ಹುಡುಕಿ

ಉಕ್ರೇನ್‌ನ ಕೀವ್‌ನಲ್ಲಿ ಕಾರ್ಡಿನಲ್ ಜುಪ್ಪಿ. ಉಕ್ರೇನ್‌ನ ಕೀವ್‌ನಲ್ಲಿ ಕಾರ್ಡಿನಲ್ ಜುಪ್ಪಿ. 

ಕಾರ್ಡಿನಲ್ ಜುಪ್ಪಿ ಕೀವ್‌ನಲ್ಲಿ ಪ್ರಾರ್ಥನೆ: ‘ದೇವರು ನ್ಯಾಯಸಮ್ಮತ ಶಾಂತಿಯನ್ನು ಅನುಗ್ರಹಿಸಲಿ’.

ಯುದ್ಧಪೀಡಿತ ಉಕ್ರೇನ್‌ಗೆ ಕೈಗೊಂಡಿರುವ ತಮ್ಮ ಧರ್ಮಸೇವೆಯ ಮೂರನೇ ದಿನದಂದು, ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಮತ್ತೆಯೊ ಮರಿಯಾ ಜುಪ್ಪಿ ರವರು, ಕೀವಿಯನ್ ರುಸ್‌ನ ದೀಕ್ಷಾಸ್ನಾನದ ಸ್ಮರಣೆಯೊಂದಿಗೆ ಏಕಕಾಲದಲ್ಲಿ ಆಚರಿಸಲ್ಪಡುವ ಉಕ್ರೇನ್ ರಾಜ್ಯತ್ವ ದಿನದ ಅಂಗವಾಗಿ ಕೀವ್‌ನಲ್ಲಿ ನಡೆದ ಆಚರಣೆಗಳಲ್ಲಿ ಭಾಗವಹಿಸಿದರು.

ವ್ಯಾಟಿಕನ್ ವರದಿ

ಯುದ್ಧಪೀಡಿತ ಉಕ್ರೇನ್‌ಗೆ ತಮ್ಮ ಮಾನವೀಯ ಧರ್ಮಸೇವೆಯ ಮೂರನೇ ದಿನವಾದ ಜುಲೈ 15ರಂದು, ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷರಾದ ಕಾರ್ಡಿನಲ್ ಮತ್ತೆಯೊ ಮರಿಯಾ ಜುಪ್ಪಿ ರವರು ಕೀವ್‌ನಲ್ಲಿ ನಡೆದ ಉಕ್ರೇನ್ ರಾಜ್ಯತ್ವ ದಿನ ಹಾಗೂ ಕೀವಿಯನ್ ರುಸ್‌ನ ದೀಕ್ಷಾಸ್ನಾನದ ಸ್ಮರಣಾ ಆಚರಣೆಗಳಲ್ಲಿ ಭಾಗವಹಿಸಿದರು. ರಾತ್ರಿ ವೇಳೆ ಕ್ಷಿಪಣಿ ದಾಳಿಗೆ ಗುರಿಯಾದ ನಾಗರಿಕ ಪ್ರದೇಶಗಳ ಹಿನ್ನೆಲೆಯಲ್ಲಿ ಅವರು ಉಕ್ರೇನಿಯನ್ ಭಾಷೆಯಲ್ಲಿ ಸರ್ವಶಕ್ತ ದೇವರನ್ನು ಪ್ರಾರ್ಥಿಸಿ, "ಉಕ್ರೇನ್‌ಗೆ ನ್ಯಾಯಸಮ್ಮತ ಶಾಂತಿಯನ್ನು ಅನುಗ್ರಹಿಸು ಯುದ್ಧ ಕೈದಿಗಳು ತಮ್ಮ ಮನೆಗಳಿಗೆ ಮರಳಲಿ, ಮಕ್ಕಳಿಗೆ ಮತ್ತೆ ತಮ್ಮ ಕುಟುಂಬಗಳನ್ನು ಅಪ್ಪಿಕೊಳ್ಳುವ ಭಾಗ್ಯ ದೊರೆಯಲಿ, ನಾಪತ್ತೆಯಾದವರು ಪತ್ತೆಯಾಗಲಿ ಹಾಗೂ ಪ್ರತಿಯೊಬ್ಬರೂ ತಮ್ಮ ಪ್ರೀತಿಪಾತ್ರರ ಅಂತಿಮ ವಿದಾಯ ಹೇಳಲು ಅವಕಾಶ ದೊರೆಯಲಿ" ಎಂದು ಬೇಡಿಕೊಂಡರು.

ಈ ಭೇಟಿ, 2023ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ಸೂಚನೆಯಂತೆ ಆರಂಭವಾದ ಮಾನವೀಯ ಕಾರ್ಯದ ಮುಂದುವರಿಕೆಯಾಗಿದೆ. ಜಗದ್ಗುರು ಲಿಯೋರವರ ಆತ್ಮೀಯ ಸಾನ್ನಿಧ್ಯವನ್ನು ಉಕ್ರೇನ್ ಜನರಿಗೆ ತಲುಪಿಸುವುದು ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ಮಾನವೀಯ ಪ್ರಯತ್ನಗಳಿಗೆ ಬಲ ತುಂಬುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಯುದ್ಧ ಕೈದಿಗಳ ವಿನಿಮಯ, ರಷ್ಯಾಕ್ಕೆ ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಉಕ್ರೇನ್ ಹೇಳುವ ಮಕ್ಕಳ ಮರಳುವಿಕೆ ಹಾಗೂ ಯುದ್ಧದಲ್ಲಿ ಮೃತಪಟ್ಟವರ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ತಲುಪಿಸುವ ಕಾರ್ಯಗಳಿಗೆ ವ್ಯಾಟಿಕನ್ ನೆರವು ನೀಡುತ್ತಿದೆ.

ಬೆಳಿಗ್ಗೆ ಪ್ರೇಷಿತರ ರಾಯಭಾರಿ ಅರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರ ನೇತೃತ್ವದಲ್ಲಿ ನಡೆದ ಪವಿತ್ರ ಬಲಿಪೂಜೆಯ ಬಳಿಕ, ಕಾರ್ಡಿನಲ್ ಜುಪ್ಪಿ ರವರು ಕೀವಿಯನ್ ರುಸ್‌ನ ಕ್ರೈಸ್ತೀಕರಣದ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು. ಕ್ರಿ.ಶ. 988ರಲ್ಲಿ ಸಂತ ವೊಲೊಡಿಮಿರ್ ಮಹಾರಾಜರು ದೇಶವನ್ನು ಕ್ರೈಸ್ತ ಧರ್ಮಕ್ಕೆ ಕರೆತಂದ ಘಟನೆಯನ್ನು ಸ್ಮರಿಸುವ ಈ ದಿನವನ್ನು ಉಕ್ರೇನ್‌ನಲ್ಲಿ ಧಾರ್ಮಿಕ ಹಾಗೂ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತದೆ. ಸಮಾರಂಭದಲ್ಲಿ ವಿವಿಧ ಧಾರ್ಮಿಕ ನಾಯಕರು, ಉಕ್ರೇನಿಯನ್ ಗ್ರೀಕ್ ಕಥೋಲಿಕ ಧರ್ಮ ಸಭೆಯ ಮೇಜರ್ ಆರ್ಚ್‌ಬಿಷಪ್ ಸ್ವಿಯಾಟೋಸ್ಲಾವ್ ಶೆವ್ಚುಕ್ ಹಾಗೂ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಉಪಸ್ಥಿತರಿದ್ದರು.

ಸೇಂಟ್ ಮೈಕೆಲ್ ಗೋಲ್ಡನ್-ಡೋಮ್ ಮಠದ ಎದುರಿನ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಡಿನಲ್ ಜುಪ್ಪಿ ರವರು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಯುದ್ಧದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಕೆಂಪು ಗುಲಾಬಿಗಳ ಹೂಗುಚ್ಛವನ್ನು ಅರ್ಪಿಸಿದರು. ಉಕ್ರೇನಿಯನ್ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, "ಸಂತ ವೊಲೊಡಿಮಿರ್ ಉಕ್ರೇನ್ ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷರ ಮನಸ್ಸು ಹಾಗೂ ಹೃದಯಗಳನ್ನು ಬೆಳಗಿಸಿ, ನ್ಯಾಯ ಮತ್ತು ಶಾಂತಿಯ ಮಾರ್ಗವನ್ನು ತೆರೆದುಕೊಡಲಿ" ಎಂದು ಪ್ರಾರ್ಥಿಸಿದರು.

ಇದಕ್ಕೂ ಮುನ್ನ ಲ್ವಿವ್ ಪ್ರದೇಶದಲ್ಲಿ ಕಾರ್ಡಿನಲ್ ಜುಪ್ಪಿ ರವರು ಯುದ್ಧ ಕೈದಿಗಳನ್ನು ಇರಿಸಲಾಗಿರುವ ಶಿಕ್ಷಾಗೃಹಕ್ಕೆ ಭೇಟಿ ನೀಡಿ, ನಂತರ ಪ್ರಾದೇಶಿಕ ಆಡಳಿತದ ಮುಖ್ಯಸ್ಥ ಮಕ್ಸಿಮ್ ಕೊಝಿಟ್ಸ್ಕಿಯವರನ್ನು ಭೇಟಿಯಾಗಿ ಮಾನವೀಯ ಸಹಕಾರದ ಕುರಿತು ಚರ್ಚಿಸಿದರು. ಬಳಿಕ ಸಂತ್ ಎಜಿಡಿಯೊ ಸಮುದಾಯದ ಕೇಂದ್ರದಲ್ಲಿ ಯುದ್ಧದಿಂದ ಸ್ಥಳಾಂತರಗೊಂಡ ಕುಟುಂಬಗಳನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದರು ಹಾಗೂ ಜಗದ್ಗುರು XIVನೇ ಲಿಯೋರವರ ಪ್ರಾರ್ಥನೆ ಮತ್ತು ಆತ್ಮೀಯ ಸಾನ್ನಿಧ್ಯದ ಸಂದೇಶವನ್ನು ತಲುಪಿಸಿದರು.

15 ಜುಲೈ 2026, 19:58