ಜಗದ್ಗುರುಗಳ ಅಧಿಕಾರ ಸ್ಥಳ: ಆಫ್ರಿಕಾ ರಾಷ್ಟ್ರಗಳಿಗೆ ನೀಡುವ ಬೆಂಬಲವು ಅಭಿವೃದ್ಧಿಗೆ ಅಡ್ಡಿಯಾಗಿರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸಬೇಕು.
ವ್ಯಾಟಿಕನ್ ವರದಿ
ಆಫ್ರಿಕಾ ರಾಷ್ಟ್ರಗಳಿಗೆ ನೀಡಲಾಗುವ ಬೆಂಬಲವು ಕೇವಲ ಅಲ್ಪಾವಧಿಯ ಕ್ರಮಗಳಿಗೆ ಸೀಮಿತವಾಗದೆ, ಬಡತನದ ಮೂಲ ಕಾರಣಗಳನ್ನು ನಿವಾರಿಸುವ ಉದ್ದೇಶದಿಂದ ದೀರ್ಘಕಾಲೀನ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಸಂಯುಕ್ತ ರಾಷ್ಟ್ರಗಳಲ್ಲಿನ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ನಿಯೋಗವು 2026ರ ಜುಲೈ 8ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
“ಬಡತನ, ವಿಶೇಷವಾಗಿ ತೀವ್ರ ಬಡತನವು ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಅತ್ಯಂತ ಗಂಭೀರ ಸವಾಲಾಗಿದೆ” ಎಂದು ಪ್ರಕಟಣೆ ತಿಳಿಸಿದೆ.
“ಬಡತನವು ತನ್ನ ವಿವಿಧ ಆಯಾಮಗಳಲ್ಲಿ ಮುಂದುವರಿಯುತ್ತಿರುವುದರಿಂದ ಲಕ್ಷಾಂತರ ಜನರು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಮರ್ಪಕ ಆಹಾರ, ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆ, ಶಿಕ್ಷಣ ಹಾಗೂ ಘನತೆಯ ಉದ್ಯೋಗದಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಡತನವು ದೇವರು ಮಾನವನಿಗೆ ನೀಡಿರುವ ಅಂತರ್ಗತ ಘನತೆಗೆ ಗಂಭೀರ ಧಕ್ಕೆ ಉಂಟುಮಾಡುತ್ತದೆ” ಎಂದು ಅದರಲ್ಲಿ ಹೇಳಲಾಗಿದೆ.
ಈ ಹೇಳಿಕೆಯನ್ನು ನ್ಯೂಯಾರ್ಕ್‌ನಲ್ಲಿ ನಡೆದ 2026ರ ಉನ್ನತ ಮಟ್ಟದ ರಾಜಕೀಯ ವೇದಿಕೆ ಸಭೆಯ ಸಂದರ್ಭದಲ್ಲಿ ಮಂಡಿಸಲಾಯಿತು. ಈ ಅಧಿವೇಶನವು ಆಫ್ರಿಕಾ ಖಂಡದ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು , ಸಮುದ್ರ ತೀರವಿಲ್ಲದ ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ವೇಗಗೊಳಿಸುವ ವಿಷಯಕ್ಕೆ ಮೀಸಲಾಗಿತ್ತು.
ಅಭಿವೃದ್ಧಿಗೆ ಅಡ್ಡಿಯಾಗಿರುವ ರಚನಾತ್ಮಕ ತಡೆಗಳನ್ನು ನಿವಾರಿಸಬೇಕು
2030ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ ಗಡುವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಅಭಿವೃದ್ಧಿಯ ಪ್ರಗತಿಗೆ ಅಡ್ಡಿಯಾಗಿರುವ ಸವಾಲುಗಳನ್ನು ನಿವಾರಿಸಲು ಅಂತರರಾಷ್ಟ್ರೀಯ ಸಮುದಾಯವು ತಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ನಿಯೋಗವು ಒತ್ತಿ ಹೇಳಿದೆ. ವಿಶ್ವಸಂಸ್ಥೆಯು ಬಡತನ ನಿರ್ಮೂಲನೆ, ಶಾಂತಿ ಸ್ಥಾಪನೆ ಮತ್ತು ಭೂಮಿಯ ಸಂರಕ್ಷಣೆಯ ಉದ್ದೇಶದಿಂದ ಈ ಕಾರ್ಯಸೂಚಿಯನ್ನು ರೂಪಿಸಿದೆ.
ಈ ಹಿನ್ನೆಲೆಯಲ್ಲಿ ಆಫ್ರಿಕಾ ರಾಷ್ಟ್ರಗಳು, ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು , ಸಮುದ್ರ ತೀರವಿಲ್ಲದ ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಿಗೆ ಹೊಸ ಉತ್ಸಾಹದೊಂದಿಗೆ ಮತ್ತು ಇನ್ನಷ್ಟು ಬಲಿಷ್ಠ ರೀತಿಯಲ್ಲಿ ಬೆಂಬಲ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬೆಂಬಲವು ಸುಸ್ಥಿರ ಅಭಿವೃದ್ಧಿಗೆ ಅಡ್ಡಿಯಾಗಿರುವ ರಚನಾತ್ಮಕ ಅಡೆತಡೆಗಳನ್ನು ನಿವಾರಿಸುವತ್ತ ಕೇಂದ್ರೀಕೃತವಾಗಿರಬೇಕು. ಇದರಲ್ಲಿ ರಿಯಾಯಿತಿ ಹಣಕಾಸು ನೆರವಿನ ಲಭ್ಯತೆಯನ್ನು ಹೆಚ್ಚಿಸುವುದು, ಹೆಚ್ಚು ನ್ಯಾಯಸಮ್ಮತವಾದ ವ್ಯಾಪಾರ ವ್ಯವಸ್ಥೆಗಳನ್ನು ಉತ್ತೇಜಿಸುವುದು, ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸುವುದು ಹಾಗೂ ಅರ್ಥಪೂರ್ಣ ಸಾಲಮನ್ನಾ ಕ್ರಮಗಳನ್ನು ಮುಂದುವರಿಸುವುದು ಸೇರಿವೆ.
ಅಭಿವೃದ್ಧಿಯ ಪ್ರಗತಿಯನ್ನು ವೇಗಗೊಳಿಸಲು ಪ್ರತಿಯೊಂದು ರಾಷ್ಟ್ರವು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪರಿಗಣಿಸುವುದು ಅಗತ್ಯವೆಂದೂ ಪ್ರಕಟಣೆ ತಿಳಿಸಿದೆ. ಭೌಗೋಳಿಕ ಮಿತಿಗಳು, ಹವಾಮಾನ ಬದಲಾವಣೆ ಮತ್ತು ಮೂಲಸೌಕರ್ಯಗಳ ಕೊರತೆಯು ಅನೇಕ ರಾಷ್ಟ್ರಗಳಲ್ಲಿ ಅಸಮಾನತೆಯನ್ನು ಇನ್ನಷ್ಟು ತೀವ್ರಗೊಳಿಸುತ್ತಿವೆ ಎಂಬುದನ್ನೂ ಅದು ಉಲ್ಲೇಖಿಸಿದೆ.
ಕುಟುಂಬದ ಮಹತ್ವದ ಪಾತ್ರ
ಸಮಾಜದ ಮೂಲ ಘಟಕವಾಗಿರುವ ಕುಟುಂಬವು “ಪ್ರಾಥಮಿಕ ಸಾಮಾಜಿಕ ಸಂಪತ್ತು” ಹಾಗೂ ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯದ ಪ್ರಮುಖ ಆಧಾರವಾಗಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ನಿಯೋಗವು ಪುನರುಚ್ಚರಿಸಿದೆ.
ಕುಟುಂಬಗಳನ್ನು ಬಲಪಡಿಸುವ ನೀತಿಗಳು ಬಡತನ ನಿರ್ಮೂಲನೆಗೆ, ಸಾಮಾಜಿಕ ಸ್ಥಿರತೆಯ ವೃದ್ಧಿಗೆ ಹಾಗೂ ಸಮಗ್ರ ಮಾನವ ಅಭಿವೃದ್ಧಿಯ ಉತ್ತೇಜನಕ್ಕೆ ಮಹತ್ವದ ಕೊಡುಗೆ ನೀಡುತ್ತವೆ ಎಂದು ಪ್ರಕಟಣೆ ವಿವರಿಸಿದೆ.
“ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಇಂತಹ ನೀತಿಗಳಲ್ಲಿ ಹೂಡಿಕೆ ಮಾಡುವುದು ಮತ್ತು ಅವುಗಳನ್ನು ಉತ್ತೇಜಿಸುವುದು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಲು, ಬಡತನವನ್ನು ನಿರ್ಮೂಲನೆಗೊಳಿಸಲು ಹಾಗೂ ಸಮಗ್ರ ಮಾನವ ಅಭಿವೃದ್ಧಿಯನ್ನು ಸಾಧಿಸಲು ಅತ್ಯಗತ್ಯವಾಗಿದೆ” ಎಂದು ಪ್ರಕಟಣೆ ಕೊನೆಯಲ್ಲಿ ತಿಳಿಸಿದೆ.