"ಆರೋಗ್ಯ ದತ್ತಾಂಶ: ಸಂಶೋಧನೆಯಲ್ಲಿ ನೈತಿಕತೆ ಮತ್ತು ಸಮಾನತೆಗೆ ಆದ್ಯತೆ".
ವ್ಯಾಟಿಕನ್ ವರದಿ
"ವೈದ್ಯಕೀಯ ಕ್ಷೇತ್ರದಲ್ಲಿ ಆರೋಗ್ಯ ದತ್ತಾಂಶ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಹೆಚ್ಚುತ್ತಿರುವ ಪಾತ್ರವು ಜಾಗತಿಕ ಮಟ್ಟದಲ್ಲಿ ಆಳವಾದ ಚಿಂತನೆ ಮತ್ತು ಸಹಕಾರವನ್ನು ಅಗತ್ಯವಾಗಿಸುವ ಮಹತ್ವದ ನೈತಿಕ ಪ್ರಶ್ನೆಗಳನ್ನು ಎತ್ತಿಹಿಡಿಯುತ್ತದೆ. ಜೈವವೈದ್ಯಕೀಯ ಸಂಶೋಧನೆ ಮತ್ತು ಆರೋಗ್ಯ ಸೇವೆಯಲ್ಲಿ ಹೆಚ್ಚು ಸಮಾನತೆ ಮತ್ತು ನ್ಯಾಯಯುತವಾದ ದೃಷ್ಟಿಕೋನವನ್ನು ಉತ್ತೇಜಿಸಲು ಈ ಸಭೆಯು ಒಂದು ಮಹತ್ವದ ಅವಕಾಶವನ್ನು ಒದಗಿಸಿತು."
ಈ ಮಾತುಗಳನ್ನು ವ್ಯಾಟಿಕನ್‌ನಲ್ಲಿರುವ ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಅಧ್ಯಕ್ಷರಾದ ಆರ್ಚ್‌ಬಿಷಪ್ ರೆನ್ಜೊ ಪೆಗೊರಾರೊ ರವರು ಹೇಳಿದರು. ಆರೋಗ್ಯ ದತ್ತಾಂಶದ ಆಡಳಿತಕ್ಕೆ ಸಂಬಂಧಿಸಿದ ತೈಪೆ ಘೋಷಣೆಯ ಪರಿಷ್ಕರಣೆ ಕುರಿತು ನಡೆದ ಮೂರನೇ ತಜ್ಞರ ಸಭೆಯು 2026ರ ಜೂನ್ 1 ಮತ್ತು 2ರಂದು ವ್ಯಾಟಿಕನ್ ನಗರದ ಸಂತ Xನೇ ಪಿಯಸ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಯನ್ನು ವಿಶ್ವ ವೈದ್ಯಕೀಯ ಸಂಘಟನೆ , ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಹಾಗೂ ಇಸ್ರೇಲ್ ವೈದ್ಯಕೀಯ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ರೋಗಿಗಳ ದತ್ತಾಂಶದ ಸಂಗ್ರಹಣೆ ಮತ್ತು ಬಳಕೆಯಲ್ಲಿ ನ್ಯಾಯಸಮ್ಮತತೆ
ಸಭೆಯ ಅಂತಿಮ ಪ್ರಕಟಣೆಯ ಪ್ರಕಾರ, ವೈದ್ಯಕೀಯ, ಜೈವನೈತಿಕತೆ, ಕಾನೂನು, ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಆಡಳಿತ ಕ್ಷೇತ್ರಗಳ ಅಂತರರಾಷ್ಟ್ರೀಯ ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಆರೋಗ್ಯ ದತ್ತಾಂಶ ಮತ್ತು ಜೈವಿಕ ಮಾದರಿಗಳ ಸಂಗ್ರಹಣೆ, ಸಂರಕ್ಷಣೆ, ಪ್ರವೇಶ ಮತ್ತು ಬಳಕೆಯಲ್ಲಿ ನ್ಯಾಯಸಮ್ಮತತೆಯನ್ನು ಖಚಿತಪಡಿಸುವ ಕುರಿತು ಚರ್ಚೆಗಳು ನಡೆದವು.
ಸಂಶೋಧನೆಗಳಲ್ಲಿ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಡಿಮೆ ಪ್ರತಿನಿಧಿತ್ವ, ಸಂಶೋಧನೆಯ ಫಲಾನುಭವಗಳ ಸಮಾನ ಹಂಚಿಕೆ, ನೈತಿಕ ನಿರ್ಧಾರ ಪ್ರಕ್ರಿಯೆಯಲ್ಲಿ ಎಲ್ಲರ ಅರ್ಥಪೂರ್ಣ ಪಾಲ್ಗೊಳ್ಳುವಿಕೆ ಹಾಗೂ ನ್ಯಾಯ ಮತ್ತು ಜಾಗತಿಕ ಐಕ್ಯತೆಯನ್ನು ಉತ್ತೇಜಿಸುವ ಆಡಳಿತ ವ್ಯವಸ್ಥೆಗಳ ಬಗ್ಗೆ ಭಾಗವಹಿಸಿದವರು ಚರ್ಚಿಸಿದರು.
ನೈತಿಕತೆ ಮತ್ತು ಸಮಾನತೆಯ ಆಧಾರದ ಮೇಲೆ ವೈದ್ಯಕೀಯ ನವೋದ್ಯಮ
ಸಭೆಯನ್ನು ಉದ್ಘಾಟಿಸಿದ ವಿಶ್ವ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ. ಜಾಕ್ವೆಲಿನ್ ಕಿಟುಲು, ವೈದ್ಯಕೀಯ ನವೀನತೆ ಸದಾ ನೈತಿಕತೆ ಮತ್ತು ಸಮಾನತೆಯ ತಳಹದಿಯ ಮೇಲೆಯೇ ಮುಂದುವರಿಯಬೇಕೆಂದು ಒತ್ತಿಹೇಳಿದರು.
"ಆರೋಗ್ಯ ದತ್ತಾಂಶ ಮತ್ತು ಜೈವಿಕ ಬ್ಯಾಂಕ್‌ಗಳ ಸಂಶೋಧನೆಗಳು ಆರೋಗ್ಯ ಸೇವೆ ಮತ್ತು ವೈಜ್ಞಾನಿಕ ಜ್ಞಾನವನ್ನು ವಿಶ್ವದಾದ್ಯಂತ ಸುಧಾರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಆದರೆ ವೈಜ್ಞಾನಿಕ ಪ್ರಗತಿಯು ನೈತಿಕ ಹೊಣೆಗಾರಿಕೆ, ಅರ್ಥಪೂರ್ಣ ಒಳಗೊಳ್ಳುವಿಕೆ ಮತ್ತು ಸಂಶೋಧನೆಯ ಫಲಿತಾಂಶಗಳ ನ್ಯಾಯಯುತ ಹಂಚಿಕೆಯೊಂದಿಗೆ ಕೈಜೋಡಿಸಬೇಕು. ಆಗ ಮಾತ್ರ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅದರ ಲಾಭ ದೊರೆಯುತ್ತದೆ" ಎಂದು ಅವರು ಹೇಳಿದರು.
ತೈಪೆ ಘೋಷಣೆ
ವಿಶ್ವ ವೈದ್ಯಕೀಯ ಸಂಘವು 2002ರಲ್ಲಿ ಅಂಗೀಕರಿಸಿ, 2016ರಲ್ಲಿ ಪರಿಷ್ಕರಿಸಿದ ತೈಪೆ ಘೋಷಣೆ ಆರೋಗ್ಯ ದತ್ತಾಂಶ ಸಂಗ್ರಹಗಳು ಮತ್ತು ಜೈವಿಕ ಬ್ಯಾಂಕ್‌ಗಳ ಬಳಕೆಗೆ ಸಂಬಂಧಿಸಿದ ನೈತಿಕ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
ಕೃತಕ ಬುದ್ಧಿಮತ್ತೆ, ಜೀನೋಮಿಕ್ಸ್, ದತ್ತಾಂಶ ಆಧಾರಿತ ವೈದ್ಯಕೀಯ ಹಾಗೂ ದೇಶಾಂತರ ದತ್ತಾಂಶ ಹಂಚಿಕೆಯಂತಹ ತಂತ್ರಜ್ಞಾನಗಳು ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸಂಶೋಧನೆಯ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿರುವ ಹಿನ್ನೆಲೆಯಲ್ಲಿ, ಇಂದಿನ ಜಾಗತಿಕ ವಾಸ್ತವತೆಗಳು ಮತ್ತು ಹೊಸ ನೈತಿಕ ಸವಾಲುಗಳಿಗೆ ಹೊಂದಿಕೊಳ್ಳುವಂತೆ ಈ ಘೋಷಣೆಯನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ವಿಶ್ವ ವೈದ್ಯಕೀಯ ಸಂಘ ಆರಂಭಿಸಿದೆ.
ಅಂತರರಾಷ್ಟ್ರೀಯ ಸಹಕಾರದ ಮೂಲಕ ರೋಗಿಗಳ ಸೇವೆ
ಈ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ನಡೆಯುತ್ತಿರುವ ಮುಕ್ತ ತಜ್ಞರ ಸಮಾಲೋಚನೆಗಳಲ್ಲಿ ವ್ಯಾಟಿಕನ್ ಸಭೆಯು ಮೂರನೆಯದಾಗಿತ್ತು. ಮೊದಲ ಸಭೆಯು 2025ರ ಡಿಸೆಂಬರ್‌ನಲ್ಲಿ ತೈವಾನ್‌ನ ತೈಪೆಯಲ್ಲಿ ಮತ್ತು ಎರಡನೆಯದು 2026ರ ಮಾರ್ಚ್‌ನಲ್ಲಿ ಬ್ರೆಜಿಲ್‌ನ ಸಾಂ ಪೌಲೊದಲ್ಲಿ ನಡೆದಿತ್ತು.
"ಜಗತ್ತಿನ ವಿವಿಧ ಭಾಗಗಳ ವೈದ್ಯರ ಸಹಯೋಗವು ಸಂಘರ್ಷಗಳಿಂದ ಕೂಡಿದ ಕಾಲದಲ್ಲಿಯೂ ಮಾನವಕುಲವು ರೋಗಿಗಳ ಆರೋಗ್ಯ ಮತ್ತು ಹಿತಕ್ಕಾಗಿ ಒಂದಾಗಬಹುದು ಎಂಬುದನ್ನು ತೋರಿಸುತ್ತದೆ. ಈ ಸಹಕಾರದ ಮನೋಭಾವವು ಪರಸ್ಪರ ತಿಳುವಳಿಕೆ ಮತ್ತು ಶಾಂತಿಯನ್ನು ಮತ್ತಷ್ಟು ಬಲಪಡಿಸಲಿ ಎಂಬುದು ನಮ್ಮ ಆಶಯ" ಎಂದು ಜಂಟಿ ಪ್ರಕಟಣೆ ತನ್ನ ಸಮಾರೋಪದಲ್ಲಿ ತಿಳಿಸಿದೆ.