ಸ್ಪೇನಿನಲ್ಲಿ ಜಗದ್ಗುರು XIVನೇ ಲಿಯೋರವರು: ಮ್ಯಾಡ್ರಿಡ್‌ನಲ್ಲಿ ಅಭೂತಪೂರ್ವ ಜನಸ್ಪಂದನೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರ ಸ್ಪೇನಿನ ಭೇಟಿಯ ಮೊದಲ ಚಿತ್ರಣವೆಂದರೆ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಮ್ಯಾಡ್ರಿಡ್ ನಗರ. ಕುಟುಂಬಗಳು, ಯುವಜನರು, ವಯೋವೃದ್ಧರು, ಧಾರ್ಮಿಕ ಜೀವನಕ್ಕೆ ಸಮರ್ಪಿತರಾದ ಪುರುಷರು ಮತ್ತು ಮಹಿಳೆಯರು, ಕುತೂಹಲದಿಂದ ಬಂದವರು ಎಲ್ಲರೂ ಒಂದಾಗಿ ಸೇರಿದ್ದರು.
ಹಲವಾರು ದಿನಗಳ ಕಾಲ ನಗರದ ಚೌಕಗಳು, ಬೀದಿಗಳು, ಕ್ರೀಡಾಂಗಣಗಳು ಮತ್ತು ಸಭಾಂಗಣಗಳು ಜಗದ್ಗುರುಗಳ ಹಾಗೂ ಸ್ಪ್ಯಾನಿಷ್ ಧ್ವಜಗಳಿಂದ ಕಂಗೊಳಿಸುತ್ತಿದ್ದವು. ಶಾಂತಿ, ಏಕತೆ ಮತ್ತು ಸೌಹಾರ್ದತೆಯ ಸಂದೇಶಗಳು ಎಲ್ಲೆಡೆ ಪ್ರತಿಧ್ವನಿಸುತ್ತಿದ್ದವು. ವಿಶ್ವಾಸಿಗಳನ್ನು ಅವರ ನಂಬಿಕೆಯಲ್ಲಿ ಬಲಪಡಿಸಲು ಬಂದಿದ್ದ ಸಂತ ಪೇತ್ರರ ಉತ್ತರಾಧಿಕಾರಿಯ ಮೇಲಿನ ಪ್ರೀತಿ ಮತ್ತು ಗೌರವವು ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.
ಸಮಾವೇಶಗಳಲ್ಲಿ ಭಾಗವಹಿಸಿದ್ದ ಜನರು ಶಿಸ್ತಿನಿಂದ ಹಾಗೂ ಆಳವಾದ ಮನಸ್ಸಿನೊಂದಿಗೆ ಉಪಸ್ಥಿತರಿದ್ದರು. ಅವರು ಪ್ರಾರ್ಥಿಸುತ್ತಿದ್ದರು, ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದರು. ವಿಶೇಷವಾಗಿ ಸಂಸತ್ತಿನಲ್ಲಿ ಜಗದ್ಗುರುಗಳ ಭಾಷಣದ ನಂತರ ಏಳು ನಿಮಿಷಗಳ ಕಾಲ ನಿರಂತರವಾಗಿ ಮೊಳಗಿದ ಹರ್ಷೋದ್ಗಾರ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
ರಾಜ್ಯದ ಸಂಸ್ಥೆಗಳ ಮುಂದೆ ಮಾತನಾಡಿದ ಜಗದ್ಗುರುಗಳು, ನಿಜವಾದ ಪ್ರಜಾಸತ್ತಾತ್ಮಕ ಸಹಬಾಳ್ವೆಯು ಪ್ರತಿಯೊಬ್ಬ ಮಾನವ ಜೀವದ ರಕ್ಷಣೆ, ಅತ್ಯಂತ ದುರ್ಬಲರ ಬೆಂಬಲ, ಅಂತಃಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆ ಹಾಗೂ ಯುದ್ಧ ಮತ್ತು ಹಿಂಸೆಯ ಸಂಪೂರ್ಣ ನಿರಾಕರಣೆಯಿಂದ ಬೇರ್ಪಡಿಸಲಾಗದು ಎಂದು ಪುನರುಚ್ಚರಿಸಿದರು. ಮರೆಯಲ್ಪಡುವ ಅಪಾಯದಲ್ಲಿರುವ ಜನರನ್ನು ಹೇಗೆ ರಕ್ಷಿಸುತ್ತದೆ ಎಂಬುದರ ಆಧಾರದ ಮೇಲೆಯೇ ಒಂದು ಸಮಾಜದ ನ್ಯಾಯಸಮ್ಮತತೆಯನ್ನು ಅಳೆಯಬೇಕು ಎಂದು ಅವರು ಹೇಳಿದರು.
ಸ್ಪೇನಿನ ಈ ಮೊದಲ ಭೇಟಿಯಿಂದ ಹೊರಹೊಮ್ಮಿದ ಚಿತ್ರಣವು ಕೇವಲ ಅನೇಕ ವರ್ಷಗಳ ನಂತರ ಒಬ್ಬ ಜಗದ್ಗುರುಗಳನ್ನು ಸ್ವಾಗತಿಸಿದ ಉತ್ಸಾಹದ ಚಿತ್ರಣವಲ್ಲ,ಬದಲಾಗಿ ಒಳ್ಳೆಯದು ಮತ್ತು ಸುಂದರವಾದುದನ್ನು ದೃಢವಾಗಿ ಅಂಗೀಕರಿಸುವ ಜೀವಂತ ಅಂತಃಕರಣದ ಪ್ರಾಮಾಣಿಕ ಪ್ರತಿಕ್ರಿಯೆಯಾಗಿದೆ. ಪ್ರಾದೇಶಿಕ ಪ್ರತ್ಯೇಕತಾವಾದ, ರಾಜಕೀಯ ಉದ್ವಿಗ್ನತೆ, ಧ್ರುವೀಕರಣ ಮತ್ತು ಜಾತ್ಯತೀತತೆಯ ಪ್ರಭಾವಗಳಿಂದ ಗುರುತಿಸಲ್ಪಟ್ಟ ಈ ದೇಶವು ತನ್ನ ಆಳವಾದ ಬೇರು—ನಂಬಿಕೆಯನ್ನು—ಮತ್ತೊಮ್ಮೆ ಅನಾವರಣಗೊಳಿಸಿತು.
ಅನೇಕ ವೀಕ್ಷಕರ ಅಭಿಪ್ರಾಯದಂತೆ, ಸ್ಪೇನಿನ ಅನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯಿಸಿ, ಕ್ರಿಸ್ತನಿಗೆ ತನ್ನ “ಹೌದು” ಎಂಬ ಉತ್ತರವನ್ನು ನವೀಕರಿಸಿತು. ಪ್ರತಿಯೊಂದು ಕಾರ್ಯಕ್ರಮ, ಪ್ರಾರ್ಥನಾ ಸಭೆ ಮತ್ತು ಸಮಾಗಮದಲ್ಲೂ ಜನರು ಒಂದಾಗಿ ಸೇರಿ, ಸಾಮಾನ್ಯ ಭಾಷೆ, ಹಂಚಿಕೊಂಡ ನಂಬಿಕೆ ಮತ್ತು ಶಾಶ್ವತತೆಯ ಅರಿವನ್ನು ಬಲಪಡಿಸಿದರು. ಜಗದ್ಗುರುಗಳು, ದೌರ್ಜನ್ಯಗಳ ನೋವಿನಿಂದ ಗಾಯಗೊಂಡವರ ದುಃಖವನ್ನು ತಮ್ಮದಾಗಿಸಿಕೊಂಡು, ವೈವಿಧ್ಯತೆಯ ನಡುವೆಯೂ ಏಕತೆಯ ಮಾದರಿಯಾಗಲು ಸ್ಥಳೀಯ ಧರ್ಮ ಸಭೆಗೆ ಕರೆ ನೀಡಿದರು.
ಅವರು ಕಾಲ್ಪನಿಕ ಅಥವಾ ಭೂತಕಾಲದ ವೈಭವದಲ್ಲಿ ಜೀವಿಸುವ ಸ್ಪೇನಿನೊಂದಿಗೆ ಮಾತನಾಡಲಿಲ್ಲ. ಬದಲಾಗಿ, ಸುವಾರ್ತೆಯ ಸಂತೋಷವನ್ನು, ಪ್ರೀತಿಯ ಶಕ್ತಿಯನ್ನು ಮತ್ತು ಇಂದಿನ ಜಗತ್ತಿನಲ್ಲಿ ಕ್ರಿಸ್ತನನ್ನು ಅನುಸರಿಸುವ ಮೂಲಭೂತ ಬದ್ಧತೆಯನ್ನು ಮರುಶೋಧಿಸುವಂತೆ ಜನರನ್ನು ಉತ್ತೇಜಿಸಿದರು. ಸಹೋದರತ್ವ, ಒಳಗೊಳ್ಳುವಿಕೆ, ಸಹಕಾರ, ಆತಿಥ್ಯ, ಮಾನವೀಯತೆ ಮತ್ತು ಶಾಂತಿಯ ಮೇಲೆ ನಿರ್ಮಿತವಾದ ಹೊಸ ಜಗತ್ತನ್ನು ಕಟ್ಟುವಂತೆ ಅವರು ಆಹ್ವಾನಿಸಿದರು.
“ಅಲ್ಸಾದ್ ಲಾ ಮಿರಾದಾ” (ನಿಮ್ಮ ದೃಷ್ಟಿಯನ್ನು ಮೇಲಕ್ಕೆ ಎತ್ತಿರಿ) ಎಂಬ ಈ ಪ್ರವಾಸದ ಧ್ಯೇಯವಾಕ್ಯದಂತೆ, ಜಗದ್ಗುರು XIVನೇ ಲಿಯೋರವರು ಸ್ಪೇನಿಗೆ ಮಾತ್ರವಲ್ಲ, ಯುರೋಪ್ ಮತ್ತು ಇಡೀ ಜಗತ್ತಿಗೆ ಹೊಸ ದೃಷ್ಟಿಕೋನವನ್ನು ನೀಡಿದರು. ಸತ್ಯದ ಆಧಾರದ ಮೇಲೆ ದೇಶಗಳನ್ನು ಮತ್ತು ಮಾನವಕುಲವನ್ನು ನವೀಕರಿಸುವ ಶಕ್ತಿಯುಳ್ಳ ಆ ದೃಷ್ಟಿಯತ್ತ ಅವರು ಜನರನ್ನು ಕರೆದೊಯ್ದರು.
ಈ ಮನೋಭಾವದಲ್ಲಿಯೇ ಅವರು ಕ್ರಿಸ್ತನಲ್ಲಿ ಸ್ನೇಹದ ಬೀಜವನ್ನು ಬಿತ್ತುವ ನಿಜವಾದ ಸವಾಲನ್ನು ಮುಂದಿಟ್ಟರು. ಕ್ರಿಸ್ತನನ್ನು ಸ್ವೀಕರಿಸುವ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಪರಿವರ್ತಿಸುವ ಶಕ್ತಿ ಆ ಸ್ನೇಹಕ್ಕಿದೆ ಎಂದು ಅವರು ಹೇಳಿದರು. ಈ ರೀತಿಯಾಗಿ ಸ್ವಾರ್ಥ, ಶೋಷಣೆ, ದುಷ್ಟತೆ ಮತ್ತು ದ್ವೇಷದಿಂದ ಜನರನ್ನು ಬಿಡುಗಡೆ ಮಾಡುವ ಸಂಬಂಧಗಳ ಜಾಲ ರೂಪುಗೊಳ್ಳುತ್ತದೆ; ಜೊತೆಗೆ ಮಾನವ ಜೀವನದ ಪ್ರತಿಯೊಂದು ಆಯಾಮವನ್ನು ಸ್ಪರ್ಶಿಸುವ ಸೃಜನಾತ್ಮಕ ಮತ್ತು ಜೀವದಾಯಕ ಪ್ರೀತಿಯ ಶಕ್ತಿಯು ಮುಕ್ತವಾಗುತ್ತದೆ.
ಮ್ಯಾಡ್ರಿಡ್‌ನಲ್ಲಿ ಕ್ರಿಸ್ತನ ಪ್ರತಿನಿಧಿಯಾದ ಜಗದ್ಗುರುಗಳು, ಜಗತ್ತಿನ ಸಾಮಾನ್ಯ ತರ್ಕವನ್ನೇ ತಲೆಕೆಳಗಾಗಿಸಿದರು. ಅವರು ಒಂದು ಪಕ್ಷದ ಗೆಲುವು ಮತ್ತು ಮತ್ತೊಂದು ಪಕ್ಷದ ಸೋಲಿನ ಆಧಾರದ ಮೇಲೆ ಉತ್ತರಗಳನ್ನು ನೀಡಲಿಲ್ಲ. ಬದಲಾಗಿ, ಪ್ರತಿಯೊಬ್ಬ ಮಾನವನ ಹೃದಯದಲ್ಲಿ ನೆಲೆಸಿರುವ ಜೀವನದ ಅರ್ಥದ ಹುಡುಕಾಟಕ್ಕೆ ಮತ್ತೊಮ್ಮೆ ಬಾಗಿಲು ತೆರೆದು, ಜೀವನವನ್ನು ಸಂಪೂರ್ಣವಾಗಿ ಮತ್ತು ಅರ್ಥಪೂರ್ಣವಾಗಿ ಬದುಕುವ ಮಾರ್ಗವನ್ನು ತೋರಿಸಿದರು.