ಹುಡುಕಿ

ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಕಾರ್ಯನಿರ್ವಹಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕೆಲ್ ಚೆರ್ನಿ. ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಕಾರ್ಯನಿರ್ವಹಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕೆಲ್ ಚೆರ್ನಿ. 

ಕಾರ್ಡಿನಲ್ ಚೆರ್ನಿ: ‘ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್’ ಒಂದು ಆಳವಾದ ಸಿನೋಡಲ್ ದಸ್ತಾವೇಜು.

ಸ್ವಿಟ್ಜರ್ಲೆಂಡ್‌ನ ಬಿಷಪ್‌ಗಳ ಪೂರ್ಣಸಭೆಯ ಸಂದರ್ಭದಲ್ಲಿ ಅವರಿಗೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಕಾರ್ಡಿನಲ್ ಚೆರ್ನಿ ರವರು 25 ಮೇ ಯಂದು ಪ್ರಕಟಗೊಂಡ ಜಗದ್ಗುರುಗಳು ಎನ್‌ಸೈಕ್ಲಿಕಲ್‌ನ ಮಹತ್ವವನ್ನು ಕುರಿತು ಚಿಂತನೆ ಹಂಚಿಕೊಂಡಿದ್ದಾರೆ. ಈ ದಸ್ತಾವೇಜು ನಮ್ಮ ಸಂಸ್ಥಾತ್ಮಕ ರಚನೆಗಳನ್ನು, ನಮ್ಮ ಕಾರ್ಯವಿಧಾನಗಳನ್ನು ಹಾಗೂ ಸುವಾರ್ತಾ ಪ್ರಚಾರದತ್ತ ನಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸಲು ಸವಾಲು ಹಾಕುತ್ತದೆ ಎಂಬ ತಮ್ಮ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಕಾರ್ಯನಿರ್ವಹಿಸುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕೆಲ್ ಚೆರ್ನಿ ರವರು, ಸ್ವಿಟ್ಜರ್ಲೆಂಡ್‌ನ ಬಿಷಪ್‌ಗಳು ಐನ್ಸೀಡ್ಲೆನ್ ಅಬ್ಬೆಯಲ್ಲಿ ತಮ್ಮ ಪೂರ್ಣಸಭೆಗಾಗಿ ಒಟ್ಟುಗೂಡಿದ್ದ ಸಂದರ್ಭದಲ್ಲಿ, ಜೂನ್ 1ರಂದು ಅವರಿಗೆ ಒಂದು ವೀಡಿಯೊ ಸಂದೇಶ ಕಳುಹಿಸಿದರು.

ಕೆನಡಾದ ಈ ಕಾರ್ಡಿನಲ್ ಅವರು ವೈಯಕ್ತಿಕವಾಗಿ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ವ್ಯಾಟಿಕನ್‌ನಲ್ಲಿದ್ದ ಕೆಲವು ಪ್ರಮುಖ ಜವಾಬ್ದಾರಿಗಳ ಕಾರಣದಿಂದ ಅವರು ಪ್ರಯಾಣಿಸಲು ಸಾಧ್ಯವಾಗಲಿಲ್ಲ. ತಮ್ಮ ಸಂದೇಶದ ಆರಂಭದಲ್ಲೇ ಯೇಸುಸಭೆಯ (ಜೆಸ್ಯೂಟ್) ಕಾರ್ಡಿನಲ್ ಚೆರ್ನಿ ರವರು, ಆ ಜವಾಬ್ದಾರಿಗಳು “ಕೃತಕ ಬುದ್ಧಿಮತ್ತೆ ಕುರಿತ ಆಯೋಗದ ಕಾರ್ಯಗಳಿಗೂ, ಹಾಗೆಯೇ ಇತ್ತೀಚೆಗೆ ಪ್ರಕಟಗೊಂಡ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ಎನ್‌ಸೈಕ್ಲಿಕಲ್‌ನ ಅನುಷ್ಠಾನ ಸಂಬಂಧಿತ ಕಾರ್ಯಗಳಿಗೂ ಸಂಬಂಧಿಸಿದ್ದವು” ಎಂದು ವಿವರಿಸಿದರು.

ಸ್ವಿಸ್ ಬಿಷಪ್‌ಗಳಿಗೆ ನೀಡಿದ ತಮ್ಮ ಸಂದೇಶದಲ್ಲಿ ಅವರು ಮೇ 25ರಂದು ಪ್ರಕಟಗೊಂಡ ಜಗದ್ಗುರು XIVನೇ ಲಿಯೋರವರು ಎನ್‌ಸೈಕ್ಲಿಕಲ್‌ನ ಮಹತ್ವದ ಬಗ್ಗೆ ವಿಶೇಷವಾಗಿ ಗಮನಹರಿಸಿದರು. ಜೊತೆಗೆ, ಕೃತಕ ಬುದ್ಧಿಮತ್ತೆ ಸಂಬಂಧಿತ ಕಾರ್ಯಗಳನ್ನು ಸಮನ್ವಯಗೊಳಿಸಲು ಜಗದ್ಗುರುಗಳು ಇತ್ತೀಚೆಗೆ ಸ್ಥಾಪಿಸಿರುವ ಪಾಂಟಿಫಿಕಲ್ ಆಯೋಗದ ಕುರಿತು ಹಾಗೂ ಅದರ ನೇತೃತ್ವವನ್ನು ಈ ಡಿಕಾಸ್ಟರಿಗೆ ವಹಿಸಿರುವ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

“ಒಂದು ಅತ್ಯಂತ ಮುಖ್ಯವಾದ ಪ್ರಶ್ನೆ ನಮ್ಮ ಮುಂದಿದೆ ಈ ಹೊಸ ಆಯೋಗವು ಸ್ಥಳೀಯ ಧರ್ಮ ಸಭೆಗಳೊಂದಿಗೆ ಹೇಗೆ ಸಂವಾದ ನಡೆಸಬಹುದು? ಕೃತಕ ಬುದ್ಧಿಮತ್ತೆಯು ಇಂದು ಎಬ್ಬಿಸುತ್ತಿರುವ ಸವಾಲುಗಳು ಹಾಗೂ ವಿವೇಚನಾ ಪ್ರಕ್ರಿಯೆಗಳನ್ನು ಎದುರಿಸುವಲ್ಲಿ ಅವುಗಳಿಗೆ ಹೇಗೆ ಸಹಕಾರ ಮತ್ತು ಮಾರ್ಗದರ್ಶನ ನೀಡಬಹುದು?”ಎಂದು ಅವರು ಹೇಳಿದರು

ಸಮಕಾಲೀನ ಸವಾಲುಗಳನ್ನು ವಿವೇಚಿಸಲು ನೆರವಾಗುವ ಎನ್‌ಸೈಕ್ಲಿಕಲ್

“ಜಗದ್ಗುರು ಫ್ರಾನ್ಸಿಸ್ ರವರು ನನಗೆ ಕಲಿಸಿದ ಅತ್ಯಂತ ಮಹತ್ವದ ಪಾಠಗಳಲ್ಲಿ ಒಂದು ಎಂದರೆ ‘ವಾಸ್ತವಿಕತೆಯನ್ನು ಹೆದರಬೇಡಿ’,” ಎಂದು ಕಾರ್ಡಿನಲ್ ಚೆರ್ನಿ ಮುಂದುವರಿಸಿದರು. ಕಾಲಕ್ರಮೇಣ ತಾವು ಅರಿತ ಸಂಗತಿ ಏನೆಂದರೆ, “ನನ್ನನ್ನೂ ಒಳಗೊಂಡಂತೆ, ಧರ್ಮ ಸಭೆಯಲ್ಲಿರುವ ಅನೇಕರಿಗೆ ವಾಸ್ತವಿಕತೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಥವಾ ಕೆಲವೊಮ್ಮೆ ವಿವಿಧ ರೀತಿಯಲ್ಲಿ ಅದರಿಂದ ದೂರ ಸರಿಯುವ ಪ್ರಲೋಭನೆ ಎಷ್ಟು ಪ್ರಬಲವಾಗಿರಬಹುದು” ಎಂಬುದು.

ಅವರ ಪ್ರಕಾರ, ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ಪ್ರಕಟಣೆಯ ಉದ್ದೇಶವೇ ವಾಸ್ತವಿಕತೆಯೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವುದಾಗಿದೆ.

“ಧಮ೯ಸಭೆಯ ಸಾಮಾಜಿಕ ಬೋಧನೆಯ ಮಹಾನ್ ಅಡಿಪಾಯಗಳು ಮತ್ತು ತತ್ವಗಳನ್ನು ದೃಢವಾಗಿ ಪುನರುಚ್ಚರಿಸುವ ಮೂಲಕ, ಈ ಎನ್‌ಸೈಕ್ಲಿಕಲ್ ನಮಗೆ ಅನೇಕ ಸವಾಲುಗಳನ್ನು ಗುರುತಿಸಲು, ಅರ್ಥಮಾಡಿಕೊಳ್ಳಲು, ವ್ಯಾಖ್ಯಾನಿಸಲು, ವಿವೇಚಿಸಲು ಮತ್ತು ಅಂತಿಮವಾಗಿ ಅವುಗಳನ್ನು ಎದುರಿಸಲು ನೆರವಾಗುತ್ತದೆ. ಇವು ಕೇವಲ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಸವಾಲುಗಳಷ್ಟೇ ಅಲ್ಲ ನಮ್ಮ ಮಾನವೀಯತೆಯನ್ನೇ ಅಪಾಯಕ್ಕೊಳಪಡಿಸುವ ಅಥವಾ ನಮ್ಮ ಡಿಕಾಸ್ಟರಿಯ ಮಾತುಗಳಲ್ಲಿ ಹೇಳುವುದಾದರೆ, ಸಮಗ್ರ ಮಾನವ ಅಭಿವೃದ್ಧಿಗೆ ಗಂಭೀರ ಅಡ್ಡಿಯಾಗುವ ಸವಾಲುಗಳಾಗಿವೆ.”

ಹೊರಮುಖ ಸಿನೋಡಾಲಿಟಿಯನ್ನು ಜೀವಿಸುವುದು

ಕಾರ್ಡಿನಲ್ ಚೆರ್ನಿ ರವರ ಪ್ರಕಾರ, ಈ ಎನ್‌ಸೈಕ್ಲಿಕಲ್‌ನ ಪ್ರಕಟಣೆ ಧರ್ಮ ಸಭೆಯನ್ನು “ಹೊರಮುಖವಾದ ಸಿನೋಡಾಲಿಟಿಯನ್ನು ಜೀವಿಸಲು” ಆಹ್ವಾನಿಸುತ್ತದೆ.

“ಇದು ಕೇವಲ ಧರ್ಮ ಸಭೆಯ ಆಂತರಿಕ ಪ್ರಶ್ನೆಗಳ ಮೇಲೆ ಕೇಂದ್ರೀಕೃತವಾದ ಸಿನೋಡಾಲಿಟಿಯಲ್ಲ. ಬದಲಾಗಿ, ಇಂದಿನ ಹಾಗೂ ನಾಳಿನ ಕೆಲವೊಮ್ಮೆ ಆತಂಕಕಾರಿ ವಾಸ್ತವತೆಗಳಿಂದ ಮುಖ ತಿರುಗಿಸದೆ, ಧೈರ್ಯ ಮತ್ತು ಭರವಸೆಯೊಂದಿಗೆ ಇತರರ ಜೊತೆಗೂಡಿ ನಡೆಯಲು ನಮ್ಮನ್ನು ಕರೆಯುವ ಮಾರ್ಗವಾಗಿದೆ.”

“ಇದಕ್ಕಾಗಿಯೇ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ಅತ್ಯಂತ ಆಳವಾದ ಸಿನೋಡಲ್ ದಸ್ತಾವೇಜಾಗಿದೆ,” ಎಂದು ಅವರು ಹೇಳಿದರು. “ಏಕೆಂದರೆ ಅದು ಎಲ್ಲರನ್ನೂ ಒಳಗೊಳ್ಳುತ್ತದೆ ಮತ್ತು ಎಲ್ಲರನ್ನೂ ಸ್ವಾಗತಿಸುತ್ತದೆ ‘ಜಗತ್ತು ಎದುರಿಸುತ್ತಿರುವ ಸವಾಲುಗಳ ಭಾರವನ್ನು ಯಾರೂ ಒಬ್ಬರೇ ಹೊತ್ತುಕೊಳ್ಳಲು ಸಾಧ್ಯವಿಲ್ಲ ಹಾಗೆಯೇ ತನ್ನ ಪಾತ್ರವನ್ನು ವಹಿಸಲು ಯಾರೂ ಅತೀ ದುರ್ಬಲರೂ ಅಲ್ಲ’ (ಸಂ. 13).”

ಸ್ವಿಸ್ ಆಡಳಿತ ಮಾದರಿಯ ಕುರಿತು ಚಿಂತನೆ

ಸಮಗ್ರ ಮಾನವ ಅಭಿವೃದ್ಧಿಯ ಡಿಕಾಸ್ಟರಿಯ ಪ್ರಿಫೆಕ್ಟ್ ಅವರು ಸ್ವಿಟ್ಜರ್ಲೆಂಡ್‌ನ ಆಡಳಿತ ವ್ಯವಸ್ಥೆಯ ಕುರಿತೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ಅನೇಕ ಇತರ ದೇಶಗಳಿಗಿಂತ ಹೆಚ್ಚು ಮೂಲಭೂತ ವಿಷಯಗಳಲ್ಲಿ ನಾಗರಿಕರ ನೇರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯ ಅನುಗ್ರಹ ನಿಮಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಶ ಮತ್ತು ಅದರ ವಿವಿಧ ಸಂಸ್ಥೆಗಳ ಉತ್ತಮ ಆಡಳಿತಕ್ಕೆ ಧರ್ಮ ಸಭೆ ವಿಶಿಷ್ಟ ಕೊಡುಗೆಯನ್ನು ನೀಡಲು ಕರೆಯಲ್ಪಟ್ಟಿಲ್ಲವೇ?” ಎಂದು ಅವರು ಪ್ರಶ್ನಿಸಿದರು.

ಆತ್ಮಸಾಕ್ಷಿಯ ನಿಜವಾದ ಪರಿಶೀಲನೆಗೆ ಆಹ್ವಾನ

ಕಾರ್ಡಿನಲ್ ಚೆರ್ನಿ ರವರು ಎನ್‌ಸೈಕ್ಲಿಕಲ್‌ನ ಉಪಶೀರ್ಷಿಕೆಯನ್ನು ಸಹ ವಿವರಿಸಿದರು  “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ರಕ್ಷಣೆ ಕುರಿತು.”

“ಇಲ್ಲಿ ನಾವು ಸುವಾರ್ತಾ ಪ್ರಚಾರ, ಧರ್ಮಾಧ್ಯಕ್ಷೀಯ ಸಹಯಾತ್ರೆ, ಸಮಾಧಾನ ಮತ್ತು ಧರ್ಮ ಸಭೆಯ ಜೀವನದಲ್ಲಿ ಪಾಲ್ಗೊಳ್ಳುವಿಕೆ ಕುರಿತ ಆಳವಾದ ಅಗತ್ಯಗಳನ್ನು ಗುರುತಿಸುತ್ತೇವೆ. ಇವೆಲ್ಲವೂ ತಮ್ಮ ಸ್ಪಷ್ಟ ಮತ್ತು ಹೇಳಬೇಕೆಂದರೆ ‘ಸಾಂಪ್ರದಾಯಿಕ’ ರೂಪಗಳಲ್ಲಿ ವ್ಯಕ್ತವಾಗುತ್ತವೆ,” ಎಂದು ಅವರು ಗಮನಿಸಿದರು.

“ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ನಮ್ಮ ಬಿಷಪ್‌ಗಳು, ಯಾಜಕರು ಮತ್ತು ಧರ್ಮಾಧ್ಯಕ್ಷೀಯ ಕಾರ್ಯಕರ್ತರನ್ನು ಆತ್ಮಸಾಕ್ಷಿಯ ನಿಜವಾದ ಪರಿಶೀಲನೆ ನಡೆಸಲು ಸಹ ಆಹ್ವಾನಿಸುತ್ತದೆ,” ಎಂದು ಕಾರ್ಡಿನಲ್ ಮುಂದುವರಿಸಿದರು.

ಅಂತಿಮವಾಗಿ ಅವರು ಹೀಗೆ ಹೇಳಿದರು:

“ಈ ಪ್ರಶ್ನೆಗಳನ್ನು ನಮ್ಮ ಮೇಲೆಯೂ ಅನ್ವಯಿಸಬೇಕು ನಮ್ಮ ರಚನೆಗಳ ಮೇಲೆ, ನಮ್ಮ ಕಾರ್ಯವಿಧಾನಗಳ ಮೇಲೆ ಮತ್ತು ಧರ್ಮ ಸಭೆಗಾಗಿ ನಾವು ಈ ಜಗತ್ತಿನ ಇತರ ವಾಸ್ತವತೆಗಳೊಂದಿಗೆ ಇತಿಹಾಸದ ಪಯಣದಲ್ಲಿ ಹೇಗೆ ಸಾಗುತ್ತಿದ್ದೇವೆ ಎಂಬುದರ ಮೇಲೆ. ಏಕೆಂದರೆ ಇದೂ ಸಹ ಸುವಾರ್ತಾ ಪ್ರಚಾರದ ಒಂದು ಅತ್ಯಗತ್ಯ ಮಾರ್ಗವಾಗಿದೆ.”

 

03 ಜೂನ್ 2026, 16:32