ನೈಜೀರಿಯಾದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್ ನೈಜೀರಿಯಾದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್  (ANSA)

ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಅಂಗವಾಗಿ ಆರ್ಚ್‌ಬಿಷಪ್ ಗ್ಯಾಲಘರ್ ನೈಜೀರಿಯಾಕ್ಕೆ ಭೇಟಿ.

ವ್ಯಾಟಿಕನ್‌ನ ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರು, ಜಗದ್ಗುರುಗಳ ಅಧಿಕಾರ ಸ್ಥಳದ ಮತ್ತು ನೈಜೀರಿಯಾದ ಫೆಡರಲ್ ಗಣರಾಜ್ಯದ ನಡುವಿನ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಅಂಗವಾಗಿ, ಜುಲೈ 2ರಿಂದ 7ರವರೆಗೆ ನೈಜೀರಿಯಾಕ್ಕೆ ಅಧಿಕೃತ ಭೇಟಿ ನೀಡಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನ ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರು, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ನೈಜೀರಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಲು ಜುಲೈ 2ರಂದು ನೈಜೀರಿಯಾದ ಫೆಡರಲ್ ಗಣರಾಜ್ಯಕ್ಕೆ ಆಗಮಿಸಿದ್ದು, ಜುಲೈ 7ರ ಮಂಗಳವಾರ ತಮ್ಮ ಭೇಟಿಯನ್ನು ಪೂರ್ಣಗೊಳಿಸಿದರು.

ಪಶ್ಚಿಮ ಆಫ್ರಿಕಾದ ಈ ರಾಷ್ಟ್ರದಲ್ಲಿ 3 ಕೋಟಿಗೂ ಅಧಿಕ ಕಥೋಲಿಕರು ಮತ್ತು 10,000ಕ್ಕೂ ಹೆಚ್ಚು ಕಥೋಲಿಕ ಯಾಜಕರು ಸೇವೆ ಸಲ್ಲಿಸುತ್ತಿದ್ದಾರೆ. ಅದೇ ವೇಳೆ, ದೇಶವು ಇನ್ನೂ ಗಂಭೀರವಾದ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ.

ರಾಜ್ಯ ಕಾರ್ಯದರ್ಶಿಯ ಅಧಿಕೃತ ಎಕ್ಸ್ ಖಾತೆ @ಟೆರ್ಜಾಲಾಗ್ಜಿಯಾ ಪ್ರಕಟಿಸಿದ ಮಾಹಿತಿಯ ಪ್ರಕಾರ, ಆರ್ಚ್‌ಬಿಷಪ್ ಗ್ಯಾಲಘರ್ ಅವರು ರಾಷ್ಟ್ರಪತಿ ಭವನದಲ್ಲಿ ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬುರವರನ್ನು ಭೇಟಿ ಮಾಡಿದರು.

ಈ ಭೇಟಿಯಲ್ಲಿ ವಿದೇಶಾಂಗ ಸಚಿವೆ ಬಿಯಾಂಕಾ ಒಡುಮೆಗ್ವು ಒಜುಕ್ವು ಹಾಗೂ ಪಶ್ಚಿಮ ಆಫ್ರಿಕಾ ರಾಷ್ಟ್ರಗಳ ಆರ್ಥಿಕ ಸಮುದಾಯದ ಆಯೋಗದ ಅಧ್ಯಕ್ಷ ಓಮರ್ ಅಲಿಯು ಟೂರೇ ಕೂಡ ಉಪಸ್ಥಿತರಿದ್ದರು.

ಸಭೆಯ ಬಳಿಕ ಅಧ್ಯಕ್ಷ ಟಿನುಬುರವರು ಸ್ಥಳೀಯ ಮಾಧ್ಯಮಗಳಿಗೆ ಮಾತನಾಡುತ್ತಾ, ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದತೆ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವುದರ ಜೊತೆಗೆ ಅಂತರಧರ್ಮೀಯ ಸಂವಾದಕ್ಕೆ ಆದ್ಯತೆ ನೀಡುವ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿರುವುದಾಗಿ ತಿಳಿಸಿದರು.

ರಾಜ್ಯಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ವ್ಯಾಟಿಕನ್ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಗ್ಯಾಲಘರ್ ರವರು, ಭಾನುವಾರ ಬೆಳಿಗ್ಗೆ ಅಬುಜಾದ ಗಾರ್ಕಿಯಲ್ಲಿರುವ ನೈಜೀರಿಯಾದ ರಾಣಿ ಮಾತೆ ಮರಿಯಮ್ಮನವರ ಪ್ರೊ-ಕ್ಯಾಥೆಡ್ರಲ್ನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಬಲಿದಾನವು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ನೈಜೀರಿಯಾ ನಡುವಿನ ರಾಜತಾಂತ್ರಿಕ ಸಂಬಂಧಗಳ 50 ವರ್ಷಗಳಿಗಾಗಿ ಕೃತಜ್ಞತಾರ್ಪಣೆಯಾಗಿ ಆಚರಿಸಲಾಯಿತು.

 

08 ಜುಲೈ 2026, 16:40