ಚೀನಾದಲ್ಲಿ ಚಿಫೆಂಗ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಬಿಷಪ್ ರವರ ಧರ್ಮಾಧ್ಯಕ್ಷೀಯ ದೀಕ್ಷೆ ನೆರವೇರಿತು.
ವ್ಯಾಟಿಕನ್ ವರದಿ
ಬಿಷಪ್ ಜೋಸೆಫ್ ಚಾಂಗ್ ಯಾನ್‌ಫೆಂಗ್ ರವರ ಧರ್ಮಾಧ್ಯಕ್ಷೀಯ ದೀಕ್ಷೆ ಜುಲೈ 22ರಂದು ಬುಧವಾರ ಚೀನಾದಲ್ಲಿ ನೆರವೇರಿತು. ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಚೀನಾ ಜನಗಣರಾಜ್ಯದ ನಡುವಿನ ತಾತ್ಕಾಲಿಕ ಒಪ್ಪಂದದ ನಿಯಮಗಳ ಪ್ರಕಾರ ಅವರ ಉಮೇದುವಾರಿಕೆಗೆ ಅನುಮೋದನೆ ನೀಡಿದ ಬಳಿಕ, ಜಗದ್ಗುರು XIVನೇ ಲಿಯೋರವರು ಜೂನ್ 15ರಂದು ಇನ್ನರ್ ಮಂಗೋಲಿಯಾ ಪ್ರಾಂತ್ಯದ ಚಿಫೆಂಗ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅವರನ್ನು ನೇಮಿಸಿದ್ದರು.
ಬಿಷಪ್ ಜೋಸೆಫ್ ಚಾಂಗ್ ಯಾನ್‌ಫೆಂಗ್ ರವರು 1984ರ ಏಪ್ರಿಲ್ 4ರಂದು ಲಿಯಾವೊನಿಂಗ್ ಪ್ರಾಂತ್ಯದ ಬೆಯ್‌ಝೆನ್ ನಗರದಲ್ಲಿ ಜನಿಸಿದರು. ಅವರು ಶೆನ್‌ಯಾಂಗ್ ಪ್ರಮುಖ ಸೆಮಿನರಿಯಲ್ಲಿ ವ್ಯಾಸಂಗ ಮಾಡಿ, ನಂತರ ದಕ್ಷಿಣ ಕೊರಿಯಾದ ಡೇಜಿಯೊನ್ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ಬೈಬಲ್ ಧರ್ಮಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. 2010ರ ನವೆಂಬರ್ 18ರಂದು ಅವರು ಚಿಫೆಂಗ್ ಧರ್ಮಪ್ರಾಂತ್ಯಕ್ಕಾಗಿ ಯಾಜಕರಾಗಿ ದೀಕ್ಷೆ ಪಡೆದರು.
2010ರಿಂದ 2013ರವರೆಗೆ ಅವರು ಧರ್ಮಪ್ರಾಂತ್ಯದ ಕ್ಯೂರಿಯಾದಲ್ಲಿ ಸೇವೆ ಸಲ್ಲಿಸುತ್ತಾ, ಅದೇ ಸಮಯದಲ್ಲಿ ಹಲವಾರು ಧರ್ಮ ಕೇಂದ್ರಗಳಲ್ಲಿ ಸಹ ಯಾಜಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು ಚಿಫೆಂಗ್ ಕ್ಯಾಥೆಡ್ರಲ್ ಧರ್ಮ ಕೇಂದ್ರದ ಧರ್ಮಗುರುಗಳಾಗಿ ನೇಮಕಗೊಂಡರು. ನಂತರ ಲಿನ್‌ಡಾಂಗ್ ಧರ್ಮ ಕೇಂದ್ರದ ಧರ್ಮಗುರುಗಳಾಗಿಯೂ ಸೇವೆ ಸಲ್ಲಿಸಿದರು. 2021ರ ಅಕ್ಟೋಬರ್ 15ರಿಂದ ಅವರು ಚಿಫೆಂಗ್ ಧರ್ಮಪ್ರಾಂತ್ಯದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.