ವತ ಶಾಂತಿ ದೊರಕಲೆಂದು ಕಾರ್ಮೆಲ್ ಮಾತೆಯವರ ಮಧ್ಯಸ್ಥಿಕೆಯನ್ನು ಬೇಡಿದರು.

ಈ ಆಚರಣೆಗೆ ಮುನ್ನದ ರಾತ್ರಿ ಕೀವ್ ನಗರ ಮತ್ತೊಮ್ಮೆ ಭಾರೀ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಗುರಿಯಾಗಿತ್ತು. ಹಲವಾರು ಪ್ರದೇಶಗಳು ಹಾನಿಗೊಳಗಾಗಿದ್ದು, ಒಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಪ್ರೇಷಿತರ ರಾಯಭಾರ ಕಚೇರಿಯ ಸಮೀಪದಲ್ಲಿಯೂ ಸ್ಫೋಟಗಳು ಸಂಭವಿಸಿದ್ದರಿಂದ, ಆರ್ಚ್‌ಬಿಷಪ್ ಗ್ಯಾಲಘರ್ ಮತ್ತು ಅವರ ನಿಯೋಗ ಸೇರಿದಂತೆ ಸಿಬ್ಬಂದಿ ಸುರಕ್ಷತಾ ಆಶ್ರಯದಲ್ಲಿ ರಾತ್ರಿ ಕಳೆಯಬೇಕಾಯಿತು. ಈ ಯುದ್ಧದ ದುಃಖದ ಮಧ್ಯೆಯೇ ಬೆರ್ಡಿಚಿವ್‌ನಲ್ಲಿ ಶಾಂತಿಯ ಪ್ರಾರ್ಥನೆ ವಿಶೇಷ ಮಹತ್ವ ಪಡೆದಿತು.

ಪ್ರಭೋಧನೆಯಲ್ಲಿ ಪ್ರವಾದಿ ಎಲೀಯನ ಉದಾಹರಣೆಯನ್ನು ಉಲ್ಲೇಖಿಸಿದ ಆರ್ಚ್‌ಬಿಷಪ್ ಗ್ಯಾಲಘರ್ ರವರು, ದೇವರು ಕೆಲವೊಮ್ಮೆ ತಡವಾಗಿ ಉತ್ತರಿಸುತ್ತಿರುವಂತೆ ಕಂಡರೂ, ನಂಬಿಕೆ ಮತ್ತು ನಿರಂತರ ಪ್ರಾರ್ಥನೆಗೆ ಅವರು ಖಂಡಿತ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು. ನಿಜವಾದ ಶಾಂತಿಯು ಮಾನವನ ಪ್ರಯತ್ನದಿಂದ ಮಾತ್ರವಲ್ಲ, ದೇವರ ವರದಾನವಾಗಿಯೇ ದೊರೆಯುತ್ತದೆ ಎಂದು ಅವರು ಒತ್ತಿಹೇಳಿದರು. ಹಾಗೆಯೇ ಮಾತೆ ಮರಿಯಮ್ಮನವರು ದೇವರ ಚಿತ್ತಕ್ಕೆ ಸಂಪೂರ್ಣ ವಿಧೇಯಳಾದ ಮಾದರಿಯಾಗಿದ್ದು, ಆಕೆಯ ಮಧ್ಯಸ್ಥಿಕೆಯಲ್ಲಿ ವಿಶ್ವಾಸವಿಟ್ಟು ಬದುಕುವಂತೆ ಭಕ್ತರನ್ನು ಆಹ್ವಾನಿಸಿದರು.

ಸಂತ ಪೌಲರ ಪತ್ರವನ್ನು ಉಲ್ಲೇಖಿಸಿದ ಅವರು, ಯುದ್ಧ, ಬಡತನ, ಸಂಕಷ್ಟ ಅಥವಾ ಮರಣವು ದೇವರ ಮಕ್ಕಳಾಗಿರುವ ನಮ್ಮ ಘನತೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನೆನಪಿಸಿದರು. "ಯಾವ ಯುದ್ಧವೂ ದೇವರ ಪ್ರೀತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇಂದಿನ ಕಣ್ಣೀರು ನಮ್ಮ ವಿಶ್ವಾಸ, ಪ್ರೀತಿ ಮತ್ತು ನಿರೀಕ್ಷೆಯನ್ನು ನಾಶಮಾಡಬಾರದು" ಎಂದು ಅವರು ಹೇಳಿದರು. ಕೊನೆಯಲ್ಲಿ ಬೆರ್ಡಿಚಿವ್ ಮಾತೆಯವರ ಮಧ್ಯಸ್ಥಿಕೆಯಲ್ಲಿ ಉಕ್ರೇನ್, ಅಲ್ಲಿನ ಧರ್ಮ ಸಭೆಗಳು, ರಾಜಕೀಯ ನಾಯಕರು, ಯೋಧರು, ಗಾಯಾಳುಗಳು ಹಾಗೂ ಮೃತರಿಗಾಗಿ ಪ್ರಾರ್ಥಿಸಿ, ವಿಶ್ವದ ಎಲ್ಲೆಡೆ ಶಾಂತಿ ನೆಲೆಸಲೆಂದು ದೇವರನ್ನು ಬೇಡಿದರು.

ಪವಿತ್ರ ಬಲಿಪೂಜೆಯ ಅಂತ್ಯದಲ್ಲಿ ಯುವಜನರು ಆರ್ಚ್‌ಬಿಷಪ್ ಗ್ಯಾಲಘರ್ ರವರಿಗೆ ಹೂಗುಚ್ಛ ಮತ್ತು ಬೆರ್ಡಿಚಿವ್ ಮಾತೆಯವರ ಮರದ ಪ್ರತಿಮೆಯನ್ನು ಕಾಣಿಕೆಯಾಗಿ ನೀಡಿ, "ಜಗದ್ಗುರುಗಳು ಉಕ್ರೇನಿಗೆ ತೋರಿಸುತ್ತಿರುವ ಸಾಮೀಪ್ಯ ನಮಗೆ ಅಪಾರ ಸಂತೋಷವನ್ನು ನೀಡುತ್ತಿದೆ ನಿಮ್ಮ ಸಾನ್ನಿಧ್ಯದಿಂದ ವಿಶ್ವ ಧರ್ಮ ಸಭೆ ನಮ್ಮೊಂದಿಗಿದೆ ಎಂಬ ಭರವಸೆ ನಮಗೆ ಸಿಗುತ್ತಿದೆ" ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಬಳಿಕ ಆರ್ಚ್‌ಬಿಷಪ್ ಕೀವ್‌ಗೆ ಮರಳಿ ವಿವಿಧ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದರು. ಮುಂದಿನ ದಿನ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹಾಗೂ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ಸೇರಿದಂತೆ ಉನ್ನತ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.

19 ಜುಲೈ 2026, 20:06