ಹುಡುಕಿ

ಕಾರ್ಡಿನಲ್ ಜುಪ್ಪಿರವರು ಕಾರ್ಡಿನಲ್ ಜುಪ್ಪಿರವರು 

ಕಾರ್ಡಿನಲ್ ಜುಪ್ಪಿ ಉಕ್ರೇನ್ ಶಾಂತಿ ಮಿಷನ್‌ನ್ನು ಮುಕ್ತಾಯಗೊಳಿಸಿ: ‘ಶಾಂತಿಗಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು’.

ಕಾರ್ಡಿನಲ್ ಜುಪ್ಪಿ ಅವರು ನಾಲ್ಕು ದಿನಗಳ ಉಕ್ರೇನ್ ಭೇಟಿಯನ್ನು ಪೂರ್ಣಗೊಳಿಸಿ ಇಂದು, ಜುಲೈ 16ರಂದು, ರೋಮ್‌ಗೆ ಮರಳಿದರು. ಉಕ್ರೇನ್ ರಾಜ್ಯತ್ವ ದಿನದ ಆಚರಣೆಗಳಲ್ಲಿ ಭಾಗವಹಿಸಿದ ಬಳಿಕ, ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷರಾದ ಅವರು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ಹಾಗೂ ಇತರ ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾದರು. ಈ ಭೇಟಿಯಲ್ಲಿ ಯುದ್ಧ ಕೈದಿಗಳ ಬಿಡುಗಡೆ, ಉಕ್ರೇನಿನ ಮಕ್ಕಳ ಸುರಕ್ಷಿತ ಮರಳುವಿಕೆ, ಮಾನವೀಯ ನೆರವು ಹಾಗೂ ರಷ್ಯಾದ ಕಾರಾಗೃಹಗಳಲ್ಲಿ ಬಂಧಿತರಾಗಿರುವ ಕೈದಿಗಳನ್ನು ಭೇಟಿ ನೀಡುವಂತೆ ಅವರ ಕುಟುಂಬಗಳು ಕಾರ್ಡಿನಲ್ ಜುಪ್ಪಿ ಅವರಿಗೆ ಸಲ್ಲಿಸಿರುವ ಮನವಿಗಳ ಕುರಿತು ಚರ್ಚಿಸಿದರು.

ವ್ಯಾಟಿಕನ್ ವರದಿ

ಕಾರ್ಡಿನಲ್ ಮತ್ತೆಯೊ ಮರಿಯಾ ಜುಪ್ಪಿ ಉಕ್ರೇನ್ ಶಾಂತಿ ಮಿಷನ್‌ನ್ನು ಪೂರ್ಣಗೊಳಿಸಿ ರೋಮಿಗೆ ಮರಳಿದರು

2023ರಲ್ಲಿ ನಡೆದ ತಮ್ಮ ಮೊದಲ ಭೇಟಿಯ ಬಳಿಕ ಉಕ್ರೇನ್‌ಗೆ ಕೈಗೊಂಡ ಎರಡನೇ ಶಾಂತಿ ಮಿಷನ್‌ನ್ನು ಪೂರ್ಣಗೊಳಿಸಿದ ಕಾರ್ಡಿನಲ್ ಮತ್ತೆಯೊ ಮರಿಯಾ ಜುಪ್ಪಿ ರವರು ಇಂದು, ಜುಲೈ 16ರಂದು, ರೋಮಿಗೆ ಮರಳಿದರು. ಲ್ವಿವ್ ಪ್ರದೇಶ ಮತ್ತು ಕೀವ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಭೇಟಿಯ ಸಂದರ್ಭದಲ್ಲಿ ಅವರು, ಶಾಂತಿ ಮತ್ತು ಮಾನವ ಘನತೆಯ ರಕ್ಷಣೆಗೆ ನಿರಂತರವಾಗಿ ಮನವಿ ಮಾಡುತ್ತಿರುವ ಜಗದ್ಗುರು XIVನೇ ಲಿಯೋರವರು ಆತ್ಮೀಯತೆ ಮತ್ತು ಪ್ರಾರ್ಥನೆಗಳನ್ನು ಉಕ್ರೇನ್ ಜನರಿಗೆ ತಲುಪಿಸಿದರು.

ಉಕ್ರೇನ್ ರಾಜ್ಯತ್ವ ದಿನದ ಅಂಗವಾಗಿ ಕೀವ್‌ನ ಸೇಂಟ್ ಮೈಕೆಲ್ ಚೌಕದಲ್ಲಿ ನಡೆದ ಅಧಿಕೃತ ಸಮಾರಂಭದ ಬಳಿಕ ಮಂಗಳವಾರ ಮಧ್ಯಾಹ್ನ ಕಾರ್ಡಿನಲ್ ಜುಪ್ಪಿರವರ ಅಂತಿಮ ಕಾರ್ಯಕ್ರಮಗಳು ನಡೆಯಿತು. ಈ ಸಮಾರಂಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸೇರಿದಂತೆ ನಾಗರಿಕ ಮತ್ತು ಧಾರ್ಮಿಕ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಡಿನಲ್ ಜುಪ್ಪಿ ಅವರು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ವಿದೇಶಾಂಗ ಸಚಿವರೊಂದಿಗೆ ಭೇಟಿ

ಮಾತುಕತೆಯ ವೇಳೆ ಸಚಿವ ಆಂಡ್ರಿಯ್ ಸಿಬಿಹಾ ಅವರು ಜಗದ್ಗುರುಗಳ ಅಧಿಕಾರ ಸ್ಥಳವು ನೀಡುತ್ತಿರುವ ಮಾನವೀಯ ನೆರವಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ನಡೆಯುತ್ತಿರುವ ಶಾಂತಿ ಪ್ರಯತ್ನಗಳು ಮತ್ತು ತುರ್ತು ಮಾನವೀಯ ಆದ್ಯತೆಗಳ ಕುರಿತು ಚರ್ಚಿಸಿದರು.

ರಷ್ಯಾದ ವಶದಲ್ಲಿರುವ ಉಕ್ರೇನ್ ನಾಗರಿಕ ಬಂಧಿತರ ಪರಿಸ್ಥಿತಿಯನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿ, ಅವರ ಬಿಡುಗಡೆಗೆ ಅನುಕೂಲವಾಗುವ ಮಾನವೀಯ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದರು. ಜೊತೆಗೆ, ರಷ್ಯಾದ ಆಕ್ರಮಣದಲ್ಲಿರುವ ಖೆರ್ಸೋನ್ ಪ್ರದೇಶದ ಒಲೆಶ್ಕಿ ಮತ್ತು ಹೊಲಾ ಪ್ರಿಸ್ತಾನ್ ಸಮುದಾಯಗಳಿಗೆ ಮಾನವೀಯ ನೆರವು ತಲುಪುವಂತೆ ಅವಕಾಶ ಕಲ್ಪಿಸುವ ಅಗತ್ಯವನ್ನೂ ಒತ್ತಿಹೇಳಿದರು.

ಇತ್ತೀಚೆಗೆ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಕೀವ್–ಪೆಚೆರ್ಸ್ಕ್ ಲಾವ್ರಾ ಮಠದ ಮೇಲೆ ನಡೆದ ದಾಳಿಯ ವಿಷಯವನ್ನೂ ಅವರು ಪ್ರಸ್ತಾಪಿಸಿದರು. ಆಗಸ್ಟ್‌ನಲ್ಲಿ ತನ್ನ 975ನೇ ವಾರ್ಷಿಕೋತ್ಸವವನ್ನು ಆಚರಿಸಲಿರುವ ಈ ಐತಿಹಾಸಿಕ ಧಾರ್ಮಿಕ ತಾಣದ ಸಂರಕ್ಷಣೆ ಮತ್ತು ಪುನರ್‌ನಿರ್ಮಾಣವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ಮಾನವೀಯ ವಿಷಯಗಳಿಗೆ ಆದ್ಯತೆ

ಯುದ್ಧ ಕೈದಿಗಳ ಬಿಡುಗಡೆ, ಉಕ್ರೇನ್ ಮಕ್ಕಳ ಸುರಕ್ಷಿತ ವಾಪಸ್ಸು, ಮಾನವೀಯ ನೆರವು ಹಾಗೂ ನಾಗರಿಕರ ರಕ್ಷಣೆ ಕುರಿತ ವಿಷಯಗಳು ಕಾರ್ಡಿನಲ್ ಜುಪ್ಪಿರವರು ಇತರ ಉಕ್ರೇನಿನ ಅಧಿಕಾರಿಗಳೊಂದಿಗೆ ನಡೆಸಿದ ಸಭೆಗಳಲ್ಲಿಯೂ ಪ್ರಮುಖವಾಗಿ ಚರ್ಚೆಗೆ ಬಂದವು.

ಈ ಸಂದರ್ಭದಲ್ಲಿ ಕಾರ್ಡಿನಲ್ ಜುಪ್ಪಿ, ಮಾನವೀಯ ಸೇವೆಯೇ ಜಗದ್ಗುರುಗಳ ಅಧಿಕಾರ ಸ್ಥಳದ ಪ್ರಯತ್ನಗಳ ಕೇಂದ್ರಬಿಂದುವಾಗಿದೆ ಎಂದು ಪುನರುಚ್ಚರಿಸಿದರು.

“ಒಬ್ಬ ಸೈನಿಕನಾಗಲಿ, ಒಬ್ಬ ನಾಗರಿಕನಾಗಲಿ ಅಥವಾ ಒಬ್ಬ ಮಗುವಾಗಲಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗುವುದು ಶಾಂತಿಯತ್ತ ಇಡಲಾಗುವ ಒಂದು ಮಹತ್ವದ ಹೆಜ್ಜೆಯಾಗಿದೆ,” ಎಂದು ಅವರು ಹೇಳಿದರು. “ಶಾಂತಿಗಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇದೇ ಜಗದ್ಗುರು XIVನೇ ಲಿಯೋರವರ ದೃಢ ಸಂಕಲ್ಪ. ಮಾನವೀಯ ಬದ್ಧತೆ ರಾಜಕೀಯ ಅಥವಾ ಸೈನಿಕ ಪರಿಗಣನೆಗಳಿಗಿಂತ ಮೇಲಿರಬೇಕು.”

ಇಟಾಲಿಯನ್ ದಿನಪತ್ರಿಕೆ ಅವ್ವೆನಿರೆ ವರದಿ ಮಾಡಿದಂತೆ, ಕಾರ್ಡಿನಲ್ ಜುಪ್ಪಿರವರು ಯುದ್ಧ ಕೈದಿಗಳ ವಿನಿಮಯ ಮತ್ತು ಮಾನವ ಹಕ್ಕುಗಳ ಹೊಣೆ ಹೊತ್ತಿರುವ ಉನ್ನತ ಉಕ್ರೇನಿನ ಅಧಿಕಾರಿಗಳನ್ನು ಭೇಟಿಯಾದರು. ರಷ್ಯಾದಲ್ಲಿ ಬಂಧಿತರಾಗಿರುವ ಸೈನಿಕರು ಹಾಗೂ ನಾಗರಿಕರ ಕುಟುಂಬ ಸದಸ್ಯರೊಂದಿಗೂ ಅವರು ಮಾತುಕತೆ ನಡೆಸಿದರು.

ಕಾರ್ಡಿನಲ್ ಜುಪ್ಪಿ ಹಾಗೂ ಉಕ್ರೇನ್‌ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರಿಗೆ ಸಲ್ಲಿಸಲಾದ ಮನವಿಗಳಲ್ಲಿ, ರಷ್ಯಾದಲ್ಲಿ ಬಂಧಿತರಾಗಿರುವ ಸುಮಾರು 7,000 ಉಕ್ರೇನ್ ಕೈದಿಗಳು ಮತ್ತು ಉಕ್ರೇನ್‌ನಲ್ಲಿ ಬಂಧಿತರಾಗಿರುವ ಸುಮಾರು 4,000 ರಷ್ಯಾದ ಕೈದಿಗಳನ್ನು ಒಳಗೊಂಡ “ಎಲ್ಲರ ಬದಲಿಗೆ ಎಲ್ಲರು” ಎಂಬ ಕೈದಿ ವಿನಿಮಯ ಯೋಜನೆಗೆ ಬೆಂಬಲ ನೀಡುವಂತೆ ಕೋರಲಾಯಿತು.

ಈ ಸಭೆಗಳಲ್ಲಿ ಕಾಣೆಯಾಗಿರುವ ವ್ಯಕ್ತಿಗಳ ಪತ್ತೆ, ನಾಗರಿಕರ ತಾಯ್ನಾಡಿಗೆ ಮರಳುವಿಕೆ ಹಾಗೂ ಗಡಿಯಾಚೆಗೆ ಕರೆದೊಯ್ಯಲ್ಪಟ್ಟ ಉಕ್ರೇನ್ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಕರೆತರುವ ವಿಷಯಗಳನ್ನೂ ಚರ್ಚಿಸಲಾಯಿತು. ಈ ಮಾನವೀಯ ವಿಷಯಗಳಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಲ್ವಿವ್ ಪ್ರದೇಶದ ಝಖಿದ್–1 ದಂಡನಾ ಕಾಲೋನಿಗೆ ಕಾರ್ಡಿನಲ್ ಜುಪ್ಪಿ ಭೇಟಿ ನೀಡಿದ ನಂತರ, ಬಂಧಿತರ ಕುಟುಂಬಗಳು ಅವರು ರಷ್ಯಾದ ಕಾರಾಗೃಹಗಳಿಗೂ ಭೇಟಿ ನೀಡಿ ಅಲ್ಲಿನ ಕೈದಿಗಳನ್ನು ಭೇಟಿಯಾಗಲು ಸಾಧ್ಯವಾಗಲಿ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

16 ಜುಲೈ 2026, 19:21