Pope Leo during the second day of the Consistory

ಕಾರ್ಡಿನಲ್ ಬ್ರಿಸ್ಲಿನ್: ಮಾನವ ಪ್ರಗತಿಯು ಮಾನವ ಘನತೆ ಮತ್ತು ಸಾರ್ವಜನಿಕ ಹಿತದ ಸೇವೆಗೆ ಮೀಸಲಾಗಿರಬೇಕು

ಅಸಾಧಾರಣ ಕನ್ಸಿಸ್ಟರಿಯ ಮೂರನೇ ಅಧಿವೇಶನವನ್ನು ಉದ್ಘಾಟಿಸುತ್ತಾ, ಕಾರ್ಡಿನಲ್ ಸ್ಟೀಫನ್ ಬ್ರಿಸ್ಲಿನ್ ಅವರು ಜಗದ್ಗುರು XIVನೇ ಲಿಯೋರವರ ಭವ್ಯ ಮಾನವೀಯತೆ ಪರಿಪತ್ರದ ಕುರಿತು ಚಿಂತನೆ ಹಂಚಿಕೊಂಡರು. ವಿಶ್ವಾಸ, ಪ್ರೀತಿ ಮತ್ತು ಭರವಸೆಯಲ್ಲಿ ಬೇರೂರಿರುವ ಸಿನೊಡಲ್ ಮಾರ್ಗವನ್ನು ಅನುಸರಿಸುತ್ತಾ, ಇತಿಹಾಸದ ಹೋರಾಟಗಳು ಮತ್ತು ಸವಾಲುಗಳನ್ನು ಎದುರಿಸಲು ಚರ್ಚೆಯು ಕರೆಯಲ್ಪಟ್ಟಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಸ್ಟೀಫನ್ ಬ್ರಿಸ್ಲಿನ್, ಅಸಾಧಾರಣ ಕನ್ಸಿಸ್ಟರಿಯ ಮೂರನೇ ಅಧಿವೇಶನವನ್ನು ಉದ್ಘಾಟಿಸುತ್ತಾ, ತಂತ್ರಜ್ಞಾನದ ಅಪಾರ ಶಕ್ತಿಯಿಂದ ಗುರುತಿಸಲ್ಪಟ್ಟಿರುವ ಇಂದಿನ ಯುಗದಲ್ಲಿ ಮಾನವಕುಲವು ತನ್ನ ಭವಿಷ್ಯವನ್ನು ಹೇಗೆ ನಿರ್ಮಿಸುತ್ತಿದೆ ಎಂಬುದರ ಕುರಿತು ಕಾರ್ಡಿನಲ್‌ಗಳನ್ನು ಚಿಂತನೆಗೆ ಆಹ್ವಾನಿಸಿದರು. "ಸಾರ್ವಜನಿಕ ಹಿತಕ್ಕಾಗಿ ನಿರ್ಮಾಣ: ನಮ್ಮ ಕಾಲದ ಕಾರ್ಯಕ್ಷೇತ್ರಗಳು" ಎಂಬ ವಿಷಯದ ಕುರಿತು ಮಾತನಾಡಿದ ಅವರು, ಜಗದ್ಗುರು XIVನೇ ಲಿಯೋರವರ ಭವ್ಯ ಮಾನವೀಯತೆ ಪರಿಪತ್ರದ ಆರಂಭ ಮತ್ತು ಸಮಾರೋಪದ ಭಾಗಗಳು ಇಡೀ ಪರಿಪತ್ರದ ಮೂಲಭೂತ ಧರ್ಮಶಾಸ್ತ್ರೀಯ ದೃಷ್ಟಿಕೋನವನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು.

ಕಾರ್ಡಿನಲ್ ಬ್ರಿಸ್ಲಿನ್, ಪರಿಪತ್ರದಲ್ಲಿ ಬಾಬೆಲ್ ಮತ್ತು ಜೆರುಸಲೇಮ್ ನಗರಗಳ ಹೋಲಿಕೆಯನ್ನು ವಿಶೇಷವಾಗಿ ಉಲ್ಲೇಖಿಸಿದರು. ಎರಡೂ ನಗರಗಳು ಮಾನವನ ಸಾಮೂಹಿಕ ಪ್ರಯತ್ನವನ್ನು ಪ್ರತಿನಿಧಿಸಿದರೂ, ದೇವರನ್ನು ಬದಿಗೊತ್ತಿ ಮಾನವ ಬುದ್ಧಿಶಕ್ತಿಯನ್ನೇ ಅವಲಂಬಿಸುವ ಬಾಬೆಲ್ ಅಂತಿಮವಾಗಿ ವಿಭಜನೆ ಮತ್ತು ಚದುರಿಹೋಗುವಿಕೆಗೆ ಕಾರಣವಾಗುತ್ತದೆ ಎಂದರು. ಆದರೆ ದೇವರ ಸೇವೆಗೆ ತನ್ನ ಪ್ರತಿಭೆಯನ್ನು ಸಮರ್ಪಿಸುವ ಜೆರುಸಲೇಮ್ ಪ್ರತಿಯೊಬ್ಬರ ಮಾನವ ಘನತೆಯನ್ನು ಉತ್ತೇಜಿಸುವ ಸಮಾಜ ನಿರ್ಮಾಣದ ಸಂಕೇತವಾಗಿದೆ ಎಂದು ಅವರು ವಿವರಿಸಿದರು.

ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಹೊಸ ತಂತ್ರಜ್ಞಾನಗಳು ಮಾನವ ಪ್ರಗತಿಗೆ ನೆರವಾಗುತ್ತಿದ್ದರೂ, ಅವು ಜವಾಬ್ದಾರಿಯುತ ಬಳಕೆಗೆ ಒಳಪಟ್ಟಿವೆಯೇ ಅಥವಾ ಹೊಸ ರೀತಿಯ ಬಹಿಷ್ಕಾರ ಮತ್ತು ಅಸಮಾನತೆಯನ್ನು ಸೃಷ್ಟಿಸುತ್ತಿವೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ತಾಂತ್ರಿಕ ಸಾಧನಗಳು ಎಂದಿಗೂ ತಟಸ್ಥವಾಗಿರುವುದಿಲ್ಲ. ಅವು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗಳೊಂದಿಗೆ ಬೆಸೆದುಕೊಂಡಿದ್ದು, ಸಮಾಜದ ಗುಣಮಟ್ಟವನ್ನು ರೂಪಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವಾಸಿಗಳ ಪಾಲಿಗೆ ಈ ಕರೆಯು ಸಿನೊಡಾಲಿಟಿಯ ರೂಪದಲ್ಲಿ ವ್ಯಕ್ತವಾಗುತ್ತದೆ ಎಂದು ಕಾರ್ಡಿನಲ್ ಬ್ರಿಸ್ಲಿನ್ ತಿಳಿಸಿದರು. ಸಿನೊಡಾಲಿಟಿಯು ಚರ್ಚೆಯ ಐಕ್ಯತೆಯ ಸ್ಪಷ್ಟ ಅಭಿವ್ಯಕ್ತಿಯಾಗಿದ್ದು, ಭಯವಿಲ್ಲದೆ ಇತಿಹಾಸದ ಸವಾಲುಗಳನ್ನು ಎದುರಿಸಲು ಕ್ರೈಸ್ತರಿಗೆ ಶಕ್ತಿ ನೀಡುತ್ತದೆ ಎಂದರು. ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರವು ಬಯಕೆ, ಮಿತಿಗಳ ಅರಿವು, ಹಂಚಿಕೆಯ ಹೊಣೆಗಾರಿಕೆ ಮತ್ತು ವಿವೇಚನೆ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಸಮಾಜ ನಿರ್ಮಾಣದ ಮಾರ್ಗವನ್ನು ಪ್ರಸ್ತಾಪಿಸುತ್ತದೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ವಿಶ್ವಾಸ, ಪ್ರೀತಿ, ಭರವಸೆ ಮತ್ತು ಪ್ರಾರ್ಥನೆಯ ಮೂಲಕವೇ ಈ ದೃಷ್ಟಿಕೋನವು ಪರಿಪೂರ್ಣಗೊಳ್ಳುತ್ತದೆ ಎಂದು ಕಾರ್ಡಿನಲ್ ಬ್ರಿಸ್ಲಿನ್ ಹೇಳಿದರು. ದೇವರ ಕರುಣೆಯನ್ನು ವಿಶ್ವಾಸ ಗುರುತಿಸುತ್ತದೆ,ಯೂಕರಿಸ್ಟ್ ಪ್ರೀತಿಯ ಮೂಲವಾಗಿದೆ ಭರವಸೆಯು "ಪ್ರೀತಿಯ ನಾಗರಿಕತೆ"ಯನ್ನು ನಿರ್ಮಿಸಲು ಪ್ರೇರೇಪಿಸುತ್ತದೆ,ಮತ್ತು ಪ್ರಾರ್ಥನೆಯು ಪವಿತ್ರಾತ್ಮನ ಕಾರ್ಯಕ್ಕೆ ಚರ್ಚೆಯನ್ನು ಮುಕ್ತಗೊಳಿಸುತ್ತದೆ. ಹೀಗಾಗಿ, ಮಾನವ ವ್ಯಕ್ತಿಯ ಸೇವೆಯನ್ನು ಕೇಂದ್ರವಾಗಿಟ್ಟುಕೊಂಡು, ವಿಶ್ವಾಸದ ಸದ್ಗುಣಗಳಲ್ಲಿ ಬೇರೂರಿರುವ ಸಿನೊಡಲ್ ಮಾರ್ಗದ ಮೂಲಕ ಇತಿಹಾಸದ ಸವಾಲುಗಳನ್ನು ಎದುರಿಸುವ ವಿಶೇಷ ಹೊಣೆಗಾರಿಕೆಯನ್ನು ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಚರ್ಚೆಗೆ ವಹಿಸುತ್ತದೆ ಎಂದು ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

27 ಜೂನ್ 2026, 18:14