ಹುಡುಕಿ

ಹೊಸ ಛಾಯಾಗ್ರಹಣ ಪ್ರದರ್ಶನವು ಕ್ಯಾಸ್ಟೆಲ್ ಗ್ಯಾಂಡೊಲ್ಫೊದ ಪಾಂಟಿಫಿಕಲ್ ಗಾರ್ಡನ್ಸ್‌ನಲ್ಲಿರುವ ಬೊರ್ಗೊ ಲೌಡಾಟೊ ಸಿಯಲ್ಲಿ 'ಗಿಯಾರ್ಡಿನಿ ಇಟಾಲಿಯನ್'. ಹೊಸ ಛಾಯಾಗ್ರಹಣ ಪ್ರದರ್ಶನವು ಕ್ಯಾಸ್ಟೆಲ್ ಗ್ಯಾಂಡೊಲ್ಫೊದ ಪಾಂಟಿಫಿಕಲ್ ಗಾರ್ಡನ್ಸ್‌ನಲ್ಲಿರುವ ಬೊರ್ಗೊ ಲೌಡಾಟೊ ಸಿಯಲ್ಲಿ 'ಗಿಯಾರ್ಡಿನಿ ಇಟಾಲಿಯನ್'. 

'ಮನುಷ್ಯ ಮತ್ತು ಪ್ರಕೃತಿ: ಸೂಕ್ಷ್ಮ ಸಮತೋಲನಗಳು' ಪ್ರದರ್ಶನಕ್ಕೆ ಬೊರ್ಗೋ ಲೌದಾತೋ ಸಿಯಲ್ಲಿ ಚಾಲನೆ.

ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಪ್ರತಿಷ್ಠಾನವು, ದ್ವಿತೀಯ ಜಾನ್ ಪಾಲರ ಯುವ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿರುವ ಹೊಸ ಛಾಯಾಚಿತ್ರ ಪ್ರದರ್ಶನವು, ಕ್ಯಾಸ್ಟೆಲ್ ಗಾಂಡೋಲ್ಫೋದ ಜಗದ್ಗುರುಗಳ ಉದ್ಯಾನವನದಲ್ಲಿರುವ ಬೊರ್ಗೋ ಲೌದಾತೋ ಸಿಯಲ್ಲಿ ಉದ್ಘಾಟನೆಯಾಗಿದೆ. ಈ ಪ್ರದರ್ಶನವು ಜುಲೈ ತಿಂಗಳ ಅಂತ್ಯದವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.

ವ್ಯಾಟಿಕನ್ ವರದಿ

ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಪ್ರತಿಷ್ಠಾನದ ಪರಿಸರ ಛಾಯಾಚಿತ್ರ ಪ್ರಶಸ್ತಿ ವಿಜೇತ ಛಾಯಾಚಿತ್ರಗಳನ್ನು ಒಳಗೊಂಡಿರುವ "ಮನುಷ್ಯ ಮತ್ತು ಪ್ರಕೃತಿ ಸೂಕ್ಷ್ಮ ಸಮತೋಲನಗಳು" ಎಂಬ ಛಾಯಾಚಿತ್ರ ಪ್ರದರ್ಶನವು ಜುಲೈ 3ರಂದು, ಶುಕ್ರವಾರ, ಕ್ಯಾಸ್ಟೆಲ್ ಗಾಂಡೋಲ್ಫೋದ ಜಗದ್ಗುರುಗಳ ಉದ್ಯಾನವನದಲ್ಲಿರುವ ಬೊರ್ಗೋ ಲೌದಾತೋ ಸಿ'ಯಲ್ಲಿ ಉದ್ಘಾಟನೆಯಾಯಿತು.

ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಪ್ರತಿಷ್ಠಾನದ ಇಟಲಿ ಶಾಖೆಯು, ದ್ವಿತೀಯ ಜಾನ್ ಪಾಲರ ಯುವ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿರುವ ಈ ಪ್ರದರ್ಶನವು ಜುಲೈ 30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು, ಸೃಷ್ಟಿಯೊಳಗಿನ ಮಾನವನ ಸ್ಥಾನ ಮತ್ತು ಜವಾಬ್ದಾರಿಯ ಕುರಿತು ಚಿಂತನೆಗೆ ಆಹ್ವಾನಿಸುತ್ತದೆ.

ಜಗದ್ಗುರುಗಳ ಅಧಿಕಾರ ಸ್ಥಳವು ಮೊನಾಕೊ ಸಂಸ್ಥಾನದ ರಾಯಭಾರ ಕಚೇರಿಯ ಆಶ್ರಯದಲ್ಲಿ, ಬೊರ್ಗೋ ಲೌದಾತೋ ಸಿ', ಫೊಂಡಾಜಿಯೋನೆ ಸ್ಕುಡಿಯೇರಿ, ಡೆಲ್ಟಾ ಇಂಜೆಗ್ನೇರಿಯಾ ಹಾಗೂ ಗಿಮೆಟ್ ಸಂಸ್ಥೆಗಳ ಬೆಂಬಲದೊಂದಿಗೆ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಪ್ರದರ್ಶನದಲ್ಲಿರುವ ಛಾಯಾಚಿತ್ರಗಳು ಜೀವಜಗತ್ತಿನ ಎಲ್ಲ ರೂಪಗಳ ನಡುವಿನ ಆಳವಾದ ಪರಸ್ಪರ ಸಂಬಂಧವನ್ನು ಬಿಂಬಿಸುತ್ತವೆ. ಜೀವವೈವಿಧ್ಯತೆಯೇ ಭೂಮಿಯ ಸಮತೋಲನದ ಮೂಲಾಧಾರವಾಗಿದ್ದು, ಈ ಸಮತೋಲನದಲ್ಲಿ ಉಂಟಾಗುವ ಪ್ರತಿಯೊಂದು ವ್ಯತ್ಯಯವೂ ಮಾನವಕುಲದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಅವು ನೆನಪಿಸುತ್ತವೆ. ಜೊತೆಗೆ, ಸೃಷ್ಟಿಯ ಸೌಂದರ್ಯವನ್ನು ಆಸ್ವಾದಿಸುವುದರೊಂದಿಗೆ ಪರಿಸರ ವ್ಯವಸ್ಥೆಗಳ ಸೂಕ್ಷ್ಮತೆ ಮತ್ತು ಅವುಗಳನ್ನು ಸಂರಕ್ಷಿಸುವ ನಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳುವಂತೆ ಪ್ರದರ್ಶನವು ಸಂದರ್ಶಕರನ್ನು ಆಹ್ವಾನಿಸುತ್ತದೆ.

ರೋಮ್ ಮತ್ತು ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿನ ಪ್ರದರ್ಶನಗಳ ಬಳಿಕ, ಈ ಛಾಯಾಚಿತ್ರ ಪ್ರದರ್ಶನವು ಇಟಲಿಯ ಇತರ ನಗರಗಳಲ್ಲಿಯೂ ಪ್ರದರ್ಶನಗೊಳ್ಳಲಿದೆ.

ಪ್ರದರ್ಶನದ ಉದ್ಘಾಟನೆಗೆ ಮುನ್ನ "ಸೃಷ್ಟಿಯ ಆರೈಕೆ: ತಿಳಿದುಕೊಳ್ಳುವುದು, ಕಾರ್ಯರೂಪಕ್ಕೆ ತರುವುದು" ಎಂಬ ವಿಷಯದ ಸಮ್ಮೇಳನ ನಡೆಯಿತು. ಈ ಸಮ್ಮೇಳನವು ಮಾನವ ಮತ್ತು ಪರಿಸರದ ನಡುವಿನ ಸೂಕ್ಷ್ಮ ಸಮತೋಲನವನ್ನು ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ಪರಿಶೀಲಿಸಿತು.

ಈ ಕಾರ್ಯಕ್ರಮದಲ್ಲಿ ಧರ್ಮ ಸಭೆಯ ನಾಯಕರು, ರಾಜತಾಂತ್ರಿಕ ವಲಯದ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಪರಿಣಿತರು ಹಾಗೂ ಗಣ್ಯರು ಭಾಗವಹಿಸಿ, ಸಮಗ್ರ ಪರಿಸರಶಾಸ್ತ್ರ, ಜೀವವೈವಿಧ್ಯತೆಯ ಸಂರಕ್ಷಣೆ ಹಾಗೂ ನಮ್ಮ ಸಾಮಾನ್ಯ ಮನೆಯ ಆರೈಕೆಯಲ್ಲಿನ ಮಾನವಕುಲದ ಜಂಟಿ ಹೊಣೆಗಾರಿಕೆ ಕುರಿತು ಚರ್ಚಿಸಿದರು.

ಕಾರ್ಯಕ್ರಮವನ್ನು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕರಾದ ಕಾರ್ಡಿನಲ್ ಫಾಬಿಯೊ ಬಾಜ್ಜಿಯೋ ಸ್ವಾಗತಿಸಿ ಉದ್ಘಾಟಿಸಿದರು. ಇಂದಿನ ಪರಿಸರ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಜಾಗೃತಿ ಮತ್ತು ಕ್ರಿಯಾಶೀಲತೆಯನ್ನು ಬೆಳೆಸಲು ಸಮರ್ಪಿತವಾದ ಈ ಕೇಂದ್ರದ ಉದ್ದೇಶವನ್ನು ಅವರು ವಿವರಿಸಿದರು.

ನಂತರ ಭಾಗವಹಿಸಿದವರು ಬೊರ್ಗೋ ಲೌದಾತೋ ಸಿ'ಯ ಮಾರ್ಗದರ್ಶಿತ ಪ್ರವಾಸದಲ್ಲಿ ಪಾಲ್ಗೊಂಡು, ಸಮಗ್ರ ಪರಿಸರಶಾಸ್ತ್ರವನ್ನು ಉತ್ತೇಜಿಸುವ ಜಗದ್ಗುರುಗಳ ಅಧಿಕಾರ ಸ್ಥಳದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯಾಗಿರುವ ಈ ಯೋಜನೆಯನ್ನು ಪರಿಚಯಿಸಿಕೊಂಡರು.

ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಪ್ರತಿಷ್ಠಾನದ ಇಟಲಿ ಶಾಖೆಯ ಅಧ್ಯಕ್ಷ ಮಾರ್ಕೊ ಕೊಲಾಸಾಂತಿ ಹಾಗೂ ದ್ವಿತೀಯ ಜಾನ್ ಪಾಲರ ಯುವ ಪ್ರತಿಷ್ಠಾನದ ಅಧ್ಯಕ್ಷ ಡೇನಿಯೆಲೆ ಬ್ರೂನೋರವರ ಸ್ವಾಗತ ಭಾಷಣಗಳ ಬಳಿಕ, ಕಾರ್ಡಿನಲ್ ಫಾಬಿಯೊ ಬಾಜ್ಜಿಯೋ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅರಣ್ಯಾಧಿಕಾರಿ ಪ್ರೊ. ಡ್ಯಾನಿಲೋ ಮೊಲ್ಲಿಕೋನೆ, ಹಾಗೂ ರೋಮ್ ಸಾಪಿಯೆನ್ಜಾ ವಿಶ್ವವಿದ್ಯಾಲಯದ ಸಸ್ಯೋದ್ಯಾನ ನಿರ್ದೇಶಕ ಪ್ರೊ. ಫಾಬಿಯೊ ಅತ್ತೊರೆ ಚರ್ಚೆಯಲ್ಲಿ ಭಾಗವಹಿಸಿದರು. ವ್ಯಾಟಿಕನ್ ನ್ಯೂಸ್–ವ್ಯಾಟಿಕನ್ ರೇಡಿಯೋದ ಪತ್ರಕರ್ತೆ ಡೆಬೋರಾ ಕ್ಯಾಸ್ಟೆಲ್ಲಾನೊ ಲುಬೊವ್ ಕಾರ್ಯಕ್ರಮವನ್ನು ನಿರೂಪಿಸಿದರು.

ತಮ್ಮ ಭಾಷಣದಲ್ಲಿ ಮಾರ್ಕೊ ಕೊಲಾಸಾಂತಿ, "ನಾವು ಇತಿಹಾಸದ ಮಹತ್ವದ ಘಟ್ಟದಲ್ಲಿ ಬದುಕುತ್ತಿದ್ದೇವೆ. ಕೇವಲ ತಿಳುವಳಿಕೆ ಸಾಕಾಗುವುದಿಲ್ಲ ಇಂದು ನಾವು ಜ್ಞಾನವನ್ನು ಜವಾಬ್ದಾರಿಯಾಗಿ, ಜವಾಬ್ದಾರಿಯನ್ನು ಸ್ಪಷ್ಟ ಕಾರ್ಯವಾಗಿ ಪರಿವರ್ತಿಸಲು ಕರೆಯಲ್ಪಟ್ಟಿದ್ದೇವೆ" ಎಂದು ಹೇಳಿದರು.

ಪರಿಸರ ಸಂರಕ್ಷಣೆಯು ಕೇವಲ ಪ್ರಕೃತಿಗೆ ಮಾತ್ರ ಸಂಬಂಧಿಸಿದ್ದಲ್ಲ ಅದು ಮಾನವ ಘನತೆ, ಜೀವನದ ಗುಣಮಟ್ಟ, ಸಾಮಾಜಿಕ ನ್ಯಾಯ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕೂ ಸಂಬಂಧಿಸಿದೆ ಎಂದು ಅವರು ಒತ್ತಿ ಹೇಳಿದರು. ಸಂಸ್ಕೃತಿ, ವಿಜ್ಞಾನ, ಸಂಸ್ಥೆಗಳು ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂವಾದದ ಮೂಲಕವೇ ಸೃಷ್ಟಿಯ ಮೇಲಿನ ಗೌರವವನ್ನು ಆಧಾರವಾಗಿಟ್ಟುಕೊಂಡ ನೈಜ ಅಭಿವೃದ್ಧಿಯ ಮಾದರಿಯನ್ನು ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

"ನಮಗೆ ತಿಳಿಯದಿರುವುದನ್ನು ನಾವು ಸಂರಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದ ಕೊಲಾಸಾಂತಿ, ಮಾನವನು ಪ್ರಕೃತಿಯಿಂದ ಪ್ರತ್ಯೇಕನಲ್ಲ; ಅವನು ಅದರ ಅವಿಭಾಜ್ಯ ಅಂಗವಾಗಿದ್ದು, ಅದ್ಭುತವಾದರೂ ಸೂಕ್ಷ್ಮವಾದ ಸಮತೋಲನದ ಭಾಗವಾಗಿದ್ದಾನೆ ಎಂದು ಹೇಳಿದರು. ಈ ಪ್ರದರ್ಶನವನ್ನು ವ್ಯಾಟಿಕನ್‌ನಲ್ಲಿ ಆಯೋಜಿಸಲು ಅವಕಾಶ ನೀಡಿದ ಕಾರ್ಡಿನಲ್ ಬಾಜ್ಜಿಯೋರವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಡಿನಲ್ ಫಾಬಿಯೊ ಬಾಜ್ಜಿಯೋ ಈ ಉಪಕ್ರಮವನ್ನು ಸ್ವಾಗತಿಸಿ, ಇದು ಬೊರ್ಗೋ ಲೌದಾತೋ ಸಿ'ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಧ್ಯೇಯದೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ ಎಂದು ಹೇಳಿದರು. ಸಮಗ್ರ ಪರಿಸರಶಾಸ್ತ್ರದ ಕುರಿತು ನಡೆಯುವ ಚಿಂತನೆಗಳು ಇಲ್ಲಿ ಪ್ರತಿದಿನವೂ ಶಿಕ್ಷಣ ಮತ್ತು ಜಾಗೃತಿಯ ಸ್ಪಷ್ಟ ಅನುಭವಗಳಾಗಿ ರೂಪುಗೊಳ್ಳುತ್ತಿವೆ ಎಂದು ಅವರು ತಿಳಿಸಿದರು.

ದ್ವಿತೀಯ ಜಾನ್ ಪಾಲರ ಯುವ ಪ್ರತಿಷ್ಠಾನದ ಅಧ್ಯಕ್ಷ ಡೇನಿಯೆಲೆ ಬ್ರೂನೋ, "ಸೃಷ್ಟಿಯ ಸೌಂದರ್ಯವು ಕೇವಲ ಅಲಂಕಾರವಲ್ಲ ಅದು ಒಂದು ಕರೆಯಾಗಿದೆ. ಅದು ಸವಲತ್ತಲ್ಲ ಅದು ನಮ್ಮ ಕರ್ತವ್ಯ" ಎಂದು ಹೇಳಿ, ಸೃಷ್ಟಿಯ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

2013ರಿಂದ ವಿಶ್ವ ಯುವಜನ ದಿನಗಳ ಮೂಲಕ ಸೃಷ್ಟಿಯ ಆರೈಕೆ ಮತ್ತು ಯುವಜನರಲ್ಲಿ ಸಹೋದರತ್ವದ ಮನೋಭಾವವನ್ನು ಬೆಳೆಸಲು ತಮ್ಮ ಪ್ರತಿಷ್ಠಾನ ಕೈಗೊಂಡಿರುವ ಪ್ರಯತ್ನಗಳನ್ನು ಅವರು ವಿವರಿಸಿದರು. ಲೌದಾತೋ ಸಿ', ಫ್ರತೇಲ್ಲಿ ತುಟ್ಟಿ ಹಾಗೂ ಜಗದ್ಗುರು XIVನೇ ಲಿಯೋರವರು ಇತ್ತೀಚಿನ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ದಸ್ತಾವೇಜುಗಳಲ್ಲಿ ಪ್ರತಿಪಾದಿಸಿರುವ ಸಹೋದರತ್ವ, ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಮತ್ತು "ಧೈರ್ಯಶಾಲಿ ಹಂಚಿಕೆಯ ಜವಾಬ್ದಾರಿ" ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಮುಂದಿನ ವಿಶ್ವ ಯುವಜನ ದಿನಗಳ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯಲಿರುವ ಪ್ರತಿಷ್ಠಾನದ ಐದನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸೃಷ್ಟಿಯ ಸಂರಕ್ಷಣೆಗೆ ಮೀಸಲಾದ ವಿಶೇಷ ಅಧಿವೇಶನವೂ ಇರಲಿದೆ ಎಂದು ಅವರು ಘೋಷಿಸಿದರು.

ಕೊನೆಯಲ್ಲಿ ಅವರು, "ಈ ಪ್ರದರ್ಶನವನ್ನು ಜಗದ್ಗುರುಗಳ ಉದ್ಯಾನವನದಲ್ಲಿ ಆಯೋಜಿಸಿರುವುದು ಕಾಕತಾಳೀಯವಲ್ಲ. ತನ್ನ ಇತಿಹಾಸ ಮತ್ತು ಧ್ಯೇಯದಿಂದಲೇ ಈ ಸ್ಥಳವು ಛಾಯಾಚಿತ್ರಗಳ ಸಂದೇಶವನ್ನು ಇನ್ನಷ್ಟು ಗಾಢಗೊಳಿಸಿ, ಅದನ್ನು ಸ್ಪಷ್ಟ ಹಾಗೂ ಸಾಮೂಹಿಕ ಬದ್ಧತೆಗೆ ನೀಡುವ ಆಹ್ವಾನವನ್ನಾಗಿ ರೂಪಿಸುತ್ತದೆ" ಎಂದು ಹೇಳಿದರು.

20 ಜುಲೈ 2026, 20:18