ಹುಡುಕಿ

ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋ ರವರು. ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಜಗದ್ಗುರು XIVನೇ ಲಿಯೋ ರವರು.  (ANSA)

"ಜಗದ್ಗುರುಗಳು ಸದಾ ಒಬ್ಬ ಕುರುಬನ ಹೃದಯದಿಂದ ಮಾತನಾಡುತ್ತಾರೆ."

ವ್ಯಾಟಿಕನ್‌ನ ಸಂಪಾದಕೀಯ ನಿರ್ದೇಶಕರಾದ ಆಂಡ್ರಿಯಾ ಟೋರ್ನಿಯೆಲ್ಲಿರವರು, ಪೇತ್ರನ ಉತ್ತರಾಧಿಕಾರಿಯಾದ ಜಗದ್ಗುರುಗಳ ಪಾತ್ರ ಮತ್ತು ಅವರ ಅಧಿಕೃತ ಧರ್ಮ ಸಭೆಯ ಬೋಧನಾಧಿಕಾರದ (ಮ್ಯಾಜಿಸ್ಟೀರಿಯಂ) ಮಹತ್ವದ ಕುರಿತು ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸುತ್ತಾರೆ.

ವ್ಯಾಟಿಕನ್ ವರದಿ

ಮೊದಲನೆಯದಾಗಿ, ಯುದ್ಧ ಮತ್ತು ಶಾಂತಿಯ ಬಗ್ಗೆ ಆಗಲಿ, ವಲಸೆ (ವಲಸಿಗರ ಸಮಸ್ಯೆ) ಬಗ್ಗೆ ಆಗಲಿ, ಅಥವಾ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವೀಯತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ಆಗಲಿ ಪೇತ್ರನ ಉತ್ತರಾಧಿಕಾರಿಯು ಎಲ್ಲಕ್ಕಿಂತ ಮೊದಲು ಒಬ್ಬ ಆಧ್ಯಾತ್ಮಿಕ ನಾಯಕನಾಗಿಯೇ ಮಾತನಾಡುತ್ತಾರೆ. 1929ರ ಲ್ಯಾಟರನ್ ಒಪ್ಪಂದಗಳ ಮೂಲಕ "ರೋಮನ್ ಪ್ರಶ್ನೆ"ಗೆ ಪರಿಹಾರ ಕಂಡ ನಂತರ, ರೋಮಿನ ಧರ್ಮಾಧ್ಯಕ್ಷರು ಇಟಲಿಯ ರಾಜಧಾನಿಯ ಹೃದಯಭಾಗದಲ್ಲಿರುವ ಅರ್ಧ ಚದರ ಕಿಲೋಮೀಟರ್‌ಗಿಂತಲೂ ಕಡಿಮೆ ವಿಸ್ತೀರ್ಣದ ವಿಶ್ವದ ಅತಿ ಚಿಕ್ಕ ರಾಷ್ಟ್ರವಾದ ವ್ಯಾಟಿಕನ್ ನಗರದ ಸಾರ್ವಭೌಮ ಆಡಳಿತಗಾರರೂ ಆಗಿರುವುದು, ಅವರು ಮಾನವಕುಲದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುವಾಗ ರಾಜಕಾರಣಿಯಂತೆ ವರ್ತಿಸುತ್ತಾರೆ ಅಥವಾ ಮಾತನಾಡುತ್ತಾರೆ ಎಂಬುದನ್ನು ಅರ್ಥೈಸುವುದಿಲ್ಲ.

1965ರ ಅಕ್ಟೋಬರ್ 4ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಜಗದ್ಗುರು VIನೇ ಪೌಲರು ಇದನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದರು. ಅವರು ಹೀಗೆ ಹೇಳಿದರು: "ಈ ಸಭೆಗೆ ದ್ವಿಮುಖ ಸ್ವರೂಪವಿದೆ ಎಂಬುದು ನಿಮಗೆಲ್ಲ ತಿಳಿದಿರುವ ಸಂಗತಿ. ಅದು ಒಂದೇ ಸಮಯದಲ್ಲಿ ಸರಳತೆಯನ್ನೂ ಮತ್ತು ಮಹತ್ತ್ವವನ್ನೂ ಹೊಂದಿದೆ. ಸರಳತೆಯೆಂದರೆ, ನಿಮ್ಮೊಂದಿಗೆ ಮಾತನಾಡುತ್ತಿರುವವರು ನಿಮ್ಮಂತೆಯೇ ಒಬ್ಬ ಮನುಷ್ಯ. ಅವರು ನಿಮ್ಮ ಸಹೋದರರು. ಸಾರ್ವಭೌಮ ರಾಷ್ಟ್ರಗಳನ್ನು ಪ್ರತಿನಿಧಿಸುವ ನಿಮ್ಮಲ್ಲಿ ಅತ್ಯಂತ ಕಿರಿಯವರಲ್ಲಿ ಒಬ್ಬರು ಕೂಡ ಹೌದು. ಏಕೆಂದರೆ ನೀವು ಈ ದೃಷ್ಟಿಕೋನದಿಂದ ನಮ್ಮನ್ನು ಪರಿಗಣಿಸಿದರೆ ನಮ್ಮ ಬಳಿ ಇರುವ ಲೌಕಿಕ ಸಾರ್ವಭೌಮತ್ವವು ಅತ್ಯಂತ ಚಿಕ್ಕದು, ಬಹುತೇಕ ಸಾಂಕೇತಿಕವಾದುದು. ನಮ್ಮ ಆಧ್ಯಾತ್ಮಿಕ ಧ್ಯೇಯವನ್ನು ಸಂಪೂರ್ಣ ಸ್ವಾತಂತ್ರ್ಯದಿಂದ ನೆರವೇರಿಸಲು ಮತ್ತು ನಮ್ಮೊಂದಿಗೆ ವ್ಯವಹರಿಸುವವರಿಗೆ ನಾವು ಈ ಲೋಕದ ಯಾವುದೇ ಅಧಿಕಾರಕ್ಕೆ ಒಳಪಟ್ಟವರಲ್ಲ ಎಂಬ ಭರವಸೆಯನ್ನು ನೀಡಲು ಅಗತ್ಯವಿರುವ ಕನಿಷ್ಠ ಮಟ್ಟದ ಸಾರ್ವಭೌಮತ್ವ ಮಾತ್ರ ಅದು."

ಅಮೆರಿಕದ ಭೇಟಿಯ ಸಂದರ್ಭದಲ್ಲಿ ಜಗದ್ಗುರುಗಳು ತಮ್ಮ ಬಗ್ಗೆ ಮಾತನಾಡುತ್ತಾ ಹೀಗೆ ಮುಂದುವರಿಸಿದರು: "ನಮ್ಮ ಬಳಿ ಯಾವುದೇ ಲೌಕಿಕ ಅಧಿಕಾರವಿಲ್ಲ ನಿಮ್ಮೊಂದಿಗೆ ಸ್ಪರ್ಧಿಸುವ ಯಾವುದೇ ಮಹತ್ವಾಕಾಂಕ್ಷೆಯೂ ಇಲ್ಲ. ವಾಸ್ತವವಾಗಿ, ನಾವು ನಿಮ್ಮಿಂದ ಏನನ್ನೂ ಕೇಳುವುದಿಲ್ಲ ಯಾವುದೇ ಬೇಡಿಕೆಯನ್ನು ಮುಂದಿಡುವುದಿಲ್ಲ. ಹೆಚ್ಚೆಂದರೆ, ನಾವು ಒಂದೇ ಒಂದು ಅನುಮತಿಯನ್ನು ಕೋರುತ್ತೇವೆ—ಅದು ನಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ವಿನಯದಿಂದ ಮತ್ತು ಪ್ರೀತಿಯಿಂದ ನಿಮಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂಬುದಾಗಿತ್ತು."

ಕ್ರಿಸ್ತನ ಪ್ರತಿನಿಧಿಯ ಸಂಪೂರ್ಣ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಸುಮಾರು ಒಂದು ಶತಮಾನದ ಹಿಂದೆ, ರೋಮಿನ ಧರ್ಮಾಧ್ಯಕ್ಷರು ಹಾಗೂ ವಿಶ್ವವ್ಯಾಪಿ ಧರ್ಮ ಸಭೆಯ ಕುರುಬರು ಒಂದು ಚಿಕ್ಕ ಭೂಭಾಗದ ಸಾರ್ವಭೌಮ ಆಡಳಿತಗಾರರಾಗಿರಬೇಕು ಹೀಗಾಗಿ ರಾಷ್ಟ್ರದ ಮುಖ್ಯಸ್ಥರೂ ಆಗಿರಬೇಕು ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು ಎಂಬುದು ನಿಜ. ಆದರೆ ಈ ವ್ಯವಸ್ಥೆಯ ಉದ್ದೇಶ ಮತ್ತೊಂದು ಧ್ಯೇಯವನ್ನು ನೀಡುವುದಲ್ಲ ಬದಲಾಗಿ ಯಾವುದೇ ರಾಷ್ಟ್ರದ ಪ್ರಭಾವದಿಂದ ಸಂಪೂರ್ಣ ಸ್ವತಂತ್ರರಾಗಿರುವ ಅಗತ್ಯವನ್ನು ಗುರುತಿಸುವುದಾಗಿತ್ತು ಮತ್ತು ಇಂದಿಗೂ ಅದೇ ಉದ್ದೇಶವನ್ನು ಹೊಂದಿದೆ. ಆದ್ದರಿಂದ, ಜಗದ್ಗುರುಗಳ ರಾಷ್ಟ್ರದ ಮುಖ್ಯಸ್ಥರ ಪಾತ್ರವನ್ನು ಅತಿಯಾಗಿ ವೈಭವೀಕರಿಸುವುದು ಅಥವಾ ಅದರ ಮಹತ್ವವನ್ನು ಅತಿಶಯವಾಗಿ ಒತ್ತಿಹೇಳುವುದು ತಪ್ಪುದಾರಿಗೆಳೆಯುವಂತದ್ದು. ಏಕೆಂದರೆ ಅದು ಅವರ ಏಕೈಕ ನಿಜವಾದ ಧ್ಯೇಯವಾದ ವಿಶ್ವವ್ಯಾಪಿ ಕುರುಬನ ಸೇವೆಯನ್ನು ಮರೆಮಾಚುತ್ತದೆ. ಕಥೋಲಿಕರಿಗೆ, ಕ್ರೈಸ್ತರಿಗೆ, ವಿಶ್ವಾಸಿಗಳಿಗೆ ಹಾಗೂ ಸದುದ್ದೇಶದ ಎಲ್ಲ ಜನರಿಗೆ ಪ್ರೀತಿ, ಸಹೋದರತ್ವ ಮತ್ತು "ನಿರಾಯುಧ ಹಾಗೂ ನಿರಾಯುಧಗೊಳಿಸುವ" ಶಾಂತಿಯ ಸುವಾರ್ತೆಯನ್ನು ಸಾರುವುದೇ ಅವರ ಏಕೈಕ ಉದ್ದೇಶವಾಗಿದೆ.

1962ರ ಅಕ್ಟೋಬರ್ 10ರಂದು, ಎರಡನೇ ವ್ಯಾಟಿಕನ್ ಮಹಾಸಭೆಯ ಉದ್ಘಾಟನೆಯ ಮುನ್ನಾದಿನದಂದು ಕ್ಯಾಂಪಿಡೋಲಿಯೊದಲ್ಲಿ ಮಾತನಾಡಿದ ಆಗಿನ ಮಿಲಾನ್ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಜಿಯೋವಾನಿ ಬತ್ತಿಸ್ತಾ ಮೊಂಟಿನಿ (ನಂತರ ಜಗದ್ಗುರು VIನೇ ಪೌಲರು) ಈ ಸತ್ಯವನ್ನು ಅತ್ಯಂತ ಸಮರ್ಪಕವಾಗಿ ಒತ್ತಿಹೇಳಿದ್ದರು. 1870ರಲ್ಲಿ ಪಾಪಲ್ ರಾಜ್ಯಗಳ ಪತನದೊಂದಿಗೆ ಧರ್ಮ ಸಭೆಯ ಲೌಕಿಕ ಅಧಿಕಾರ ಅಂತ್ಯಗೊಂಡ ವಿಚಾರವನ್ನು ಉಲ್ಲೇಖಿಸುತ್ತಾ ಅವರು ಹೀಗೆ ಹೇಳಿದರು: "ಆ ಕ್ಷಣದಿಂದಲೇ ಪಾಪಸಂಸ್ಥೆಯು ಜೀವನದ ಗುರುವಾಗಿಯೂ ಸುವಾರ್ತೆಯ ಸಾಕ್ಷಿಯಾಗಿಯೂ ತನ್ನ ಧ್ಯೇಯವನ್ನು ಅಸಾಮಾನ್ಯ ಉತ್ಸಾಹದಿಂದ ಪುನರಾರಂಭಿಸಿತು. ಇದರ ಫಲವಾಗಿ ಧರ್ಮ ಸಭೆಯ ಆಧ್ಯಾತ್ಮಿಕ ನಾಯಕತ್ವದಲ್ಲಿಯೂ, ಜಗತ್ತಿನ ಮೇಲೆ ಅದರ ನೈತಿಕ ಪ್ರಭಾವದಲ್ಲಿಯೂ ಹಿಂದೆಂದೂ ಕಾಣದ ಎತ್ತರವನ್ನು ಅದು ತಲುಪಿತು."

ಮಾನವ ಜೀವನವು ಅದರ ಪ್ರತಿಯೊಂದು ಹಂತದಲ್ಲಿಯೂ ಗೌರವಿಸಲ್ಪಡಬೇಕು ಮತ್ತು ರಕ್ಷಿಸಲ್ಪಡಬೇಕು ಎಂದು ಅವರು ಕರೆ ನೀಡುವಾಗ ಎಲ್ಲಾ ಜನಾಂಗಗಳ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಶಾಂತಿಯ ಬಗ್ಗೆ ಮಾತನಾಡುವಾಗ ಮತ್ತು "ನ್ಯಾಯಯುತ ಯುದ್ಧ" ಎಂಬ ಪರಿಕಲ್ಪನೆಯನ್ನು ಮೀರಿ ಹುಚ್ಚು ಶಸ್ತ್ರಾಸ್ತ್ರ ಸ್ಪರ್ಧೆಗೆ ಅಂತ್ಯವಾಗಬೇಕೆಂದು ಒತ್ತಾಯಿಸುವಾಗ ಧರ್ಮ ಸಭೆಯ ಸಾಮಾಜಿಕ ಬೋಧನೆಯ ಮ್ಯಾಜಿಸ್ಟೀರಿಯಂ ಅನ್ನು ಆಧರಿಸಿ ಸಂವಾದ ಮತ್ತು ಮಾತುಕತೆಗೆ ಕರೆ ನೀಡುವಾಗ ವಲಸಿಗರನ್ನು ಅವರ ಮಾನವ ಘನತೆಯನ್ನು ಎಂದಿಗೂ ಮರೆಯದೆ ಸ್ವಾಗತಿಸಬೇಕಾದ ವ್ಯಕ್ತಿಗಳೆಂದು ಪರಿಗಣಿಸಬೇಕೆಂದು ಹೇಳುವಾಗ ಬಡವರು ಸುವಾರ್ತೆಯ ಹೃದಯಭಾಗದಲ್ಲಿದ್ದಾರೆ ಮತ್ತು ನಾವು ಹೆಚ್ಚು ನ್ಯಾಯಯುತ ಹಾಗೂ ಸಮಾನತೆಯ ಸಮಾಜಗಳನ್ನು ನಿರ್ಮಿಸಬೇಕೆಂದು ನೆನಪಿಸುವಾಗ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಸಮರ್ಥಿಸುವಾಗ ಮುಂದಿನ ತಲೆಮಾರುಗಳಿಗೆ ಸೃಷ್ಟಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸಲು ಅದನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿಹೇಳುವಾಗ ಪೇತ್ರನ ಉತ್ತರಾಧಿಕಾರಿಯು ರಾಷ್ಟ್ರದ ಮುಖ್ಯಸ್ಥನಾಗಿ ಮಾತನಾಡುತ್ತಿಲ್ಲ. ಅವರು ಕೇವಲ ಸುವಾರ್ತೆಯನ್ನು ಘೋಷಿಸುತ್ತಿದ್ದಾರೆ.

13 ಜುಲೈ 2026, 20:50