ಸೃಷ್ಟಿಯ ಆರೈಕೆಗಾಗಿ 2026ರ ವಿಶ್ವ ಪ್ರಾರ್ಥನಾ ದಿನದ ಧ್ಯೇಯವಿಷಯವನ್ನು ವ್ಯಾಟಿಕನ್ ಘೋಷಿಸಿದೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು, ಸಾಂಪ್ರದಾಯಿಕವಾಗಿ ಪ್ರತಿವರ್ಷ ಸೆಪ್ಟೆಂಬರ್ 1ರಂದು ಆಚರಿಸಲಾಗುವ ಸೃಷ್ಟಿಯ ಆರೈಕೆಗಾಗಿ ವಿಶ್ವ ಪ್ರಾರ್ಥನಾ ದಿನದ 2026ನೇ ಸಾಲಿನ ವಿಷಯವಾಗಿ “ಅವರು ತಮ್ಮ ಕತ್ತಿಗಳನ್ನು ನೇಗಿಲುಗಳಾಗಿಯೂ, ತಮ್ಮ ಈಟಿಗಳನ್ನು ಕೊಯ್ಲಿನ ಕತ್ತರಿಗಳಾಗಿಯೂ ರೂಪಾಂತರಿಸುವರು” (ಯೆಶಾಯ 2:4) ಎಂಬ ವಾಕ್ಯವನ್ನು ಆಯ್ಕೆ ಮಾಡಿದ್ದಾರೆ.
ಈ ಘೋಷಣೆಯನ್ನು ಪ್ರಕಟಿಸಿದ ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಕಾರ್ಯನಿರ್ವಹಿಸುವ ಡಿಕಾಸ್ಟರಿಯು, ಜಗದ್ಗುರುಗಳ ಈ ದಿನದ ಸಂದೇಶವು ಸಶಸ್ತ್ರ ಸಂಘರ್ಷಗಳು ಮತ್ತು ಪರಿಸರದ ಹಾನಿಯ ನಡುವಿನ ನಿಕಟ ಸಂಬಂಧವನ್ನು ವಿಶೇಷವಾಗಿ ಒತ್ತಿಹೇಳುತ್ತದೆ ಎಂದು ತಿಳಿಸಿದೆ.
ಇಂತಹ ಪರಿಸರ ಹಾನಿಯು ಸೃಷ್ಟಿಯ ಸಂರಕ್ಷಣೆಗಾಗಿ ನಮ್ಮ ಕರ್ತವ್ಯದ ಗಂಭೀರ ಉಲ್ಲಂಘನೆಯಾಗಿರುವುದಷ್ಟೇ ಅಲ್ಲ, ನೂರಾರು ಮಿಲಿಯನ್ ಜನರ ಜೀವಿತಕ್ಕೆ ದೀರ್ಘಕಾಲೀನ ಬೆದರಿಕೆಯಾಗಿಯೂ ಪರಿಣಮಿಸುತ್ತದೆ ಎಂದು ಡಿಕಾಸ್ಟರಿಯು ಒತ್ತಿ ಹೇಳಿದೆ.
ಇದಲ್ಲದೆ, ಯುದ್ಧಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಇಂದು ವ್ಯಾಪಕ ಅರಿವು ಮೂಡಿದ್ದರೂ, ಸಂಘರ್ಷಗಳನ್ನು ತಡೆಯಲು ಹಾಗೂ ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ಅಗತ್ಯವಾದ ಸಂಸ್ಥೆಗಳನ್ನು ನಿರ್ಮಿಸುವುದು ಅಥವಾ ಜವಾಬ್ದಾರಿಯುತ ನಿರ್ಧಾರಗಳನ್ನು ಕೈಗೊಳ್ಳುವುದು ಇನ್ನೂ ಸಮರ್ಪಕವಾಗಿ ನಡೆದಿಲ್ಲ ಎಂದು ಅದು ಸೂಚಿಸಿದೆ.
ಕೊನೆಯಲ್ಲಿ, ಪ್ರವಾದಿ ಯೆಶಾಯನು ಆಯುಧಗಳು ಕೃಷಿ ಉಪಕರಣಗಳಾಗಿ ಪರಿವರ್ತನೆಯಾಗುವ ಭವಿಷ್ಯವನ್ನು ಮುನ್ನುಡಿದಿರುವ ಈ ಶೀರ್ಷಿಕೆಯು, ಹಿಂಸಾಚಾರ ಮತ್ತು ವಿನಾಶಕ್ಕಿಂತ ಅಭಿವೃದ್ಧಿ ಹಾಗೂ ಸುಸ್ಥಿರತೆಯನ್ನು ಆದ್ಯತೆಯಾಗಿ ಪರಿಗಣಿಸುವಂತೆ ನೀಡಿರುವ ಸ್ಪಷ್ಟ ಆಹ್ವಾನವಾಗಿದೆ ಎಂದು ಡಿಕಾಸ್ಟರಿಯ ಹೇಳಿಕೆ ಸಮಾರೋಪಗೊಳಿಸಿದೆ.