ಜಗದ್ಗುರುಗಳ ಅಧಿಕಾರ ಸ್ಥಳ: ಮಾನವ ಘನತೆಯನ್ನು ಉತ್ತೇಜಿಸಲು ನಗರ ಯೋಜನೆಗಳು ನಿರಾಶ್ರಿತತೆಯ ಸಮಸ್ಯೆಯನ್ನು ಪರಿಹರಿಸಬೇಕು.
ವ್ಯಾಟಿಕನ್ ವರದಿ
ಮಾನವ ಘನತೆ ಮತ್ತು ಸಾಮಾನ್ಯ ಹಿತವನ್ನು ಉತ್ತೇಜಿಸುವ ಸುಸ್ಥಿರ ನಗರಗಳನ್ನು ನಿರ್ಮಿಸಲು ನಿರಾಶ್ರಿತತೆಯ ಸಮಸ್ಯೆಯನ್ನು ಪರಿಹರಿಸಲೇಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರ ನಿಯೋಗವು 2026ರ ಜುಲೈ 28ರಂದು ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದೆ.
"ನಿರಾಶ್ರಿತತೆಯ ಸಮಸ್ಯೆ ಮುಂದುವರಿಯುತ್ತಿರುವುದು ಅಂತರರಾಷ್ಟ್ರೀಯ ಸಮುದಾಯದ ಮನಸ್ಸಾಕ್ಷಿಯನ್ನು ಕಾಡಬೇಕಾದ ವಿಷಯವಾಗಿದೆ" ಎಂದು ಆ ಹೇಳಿಕೆ ಒತ್ತಿ ಹೇಳಿದೆ.
"ಪ್ರತಿಯೊಬ್ಬರಿಗೂ 'ಇದು ನನ್ನ ಮನೆ' ಎಂದು ಕರೆಯಬಹುದಾದ ಒಂದು ವಾಸಸ್ಥಳದ ಹಕ್ಕಿದೆ. ಅಲ್ಲಿ ಅವರು ಸಂಬಂಧಗಳನ್ನು ಬೆಳೆಸಬಹುದು, ಕುಟುಂಬ ಜೀವನವನ್ನು ಪೋಷಿಸಬಹುದು ಮತ್ತು ತಮ್ಮ ಸಮುದಾಯದ ಜೀವನದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬಹುದು. ಆದ್ದರಿಂದ ವಸತಿಯನ್ನು ಕೇವಲ ಒಂದು ವಾಣಿಜ್ಯ ವಸ್ತುವಾಗಿ ಅಥವಾ ಹಣಕಾಸಿನ ಆಸ್ತಿಯಾಗಿ ನೋಡದೆ, ಸಾಮಾನ್ಯ ಹಿತಕ್ಕೆ ಸೇವೆ ಸಲ್ಲಿಸುವ ಸಮಾಜದ ಮೂಲಾಧಾರವೆಂದು ಪರಿಗಣಿಸಬೇಕು" ಎಂದು ಸಂದೇಶವು ತಿಳಿಸಿದೆ.
ಈ ಸಂದೇಶವನ್ನು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 2026ರ 'ಹೊಸ ನಗರ ಕಾರ್ಯಸೂಚಿ' ಕುರಿತ ಉನ್ನತ ಮಟ್ಟದ ಸಭೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಭೆಯು ಈ ಕಾರ್ಯಸೂಚಿಯನ್ನು ಅಂಗೀಕರಿಸಿದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಸುಸಂಘಟಿತ ಹಾಗೂ ಸಮರ್ಪಕವಾಗಿ ನಿರ್ವಹಿಸಲ್ಪಡುವ ನಗರೀಕರಣದ ಮೂಲಕ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಸಾಮೂಹಿಕ ದೃಷ್ಟಿಕೋನವನ್ನು ಈ ಕಾರ್ಯಸೂಚಿಯು ಪ್ರತಿಬಿಂಬಿಸುತ್ತದೆ.
"ನಗರಗಳು ಒಗ್ಗಟ್ಟು, ಒಳಗೊಳ್ಳುವಿಕೆ ಹಾಗೂ ಅತ್ಯಂತ ಅಗತ್ಯವಿರುವವರ ಮೇಲಿನ ಕಾಳಜಿಯ ಆಧಾರದ ಮೇಲೆ ರೂಪುಗೊಂಡಾಗ, ಅವು ಕೇವಲ ವಾಸಸ್ಥಳಗಳು ಅಥವಾ ಉದ್ಯೋಗದ ಕೇಂದ್ರಗಳಾಗಿಯೇ ಉಳಿಯುವುದಿಲ್ಲ,ಬದಲಾಗಿ, ಅವು ಭೇಟಿಯ, ಸಹೋದರತ್ವದ ಹಾಗೂ ಭರವಸೆಯ ಸ್ಥಳಗಳಾಗುತ್ತವೆ" ಎಂದು ಸಂದೇಶವು ಮುಂದುವರಿಸಿದೆ.
ನಿರಾಶ್ರಿತತೆ ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ
ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯನ್ನು ಸಂರಕ್ಷಿಸುವ ಕುರಿತು ಜಗದ್ಗುರು XIVನೇ ಲಿಯೋರವರು ಭವ್ಯ ಮಾನವೀಯತೆ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರ ನಿಯೋಗವು, "ಅಭಿವೃದ್ಧಿಯು ಮಾನವಕೇಂದ್ರಿತವಾಗಿದ್ದಾಗ ಮಾತ್ರ ಅದು ನಿಜವಾದ ಮಾನವ ಅಭಿವೃದ್ಧಿಯಾಗುತ್ತದೆ" ಎಂಬುದನ್ನು ನೆನಪಿಸಿತು.
"ಮುಂದಿನ ದಶಕದಲ್ಲಿ ಹೊಸ ನಗರ ಕಾರ್ಯಸೂಚಿಯನ್ನು ಜಾರಿಗೊಳಿಸುವಾಗ ಇದೇ ಮೂಲತತ್ವ ಮಾರ್ಗದರ್ಶಿಯಾಗಬೇಕು" ಎಂದು ನಿಯೋಗವು ಒತ್ತಿ ಹೇಳಿದೆ.
ನಗರಾಭಿವೃದ್ಧಿಯ ಸಂದರ್ಭದಲ್ಲಿ ನಿರಾಶ್ರಿತತೆಯು ಮಾನವ ಘನತೆಗೆ ದೊಡ್ಡ ಅವಮಾನವಾಗಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳ ತಿಳಿಸಿದೆ.
"ಮನೆ ಇಲ್ಲದಿರುವುದು ಎಂದರೆ ಕೇವಲ ಆಶ್ರಯವಿಲ್ಲದಿರುವುದಲ್ಲ, ಅದು ಭದ್ರತೆ, ಸ್ಥಿರತೆ, ಖಾಸಗಿತನ ಹಾಗೂ ಒಂದು ಸಮುದಾಯಕ್ಕೆ ಸೇರಿದ ಭಾವನೆಯನ್ನು ಕಳೆದುಕೊಳ್ಳುವುದಾಗಿದೆ. ನಿರಾಶ್ರಿತತೆಯು ಅನೇಕ ಮೂಲಭೂತ ಮಾನವ ಹಕ್ಕುಗಳನ್ನು ಅನುಭವಿಸುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ವ್ಯಕ್ತಿಗಳು ಹಾಗೂ ಕುಟುಂಬಗಳನ್ನು ಬಹಿಷ್ಕಾರ ಮತ್ತು ಬಡತನದ ದುಷ್ಟಚಕ್ರದಲ್ಲಿ ಸಿಲುಕಿಸುತ್ತದೆ" ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ನಿರಾಶ್ರಿತತೆಯ ಮೂಲ ಕಾರಣಗಳನ್ನು ಪರಿಹರಿಸಿ
ಆದ್ದರಿಂದ ನಗರಗಳು ಮತ್ತು ರಾಷ್ಟ್ರಗಳು ಕೈಗೆಟುಕುವ ಹಾಗೂ ಸಮರ್ಪಕ ವಸತಿ ವ್ಯವಸ್ಥೆಗಳಲ್ಲಿ ಮತ್ತು ಸಮಗ್ರ ಸಾಮಾಜಿಕ ಸೇವೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ನಿಯೋಗವು ಕರೆ ನೀಡಿದೆ.
ಅದೇ ವೇಳೆ, ಬಡತನ, ನಿರುದ್ಯೋಗ, ಮಾದಕ ವ್ಯಸನ, ಮಾನಸಿಕ ಆರೋಗ್ಯ ಸಮಸ್ಯೆಗಳು, ಕುಟುಂಬ ವಿಘಟನೆ, ಸ್ಥಳಾಂತರ ಹಾಗೂ ಸಂಘರ್ಷಗಳು ಮುಂತಾದ ನಿರಾಶ್ರಿತತೆಯ ಮೂಲ ಕಾರಣಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಅದು ತಿಳಿಸಿದೆ.
ಈ ಕಾರ್ಯವನ್ನು ಸ್ಥಳೀಯ ಸಮುದಾಯಗಳು, ನಾಗರಿಕ ಸಮಾಜ, ಧಾರ್ಮಿಕ ಸಂಸ್ಥೆಗಳು ಹಾಗೂ ನಿರಾಶ್ರಿತತೆಯನ್ನು ಸ್ವತಃ ಅನುಭವಿಸಿದವರ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯೊಂದಿಗೆ ಕೈಗೊಳ್ಳಬೇಕು ಎಂದು ಸಂದೇಶವು ತಿಳಿಸಿದೆ.
ಶಿಕ್ಷಣ, ಉದ್ಯೋಗ, ವಸತಿ ಹಾಗೂ ಆರೋಗ್ಯದ ನಡುವಿನ ಬಲವಾದ ಸಂಬಂಧಗಳನ್ನು ಪರಿಗಣಿಸುವ ಸಮಗ್ರ ವಸತಿ ನೀತಿಗಳನ್ನು ರೂಪಿಸುವ ಅಗತ್ಯವನ್ನೂ ನಿಯೋಗವು ಒತ್ತಿಹೇಳಿತು.
"ಇದು ಸಾಮಾಜಿಕ ಬಹಿಷ್ಕಾರ ಮತ್ತು ಪ್ರತ್ಯೇಕತೆಯನ್ನು ತಡೆಯಲು ಸಹ ಸಹಕಾರಿಯಾಗುತ್ತದೆ" ಎಂದು ಸಂದೇಶವು ತಿಳಿಸಿದೆ.
ವೇಗವಾಗಿ ನಗರೀಕರಣಗೊಳ್ಳುತ್ತಿರುವ ಮತ್ತು ಅದರಿಂದ ಸವಾಲುಗಳನ್ನು ಎದುರಿಸುತ್ತಿರುವ ಅತಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ನೆರವಾಗಲು ಅಂತರರಾಷ್ಟ್ರೀಯ ಸಹಕಾರ, ತಂತ್ರಜ್ಞಾನ ವರ್ಗಾವಣೆ, ಸಾಮರ್ಥ್ಯ ವೃದ್ಧಿ ಹಾಗೂ ಸಮರ್ಪಕ ಹಣಕಾಸಿನ ಮೂಲಕ ಹೊಸ ಅಂತರರಾಷ್ಟ್ರೀಯ ಐಕ್ಯತೆ ಅತ್ಯಗತ್ಯವೆಂದು ಜಗದ್ಗುರುಗಳ ಅಧಿಕಾರ ಸ್ಥಳ ಕರೆ ನೀಡಿದೆ.
ನಗರಾಭಿವೃದ್ಧಿಯನ್ನು ಕಟ್ಟಡಗಳ ಎತ್ತರದಿಂದ ಮಾತ್ರ ಅಳೆಯಲಾಗದು
ಕೊನೆಯಲ್ಲಿ, "ನಗರಾಭಿವೃದ್ಧಿಯನ್ನು ಅದರ ಕಟ್ಟಡಗಳ ಎತ್ತರದಿಂದಲೋ ಅಥವಾ ಆರ್ಥಿಕ ಬಲದಿಂದಲೋ ಮಾತ್ರ ಅಳೆಯಲಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡು ಸಾಮಾನ್ಯ ಹಿತಕ್ಕೆ ಕೊಡುಗೆ ನೀಡುವ ಮೂಲಕ ಅಭಿವೃದ್ಧಿ ಹೊಂದಲು ನಗರವು ಎಷ್ಟರ ಮಟ್ಟಿಗೆ ಅವಕಾಶ ಕಲ್ಪಿಸುತ್ತದೆ ಎಂಬುದೇ ಅದರ ನಿಜವಾದ ಮಾನದಂಡವಾಗಿದೆ" ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ನಿಯೋಗವು ತಿಳಿಸಿದೆ.
ಪ್ರತಿಯೊಂದು ನಗರವೂ ದೇವರು ನೀಡಿರುವ ಘನತೆಯನ್ನು ಹೊಂದಿರುವ ವ್ಯಕ್ತಿಗಳ ಸಮುದಾಯವಾಗಿದೆ ಎಂದು ಅದು ನೆನಪಿಸಿದೆ.
"ಆದ್ದರಿಂದ, ಒಂದು ಸುಸ್ಥಿರ ನಗರದ ನಿಜವಾದ ಅಳತೆಯು ಅದು ತನ್ನ ಎಲ್ಲಾ ಸದಸ್ಯರನ್ನು ಹೇಗೆ ಗೌರವದಿಂದ ನಡೆಸಿಕೊಳ್ಳುತ್ತದೆ ಎಂಬುದರಲ್ಲಿದೆ. ಜೊತೆಗೆ, ಬಡತನದ ವಿವಿಧ ರೂಪಗಳು, ನಿರಂತರ ಅಸಮಾನತೆಗಳು ಮತ್ತು ಪರಿಸರದ ಅವನತಿಯನ್ನು ನಿವಾರಿಸುವ ಅದರ ಸಾಮರ್ಥ್ಯದಲ್ಲಿಯೂ ಅದು ವ್ಯಕ್ತವಾಗುತ್ತದೆ" ಎಂದು ಹೇಳಿಕೆಯು ಒತ್ತಿ ಹೇಳಿದೆ.