ಕನ್ಸಿಸ್ಟರಿಯ ಮೂರನೇ ಅಧಿವೇಶನದಲ್ಲಿ ಕಾರ್ಡಿನಲ್‌ಗಳು ಜಗದ್ಗುರು ಲಿಯೋರವರೊಂದಿಗೆ ಒಂದಾಗಿ ಸೇರಿದರು. ಕನ್ಸಿಸ್ಟರಿಯ ಮೂರನೇ ಅಧಿವೇಶನದಲ್ಲಿ ಕಾರ್ಡಿನಲ್‌ಗಳು ಜಗದ್ಗುರು ಲಿಯೋರವರೊಂದಿಗೆ ಒಂದಾಗಿ ಸೇರಿದರು.  (ANSA)

ಕನ್ಸಿಸ್ಟರಿ: ಮೂರನೇ ಅಧಿವೇಶನವು ವ್ಯಕ್ತಿವಾದಕ್ಕೆ ಪರಿಹಾರವಾಗಿ ಸುವಾರ್ತೆಯ ಭರವಸೆಯನ್ನು ಎತ್ತಿಹಿಡಿದಿತು.

ಅಸಾಧಾರಣ ಕನ್ಸಿಸ್ಟರಿಯ ಮೂರನೇ ಅಧಿವೇಶನದಲ್ಲಿ, ಕಾರ್ಡಿನಲ್‌ಗಳು ಒಳಿತನ್ನು ಉತ್ತೇಜಿಸುವ ಹಾಗೂ ಸಮಾಜದ ನಿರ್ಮಾಣಕ್ಕೆ ಕೈಜೋಡಿಸುವ ಚರ್ಚೆಯ ಧ್ಯೇಯದ ಕುರಿತು ಆಳವಾದ ಚಿಂತನೆ ನಡೆಸಿದರು.

ವ್ಯಾಟಿಕನ್ ವರದಿ

ಅಸಾಧಾರಣ ಕನ್ಸಿಸ್ಟರಿಯ ಮೂರನೇ ಅಧಿವೇಶನವು ಶನಿವಾರ ಬೆಳಿಗ್ಗೆ VIನೇ ಪಾಲ್ ಸಭಾಂಗಣದಲ್ಲಿ ನಡೆಯಿತು. ದಿನದ ಕಾರ್ಯಕ್ರಮವು ಸಂತ ಪೇತ್ರರ ಮಹಾಬಸಿಲಿಕಾದಲ್ಲಿ ಕಾರ್ಡಿನಲ್‌ಗಳ ಮಂಡಳಿಯ ಡೀನ್ ಕಾರ್ಡಿನಲ್ ಜಿಯೋವನ್ನಿ ಬತ್ತಿಸ್ತಾ ರೆ ರವರು ಅರ್ಪಿಸಿದ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಯಿತು. ಬಳಿಕ ಜಗದ್ಗುರು XIVನೇ ಲಿಯೋರವರ ನೇತೃತ್ವದಲ್ಲಿ ಕಾರ್ಡಿನಲ್‌ಗಳು ಅಡ್ಸುಮಸ್ ಪ್ರಾರ್ಥನೆಯನ್ನು ಸಲ್ಲಿಸಿದರು. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಟಾಂಜಾನಿಯಾದ ತಬೋರಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಪ್ರೋಟಾಸೆ ರುಗಾಂಬ್ವಾ, ಶಾಂತಿಗಾಗಿ ಜಗದ್ಗುರುಗಳು‌ ನೀಡಿರುವ ಮನವಿಗೆ ಕಾರ್ಡಿನಲ್‌ಗಳು ತಮ್ಮ ತಮ್ಮ ಧರ್ಮಪ್ರಾಂತ್ಯಗಳಲ್ಲಿ ಮತ್ತು ಪ್ರದೇಶಗಳಲ್ಲಿ ಬೆಂಬಲ ನೀಡಿ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವಂತೆ ಕರೆ ನೀಡಿದರು.

"ಒಳಿತನ್ನು ನಿರ್ಮಿಸುವುದು ನಮ್ಮ ಕಾಲದ ಕಾರ್ಯಕ್ಷೇತ್ರಗಳು" ಎಂಬ ವಿಷಯದ ಕುರಿತು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಸ್ಟೀಫನ್ ಬ್ರಿಸ್ಲಿನ್ ಪರಿಚಯಾತ್ಮಕ ಭಾಷಣ ಮಾಡಿದರು. ಪ್ರಾರ್ಥನೆ ಮತ್ತು ಮೌನ ಚಿಂತನೆಯ ಬಳಿಕ ಕಾರ್ಡಿನಲ್‌ಗಳು ಗುಂಪುಗಳಾಗಿ ಚರ್ಚೆ ನಡೆಸಿದರು. ನಂತರ ಹನ್ನೊಂದು ಗುಂಪುಗಳು ತಮ್ಮ ವರದಿಗಳನ್ನು ಮಂಡಿಸಿ, ಇಂದಿನ ಜಗತ್ತಿನಲ್ಲಿ ಜನಾಂಗಗಳು, ರಾಷ್ಟ್ರಗಳು, ಸಮಾಜಗಳು ಮತ್ತು ಕುಟುಂಬಗಳೊಳಗೆ ಉಂಟಾಗಿರುವ ಆಳವಾದ ಬಿರುಕುಗಳು ಬಡವರು, ದುರ್ಬಲರು, ಯುವಜನರು ಮತ್ತು ವಯಸ್ಕರ ಜೀವನದ ಮೇಲೆ ಉಂಟುಮಾಡುತ್ತಿರುವ ದುಷ್ಪರಿಣಾಮಗಳ ಕುರಿತು ಚರ್ಚಿಸಿದರು.

ಚರ್ಚೆಯ ವೇಳೆ, ಜೀವನದ ಅರ್ಥ, ನೈಜ ಸಂಬಂಧಗಳು ಮತ್ತು ಗುರುತಿನ ಕೊರತೆ ಜನರನ್ನು ಸ್ವಾರ್ಥಪರ ಹಾಗೂ ಪ್ರತ್ಯೇಕತೆಯ ಮನೋಭಾವದತ್ತ ತಳ್ಳುತ್ತಿದೆ ಎಂಬ ಕಳವಳ ವ್ಯಕ್ತವಾಯಿತು. ಅತಿಯಾದ ವ್ಯಕ್ತಿವಾದವು ಇತರರು ನಮ್ಮ ಯಶಸ್ಸಿಗಾಗಿ ಮಾತ್ರ ಇದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಬೆಳೆಸುತ್ತಿದೆ ಎಂದು ಕಾರ್ಡಿನಲ್‌ಗಳು ಅಭಿಪ್ರಾಯಪಟ್ಟರು. ಇದೇ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಾನವ ಮೌಲ್ಯಗಳು, ಮಾನವ ಘನತೆ ಮತ್ತು ಕೆಲಸದ ಗೌರವದ ದೃಷ್ಟಿಯಿಂದ ಗಂಭೀರವಾಗಿ ಪರಿಶೀಲಿಸಬೇಕಾದ ವಿಷಯವಾಗಿದೆ ಎಂದು ಅವರು ಹೇಳಿದರು.

ಅನೇಕ ಗುಂಪುಗಳು ಸಾರ್ವಜನಿಕ ಹಿತ ಎಂಬ ಮೌಲ್ಯವನ್ನು ಒತ್ತಿಹೇಳಿದವು. ದೇವರ ಮೇಲಿನ ನಂಬಿಕೆ ಮತ್ತು ಪ್ರತಿಯೊಬ್ಬರಲ್ಲಿರುವ ಅತೀತ ಆಧ್ಯಾತ್ಮಿಕ ಮೌಲ್ಯವೇ ಮಾನವನನ್ನು ತನ್ನ ಸ್ವಾರ್ಥದ ಮಿತಿಯನ್ನು ಮೀರಿ ಬಡವರೊಂದಿಗೆ ಐಕ್ಯತೆ ಬೆಳೆಸಲು, ನಿಸ್ವಾರ್ಥ ಸಂಬಂಧಗಳನ್ನು ನಿರ್ಮಿಸಲು ಹಾಗೂ ಎಲ್ಲರ ಒಳಿತಿಗಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ಅವರು ತಿಳಿಸಿದರು. ಚರ್ಚೆಯ ಸಾಮಾಜಿಕ ಬೋಧನೆಯನ್ನು ಭವಿಷ್ಯದ ಸಾರ್ವಜನಿಕ ನಾಯಕರಿಗೆ ಪರಿಚಯಿಸುವುದು ಕಾಲದ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಡಿನಲ್‌ಗಳ ಅಭಿಪ್ರಾಯದಂತೆ, ವ್ಯಕ್ತಿವಾದ ಮತ್ತು ಸಮಾಜದಲ್ಲಿನ ಬಿರುಕುಗಳಿಗೆ ಸುವಾರ್ತೆಯೇ ಪರಿಣಾಮಕಾರಿ ಪರಿಹಾರವಾಗಿದೆ. ಎಲ್ಲರಿಗೂ ಸೇರಿರುವ ಭಾವನೆಯನ್ನು ಮೂಡಿಸುವ, ಇಂದಿನ ಸಮಾಜದ ಗಾಯಗಳಿಗೆ ಸಾಂತ್ವನ ನೀಡುವ, ಧ್ರುವೀಕರಣವನ್ನು ಮೀರಿ ಸಮಾರ್ಯನ ಮುಖವನ್ನು ತೋರಿಸುವ ಚರ್ಚೆಯೇ ಇಂದಿನ ಜಗತ್ತಿಗೆ ಅಗತ್ಯವಾಗಿದೆ. ಸಾಮಾಜಿಕ ಅವನತಿಯನ್ನು ಕೇವಲ ನೋಡುವವರಾಗಿರದೆ, ಎಲ್ಲರಿಗಾಗಿ ಸಮಾಜವನ್ನು ಪುನರ್‌ನಿರ್ಮಿಸುವ ಜ್ಞಾನಿಗಳಾಗಲು ಕ್ರೈಸ್ತರನ್ನು ಅವರು ಆಹ್ವಾನಿಸಿದರು. ಅಧಿವೇಶನವು ಜಗದ್ಗುರು XIVನೇ ಲಿಯೋರವರ ನೇತೃತ್ವದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಂಡಿತು.

27 ಜೂನ್ 2026, 17:50