ಹುಡುಕಿ

POLAND HOLOCAUST AUSCHWITZ LIBERATION

"ಯುವ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರಿಗೆ ಪರಿಚಿತರಾಗಿದ್ದ ಸೆಲೇಶಿಯನ್ ಧರ್ಮಗುರುಗಳು ಪೋಲೆಂಡ್‌ನಲ್ಲಿ ಧನ್ಯರಾಗಿ ಘೋಷಿಸಲ್ಪಡಲಿದ್ದಾರೆ"

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ನಾಜಿಗಳಿಂದ ಹತ್ಯೆಗೀಡಾದ ಒಂಬತ್ತು ಸೆಲೇಶಿಯನ್ ಧರ್ಮಗುರುಗಳನ್ನು ಜೂನ್ 6ರಂದು ಕ್ರಕೋವ್‌ನಲ್ಲಿರುವ ಪವಿತ್ರ ದ್ವಿತೀಯ ಜಾನ್ ಪಾಲ್ ರವರ ದೇವಾಲಯದಲ್ಲಿ ಧನ್ಯರಾಗಿ ಘೋಷಿಸಲಾಗುವುದು. ಭವಿಷ್ಯದ ಜಗದ್ಗುರುಗಳಾಗಿದ್ದ ಯುವ ಕರೋಲ್ ವೊಯ್ಟಿಲಾ ರವರು ಈ ಭವಿಷ್ಯದ ಹುತಾತ್ಮರಲ್ಲಿ ಕೆಲವರ ಬಂಧನಕ್ಕೆ ಸಾಕ್ಷಿಯಾಗಿದ್ದರು. ಅವರ ಅಚಲ ನಂಬಿಕೆ ಮತ್ತು ಯಾಜಕ ಸೇವೆಯ ನಿಷ್ಠೆಯ ಸಾಕ್ಷ್ಯವು, ಜಗದ್ಗುರು ಜಾನ್ ಪಾಲ್ ರವರ ಸ್ವಂತ ದೈವಿಕ ಕರೆಯ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸಿರಬಹುದೆಂದು ನಂಬಲಾಗಿದೆ.

ವ್ಯಾಟಿಕನ್ ವರದಿ

ಈ ಒಂಬತ್ತು ಸೆಲೇಶಿಯನ್ ಧರ್ಮಗುರುಗಳು ಯಾಜಕ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಎರಡನೇ ಮಹಾಯುದ್ಧ ಆರಂಭವಾದಾಗ, ಅವರು ಕೇವಲ ಕಥೋಲಿಕ ಯಾಜಕರಾಗಿದ್ದ ಕಾರಣಕ್ಕಾಗಿ ಜರ್ಮನ್ ನಾಜಿಗಳಿಂದ ಬಂಧಿಸಲ್ಪಟ್ಟರು. ಅವರು ಯಾವುದೇ ರಾಜಕೀಯ ಅಥವಾ ಸೈನಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಆದಾಗ್ಯೂ, ನಾಜಿ ಆಡಳಿತವು ಅವರ ಧಾರ್ಮಿಕ ಸೇವೆಯನ್ನು ತನ್ನ ಸಿದ್ಧಾಂತಕ್ಕೆ ಬೆದರಿಕೆಯಾಗಿ ಪರಿಗಣಿಸಿತು.

ಕಾನ್ಸಂಟ್ರೇಶನ್ ಶಿಬಿರಗಳಲ್ಲಿಯೂ ಈ ಭವಿಷ್ಯದ ಧನ್ಯರು ತಮ್ಮ ಯಾಜಕ ಕರೆಯತ್ತ ಅಚಲ ನಿಷ್ಠೆಯನ್ನು ಉಳಿಸಿಕೊಂಡರು. ಹಸಿವು, ಅವಮಾನ ಮತ್ತು ಚಿತ್ರಹಿಂಸೆಗಳ ನಡುವೆಯೂ ಅವರು ಸಹ ಕೈದಿಗಳಿಗೆ ಧೈರ್ಯ ತುಂಬಿದರು, ಪ್ರಾರ್ಥನೆಯಲ್ಲಿ ನಿರತರಾದರು ಮತ್ತು ತಮ್ಮ ನಂಬಿಕೆಗೆ ಸಾಕ್ಷಿಯಾದರು. ಧರ್ಮ ಸಭೆ ಅವರ ಹುತಾತ್ಮ ಮರಣವನ್ನು ಒಡಿಯುಮ್ ಫಿದೇಯಿ —ಅಂದರೆ ನಂಬಿಕೆಯ ಮೇಲಿನ ದ್ವೇಷದಿಂದ ಉಂಟಾದ ಮರಣ  ಎಂದು ಅಧಿಕೃತವಾಗಿ ಮಾನ್ಯತೆ ನೀಡಿದೆ.

"ಈ ಧನ್ಯಪದವಿ ಘೋಷಣೆಯು ಹಿಂಸೆ, ಭಯ ಮತ್ತು ಮರಣಕ್ಕಿಂತಲೂ ಶಕ್ತಿಶಾಲಿಯಾಗಿದ್ದ ಅವರ ದೇವಭಕ್ತಿಯ ಸಾರ್ವಜನಿಕ ಗೌರವವಾಗಿದೆ. ಸರ್ವಾಧಿಕಾರಿ ದ್ವೇಷದ ನಡುವೆಯೂ ಅವರು ಕ್ರಿಸ್ತನಿಗೆ, ಧರ್ಮ ಸಭೆಗೆ ಮತ್ತು ತಮ್ಮ ಸೆಲೇಶಿಯನ್ ಧಾರ್ಮಿಕ ಕರೆಗೆ ಕೊನೆಯ ಕ್ಷಣದವರೆಗೂ ನಿಷ್ಠರಾಗಿದ್ದರು" ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಈ ಧನ್ಯಪದವಿ ಘೋಷಣೆ ಕ್ರಕೋವ್‌ನ ಪವಿತ್ರ ದ್ವಿತೀಯ ಜಾನ್ ಪಾಲ್ ರವರ ದೇವಾಲಯದಲ್ಲಿ ನಡೆಯಲಿದ್ದು, ಈ ಸ್ಥಳವು ವಿಶೇಷ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಯುದ್ಧದ ಸಮಯದಲ್ಲಿ ಕ್ರಕೋವ್‌ನ ಡೆಬ್ನಿಕಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವ ಕರೋಲ್ ವೊಯ್ಟಿಲಾ (ನಂತರದ ಜಗದ್ಗುರು ದ್ವಿತೀಯ ಜಾನ್ ಪಾಲ್ ) ರವರು ಈ ಒಂಬತ್ತು ಸೆಲೇಶಿಯನ್ನರಲ್ಲಿ ಆರು ಮಂದಿಯ ಬಂಧನವನ್ನು ಸ್ವತಃ ನೋಡಿದ್ದರು. ನಂತರ ಅವರನ್ನು ಡಚೌ ಕಾನ್ಸಂಟ್ರೇಶನ್ ಶಿಬಿರಕ್ಕೆ ಕಳುಹಿಸಲಾಯಿತು. ಈ ಘಟನೆ ಭವಿಷ್ಯದ ಜಗದ್ಗುರುಗಳ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದು, ಅವರ ಯಾಜಕ ಕರೆಯ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿತು. "ಪವಿತ್ರ ದ್ವಿತೀಯ ಜಾನ್ ಪಾಲ್ ರವರ ಯಾಜಕ ಕರೆಯು ಈ ಹುತಾತ್ಮರ ಸಾಕ್ಷ್ಯದಿಂದಲೂ ರೂಪುಗೊಂಡಿತು ಎಂದು ನಾನು ದೃಢವಾಗಿ ನಂಬುತ್ತೇನೆ" ಎಂದು ಕ್ರಕೋವ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ಗ್ರೆಗೊರ್ಜ್ ರಿಶ್ ರವರು ಹೇಳಿದ್ದಾರೆ.

ಈ ಧನ್ಯಪದವಿ ಸಮಾರಂಭವು ಕೇವಲ ನಂಬಿಕೆಯ ವೀರರನ್ನು ಸ್ಮರಿಸುವ ಕಾರ್ಯಕ್ರಮವಾಗಿರದೆ, ಹೊಸ ಯಾಜಕ ಮತ್ತು ಧಾರ್ಮಿಕ ಕರೆಗಳಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಲಿ ಎಂದು ಕಾರ್ಡಿನಲ್ ರಿಶ್ ಆಶಿಸಿದ್ದಾರೆ. "ಇಂದಿನ ಜಗತ್ತಿಗೆ ಇಂತಹ ಕರೆಗಳ ಅಗತ್ಯ ಬಹಳ ಇದೆ. ಈ ಒಂಬತ್ತು ಹುತಾತ್ಮರ ಸಾಕ್ಷ್ಯವು ಇನ್ನೂ ಅನೇಕರನ್ನು ಅವರ ಹೆಜ್ಜೆಗುರುತುಗಳನ್ನು ಅನುಸರಿಸಲು ಪ್ರೇರೇಪಿಸಲಿ" ಎಂದು ಅವರು ಹೇಳಿದ್ದಾರೆ.

ವಂ. ಸ್ವಾಮಿ ಜಾನ್ ಶ್ವಿಯೆರ್ಕ್, ಫಾ. ಇಗ್ನಾಸಿ ಆಂಟೊನೋವಿಚ್, ವಂ. ಸ್ವಾಮಿ ಕರೋಲ್ ಗೋಲ್ಡಾ, ವಂ.ಸ್ವಾಮಿ ವ್ಲೊಡ್ಜಿಮಿಯೆರ್ಜ್ ಶೆಂಬೆಕ್, ವಂ.ಸ್ವಾಮಿ ಫ್ರಾನ್ಸಿಸ್ಜೆಕ್ ಹರಾಜಿಮ್, ಫಾ. ಲುಡ್ವಿಕ್ ಮ್ರೊಚೆಕ್, ಫಾ. ಇಗ್ನಾಸಿ ಡೋಬಿಯಾಶ್, ವಂ. ಸ್ವಾಮಿ ಕಾಜಿಮಿಯೆರ್ಜ್ ವೊಯ್ಚೆಖೋವ್ಸ್ಕಿ ಮತ್ತು ವಂ.ಸ್ವಾಮಿ ಫ್ರಾನ್ಸಿಸ್ಜೆಕ್ ಮಿಶ್ಕಾ ರವರು 1941 ಮತ್ತು 1942ರ ನಡುವೆ ಆಸ್ವಿಟ್ಜ್ ಮತ್ತು ಡಚೌ ನಾಜಿ ಕಾನ್ಸಂಟ್ರೇಶನ್ ಶಿಬಿರಗಳಲ್ಲಿ ಹುತಾತ್ಮರಾದರು. 2025ರ ಅಕ್ಟೋಬರ್ 24ರಂದು ಜಗದ್ಗುರು XIVನೇ ಲಿಯೋರವರು  ಅವರ ಹುತಾತ್ಮ ಮರಣವನ್ನು ಅಧಿಕೃತವಾಗಿ ಮಾನ್ಯತೆ ನೀಡುವ ಆದೇಶಕ್ಕೆ ಅನುಮೋದನೆ ನೀಡಿದರು. ಈ ಧನ್ಯಪದವಿ ಘೋಷಣೆಯು ಎರಡನೇ ಮಹಾಯುದ್ಧದ ಹುತಾತ್ಮರಿಗೆ ಗೌರವ ಸಲ್ಲಿಸುವುದರ ಜೊತೆಗೆ, ನಂಬಿಕೆ ಮತ್ತು ದೈವಿಕ ಕರೆಯ ನಿಷ್ಠೆಯು ಮುಂದಿನ ಪೀಳಿಗೆಯ ಕ್ರೈಸ್ತರಿಗೂ ಭರವಸೆಯ ದೀಪವಾಗಿರಬಹುದು ಎಂಬ ಸಂದೇಶವನ್ನು ಸಾರಲಿದೆ.

05 ಜೂನ್ 2026, 15:05