ಬಿರುಕು ಉಂಟಾದ ನೋವು.
ವ್ಯಾಟಿಕನ್ ವರದಿ
ಈ ನೋವಿನ ದಿನದಲ್ಲಿ, ಡಿ ಗಲಾರೆತ್ತಾ ಮತ್ತು ಫೆಲ್ಲೇ ಎಂಬ ಇಬ್ಬರು ಲೆಫೆಬ್ವ್ರಿಸ್ಟ್ ಬಿಷಪ್‌ಗಳು ಹಾಗೂ ಅವರಿಂದ ಬಿಷಪ್‌ಗಳಾಗಿ ಅಭಿಷೇಕಿಸಲ್ಪಟ್ಟ ನಾಲ್ವರು ಹೊಸ ಬಿಷಪ್‌ಗಳ ಕೈಗಳನ್ನಿರಿಸುವ ಕ್ಷಣದಲ್ಲಿಯೇ ಸ್ವಯಂಚಾಲಿತವಾಗಿ ಬಹಿಷ್ಕಾರಕ್ಕೆ ಒಳಗಾದರು ಎಂದು ಘೋಷಿಸುವ ಆದೇಶ ಪ್ರಕಟವಾದಾಗ, ಸಂತ Xನೇ ಪಿಯಸ್ ರವರ ಯಾಜಕರ ಭ್ರಾತೃತ್ವದ ಬಹಿರಂಗ ವಿರೋಧಾಭಾಸವನ್ನು ಅನೇಕರು ನ್ಯಾಯಯುತವಾಗಿ ಎತ್ತಿಹಿಡಿದರು.
ತಮ್ಮ ಮಾತುಗಳಲ್ಲಿ ಮತ್ತು ಅಧಿಕೃತ ಹೇಳಿಕೆಗಳಲ್ಲಿ, ಈ ಭ್ರಾತೃತ್ವವು ತಾವು ಪೇತ್ರನ ಉತ್ತರಾಧಿಕಾರಿಯಾದ ಜಗದ್ಗುರು XIVನೇ ಲಿಯೋರವರ ನ್ಯಾಯಸಮ್ಮತ ಅಧಿಕಾರವನ್ನು ಮತ್ತು ನಾಯಕತ್ವವನ್ನು ಅಂಗೀಕರಿಸುತ್ತೇವೆ ಅವರನ್ನು ಪ್ರೀತಿಸುತ್ತೇವೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳುತ್ತದೆ.
ಆದರೆ ಅವರ ಕೃತ್ಯಗಳಲ್ಲಿ ಮತ್ತು ಯಾವಾಗಲೂ ಮಾತುಗಳಿಗಿಂತ ಹೆಚ್ಚು ಮಹತ್ವವುಳ್ಳವು ಜಗದ್ಗುರುಗಳು ಸ್ಪಷ್ಟವಾಗಿ ವ್ಯಕ್ತಪಡಿಸಿದ ಇಚ್ಛೆಯನ್ನು, ಅವರು ಪುನಃ ಪುನಃ ಮಾಡಿದ ಮನವಿಗಳನ್ನು ಹಾಗೂ ಜಗದ್ಗುರುಗಳ ಆದೇಶ ಇಲ್ಲದೆ ಭಿನ್ನಮತೀಯ ಬಿಷಪ್ ಅಭಿಷೇಕಗಳನ್ನು ನಡೆಸಬಾರದೆಂಬ ಅವರ ವಿನಂತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಅಷ್ಟೇ ಅಲ್ಲ, ಜಗದ್ಗರುಗಳು ಸ್ಪಷ್ಟವಾಗಿ ನಿಷೇಧಿಸಿದ್ದ ಅದೇ ಭಿನ್ನಮತೀಯ ಅಭಿಷೇಕಗಳನ್ನು ನಡೆಸಿದರು.
ಇತ್ತೀಚಿನ ದಿನಗಳಲ್ಲಿ, 1912ರಲ್ಲಿ ಸಂತ Xನೇ ಪಿಯಸ್ ರವರ ಹೆಸರನ್ನೇ ಈ ಭ್ರಾತೃತ್ವವು ತನ್ನ ಹೆಸರಾಗಿ ಸ್ವೀಕರಿಸಿದೆ ಹೇಳಿದ್ದ ಈ ಮಾತುಗಳನ್ನು ಅನೇಕರು ನೆನಪಿಸಿಕೊಂಡಿದ್ದಾರೆ:
ಜಗದ್ಗುರುಗಳನ್ನು ಹೇಗೆ ಪ್ರೀತಿಸಬೇಕು? — ಮಾತಿನಿಂದಲೂ ನಾಲಿಗೆಯಿಂದಲೂ ಅಲ್ಲ— ಕೃತ್ಯದಿಂದ ಮತ್ತು ಸತ್ಯದಿಂದ. ... ಜಗದ್ಗುರುಗಳ ಮೇಲಿನ ನಮ್ಮ ಪ್ರೀತಿಯನ್ನು ತೋರಿಸಲು ಅವರನ್ನು ವಿಧೇಯತೆಯಿಂದ ಅನುಸರಿಸಬೇಕು. ಆದ್ದರಿಂದ ಯಾರಾದರೂ ಜಗದ್ಗುರುಗಳನ್ನು ನಿಜವಾಗಿ ಪ್ರೀತಿಸಿದರೆ, ಅವರು ಏನು ಆಜ್ಞಾಪಿಸುತ್ತಾರೆ ಅಥವಾ ಏನು ಕೇಳುತ್ತಾರೆ ಎಂಬುದರ ಬಗ್ಗೆ ವಾದಿಸುವುದಿಲ್ಲ ವಿಧೇಯತೆ ಎಷ್ಟರ ಮಟ್ಟಿಗೆ ಇರಬೇಕು ಅಥವಾ ಯಾವ ವಿಷಯಗಳಲ್ಲಿ ವಿಧೇಯರಾಗಬೇಕು ಎಂಬುದರ ಬಗ್ಗೆ ಚರ್ಚಿಸುವುದಿಲ್ಲ.”
ಕೆಲವರು ಮತ್ತೊಂದು ವಿರೋಧಾಭಾಸವನ್ನೂ ಉಲ್ಲೇಖಿಸಿದ್ದಾರೆ. ಪರಂಪರಾವಾದಿಗಳು ಆರಾಧನಾ ವಿಧಿಯನ್ನು ಅಸ್ಪರ್ಶ್ಯವೆಂದು ಪರಿಗಣಿಸುತ್ತಾರೆ ಆದರೆ ಪ್ರತಿಯೊಂದು ಕಥೋಲಿಕ ಬಿಷಪ್ ಅಭಿಷೇಕದಲ್ಲಿಯೂ ಅವಿಭಾಜ್ಯ ಅಂಶವಾಗಿರುವ ಜಗದ್ಗುರುಗಳ ಆದೇಶ ಇಲ್ಲದಿರುವುದನ್ನು ಮುಚ್ಚಿಹಾಕಲು ಹೊಸ ಸೂತ್ರವನ್ನೇ ಅವರು ರೂಪಿಸಿಕೊಂಡಿದ್ದಾರೆ.
ಆದರೆ ನಿಜವಾದ ಪ್ರಶ್ನೆ ಬೇರೆಡೆ ಇದೆ. ಅದು ಎರಡನೇ ವ್ಯಾಟಿಕನ್ ಮಹಾಸಭೆಗೂ ಮುಂಚಿನ ಆರಾಧನಾ ವಿಧಿಯಲ್ಲಿ ನಡೆಯುವ ಪವಿತ್ರ ಬಲಿಪೂಜೆಯೊಂದಿಗೆ ತಪ್ಪಾಗಿ “ಲ್ಯಾಟಿನ್ ಮೆಸ್” ಎಂದು ಕರೆಯಲ್ಪಡುವ ಆ ವಿಧಿಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಏಕೆಂದರೆ ಆ ಆರಾಧನಾ ರೂಪಕ್ಕೆ ಬದ್ಧರಾಗಿರುವ ವಿಶ್ವಾಸಿಗಳಿಗೆ, ಪೇತ್ರನೊಂದಿಗೆ ಸಂಪೂರ್ಣ ಐಕ್ಯತೆಯಲ್ಲಿ ಉಳಿದುಕೊಂಡೇ ಆ ವಿಧಿಯಲ್ಲಿ ಬಲಿಯನ್ನು ಆಚರಿಸಲು ಇನ್ನೂ ಅನುಮತಿ ಇದೆ.
ನಿಜವಾದ ನಿರ್ಣಾಯಕ ಪ್ರಶ್ನೆ ಎಂದರೆ “ಪರಂಪರೆ” ಎಂದರೇನು? ಮತ್ತು ಮುಖ್ಯವಾಗಿ, ಪವಿತ್ರಾತ್ಮನ ಪ್ರೇರಣೆಯಡಿಯಲ್ಲಿ ಪರಂಪರೆಯ ಕುರಿತು ನಮ್ಮ ತಿಳುವಳಿಕೆ ಬೆಳೆಯುತ್ತಾ ಹೋಗುವಂತೆ ಅದನ್ನು ಸಂರಕ್ಷಿಸುವ ಹೊಣೆ ಯಾರದು ಎಂಬುದು.
ಪರಂಪರೆಯನ್ನು ಒಂದು ಸೈದ್ಧಾಂತಿಕ ವ್ಯವಸ್ಥೆಯಾಗಿ ಗಟ್ಟಿಗೊಳಿಸಿದರೆ ಇಬ್ಬರು ಪವಿತ್ರ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ, ಜಗತ್ತಿನ ಮೂರು ಸಾವಿರ ಬಿಷಪ್‌ಗಳ ಭಾಗವಹಿಸುವಿಕೆಯಲ್ಲಿ ನಡೆದ ಮಹಾಸಭೆಯನ್ನು ತಾವೇ ತೀರ್ಪು ಮಾಡುವ ಹಕ್ಕನ್ನು ಕೆಲವರು ತಮ್ಮದಾಗಿಸಿಕೊಂಡರೆ ಬಹುತೇಕ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಮಹಾಸಭೆಯ ದಸ್ತಾವೇಜುಗಳನ್ನು ತಿರಸ್ಕರಿಸಿ, ಪೇತ್ರನ ಉತ್ತರಾಧಿಕಾರಿ ಹಾಗೂ ಇಡೀ ಕಥೋಲಿಕ ಧರ್ಮ ಸಭೆ ಒಂದು ನಿರ್ದಿಷ್ಟ ಗುಂಪಿನ ಧರ್ಮಶಾಸ್ತ್ರೀಯ ಅಭಿಪ್ರಾಯಗಳನ್ನೇ ಅಂಗೀಕರಿಸಬೇಕು ಎಂದು ಒತ್ತಾಯಿಸಿದರೆ ಅದರಲ್ಲಿ ಆಳವಾದ ವಿರೋಧಾಭಾಸವಿದೆ.
ಆದರೆ ಅದಕ್ಕಿಂತ ಮುಖ್ಯವಾಗಿ, ಅದರಲ್ಲಿ ಕಥೋಲಿಕ ನಂಬಿಕೆಯಿಂದ ಬಹಳ ದೂರವಾದ ಮನೋಭಾವವಿದೆ. ಏಕೆಂದರೆ ಈ ಶುಭ ಶುಕ್ರವಾರದಂದು ನಿಧನರಾದ ಮಹಾನ್ ಲೇಖಕ ವಿಟ್ತೋರಿಯೋ ಮೆಸ್ಸೋರಿ ಸಂತ Xನೇ ಪಿಯಸ್ ರವರ ಭ್ರಾತೃತ್ವವು ಮತ್ತೆ ಸಂಪೂರ್ಣ ಐಕ್ಯತೆಗೆ ಮರಳಲೆಂದು ಬಹಳ ಶ್ರಮಿಸಿದ್ದವರು ವಿವರಿಸಿದಂತೆ, ಕಥೋಲಿಕ ನಂಬಿಕೆಯ ರಹಸ್ಯವು “ಇದೂ-ಅದೂ” ಎಂಬುದೇ ಹೊರತು “ಇಲ್ಲವೇ-ಅಥವಾ" ಅಲ್ಲ ಎಂಬುದಾಗಿದೆ.
ಆದ್ದರಿಂದ, ಪ್ರಾಚೀನ ಆರಾಧನಾ ವಿಧಿಗೆ ಬದ್ಧರಾಗಿರುವ ವಿಶ್ವಾಸಿಗಳಿಗೆ ಧರ್ಮ ಸಭೆಯಲ್ಲಿ ಸ್ಥಾನವಿದೆ. ಧರ್ಮ ಸಭೆಯಲ್ಲಿ ಚರ್ಚೆಗೆ, ದಾಖಲೆಗಳನ್ನು ಮತ್ತೆ ಮತ್ತೆ ಓದಲು, ಅವುಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಲು ಸಹ ಅವಕಾಶವಿದೆ.
ಆದರೆ ಜಗದ್ಗುರುಗಳನ್ನು ತೀರ್ಪು ಮಾಡಿ, ಅವರ ಅವಿಧೇಯತೆಯಲ್ಲಿ ನಡೆದು, ಕ್ರಿಸ್ತನ “ಅತೀಂದ್ರಿಯ ದೇಹ”ವಾದ ಧರ್ಮ ಸಭೆಯ ಏಕತೆಯನ್ನು ಹರಿದುಹಾಕುವ ಕೃತ್ಯಗಳಿಗೆ ಧರ್ಮ ಸಭೆಯಲ್ಲಿ ಯಾವುದೇ ಸ್ಥಾನವಿಲ್ಲ.
ಅದೇ ರೀತಿ, ಯೇಸು “ನೀನು ಪೇತ್ರನು ಈ ಶಿಲೆಯ ಮೇಲೆ ನಾನು ನನ್ನ ಧರ್ಮ ಸಭೆಯನ್ನು ಕಟ್ಟುವೆನು” ಎಂದು ಹೇಳಿದ ವ್ಯಕ್ತಿಯ ಸ್ಪಷ್ಟ ನಿಷೇಧವನ್ನು ಮೀರಿ, ಅವನಿಗೆ ಸಮಾನಾಂತರವಾದ ಮತ್ತೊಂದು ಧರ್ಮ ಸಭೆಯ ಶ್ರೇಣಿಕ್ರಮ ನಿರ್ಮಿಸಲು ಸಹ ಧರ್ಮ ಸಭೆಯಲ್ಲಿ ಯಾವುದೇ ಅವಕಾಶವಿಲ್ಲ.