ಹುಡುಕಿ

Pope Leo XIV meets participants of International Congress on Pastoral Care of the Elderly

ವೃದ್ಧಾಪ್ಯ: ‘ನಿಭಾಯಿಸಬೇಕಾದ ಭಾರವಲ್ಲ, ಅಮೂಲ್ಯವಾಗಿ ಪೋಷಿಸಬೇಕಾದ ಒಂದು ವರ.’

ನಿನ್ನೆ ಯೇಸು ಕ್ರಿಸ್ತನ ಅಜ್ಜ-ಅಜ್ಜಿಯಾದ ಪವಿತ್ರ ಜೋಆಕಿಂ ಮತ್ತು ಪವಿತ್ರ ಅಣ್ಣಮ್ಮರವರ ಹಬ್ಬದಂದು ಆಚರಿಸಲಾದ ಆರನೇ ವಿಶ್ವ ಅಜ್ಜ-ಅಜ್ಜಿ ಹಾಗೂ ವೃದ್ಧರ ದಿನದ ಸಂದರ್ಭದಲ್ಲಿ, ವ್ಯಾಟಿಕನ್ ನ್ಯೂಸ್ ಸಾಮಾನ್ಯ ಪ್ರಜೆ, ಕುಟುಂಬ ಮತ್ತು ಜೀವಿತದ ಡಿಕಾಸ್ಟರಿಯ ವೃದ್ಧರ ಧರ್ಮಾಧ್ಯಕ್ಷೀಯ ಆರೈಕೆ ವಿಭಾಗದ ಮುಖ್ಯಸ್ಥರಾದ ವಿಟ್ಟೋರಿಯೊ ಸ್ಕೆಲ್ಜೊರವರೊಂದಿಗೆ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಅವರು ವೃದ್ಧರು ಮತ್ತು ಅಜ್ಜ-ಅಜ್ಜಿಯರ ಅಮೂಲ್ಯವಾದ ಸ್ಥಾನ ಹಾಗೂ ಸಮಾಜ ಮತ್ತು ಧರ್ಮ ಸಭೆಯ ಜೀವನದಲ್ಲಿ ಅವರ ಅಮೂಲ್ಯ ಕೊಡುಗೆಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ವ್ಯಾಟಿಕನ್ ವರದಿ

ಅಜ್ಜ-ಅಜ್ಜಿ ಮತ್ತು ವೃದ್ಧರ ಆರನೇ ವಿಶ್ವ ದಿನದ ಅಂಗವಾಗಿ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಸಾಮಾನ್ಯ ಪ್ರಜೆ, ಕುಟುಂಬ ಮತ್ತು ಜೀವಿತದ ಡಿಕಾಸ್ಟರಿಯ ವೃದ್ಧರ ಧರ್ಮಾಧ್ಯಕ್ಷೀಯ ಆರೈಕೆ ವಿಭಾಗದ ಮುಖ್ಯಸ್ಥ ವಿಟ್ಟೋರಿಯೊ ಸ್ಕೆಲ್ಜೊ, ಕಳೆದ ಆರು ವರ್ಷಗಳಲ್ಲಿ ಈ ವಿಶ್ವ ದಿನವು ಧರ್ಮ ಸಭೆಯ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದಿರುವುದನ್ನು ವಿವರಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಏಕಾಂಗಿತನ ಅನುಭವಿಸುತ್ತಿದ್ದ ವೃದ್ಧರಿಗೆ ಆಶಾಭರವಸೆ ನೀಡುವ ಉದ್ದೇಶದಿಂದ ಆರಂಭವಾದ ಈ ಆಚರಣೆಯು, ಇಂದು ವೃದ್ಧಾಪ್ಯದ ಕುರಿತು ಧರ್ಮ ಸಭೆಯ ದೃಷ್ಟಿಕೋನವನ್ನು ಇನ್ನಷ್ಟು ಸಮಗ್ರಗೊಳಿಸಿದೆ. ವೃದ್ಧರನ್ನು ಕೇವಲ ಸಹಾಯ ಪಡೆಯುವವರಾಗಿ ಅಲ್ಲದೆ, ಧರ್ಮ ಸಭೆಯ ಸಕ್ರಿಯ ಸದಸ್ಯರು ಹಾಗೂ ಸುವಾರ್ತಾ ಕಾರ್ಯದ ಸಹಭಾಗಿಗಳಾಗಿ ಗುರುತಿಸುವ ಮನೋಭಾವ ಬೆಳೆಯಬೇಕು ಎಂದು ಅವರು ಒತ್ತಿಹೇಳಿದರು.

ಈ ವರ್ಷದ ವಿಶ್ವ ದಿನಕ್ಕಾಗಿ ಜಗದ್ಗುರು XIVನೇ ಲಿಯೋರವರು ಆಯ್ಕೆ ಮಾಡಿದ "ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ" (ಯೆಶಾಯ 49:15) ಎಂಬ ಧ್ಯೇಯವಾಕ್ಯವು, ದೇವರ ನಿರಂತರ ಪ್ರೀತಿಯನ್ನೂ ಮತ್ತು ವೃದ್ಧರತ್ತ ಕ್ರೈಸ್ತ ಸಮುದಾಯದ ಹೊಣೆಗಾರಿಕೆಯನ್ನೂ ನೆನಪಿಸುತ್ತದೆ. ವಿಶೇಷವಾಗಿ ಏಕಾಂಗಿಯಾಗಿ ಬದುಕುತ್ತಿರುವ ವೃದ್ಧರನ್ನು ಭೇಟಿ ಮಾಡಿ, ಅವರೊಂದಿಗೆ ಸಮಯ ಕಳೆಯುವ ಮೂಲಕ ದೇವರ ಪ್ರೀತಿಯನ್ನು ಅನುಭವಿಸಲು ನೆರವಾಗಬೇಕು ಎಂದು ಜಗದ್ಗುರುಗಳು ಕರೆ ನೀಡಿದ್ದಾರೆ. ವೃದ್ಧರು ಸಮಾಜಕ್ಕೆ ಹೊರೆಯಾಗಿರುವವರಲ್ಲ ಅವರು ಗೌರವದಿಂದ ಸನ್ಮಾನಿಸಬೇಕಾದ ಅಮೂಲ್ಯ ವರವೆಂದು ಅವರು ಸ್ಮರಿಸಿದ್ದಾರೆ.

ಸ್ಕೆಲ್ಜೊರವರ ಪ್ರಕಾರ, ವೃದ್ಧರ ಧರ್ಮಾಧ್ಯಕ್ಷೀಯ ಸೇವೆ ಎಂದರೆ ಕೇವಲ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲ ಬದಲಾಗಿ ಅವರೊಂದಿಗೆ ಆತ್ಮೀಯ ಸಂಬಂಧಗಳನ್ನು ಬೆಳೆಸುವುದು. ದೇವರು ಯಾರನ್ನೂ ಮರೆಯುವುದಿಲ್ಲ ಎಂಬ ಭರವಸೆಯು, ಅವರ ಕುಟುಂಬ ಮತ್ತು ಧರ್ಮ ಕೇಂದ್ರದ ಸಮುದಾಯವೂ ಅವರನ್ನು ಮರೆಯುವುದಿಲ್ಲ ಎಂಬ ದೈನಂದಿನ ಅನುಭವವಾಗಿ ರೂಪುಗೊಳ್ಳಬೇಕು. ವೃದ್ಧರ ಏಕಾಂಗಿತನವೇ ಇಂದಿನ ಕಾಲದ ದೊಡ್ಡ ಬಡತನವಾಗಿದ್ದು, ಅದನ್ನು ನಿವಾರಿಸುವ ಹೊಣೆ ಪ್ರತಿಯೊಂದು ಕ್ರೈಸ್ತ ಸಮುದಾಯದ ಮೇಲಿದೆ.

ಜಗತ್ತಿನ ಅನೇಕ ದೇಶಗಳಲ್ಲಿ ಈ ವಿಶ್ವ ದಿನದ ಅಂಗವಾಗಿ ಉತ್ತಮ ಧರ್ಮಾಧ್ಯಕ್ಷೀಯ ಕಾರ್ಯಕ್ರಮಗಳು ಬೆಳೆಯುತ್ತಿವೆ. ಭಾರತದಲ್ಲಿ ಯುವಕರು ಸಾಮಾಜಿಕ ಜಾಲತಾಣಗಳ ಮೂಲಕ ಈ ಆಚರಣೆಯ ಮಹತ್ವವನ್ನು ಜನರಿಗೆ ತಲುಪಿಸುತ್ತಿದ್ದಾರೆ. ಹಲವಾರು ಧರ್ಮ ಕೇಂದ್ರಗಳು ಏಕಾಂಗಿಯಾಗಿ ವಾಸಿಸುವ ವೃದ್ಧರನ್ನು ನಿಯಮಿತವಾಗಿ ಭೇಟಿ ಮಾಡುವ ಸೇವೆಯನ್ನು ಆರಂಭಿಸಿವೆ. ಯುರೋಪಿನಲ್ಲಿ ಯುವಕರು ಮತ್ತು ವೃದ್ಧರನ್ನು ಒಟ್ಟುಗೂಡಿಸುವ ಪ್ರಾರ್ಥನೆ ಹಾಗೂ ಸೌಹಾರ್ದ ಕಾರ್ಯಕ್ರಮಗಳು ಪೀಳಿಗೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಜಗದ್ಗುರು ಲಿಯೋರವರ ಆಹ್ವಾನದಂತೆ, ವೃದ್ಧರತ್ತ ತೋರಿಸುವ ಪ್ರೀತಿ ಮತ್ತು ಸಮೀಪತೆ ವರ್ಷದಲ್ಲಿ ಒಂದೇ ದಿನಕ್ಕೆ ಸೀಮಿತವಾಗದೆ, ಧರ್ಮ ಸಭೆಯ ದೈನಂದಿನ ಜೀವನಶೈಲಿಯಾಗಬೇಕು. ವೃದ್ಧಾಪ್ಯವು ಜೀವನದ ಕೊನೆಯ ಹಂತ ಮಾತ್ರವಲ್ಲ ಅದು ಪ್ರಾರ್ಥನೆ, ಸಾಕ್ಷಿ ಮತ್ತು ಸೇವೆಯ ವಿಶೇಷ ಕರೆಯಾಗಿದೆ. ಆದ್ದರಿಂದ ಪ್ರತಿಯೊಂದು ಧರ್ಮ ಕೇಂದ್ರ ಮತ್ತು ಕುಟುಂಬವು ವೃದ್ಧರನ್ನು ಗೌರವದಿಂದ ಸ್ವೀಕರಿಸಿ, ಅವರ ಅನುಭವ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಅಮೂಲ್ಯ ಸಂಪತ್ತಾಗಿ ಉಳಿಸಬೇಕು.

27 ಜುಲೈ 2026, 17:43