ಜಗದ್ಗುರುಗಳ ಕಾರ್ಡಿನಲ್‌ಗಳೊಂದಿಗಿನ ಕಾನ್ಸಿಸ್ಟರಿಯ ವೇಳಾಪಟ್ಟಿಯನ್ನು ವ್ಯಾಟಿಕನ್ ಪ್ರಕಟಿಸಿದೆ.
ವ್ಯಾಟಿಕನ್ ವರದಿ
ಪವಿತ್ರ ಪ್ರೇರಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಮುನ್ನಾದಿನಗಳಲ್ಲಿ, ಜೂನ್ 26-27ರಂದು ನಡೆಯಲಿರುವ ಕಾರ್ಡಿನಲ್‌ಗಳ ಅಸಾಧಾರಣ ಕಾನ್ಸಿಸ್ಟರಿಯ ಕಾರ್ಯಕ್ರಮವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದೆ.
ಜಗದ್ಗುರು XIVನೇ ಲಿಯೋರವರು ಕಾರ್ಡಿನಲ್‌ಗಳನ್ನು ಭೇಟಿಯಾಗುವ ಸಂದರ್ಭದಲ್ಲಿ, ಜಗತ್ತನ್ನು ಕಾಡುತ್ತಿರುವ ಸಂಘರ್ಷಗಳು ಹಾಗೂ ಶಾಂತಿ ಮತ್ತು ಸಮನ್ವಯವನ್ನು ನಿರ್ಮಿಸಲು ಧರ್ಮ ಸಭೆ ತನ್ನ ಭಾಷೆ ಮತ್ತು ನಡವಳಿಕೆಗಳ ಮೂಲಕ ಹೇಗೆ ಸಂದೇಶ ನೀಡಬೇಕು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಇದು ಜಗದ್ಗುರು ಲಿಯೋರವರ ಅಧಿಕಾರವಧಿಯ ಎರಡನೇ ಕಾನ್ಸಿಸ್ಟರಿಯಾಗಿದ್ದು, ಕಳೆದ ಜನವರಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 170 ಮತದಾನದ ಹಕ್ಕು ಹೊಂದಿರುವ ಮತ್ತು ಹೊಂದಿರದ ಕಾರ್ಡಿನಲ್‌ಗಳು ಭಾಗವಹಿಸಿದ್ದರು.
ಆ ಕಾನ್ಸಿಸ್ಟರಿಯ ಸಮಾರೋಪದಲ್ಲಿ ಜಗದ್ಗುರುಗಳು ಜೂನ್ ಸಭೆಯನ್ನು ಘೋಷಿಸಿ, ಕಾರ್ಡಿನಲ್‌ಗಳಿಗೆ ಹೀಗೆ ಹೇಳಿದರು. “ನಿಮ್ಮ ಮೇಲೆ ಅವಲಂಬಿಸಬೇಕಾದ ಅಗತ್ಯವನ್ನು ನಾನು ಅನುಭವಿಸುತ್ತಿದ್ದೇನೆ.”
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿರುವ ಕಾರ್ಯಕ್ರಮದ ಪ್ರಕಾರ, ಸಭೆಯ ಕಾರ್ಯವಿಧಾನವು “ಸಿನೋಡಲ್” ಮಾದರಿಯನ್ನು ಅನುಸರಿಸಲಿದೆ. ಇದರಲ್ಲಿ ಪ್ರಾರ್ಥನೆ, ಮೌನ, ವೈಯಕ್ತಿಕ ಚಿಂತನೆ, ಗುಂಪು ಚರ್ಚೆಗಳು ಮತ್ತು ಪೂರ್ಣಸಭೆಗಳು ಒಳಗೊಂಡಿರುತ್ತವೆ.
ಸಭಾಂಗಣದಲ್ಲಿ ನಡೆಯುವ ವಿಚಾರಗಳ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಹಾಗೂ ಸಹೋದರಭಾವದ ಸಂವಾದದ ವಾತಾವರಣವನ್ನು ಉಳಿಸಿಕೊಳ್ಳುವ ಸಲುವಾಗಿ ಕಾನ್ಸಿಸ್ಟರಿಯ ಸಮಯದಲ್ಲಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಕಾರ್ಡಿನಲ್‌ಗಳಿಗೆ ಸೂಚಿಸಲಾಗಿದೆ.
ನಾಲ್ಕು ಚಿಂತನಾ ಅಧಿವೇಶನಗಳು
ಭಾಗವಹಿಸುವವರನ್ನು 20 ಗುಂಪುಗಳಾಗಿ ವಿಭಜಿಸಲಾಗುತ್ತದೆ.
ಅವುಗಳಲ್ಲಿ ಒಂಬತ್ತು ಗುಂಪುಗಳು ಮತದಾನದ ಹಕ್ಕು ಹೊಂದಿರುವ ಕಾರ್ಡಿನಲ್‌ಗಳಿಂದ ರಚನೆಯಾಗಲಿದ್ದು, ಪ್ರೇಷಿತರ ರಾಯಭಾರಿಗಳು ಹಾಗೂ ತಮ್ಮ ಸಾಮಾನ್ಯ ಆಡಳಿತಾತ್ಮಕ ಸೇವೆಯನ್ನು ಪೂರ್ಣಗೊಳಿಸಿರುವ ಕಾರ್ಡಿನಲ್‌ಗಳನ್ನೂ ಒಳಗೊಂಡಿರುತ್ತವೆ.
ಉಳಿದ ಹನ್ನೊಂದು ಗುಂಪುಗಳಲ್ಲಿ ರೋಮನ್ ಪ್ರಾಂತ್ಯದ ಮತದಾನದ ಹಕ್ಕು ಹೊಂದಿರುವ ಕಾರ್ಡಿನಲ್‌ಗಳು ಮತ್ತು ಮತದಾನದ ಹಕ್ಕು ಹೊಂದಿರದ ಕಾರ್ಡಿನಲ್‌ಗಳು ಸೇರಿರುತ್ತಾರೆ.
ಪ್ರತಿ ಗುಂಪಿಗೂ ಚರ್ಚೆಯನ್ನು ನಿರ್ವಹಿಸಿ ಸಮಯವನ್ನು ನಿಯಂತ್ರಿಸುವ ಅಧ್ಯಕ್ಷರಿರುತ್ತಾರೆ. ಜೊತೆಗೆ, ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ವರದಿಯನ್ನು ಸಿದ್ಧಪಡಿಸುವ ಕಾರ್ಯದರ್ಶಿಯೂ ಇರುತ್ತಾರೆ.
ಜೂನ್ 26: ಸುವಾರ್ತೆಯ ಘೋಷಣೆಯ ಕುರಿತ ಚಿಂತನೆ
ಕಾನ್ಸಿಸ್ಟರಿಯು ಜೂನ್ 26ರ ಶುಕ್ರವಾರ ಜಗದ್ಗುರು XIVನೇ ಲಿಯೋರವರ ಅಧ್ಯಕ್ಷತೆಯಲ್ಲಿ ಸಂತ ಪೇತ್ರರ ಮಹಾಗಿರ್ಜೆಯಲ್ಲಿ ನಡೆಯುವ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗಲಿದೆ.
ನಂತರ ಕಾರ್ಡಿನಲ್‌ಗಳು ಪೌಲ್ VIನೇ ಸಭಾಂಗಣಕ್ಕೆ ತೆರಳಿ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಇದು “ವೇನಿ ಕ್ರಿಯೇಟರ್ ಸ್ಪಿರಿಟುಸ್” ಸ್ತೋತ್ರಗಾನದೊಂದಿಗೆ ಆರಂಭವಾಗಿ, ಕಾರ್ಡಿನಲ್‌ಗಳ ಮಹಾಸಭೆಯ ಡೀನ್ ಕಾರ್ಡಿನಲ್ ಜಿಯೋವನ್ನಿ ಬತ್ತಿಸ್ತಾ ರೇ ಅವರ ಭಾಷಣ ಹಾಗೂ ಜಗದ್ಗುರುಗಳ ಪ್ರಾರಂಭಿಕ ಸಂದೇಶವನ್ನು ಒಳಗೊಂಡಿರುತ್ತದೆ.
ಮೊದಲ ಅಧಿವೇಶನವು “ನಾವು ಯಾವ ರೀತಿಯ ಜಗತ್ತಿನಲ್ಲಿ ಸುವಾರ್ತೆಯನ್ನು ಸಾರಲು ಕರೆಯಲ್ಪಟ್ಟಿದ್ದೇವೆ?” ಎಂಬ ಪ್ರಶ್ನೆಯನ್ನು ಕೇಂದ್ರವಾಗಿರಿಸಿಕೊಂಡಿರುತ್ತದೆ.
ಕ್ರಕೋವ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಕಾರ್ಡಿನಲ್ ಗ್ರೆಗೊರ್ಜ್ ರಿಶ್ ಅವರು ಬೈಬಲ್ ಧ್ಯಾನವನ್ನು ನೀಡಲಿದ್ದಾರೆ. ಅದರ ನಂತರ ಮೌನ, ಪ್ರಾರ್ಥನೆ, ಗುಂಪು ಹಂಚಿಕೆ ಹಾಗೂ ಪೂರ್ಣಸಭೆಯ ವರದಿಗಳು ನಡೆಯಲಿವೆ.
ಶುಕ್ರವಾರ ಮಧ್ಯಾಹ್ನದ ಎರಡನೇ ಅಧಿವೇಶನವು “ಅಧಿಕಾರದ ಸಂಸ್ಕೃತಿ ಮತ್ತು ಪ್ರೀತಿಯ ನಾಗರಿಕತೆ” ಎಂಬ ವಿಷಯವನ್ನು ಪರಿಶೀಲಿಸಲಿದೆ.
ವಿಶ್ವಾಸ ಸಿದ್ಧಾಂತ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್ ಅವರು ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ನ ಐದನೇ ಅಧ್ಯಾಯದ ಆಧಾರದ ಮೇಲೆ ವಿಷಯವನ್ನು ಪರಿಚಯಿಸಲಿದ್ದಾರೆ.
ಸಾಮಾನ್ಯ ಹಿತದ ನಿರ್ಮಾಣ
ಶನಿವಾರ ಬೆಳಿಗ್ಗೆ, ಕಾರ್ಡಿನಲ್ ರೇ ರವರ ಅಧ್ಯಕ್ಷತೆಯಲ್ಲಿ ಸಂತ ಪೇತ್ರರ ಮಹಾಗಿರ್ಜೆಯಲ್ಲಿ ಬಲಿಪೂಜೆ ನಡೆದ ಬಳಿಕ, ಕಾರ್ಡಿನಲ್‌ಗಳು ಪೌಲ್ VIನೇ ಸಭಾಂಗಣದಲ್ಲಿ ತಮ್ಮ ಕಾರ್ಯವನ್ನು ಪುನರಾರಂಭಿಸಲಿದ್ದಾರೆ.
ಮೂರನೇ ಅಧಿವೇಶನದ ಶೀರ್ಷಿಕೆ “ಒಳ್ಳೆಯತನವನ್ನು ನಿರ್ಮಿಸುವುದು ನಮ್ಮ ಕಾಲದ ಕಾರ್ಯಕ್ಷೇತ್ರಗಳು” ಆಗಿರುತ್ತದೆ.
ಈ ವಿಷಯವನ್ನು ಜೋಹಾನ್ಸ್‌ಬರ್ಗ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಹಾಗೂ ದಕ್ಷಿಣ ಆಫ್ರಿಕಾದ ಕಥೋಲಿಕ ಬಿಷಪ್‌ಗಳ ಸಮ್ಮೇಳನದ ಅಧ್ಯಕ್ಷ ಕಾರ್ಡಿನಲ್ ಸ್ಟೀಫನ್ ಬ್ರಿಸ್ಲಿನ್ ಪರಿಚಯಿಸಲಿದ್ದಾರೆ.
ಚರ್ಚೆಯು ಸಾಮಾನ್ಯ ಹಿತದ ನಿರ್ಮಾಣವನ್ನು ಕಷ್ಟಕರಗೊಳಿಸುವ ವಿಭಜನೆಗಳು, ಜನರು ಮತ್ತು ಸಮುದಾಯಗಳಿಂದ ಉದ್ಭವಿಸುವ ಪ್ರಶ್ನೆಗಳು ಹಾಗೂ ಸ್ಥಳೀಯ ಧರ್ಮ ಸಭೆಗಳು ಮತ್ತು ವಿಶ್ವವ್ಯಾಪಿ ಧರ್ಮ ಸಭೆ ನೀಡಬಹುದಾದ ಬೆಂಬಲದ ಮೇಲೆ ಕೇಂದ್ರೀಕರಿಸಲಿದೆ.
ಸಿನೋಡ್ ಅನುಷ್ಠಾನದ ಪಥ
ನಾಲ್ಕನೇ ಮತ್ತು ಅಂತಿಮ ಅಧಿವೇಶನವು ಶನಿವಾರ ಮಧ್ಯಾಹ್ನ ಹೊಸ ಸಿನೋಡ್ ಸಭಾಂಗಣದಲ್ಲಿ ನಡೆಯಲಿದ್ದು, “ಸಿನೋಡ್ ಅನುಷ್ಠಾನದ ಪಥ” ಎಂಬ ವಿಷಯಕ್ಕೆ ಸಮರ್ಪಿತವಾಗಿರುತ್ತದೆ.
ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಸಿನೊಡಲ್ ಅಸೆಂಬ್ಲಿಗಳ ಕಡೆಗೆ 2027–2028: ತಯಾರಿಗಾಗಿ ಹಂತಗಳು, ಮಾನದಂಡಗಳು ಮತ್ತು ಉಪಕರಣಗಳು ಎಂಬ ದಸ್ತಾವೇಜಿನ ಆಧಾರದ ಮೇಲೆ ವಿಷಯವನ್ನು ಪರಿಚಯಿಸಲಿದ್ದಾರೆ.
ಈ ಅಧಿವೇಶನದಲ್ಲಿ ಸ್ಪಷ್ಟೀಕರಣ ಪ್ರಶ್ನೆಗಳು, ಜಗದ್ಗುರು XIVನೇ ಲಿಯೋರವರೊಂದಿಗೆ ಸಂವಾದ ಹಾಗೂ ಮೂರು ನಿಮಿಷಗಳನ್ನು ಮೀರದ ಮುಕ್ತ ಹಸ್ತಕ್ಷೇಪಗಳು ನಡೆಯಲಿವೆ.
ಜಗದ್ಗುರುಗಳ ಸಮಾರೋಪ ಭಾಷಣದೊಂದಿಗೆ ಕಾನ್ಸಿಸ್ಟರಿಯು ಮುಕ್ತಾಯಗೊಳ್ಳಲಿದೆ. ನಂತರ “ತೆ ಡೇಯುಮ್” ಸ್ತೋತ್ರಗಾನ ನಡೆಯಲಿದ್ದು, ಪೌಲ್ VIನೇ ಸಭಾಂಗಣದಲ್ಲಿ ಜಗದ್ಗುರುಗಳೊಂದಿಗೆ ಭೋಜನವನ್ನು ಆಯೋಜಿಸಲಾಗುತ್ತದೆ.
ಜೂನ್ 29ರಂದು, ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಮಹಾಗಿರ್ಜೆಯಲ್ಲಿ ನಡೆಯುವ ಪವಿತ್ರ ಬಲಿಪೂಜೆಯ ಅಧ್ಯಕ್ಷತೆ ವಹಿಸಲಿದ್ದಾರೆ.