ಇನ್‌ಸ್ಟಿಟ್ಯೂಟ್ ಫಾರ್ ದ ವರ್ಕ್ಸ್ ಆಫ್ ರಿಲಿಜನ್ (ಐಒಆರ್) ತನ್ನ ಮುಂದಿನ ನಿರ್ದೇಶಕರಾಗಿ ಜಿಯೋವನ್ನಿ ಬೋಶಿಯಾರವರನ್ನು ನೇಮಿಸಿರುವುದಾಗಿ ಪ್ರಕಟಿಸಿದೆ.
ವ್ಯಾಟಿಕನ್ ವರದಿ
ಇನ್‌ಸ್ಟಿಟ್ಯೂಟ್ ಫಾರ್ ದ ವರ್ಕ್ಸ್ ಆಫ್ ರಿಲಿಜನ್ (ಐಒಆರ್) ಬುಧವಾರ ಜಿಯೋವನ್ನಿ ಬೋಶಿಯಾರವರನ್ನು ತನ್ನ ಮುಂದಿನ ಮಹಾನಿರ್ದೇಶಕರಾಗಿ ನೇಮಕ ಮಾಡಿರುವುದಾಗಿ ಘೋಷಿಸಿತು. ಅವರು 2026ರ ಅಕ್ಟೋಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಬೋಶಿಯಾಲವರು ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಸ್ತುತ ಮಹಾನಿರ್ದೇಶಕರಾದ ಜಿಯನ್ ಫ್ರಾಂಕೊ ಮಮ್ಮಿರವರ ಉತ್ತರಾಧಿಕಾರಿಯಾಗಲಿದ್ದಾರೆ. ಕಡ್ಡಾಯ ನಿವೃತ್ತಿ ವಯಸ್ಸನ್ನು ತಲುಪುತ್ತಿರುವ ಹಿನ್ನೆಲೆಯಲ್ಲಿ ಮಮ್ಮಿರವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ.
ಮಮ್ಮಿ ಅವರು 2026ರ ಸೆಪ್ಟೆಂಬರ್ 30ರವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಈ ನೇಮಕಾತಿಯನ್ನು ಸಂಸ್ಥೆಯ ಮೇಲ್ವಿಚಾರಣಾ ಮಂಡಳಿ ನಿರ್ಧರಿಸಿದ್ದು, ಐಒಆರ್‌ನ ಕಾರ್ಡಿನಲ್‌ಗಳ ಮೇಲ್ವಿಚಾರಣಾ ಆಯೋಗ ಅನುಮೋದಿಸಿದೆ. ನೇಮಕಾತಿಯನ್ನು ಪ್ರಕಟಿಸಿದ ಐಒಆರ್‌ನ ಪತ್ರಿಕಾ ಪ್ರಕಟಣೆಯಲ್ಲಿ, "ಮೇಲ್ವಿಚಾರಣೆ, ಆಡಳಿತ ಮತ್ತು ನಿರ್ವಹಣೆಯ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸುವ ಆಡಳಿತ ವ್ಯವಸ್ಥೆಯನ್ನು ಈ ನೇಮಕಾತಿ ಪ್ರತಿಬಿಂಬಿಸುತ್ತದೆ. ಈ ವ್ಯವಸ್ಥೆಯನ್ನು ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವ ಉದ್ದೇಶದಿಂದ ರೂಪಿಸಲಾಗಿದೆ," ಎಂದು ತಿಳಿಸಲಾಗಿದೆ.
55 ವರ್ಷದ ಜಿಯೋವನ್ನಿ ಬೋಶಿಯಾ ಅವರು 2019ರಲ್ಲಿ ಹಣಕಾಸು ವಿಭಾಗದ ಮುಖ್ಯಸ್ಥ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಆಗಿ ಐಒಆರ್‌ಗೆ ಸೇರ್ಪಡೆಯಾದರು. 2021ರಲ್ಲಿ ಅವರು ಹೂಡಿಕೆ ವಿಭಾಗದ ಮುಖ್ಯಸ್ಥನಾಗಿ ಆಸ್ತಿ ನಿರ್ವಹಣೆ ಜವಾಬ್ದಾರಿಯನ್ನೂ ವಹಿಸಿಕೊಂಡರು. 2023ರಿಂದ ಅವರು ಉಪ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರಿಗೆ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳಲ್ಲಿ ಮೂರು ದಶಕಗಳ ಅನುಭವವಿದ್ದು, ಸಾಲೊಮನ್ ಬ್ರದರ್ಸ್, ಸಿಟಿಗ್ರೂಪ್, ಆರ್‌ಬಿಎಸ್ ಹಾಗೂ ಕ್ರೆಡಿಟ್ ಸ್ವಿಸ್ ಫಸ್ಟ್ ಬೋಸ್ಟನ್ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅವರ ವೃತ್ತಿಜೀವನದ ಬಹುಪಾಲು ಲಂಡನ್‌ನಲ್ಲಿ ಕಳೆದಿದ್ದು, ಅಲ್ಲಿ ಪ್ರಮುಖ ಹೂಡಿಕೆ ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿದ ನಂತರ ಪರ್ಯಾಯ ಹೂಡಿಕೆ ನಿಧಿಗಳ ಹಿರಿಯ ಪೋರ್ಟ್‌ಫೋಲಿಯೊ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.
ಐಒಆರ್‌ಗೆ ಸೇರುವ ಮೊದಲು, ಬೋಶಿಯಾ ಅವರು ಕ್ವೆಸ್ಟಿಯೋ ಕ್ಯಾಪಿಟಲ್ ಎಸ್‌ಜಿಆರ್ ಸಂಸ್ಥೆಯಲ್ಲಿ ಸ್ಥಿರ ಆದಾಯ ಮತ್ತು ಸಾಲ ಹೂಡಿಕೆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಅವರು ಬೊಕ್ಕೋನಿ ವಿಶ್ವವಿದ್ಯಾಲಯದಿಂದ ಗೌರವದೊಂದಿಗೆ ಪದವಿ ಪಡೆದಿದ್ದು, ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಕ್ಸಿಕ್ಯೂಟಿವ್ ಎಂ.ಬಿ.ಎ. ಪದವಿಗಳನ್ನು ಪಡೆದಿದ್ದಾರೆ. ಇದಲ್ಲದೆ, ಸಿಎಫ್ಎ, ಸಿಎಐಎ ಮತ್ತು ಎಫ್ಆರ್ಎಮ್ ಸೇರಿದಂತೆ ಹಲವು ವೃತ್ತಿಪರ ಅರ್ಹತೆಗಳನ್ನು ಸಹ ಹೊಂದಿದ್ದಾರೆ.