ಐಒಆರ್ ಮೇಲ್ವಿಚಾರಣಾ ಮಂಡಳಿಗೆ ಹೊಸ ಸದಸ್ಯರ ನೇಮಕ.
ವ್ಯಾಟಿಕನ್ ವರದಿ
ಧಾರ್ಮಿಕ ಕಾರ್ಯಗಳ ಸಂಸ್ಥೆ ತನ್ನ ಮೇಲ್ವಿಚಾರಣಾ ಮಂಡಳಿಗೆ ಮರೀನಾ ನತಾಲೆ ರವರನ್ನು ಹೊಸ ಸದಸ್ಯರಾಗಿ ನೇಮಿಸಿರುವುದಾಗಿ ಪ್ರಕಟಿಸಿದೆ. ಈ ನೇಮಕಾತಿಯು ಸಂಸ್ಥೆಯ ಸುಶಾಸನವನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಅದರ ಕಾರ್ಯತಂತ್ರದ ದಿಕ್ಕನ್ನು ದೃಢಗೊಳಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಐಒಆರ್ ತಿಳಿಸಿದೆ.
ಬುಧವಾರ ಐಒಆರ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಮರೀನಾ ನತಾಲೆ ರವರು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ತಮ್ಮ ವೃತ್ತಿಜೀವನದಲ್ಲಿ ಅವರು ಇಟಲಿಯ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಉನ್ನತ ನಾಯಕತ್ವದ ಹುದ್ದೆಗಳನ್ನು ಅಲಂಕರಿಸಿದ್ದು, ಕಾರ್ಯತಂತ್ರ ರೂಪಣೆ, ಹಣಕಾಸು ನಿರ್ವಹಣೆ, ಸಾಂಸ್ಥಿಕ ಸುಶಾಸನ, ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಗಳು ಹಾಗೂ ಸಂಸ್ಥೆಗಳ ಪುನರ್‌ರಚನೆ ಕ್ಷೇತ್ರಗಳಲ್ಲಿ ವಿಶಿಷ್ಟ ಪರಿಣತಿಯನ್ನು ಬೆಳೆಸಿದ್ದಾರೆ.
1988ರಲ್ಲಿ ಇಟಲಿಯ ಕ್ರೆಡಿಟೊ ಇಟಾಲಿಯಾನೊ ಬ್ಯಾಂಕ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, 1997ರಲ್ಲಿ ವಿಲೀನ, ಸ್ವಾಧೀನ ಮತ್ತು ವ್ಯವಹಾರ ಅಭಿವೃದ್ಧಿಯ ಜವಾಬ್ದಾರಿಯನ್ನು ವಹಿಸಿಕೊಂಡರು. ಆ ಹುದ್ದೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅವರು ಅನೇಕ ಮಹತ್ವದ ಹಣಕಾಸು ವ್ಯವಹಾರಗಳಿಗೆ ಯಶಸ್ವಿಯಾಗಿ ನೇತೃತ್ವ ವಹಿಸಿದರು.
2008ರಲ್ಲಿ ಅವರು ಯುನಿಕ್ರೆಡಿಟ್ ಬ್ಯಾಂಕಿನ ಯುರೋಪಿಯನ್ ಖಾಸಗಿ ಬ್ಯಾಂಕಿಂಗ್ ವೇದಿಕೆಯನ್ನು ಸ್ಥಾಪಿಸುವ ಕಾರ್ಯಕ್ಕೆ ನೇತೃತ್ವ ನೀಡಿದರು. ನಂತರ 2009ರಿಂದ 2017ರವರೆಗೆ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ವಹಣಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ, ಮುಖ್ಯ ಹಣಕಾಸು ಅಧಿಕಾರಿ ಮತ್ತು ಉಪ ಮಹಾಪ್ರಬಂಧಕಿ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದರು.
2017ರಿಂದ 2023ರವರೆಗೆ ಅವರು ಇಟಲಿಯ ಸರ್ಕಾರಿ ಸ್ವಾಮ್ಯದ, ಬಾಕಿ ಉಳಿದಿರುವ ಸಾಲಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ಎಎಂಸಿಒ – ಆಸ್ತಿ ನಿರ್ವಹಣಾ ಕಂಪನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿದರು. ಅವರ ನೇತೃತ್ವದಲ್ಲಿ ಸಂಸ್ಥೆಯು ಗಮನಾರ್ಹ ಬೆಳವಣಿಗೆ ಸಾಧಿಸಿ, ತನ್ನ ಕ್ಷೇತ್ರದಲ್ಲಿ ಮತ್ತಷ್ಟು ಬಲಿಷ್ಠ ಸ್ಥಾನವನ್ನು ಪಡೆದುಕೊಂಡಿತು.
ಪ್ರಸ್ತುತ ಮರೀನಾ ನತಾಲೆರವರು ಕಾರ್ಯತಂತ್ರ ಮತ್ತು ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಚೆರ್ರಿ ಬ್ಯಾಂಕ್ ಸಂಸ್ಥೆಯ ನಿರ್ದೇಶಕರ ಮಂಡಳಿಯ ಅಧ್ಯಕ್ಷೆಯಾಗಿಯೂ ಹಾಗೂ ವಿವಿಧ ಸಂಸ್ಥೆಗಳ ನಿರ್ದೇಶಕ ಮಂಡಳಿಗಳ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನೇಮಕಾತಿಯನ್ನು ಸ್ವಾಗತಿಸಿದ ಐಒಆರ್ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷ ಫ್ರಾಂಸ್ವಾ ಪೌಲಿ, "ಮರೀನಾ ನತಾಲೆರವರನ್ನು ಐಒಆರ್ ಮೇಲ್ವಿಚಾರಣಾ ಮಂಡಳಿಗೆ ಸ್ವಾಗತಿಸಲು ನನಗೆ ಸಂತೋಷವಾಗಿದೆ" ಎಂದು ಹೇಳಿದರು.
ಯುರೋಪಿನ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯ ಅತ್ಯುನ್ನತ ಮಟ್ಟಗಳಲ್ಲಿ ಅವರು ಸಂಪಾದಿಸಿರುವ ವಿಶಿಷ್ಟ ಅನುಭವ ಮತ್ತು ನಾಯಕತ್ವದ ಸಾಮರ್ಥ್ಯವು, ಐಒಆರ್‌ನ ಸುಶಾಸನವನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ ಸಂಸ್ಥೆಯ ಕಾರ್ಯತಂತ್ರದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ನೆರವಾಗಲಿದೆ ಎಂದು ಅವರು ಹೇಳಿದರು.
ಪತ್ರಿಕಾ ಪ್ರಕಟಣೆಯ ಪ್ರಕಾರ, ಮರೀನಾ ನತಾಲೆರವರ ನೇಮಕಾತಿಯು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ನೈತಿಕ ಸಮಗ್ರತೆ ಎಂಬ ತತ್ವಗಳ ಆಧಾರದ ಮೇಲೆ ಜಗದ್ಗುರುಗಳ ಅಧಿಕಾರ ಸ್ಥಳ ಹಾಗೂ ವಿಶ್ವದಾದ್ಯಂತದ ಚರ್ಚೆಯ ಸೇವೆಯಲ್ಲಿ ಐಒಆರ್ ತನ್ನ ಧ್ಯೇಯೋದ್ದೇಶಗಳನ್ನು ಸಾಧಿಸಲು ಮಹತ್ವದ ಕೊಡುಗೆಯಾಗಿದೆ ಎಂದು ಫ್ರಾಂಸ್ವಾ ಪೌಲಿ ಅಭಿಪ್ರಾಯಪಟ್ಟರು.
ವ್ಯಾಟಿಕನ್ ನಗರ-ರಾಜ್ಯದಲ್ಲಿ ವೃತ್ತಿಪರ ಹಣಕಾಸು ಚಟುವಟಿಕೆಗಳನ್ನು ನಡೆಸಲು ಅಧಿಕೃತವಾಗಿ ಅನುಮತಿ ಪಡೆದಿರುವ ಏಕೈಕ ಸಂಸ್ಥೆಯೇ ಐಒಆರ್ ಆಗಿದೆ. 110ಕ್ಕೂ ಅಧಿಕ ದೇಶಗಳಲ್ಲಿ ಕಥೋಲಿಕ ಚರ್ಚೆಯೊಂದಿಗೆ ಸಂಬಂಧ ಹೊಂದಿರುವ 12,000ಕ್ಕೂ ಹೆಚ್ಚು ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಹೂಡಿಕೆ ಸೇವೆಗಳನ್ನು ಒದಗಿಸುತ್ತಿರುವ ಈ ಸಂಸ್ಥೆಯು, ಚರ್ಚೆಯ ಸಾಮಾಜಿಕ ಬೋಧನೆ ಹಾಗೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ವಶಕ್ಕೆ ಒಪ್ಪಿಸಲಾದ ಆಸ್ತಿಗಳನ್ನು ನಿರ್ವಹಿಸುತ್ತದೆ.