2018.09.21 Dialogo con la Cina – Società

ಚೀನಾ: ಬಾಮೆಂಗ್ ಧರ್ಮಪ್ರಾಂತ್ಯದ ವಿಕಾರ್ ಫಾದರ್ ಡುವಾನ್ ಯೋಂಗ್‌ಕುನ್ ಸಹಾಯಕ ಉತ್ತರಾಧಿಕಾರಿ ಬಿಷಪ್‌ ಆಗಿ ಬಿಷಪ್ ಪದವಿಗೆ ಅಭಿಷಿಕ್ತರು.

ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಚೀನಾದ ಜನತಾ ಗಣರಾಜ್ಯದ ನಡುವಿನ ತಾತ್ಕಾಲಿಕ ಒಪ್ಪಂದದ ಚೌಕಟ್ಟಿನಡಿ, ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಮೆಂಗ್ ಧರ್ಮಪ್ರಾಂತ್ಯಕ್ಕೆ ಸಹಾಯಕ ಉತ್ತರಾಧಿಕಾರಿ ಬಿಷಪ್‌ ಆಗಿ ಫ್ರಾನ್ಸಿಸ್ ಝೇವಿಯರ್ ಡುವಾನ್ ಯೋಂಗ್‌ಕುನ್ ರವರನ್ನು ಜಗದ್ಗುರು XIVನೇ ಲಿಯೋರವರು ಜೂನ್ 15ರಂದು ನೇಮಿಸಿದ್ದರು.

ವ್ಯಾಟಿಕನ್ ವರದಿ

ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಮೆಂಗ್‌ನಲ್ಲಿ ಜುಲೈ 29ರಂದು ಫ್ರಾನ್ಸಿಸ್ ಝೇವಿಯರ್ ಡುವಾನ್ ಯೋಂಗ್‌ಕುನ್ ರವರು ಬಿಷಪ್‌ ಆಗಿ ಅಭಿಷಿಕ್ತರಾದರು.

ಜಗದ್ಗುರು ಲಿಯೋರವರನ್ನು ಜೂನ್ 15ರಂದು ಬಾಮೆಂಗ್ ಧರ್ಮಪ್ರಾಂತ್ಯದ ಸಹಾಯಕ ಉತ್ತರಾಧಿಕಾರಿ ಬಿಷಪ್‌ ಆಗಿ ನೇಮಿಸಿದ್ದರು. ಈ ನೇಮಕಾತಿಯು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಚೀನಾದ ಜನತಾ ಗಣರಾಜ್ಯದ ನಡುವಿನ ತಾತ್ಕಾಲಿಕ ಒಪ್ಪಂದದ  ಚೌಕಟ್ಟಿನಡಿ ಅವರ ಅಭ್ಯರ್ಥಿತ್ವಕ್ಕೆ ಅನುಮೋದನೆ ದೊರೆತ ನಂತರ ನಡೆದಿದೆ.

ಬಿಷಪ್ ಫ್ರಾನ್ಸಿಸ್ ಝೇವಿಯರ್ ಡುವಾನ್ ಯೋಂಗ್‌ಕುನ್ ಅವರು 1980ರ ಡಿಸೆಂಬರ್ 6ರಂದು ಇನ್ನರ್ ಮಂಗೋಲಿಯಾದ ಹಾಂಗ್‌ಜಿನ್ ಹೌಕಿಯಲ್ಲಿ ಜನಿಸಿದರು. 2000ರಿಂದ 2007ರವರೆಗೆ ಅವರು ಹೆಬೆ ಧರ್ಮಶಾಸ್ತ್ರ ಮಹಾವಿದ್ಯಾಲಯದಲ್ಲಿ  ಅಧ್ಯಯನ ಮಾಡಿದರು. 2008ರಿಂದ 2013ರವರೆಗೆ ಅವರು ಬೀಜಿಂಗ್ ವಿಶ್ವವಿದ್ಯಾಲಯ ಮತ್ತು ಬೀಜಿಂಗ್ ವಿದೇಶಿ ಅಧ್ಯಯನಗಳ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು.

2011ರ ಜನವರಿ 1ರಂದು ಅವರು ಬಾಮೆಂಗ್ ಧರ್ಮಪ್ರಾಂತ್ಯಕ್ಕಾಗಿ ಯಾಜಕರಾಗಿ ದೀಕ್ಷೆಯನ್ನು ಸ್ವೀಕರಿಸಿದರು. 2013ರಿಂದ 2016ರವರೆಗೆ ಅವರು ತೈವಾನ್‌ನ ಫು ಜೆನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಲ್ಲಿ  ತಮ್ಮ ಉನ್ನತ ಅಧ್ಯಯನವನ್ನು ಮುಂದುವರಿಸಿದರು.

ತಮ್ಮ ಧರ್ಮಪ್ರಾಂತ್ಯಕ್ಕೆ ಮರಳಿದ ಬಳಿಕ, 2016ರಿಂದ 2020ರವರೆಗೆ ಅವರು ಅಲ್ಲಿನ ತರಬೇತಿ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಬಾಮೆಂಗ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿಯೂ, ಧರ್ಮಪ್ರಾಂತ್ಯದ ಕ್ಯಾಥೆಡ್ರಲ್ ದೇವಾಲಯದ ಧರ್ಮ ಕೇಂದ್ರದ ಧರ್ಮಗುರುವಾಗಿಯೂ ನೇಮಿಸಲಾಯಿತು.

29 ಜುಲೈ 2026, 16:40