ಹುಡುಕಿ

ದಾರ್ ಎಸ್ ಸಲಾಮ್‌ನಲ್ಲಿ ನಡೆದ ಕ್ಯಾಥೋಲಿಕ್ ಸಿಸ್ಟರ್ಸ್ ಸಮಾವೇಶದಲ್ಲಿ 130 ಕ್ಕೂ ಹೆಚ್ಚು ಧಾರ್ಮಿಕ ಸಹೋದರಿಯರು ಭಾಗವಹಿಸಿದ್ದರು. ದಾರ್ ಎಸ್ ಸಲಾಮ್‌ನಲ್ಲಿ ನಡೆದ ಕ್ಯಾಥೋಲಿಕ್ ಸಿಸ್ಟರ್ಸ್ ಸಮಾವೇಶದಲ್ಲಿ 130 ಕ್ಕೂ ಹೆಚ್ಚು ಧಾರ್ಮಿಕ ಸಹೋದರಿಯರು ಭಾಗವಹಿಸಿದ್ದರು. 

“ಐಕ್ಯತೆ ಮತ್ತು ಆಶಾಭರವಸೆಯೊಂದಿಗೆ ಕೈಜೋಡಿಸಿ ಸಾಗುತ್ತಿರುವ ಕಥೋಲಿಕ ಸನ್ಯಾಸಿನಿಯರು”.

ಕಾನ್ರಾಡ್ ಎನ್. ಹಿಲ್ಟನ್ ಫೌಂಡೇಶನ್ ಆಯೋಜಿಸಿರುವ ‘ಕಥೋಲಿಕ ಕನ್ಯಾಸ್ತ್ರೀಯವರು ಇನಿಷಿಯೇಟಿವ್ ಕನ್ವೀನಿಂಗ್’ ಕಾರ್ಯಕ್ರಮದಲ್ಲಿ ಭಾಗವಹಿಸಲು, ಜಗತ್ತಿನ ವಿವಿಧ ಭಾಗಗಳಿಂದ ಬಂದ 130ಕ್ಕೂ ಹೆಚ್ಚು ಕಥೋಲಿಕ ಸನ್ಯಾಸಿನಿಯರು ಟಾಂಜಾನಿಯಾದ ದಾರ್ ಎಸ್ ಸಲಾಂನಲ್ಲಿ ಸೇರಿದ್ದಾರೆ.

ವ್ಯಾಟಿಕನ್ ವರದಿ

ಟಾಂಜಾನಿಯಾದ ದಾರ್ ಎಸ್ ಸಲಾಂನಲ್ಲಿ ಜೂನ್ 10ರಿಂದ 12ರವರೆಗೆ ನಡೆದ ಕಥೋಲಿಕ ಸಿಸ್ಟರ್ಸ್ ಇನಿಷಿಯೇಟಿವ್ ಕನ್ವೀನಿಂಗ್ 2026 ಸಭೆಯಲ್ಲಿ, ವಿಶ್ವದ 23 ದೇಶಗಳಿಂದ ಆಗಮಿಸಿದ 130ಕ್ಕೂ ಹೆಚ್ಚು ಕಥೋಲಿಕ ಸನ್ಯಾಸಿನಿಯರು, ಧರ್ಮ ಸಭೆಯ ನಾಯಕರು ಹಾಗೂ ಅಭಿವೃದ್ಧಿ ಸಹಭಾಗಿಗಳು ಭಾಗವಹಿಸಿದರು. “ಐಕ್ಯತೆ ಮತ್ತು ಭರವಸೆಯೊಂದಿಗೆ ಜೊತೆಯಾಗಿ ಸಾಗೋಣ. ಸಮುದಾಯಗಳನ್ನು ಬಲಪಡಿಸಿ, ಸಾಮಾನ್ಯ ಹಿತಕ್ಕಾಗಿ ಒಗ್ಗಟ್ಟಿನ ಪರಿಣಾಮವನ್ನು ಬೆಳೆಸೋಣ” ಎಂಬ ಧ್ಯೇಯದಡಿ ಈ ಸಭೆ ನಡೆಯಿತು.

ಕಾನ್ರಾಡ್ ಎನ್. ಹಿಲ್ಟನ್ ಫೌಂಡೇಶನ್‌ನ ಕಥೋಲಿಕ ಸಿಸ್ಟರ್ಸ್ ಇನಿಷಿಯೇಟಿವ್ ಮುಖ್ಯಸ್ಥೆ ಸಿಸ್ಟರ್ ಜೇನ್ ವಕಾಹಿಯುರವರು, ಸನ್ಯಾಸಿನಿಯರು ಪರಸ್ಪರರ ಅನುಭವಗಳು, ಸವಾಲುಗಳು, ಸಾಧನೆಗಳು ಮತ್ತು ಹೊಸ ಪ್ರಯತ್ನಗಳಿಂದ ಕಲಿಯಬೇಕು ಎಂದು ಕರೆ ನೀಡಿದರು. ಫೌಂಡೇಶನ್ ಬೆಂಬಲಿತ ಕಾರ್ಯಕ್ರಮಗಳ ಮೂಲಕ 2.5 ಕೋಟಿಗೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯ ಪ್ರಮುಖ ಭಾಷಣಕಾರರಾಗಿದ್ದ ಫಾ. ಹಾನ್ಸ್ ಝೋಲ್ನರ್, ಧರ್ಮ ಸಭೆಯಲ್ಲಿನ ಸುರಕ್ಷತಾ ಕ್ರಮಗಳ ಕೇಂದ್ರದಲ್ಲಿ ಯೇಸು ಕ್ರಿಸ್ತನೇ ಇರಬೇಕು ಎಂದು ಹೇಳಿದರು. ಮಾನವ ಕಳ್ಳಸಾಗಣೆ, ದೌರ್ಜನ್ಯ ಮತ್ತು ಹಿಂಸೆಯಿಂದ ಬಳಲುವವರೊಂದಿಗೆ ನಿಂತು ಅವರಿಗೆ ಬೆಂಬಲ ನೀಡುವುದು ಕ್ರೈಸ್ತರ ಕರ್ತವ್ಯ ಎಂದು ಅವರು ಒತ್ತಿಹೇಳಿದರು. ಹಿಲ್ಟನ್ ಫೌಂಡೇಶನ್‌ನ ನೆರವಿನಿಂದ ಅನೇಕ ಸನ್ಯಾಸಿನಿಯರು ಮಾನವ ಕಳ್ಳಸಾಗಣೆಯ ಸಂತ್ರಸ್ತರ ರಕ್ಷಣೆ, ಯುವಜನರ ಶಿಕ್ಷಣ, ಮಹಿಳೆಯರ ವೃತ್ತಿಪರ ತರಬೇತಿ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಪ್ರಶಂಸಿಸಿದರು.

ಸುವಾರ್ತಾ ಪ್ರಚಾರ ವಿಭಾಗದ ಕಾರ್ಯದರ್ಶಿ ಆರ್ಚ್‌ಬಿಷಪ್ ಫಾರ್ಚುನೇಟಸ್ ನ್ವಾಚುಕ್ವು ಅವರು, ಮಾನವ ಘನತೆಯ ರಕ್ಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದವರ ಮಾತುಗಳನ್ನು ಆಲಿಸುವುದು ಗುಣಮುಖತೆ, ಹೊಣೆಗಾರಿಕೆ ಮತ್ತು ನ್ಯಾಯದತ್ತ ಸಾಗುವ ಪ್ರಮುಖ ಹೆಜ್ಜೆಗಳಾಗಿವೆ ಎಂದು ಹೇಳಿದರು. ಸುರಕ್ಷತೆಯ ಸಂಸ್ಕೃತಿಯನ್ನು ಬೆಳೆಸುವುದು ಎಂದರೆ ಜನರನ್ನು ಶೋಷಣೆ, ಹಿಂಸೆ ಮತ್ತು ಅನ್ಯಾಯದಿಂದ ರಕ್ಷಿಸುವ ವಾತಾವರಣವನ್ನು ನಿರ್ಮಿಸುವುದಾಗಿದೆ ಎಂದು ಅವರು ತಿಳಿಸಿದರು.

ಪೂರ್ವ ಮತ್ತು ಮಧ್ಯ ಆಫ್ರಿಕಾದ ಮಹಿಳಾ ಧಾರ್ಮಿಕ ಸಂಘಟನೆಗಳು ಹಾಗೂ ಬಿಷಪ್‌ಗಳ ಸಮ್ಮೇಳನಗಳ ಸಹಯೋಗವನ್ನು ಉಲ್ಲೇಖಿಸಿದ ವಂ.ಸ್ವಾಮಿ ಆಂಥನಿ ಮಕುಂಡೆ, ಧರ್ಮ ಸಭೆಯೊಳಗಿನ ಸಹಕಾರ ಮತ್ತು ಸಂವಾದವು ಸಿನೊಡಲ್ ಧರ್ಮ ಸಭೆಯ ಬೆಳವಣಿಗೆಗೆ ಅತ್ಯಗತ್ಯ ಎಂದು ಹೇಳಿದರು. ಬಿಷಪ್‌ಗಳು, ಧರ್ಮಗುರುಗಳು ಮತ್ತು ಸನ್ಯಾಸಿನಿಯರ ನಡುವಿನ ಸಹಭಾಗಿತ್ವವು ಧರ್ಮ ಸಭೆಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಉದ್ಘಾಟನಾ ಪವಿತ್ರ ಬಲಿಪೂಜೆಯಲ್ಲಿ ದಾರ್ ಎಸ್ ಸಲಾಂನ ಆರ್ಚ್‌ಬಿಷಪ್ ಜೂಡ್ ತದ್ದೇಯುಸ್ ರೂವಾಇಚಿ ಅವರು, ಸನ್ಯಾಸಿನಿಯರು ತಮ್ಮ ಆಧ್ಯಾತ್ಮಿಕ ಪರಂಪರೆ ಮತ್ತು ಧರ್ಮಸಮರ್ಪಣೆಯ ಮೌಲ್ಯಗಳಲ್ಲಿ ದೃಢವಾಗಿ ನೆಲೆಸಿ ಸಮಾಜದ ಸವಾಲುಗಳಿಗೆ ಸ್ಪಂದಿಸಬೇಕು ಎಂದು ಪ್ರೋತ್ಸಾಹಿಸಿದರು. ಸಮಾರೋಪದ ಧನ್ಯವಾದ ಬಲಿಯಲ್ಲಿ ಟಾಂಜಾನಿಯಾದ ಪ್ರೇಷಿತರ ರಾಯಭಾರಿ  ಆರ್ಚ್‌ಬಿಷಪ್ ಆಂಜೆಲೊ ಅಕ್ಕತ್ತಿನೊ, ಸ್ವಯಂ ತ್ಯಾಗ, ನಿರಂತರ ಕಲಿಕೆ ಮತ್ತು ಸಹಯೋಗವೇ ಧಾರ್ಮಿಕ ಜೀವನದ ಬಲವೆಂದು ತಿಳಿಸಿದರು. ಸಭೆಯ ಅಂತ್ಯದಲ್ಲಿ ಭಾಗವಹಿಸಿದವರು ಐಕ್ಯತೆಯನ್ನು ವೃದ್ಧಿಸುವುದು, ಸುರಕ್ಷತಾ ಕ್ರಮಗಳನ್ನು ಬಲಪಡಿಸುವುದು ಮತ್ತು ಸಾಮಾನ್ಯ ಹಿತಕ್ಕಾಗಿ ಸಹಯೋಗದ ಸೇವೆಯನ್ನು ಮತ್ತಷ್ಟು ಆಳಗೊಳಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು.

 

13 ಜೂನ್ 2026, 18:25