ಆರ್ಚ್‌ಬಿಷಪ್ ಗ್ಯಾಲಘರ್: ಸಂಕಷ್ಟಗಳ ನಡುವೆಯೂ ಉಕ್ರೇನ್‌ನ ಜನರು ಆಶಾಭರವಸೆ ಮೂಡಿಸುತ್ತಿದ್ದಾರೆ.
ವ್ಯಾಟಿಕನ್ ವರದಿ
ಉಕ್ರೇನ್‌ಗೆ ಆರು ದಿನಗಳ ಅಧಿಕೃತ ಭೇಟಿಯನ್ನು ಪೂರ್ಣಗೊಳಿಸಿದ ಬಳಿಕ, ಜಗದ್ಗುರುಗಳ ಅಧಿಕಾರ ಸ್ಥಳದ ರಾಷ್ಟ್ರಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಭೇಟಿಯ ಮುಖ್ಯ ಉದ್ದೇಶವು ಬೆರ್ಡಿಚಿವ್‌ನ ಮರಿಯಮ್ಮನ ಪುಣ್ಯಕ್ಷೇತ್ರದಲ್ಲಿ ಲ್ಯಾಟಿನ್ ಕಥೋಲಿಕ ಧರ್ಮ ಸಭೆಯ ರಚನೆಗಳ ಪುನಃಸ್ಥಾಪನೆಯ 35ನೇ ವಾರ್ಷಿಕೋತ್ಸವದಲ್ಲಿ ಜಗದ್ಗುರು XIVನೇ ಲಿಯೋರವರು ಪ್ರತಿನಿಧಿಯಾಗಿ ಭಾಗವಹಿಸುವುದಾಗಿತ್ತು. ಸಾವಿರಾರು ಭಕ್ತರೊಂದಿಗೆ ನಡೆದ ಈ ಆಚರಣೆಯಲ್ಲಿ ಅವರು ಉಕ್ರೇನ್ ಜನರ ಅಪಾರ ನಂಬಿಕೆ, ಸಹಿಷ್ಣುತೆ ಮತ್ತು ಶಾಂತಿಗಾಗಿ ಅವರ ಆಳವಾದ ಹಂಬಲವನ್ನು ಸಮೀಪದಿಂದ ಕಂಡರು.
ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ ಆರ್ಚ್‌ಬಿಷಪ್ ಗ್ಯಾಲಘರ್ ರವರು, ಯುದ್ಧದ ಭೀಕರ ಪರಿಣಾಮಗಳಿಂದ ಜನರು ತೀವ್ರ ಸಂಕಷ್ಟ ಮತ್ತು ಆಯಾಸವನ್ನು ಅನುಭವಿಸುತ್ತಿದ್ದರೂ, ತಮ್ಮ ದೇಶದ ಸ್ವಾತಂತ್ರ್ಯ ಮತ್ತು ಭವಿಷ್ಯವನ್ನು ಕಾಪಾಡುವ ದೃಢ ಸಂಕಲ್ಪವನ್ನು ಕಳೆದುಕೊಂಡಿಲ್ಲ ಎಂದು ಹೇಳಿದರು. ಮಕ್ಕಳು, ವೃದ್ಧರು ಹಾಗೂ ಸಂಕಷ್ಟದಲ್ಲಿರುವವರನ್ನು ಕಾಳಜಿಯಿಂದ ನೋಡಿಕೊಳ್ಳುವ ಅವರ ಮನೋಭಾವ ಮತ್ತು ದೇವರ ಮೇಲಿನ ಅಚಲ ವಿಶ್ವಾಸ ತಮ್ಮನ್ನು ಆಳವಾಗಿ ಸ್ಪರ್ಶಿಸಿತು ಎಂದು ಅವರು ತಿಳಿಸಿದರು.
ಬೆರ್ಡಿಚಿವ್ ಮರಿಯಮ್ಮನ ಪುಣ್ಯಕ್ಷೇತ್ರದಲ್ಲಿ ನಡೆದ ಕಾರ್ಮೆಲ್ ಮಾತೆಯ ಹಬ್ಬದ ಸಂದರ್ಭದಲ್ಲಿ ಸಾವಿರಾರು ಭಕ್ತರು, ವೃದ್ಧರು ಮತ್ತು ಅಂಗವಿಕಲರೂ ಸಹ ಅಪಾಯಗಳನ್ನು ಲೆಕ್ಕಿಸದೆ ಭಾಗವಹಿಸಿದ್ದು ಅವರ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಹಲವು ವರ್ಷಗಳ ಬಳಿಕ ತೆರೆದ ಮೈದಾನದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲು ಸಾಧ್ಯವಾದುದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಜಗದ್ಗುರುಗಳ ಪ್ರತಿನಿಧಿಯ ಉಪಸ್ಥಿತಿಯ ಮೂಲಕ ಜಗದ್ಗುರುಗಳ ಆತ್ಮೀಯ ಸಾನ್ನಿಧ್ಯವನ್ನು ಅನುಭವಿಸಿದ ಭಕ್ತರು, ಯುದ್ಧದ ಅಂತ್ಯಕ್ಕಾಗಿ ಮಾತೆ ಮರಿಯಮ್ಮನ ಮಧ್ಯಸ್ಥಿಕೆಯನ್ನು ಭಕ್ತಿಯಿಂದ ಬೇಡಿಕೊಂಡರು.
ಕೀವ್ ಸೇರಿದಂತೆ ಬಾಂಬ್ ದಾಳಿಗೆ ಒಳಗಾದ ಪ್ರದೇಶಗಳು, ಸ್ಮಾರಕಗಳು ಹಾಗೂ ತಮ್ಮ ಮನೆ-ಮಂದಿ ಮತ್ತು ಬಂಧುಗಳನ್ನು ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಿದ ಅನುಭವ ಅತ್ಯಂತ ಮನಕಲಕುವಂತಿತ್ತು ಎಂದು ಆರ್ಚ್‌ಬಿಷಪ್ ಹೇಳಿದರು. ದೂರದರ್ಶನದಲ್ಲಿ ಯುದ್ಧದ ಚಿತ್ರಗಳನ್ನು ನೋಡುವುದು ಒಂದು ಅನುಭವವಾದರೆ, ಎಲ್ಲವನ್ನೂ ಕಳೆದುಕೊಂಡ ಜನರನ್ನು ನೇರವಾಗಿ ಭೇಟಿಯಾಗಿ ಅವರ ನೋವು ಮತ್ತು ಕಣ್ಣಿನಲ್ಲಿರುವ ಆಶಾಕಿರಣವನ್ನು ಕಾಣುವುದು ಸಂಪೂರ್ಣ ವಿಭಿನ್ನ ಅನುಭವ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಮತ್ತು ಶಾಂತಿಗಾಗಿ ಉಕ್ರೇನ್ ಜನರು ಅಪಾರ ತ್ಯಾಗ ಮಾಡಲು ಸಿದ್ಧರಾಗಿರುವುದು ಅವರ ಮನಸ್ಸನ್ನು ಆಳವಾಗಿ ಮುಟ್ಟಿತು.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸೇರಿದಂತೆ ರಾಜಕೀಯ ಮತ್ತು ಸರ್ಕಾರಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು ಫ್ರಾನ್ಸಿಸ್ ರವರು ಹಾಗೂ ಜಗದ್ಗುರು XIVನೇ ಲಿಯೋರವರ ಶಾಂತಿಯ ಮನವಿಗಳಿಗೆ ಉಕ್ರೇನ್ ನಾಯಕರು ಕೃತಜ್ಞತೆ ವ್ಯಕ್ತಪಡಿಸಿದರು. ಮಕ್ಕಳನ್ನು, ಯುದ್ಧ ಕೈದಿಗಳನ್ನು ಮತ್ತು ನಾಗರಿಕರನ್ನು ಮರಳಿ ತರುವ ಮಾನವೀಯ ಕಾರ್ಯ ಸೇರಿದಂತೆ ಜಗದ್ಗುರುಗಳ ಅಧಿಕಾರ ಸ್ಥಳವು ತನ್ನ ಶಾಂತಿ ಮತ್ತು ಮಾನವೀಯ ಸೇವೆಯ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಆರ್ಚ್‌ಬಿಷಪ್ ಗ್ಯಾಲಘರ್ ಹೇಳಿದರು. ಉಕ್ರೇನ್‌ಗೆ ಭೇಟಿ ನೀಡುವ ಆಹ್ವಾನವನ್ನು ಜಗದ್ಗುರು XIVನೇ ಲಿಯೋರವರು ಗಂಭೀರವಾಗಿ ಪರಿಗಣಿಸುತ್ತಿದ್ದು, ಸೂಕ್ತ ಸಮಯ ಮತ್ತು ಪರಿಸ್ಥಿತಿ ನಿರ್ಮಾಣವಾದಾಗ ಆ ಭೇಟಿ ಶಾಂತಿಯ ಬೆಳವಣಿಗೆಗೆ ಫಲಪ್ರದವಾಗಲಿ ಎಂಬ ಆಶಯವಿದೆ ಎಂದು ಅವರು ತಿಳಿಸಿದರು.
ಭೇಟಿಯ ಅಂತ್ಯದಲ್ಲಿ ತಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಚಿತ್ರವೆಂದರೆ ಬಾಂಬ್ ದಾಳಿಯಿಂದ ಸಂಪೂರ್ಣವಾಗಿ ನಾಶವಾದ ಮನೆಗಳು ಹಾಗೂ ಎಲ್ಲವನ್ನೂ ಕಳೆದುಕೊಂಡ ಜನರ ಮುಖಗಳು ಎಂದು ಆರ್ಚ್‌ಬಿಷಪ್ ಗ್ಯಾಲಘರ್ ಹೇಳಿದರು. ಆದರೂ ಅವರ ಕಣ್ಣಲ್ಲಿ ಇನ್ನೂ ಉತ್ತಮ ನಾಳೆಯ ನಿರೀಕ್ಷೆ ಜೀವಂತವಾಗಿರುವುದನ್ನು ಕಂಡದ್ದು ತಮ್ಮಲ್ಲಿ ಆಶಾಭರವಸೆಯನ್ನು ಮೂಡಿಸಿದೆ ಎಂದು ಹೇಳಿದ ಅವರು, ಉಕ್ರೇನ್‌ನಲ್ಲಿ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ತಮ್ಮ ಭೇಟಿಯನ್ನು ಮುಕ್ತಾಯಗೊಳಿಸಿದರು.