2012ರ ಮಾರ್ಚ್ 7ರಂದು ನಡೆದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಅಗಲಿದ ಜಗದ್ಗುರು XVIನೇ ಬೆನೆಡಿಕ್ಟ್  ರವರ ಛಾಯಾಚಿತ್ರ. 2012ರ ಮಾರ್ಚ್ 7ರಂದು ನಡೆದ ಸಾರ್ವಜನಿಕ ಭೇಟಿಯ ಸಂದರ್ಭದಲ್ಲಿ ಅಗಲಿದ ಜಗದ್ಗುರು XVIನೇ ಬೆನೆಡಿಕ್ಟ್ ರವರ ಛಾಯಾಚಿತ್ರ. 

ಜಗದ್ಗುರು XVIನೇ ಬೆನೆಡಿಕ್ಟ್ ರವರ ಅಪ್ರಕಟಿತ ಪ್ರಭೋಧನೆಗಳು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿವೆ.

ವ್ಯಾಟಿಕನ್ ಪ್ರಕಾಶನ ಸಂಸ್ಥೆ (ಎಲ್ಇವಿ) (ಪ್ರಭುವು ನಮ್ಮ ಕೈಯನ್ನು ಹಿಡಿದಿದ್ದಾನೆ) ಎಂಬ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಪ್ರಕಟಿಸಿದೆ. ಈ ಪುಸ್ತಕದಲ್ಲಿ ಜಗದ್ಗುರುಗಳು XVIನೇ ಬೆನೆಡಿಕ್ಟ್ ರವರು ತಮ್ಮ ಅವಧಿಕಾರವಧಿಯಲ್ಲಿ ಹಾಗೂ ರಾಜೀನಾಮೆಯ ನಂತರ ಖಾಸಗಿ ಪವಿತ್ರ ಬಲಿಪೂಜೆಗಳ ಸಂದರ್ಭದಲ್ಲಿ ನೀಡಿದ, ಇದುವರೆಗೆ ಪ್ರಕಟವಾಗದ ಪ್ರವಚನಗಳನ್ನು ಸಂಗ್ರಹಿಸಲಾಗಿದೆ.

ವ್ಯಾಟಿಕನ್ ವರದಿ

"ಪ್ರಭು ನಮ್ಮ ಕೈಯನ್ನು ಹಿಡಿದಿದ್ದಾನೆ" ಎಂಬ ಹೊಸ ಇಂಗ್ಲಿಷ್ ಆವೃತ್ತಿಯು  ಜಗದ್ಗುರು XVIನೇ ಬೆನೆಡಿಕ್ಟ್  ರವರ ಇದುವರೆಗೆ ಪ್ರಕಟವಾಗದ ಪ್ರವಚನಗಳ ಸಂಕಲನವನ್ನು ಓದುಗರಿಗೆ ನೀಡುತ್ತದೆ. ಈ ಕೃತಿಯ ಮೂಲಕ ಓದುಗರು ಜೋಸೆಫ್ ರಾಟ್ಜಿಂಗರ್ ರವರ ಧ್ವನಿಯನ್ನು ಮತ್ತೊಮ್ಮೆ ಬೋಧಕ, ಧರ್ಮಶಾಸ್ತ್ರಜ್ಞ ಮತ್ತು ಆತ್ಮೀಯ ಗುರುಗಳ ರೂಪದಲ್ಲಿ ಆಲಿಸುವ ಅವಕಾಶವನ್ನು ಪಡೆಯುತ್ತಾರೆ.

ಈ ಕೃತಿ ಮೂಲತಃ ವ್ಯಾಟಿಕನ್ ಪ್ರಕಾಶನ ಸಂಸ್ಥೆ (ಎಲ್ಇವಿ)ಯಿಂದ ಇಟಾಲಿಯನ್ ಭಾಷೆಯಲ್ಲಿ "ಇಲ್ ಸಿಗ್ನೋರ್ ಸಿ ಟೈನ್ ಪರ್ ಮಾನೋ" ಎಂಬ ಶೀರ್ಷಿಕೆಯಡಿ ಪ್ರಕಟಗೊಂಡಿತ್ತು. ಇದರಲ್ಲಿ 2005ರಿಂದ 2017ರವರೆಗೆ ಆಗಮನಕಾಲ, ಉಪವಾಸಕಾಲ ಮತ್ತು ಈಸ್ಟರ್ ಕಾಲದ ಸಂದರ್ಭದಲ್ಲಿ ನೀಡಲಾದ ಪ್ರವಚನಗಳನ್ನು ಸಂಗ್ರಹಿಸಲಾಗಿದೆ.

ರಿಕಾರ್ಡೊ ಬೊಲ್ಲಾಟಿ, ಲೂಕಾ ಕಾರುಸೊ ಮತ್ತು ಜೆಸುಯಿಟ್ ಧರ್ಮಗುರು ವಂ.ಸ್ವಾಮಿ ಫೆಡೆರಿಕೊ ಲೊಂಬಾರ್ಡಿ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ಇದಕ್ಕೆ ಜಗದ್ಗುರು ಬೆನೆಡಿಕ್ಟ್ ರವರ ಮಾಜಿ ಖಾಸಗಿ ಕಾರ್ಯದರ್ಶಿಯಾಗಿದ್ದ ಆರ್ಚ್‌ಬಿಷಪ್ ಜಾರ್ಜ್ ಗೆನ್ಸ್‌ವೈನ್ ರವರ ಮುನ್ನುಡಿ ಹಾಗೂ ಜೋಸೆಫ್ ರಾಟ್ಜಿಂಗರ್–XVIನೇ ಬೆನೆಡಿಕ್ಟ್  ವ್ಯಾಟಿಕನ್ ಪ್ರತಿಷ್ಠಾನದ ಅಧ್ಯಕ್ಷರಾದ ವಂ.ಸ್ವಾಮಿ ಲೊಂಬಾರ್ಡಿ ರವರ ಪರಿಚಯಾತ್ಮಕ ಲೇಖನವನ್ನು ಸೇರಿಸಲಾಗಿದೆ.

ಖಾಸಗಿ ಬಲಿಪೂಜೆಗಳು, ಸಾರ್ವಜನಿಕ ಸಾಕ್ಷ್ಯ

ಈ ಪ್ರಭೋಧನೆಗಳನ್ನು ಜಗದ್ಗುರು XVIನೇ ಬೆನೆಡಿಕ್ಟ್ ರವರು ಜಗದ್ಗುರುಗಳಾಗಿದ್ದ ಅವಧಿಯಲ್ಲಿ ಮತ್ತು ನಂತರ ಜಗದ್ಗುರು ಎಮೆರಿಟಸ್ ಆಗಿದ್ದಾಗ, ಜಗದ್ಗುರುಗಳ ಗೃಹಸ್ಥಳದ ಸದಸ್ಯರು ಹಾಗೂ ಕೆಲ ಅತಿಥಿಗಳೊಂದಿಗೆ ಆಚರಿಸಿದ “ಖಾಸಗಿ” ಪವಿತ್ರ ಬಲಿಪೂಜೆಗಳ ಸಂದರ್ಭದಲ್ಲಿ ನೀಡಿದ್ದರು.

ಕೆಲವು ಪ್ರಭೋಧನೆಗಳು ಪ್ರೇಷಿತರ ಅರಮನೆಯ ಪ್ರಾರ್ಥನಾ ಮಂದಿರದಲ್ಲಿ ನೀಡಲ್ಪಟ್ಟಿದ್ದರೆ, ಇನ್ನು ಕೆಲವು ವ್ಯಾಟಿಕನ್‌ನ ಮಾತೆರ್ ಎಕ್ಲೆಸಿಯೆ  ಮಠದಲ್ಲಿ ನೀಡಲ್ಪಟ್ಟವು. ಜಗದ್ಗುರುಗಳ ಪದವಿಗೆ ರಾಜೀನಾಮೆ ನೀಡಿದ ನಂತರ XVIನೇ ಬೆನೆಡಿಕ್ಟ್  ಅಲ್ಲಿಯೇ ವಾಸಿಸುತ್ತಿದ್ದರು.

ಈ ಪ್ರಭೋಧನೆಗಳು ಖಾಸಗಿ ವಾತಾವರಣದಲ್ಲಿ ನೀಡಲ್ಪಟ್ಟಿದ್ದರೂ, ಅವು ಜಗದ್ಗುರು ಬೆನೆಡಿಕ್ಟ್ ರವರ ಬೋಧನೆಯ ಆಳತೆ ಮತ್ತು ಸರಳತೆಯನ್ನು ಪರಿಚಯಿಸುವ ಅಮೂಲ್ಯ ಕಿಟಕಿಯನ್ನು ತೆರೆಯುತ್ತವೆ. ಪವಿತ್ರ ಗ್ರಂಥವನ್ನು ಅವರು ಯಾವಾಗಲೂ ಹೊಸ ಬೆಳಕಿನಲ್ಲಿ ಓದಿ, ಅದರಿಂದ ವಿಶ್ವಾಸ, ಪ್ರಾರ್ಥನೆ ಮತ್ತು ದೈನಂದಿನ ಕ್ರೈಸ್ತ ಜೀವನಕ್ಕೆ ಮಾರ್ಗದರ್ಶನವನ್ನು ಹೇಗೆ ನೀಡುತ್ತಿದ್ದರು ಎಂಬುದನ್ನು ಅವು ತೋರಿಸುತ್ತವೆ.

ಕ್ರಿಸ್ತನೇ ಕೇಂದ್ರಬಿಂದು

ಈ ಪುಸ್ತಕದ ಪುಟಗಳು ಜೋಸೆಫ್ ರಾಟ್ಜಿಂಗರ್ ರವರ ವಿಶ್ವಾಸದ ಕೇಂದ್ರದಲ್ಲಿ ನಿರ್ಜೀವ ತರ್ಕ ಅಥವಾ ಕೇವಲ ಬೌದ್ಧಿಕ ಚಿಂತನೆಗಳಿರಲಿಲ್ಲ,ಬದಲಾಗಿ ಕ್ರಿಸ್ತನೊಂದಿಗೆ ಇರುವ ವೈಯಕ್ತಿಕ ಸಂಬಂಧವೇ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಈ ಪ್ರಭೋಧನೆಗಳಲ್ಲಿ ಜಗದ್ಗುರು ಬೆನೆಡಿಕ್ಟ್ ರವರು ತಮ್ಮ ಜನರೊಂದಿಗೆ ನಡೆಯುವ, ಅವರನ್ನು ಬೆಂಬಲಿಸುವ ಮತ್ತು ಅವರ ಕೈ ಹಿಡಿದು ನಡೆಸುವ ಪ್ರಭುವಿನ ರಹಸ್ಯವನ್ನು ಮತ್ತೆ ಮತ್ತೆ ಧ್ಯಾನಿಸುತ್ತಾರೆ.

ಪುಸ್ತಕದ ಶೀರ್ಷಿಕೆಯೇ ಈ ಮೂಲಭೂತ ಸಂದೇಶವನ್ನು ವ್ಯಕ್ತಪಡಿಸುತ್ತದೆ ಕ್ರೈಸ್ತ ಜೀವನವು ಏಕಾಂಗಿಯ ಪಯಣವಲ್ಲ ಅದು ದೇವರ ಸಾನ್ನಿಧ್ಯ ಮತ್ತು ಕರುಣೆಯಿಂದ ಮಾರ್ಗದರ್ಶನ ಪಡೆಯುವ ಯಾತ್ರೆಯಾಗಿದೆ.

ಈ ಸಂಕಲನವು ಬೆನೆಡಿಕ್ಟ್ ರವರ ಧರ್ಮಶಾಸ್ತ್ರೀಯ ಚಿಂತನೆ ಮತ್ತು ಅವರ ಧರ್ಮಾಧ್ಯಕ್ಷೀಯ ಸೇವೆಯ ನಡುವಿನ ನಿರಂತರತೆಯನ್ನೂ ತೋರಿಸುತ್ತದೆ. ಅವರ ಪ್ರತಿಬಿಂಬಗಳು ಸ್ಪಷ್ಟತೆ, ಆತ್ಮೀಯ ಆಳತೆ ಮತ್ತು ಕ್ರಿಸ್ತಕೇಂದ್ರಿತ ದೃಷ್ಟಿಕೋನದಿಂದ ಕೂಡಿದ್ದು, ಅವು ಅವರ ಜಗದ್ಗುರುಗಳು ಪದವಿಯ ಪ್ರಮುಖ ಲಕ್ಷಣಗಳಾಗಿದ್ದವು.

 “ಪ್ರಭು ನಮ್ಮನ್ನು ಕೈಯಿಂದ ಹಿಡಿದಿದ್ದಾನೆ” ಜಗದ್ಗುರು XVIನೇ ಬೆನೆಡಿಕ್ಟ್  ರವರ ಅಪ್ರಕಟಿತ ಪ್ರವಚನಗಳ ಮೊದಲ ಸಂಪುಟವಾಗಿದೆ. ಸಾಮಾನ್ಯ ಕಾಲದ ಪ್ರಭೋಧನೆಗಳಿಗೆ ಮೀಸಲಾದ ಎರಡನೇ ಸಂಪುಟವೂ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.

ಇಟಾಲಿಯನ್ ಆವೃತ್ತಿಯನ್ನು ಮೇ 17ರಂದು ಟ್ಯೂರಿನ್ ಅಂತರರಾಷ್ಟ್ರೀಯ ಪುಸ್ತಕ ಮೇಳದಲ್ಲಿ “ಬೆನೆಡಿಕ್ಟ್ XVI: ‘ಕ್ರಿಸ್ತನು ಭವಿಷ್ಯ!’ – ಅಪ್ರಕಟಿತ ಪ್ರಭೋಧನೆಗಳು” ಎಂಬ ಶೀರ್ಷಿಕೆಯ ವಿಶೇಷ ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಂ. ಸ್ವಾಮಿ ಫೆಡೆರಿಕೊ ಲೊಂಬಾರ್ಡಿ ಹಾಗೂ ಇಟಾಲಿಯನ್ ಗಾಯಕ-ಗೀತರಚನೆಕಾರ ಜಿಯೋವಾನಿ ಲಿಂಡೊ ಫೆರೆಟ್ಟಿ ಭಾಗವಹಿಸಿದ್ದರು. ಚರ್ಚೆಯನ್ನು ವ್ಯಾಟಿಕನ್ ಸಂವಹನ ಡಿಕಾಸ್ಟರಿಯ ಸಂಪಾದಕೀಯ ನಿರ್ದೇಶಕರಾದ ಆಂಡ್ರಿಯಾ ಟೊರ್ನಿಯೆಲ್ಲಿ ನಿರ್ವಹಿಸಿದರು.

ಇಂಗ್ಲಿಷ್ ಆವೃತ್ತಿಯ ಪ್ರಕಟಣೆಯೊಂದಿಗೆ, ಈ ಹಿಂದೆ ಪ್ರಕಟವಾಗದಿದ್ದ ಅಮೂಲ್ಯ ಪ್ರಭೋಧನೆಗಳು ಈಗ ವಿಶಾಲ ಓದುಗರ ವಲಯಕ್ಕೆ ಲಭ್ಯವಾಗಿವೆ. ಅವು ಪೋಪ್ XVIನೇ ಬೆನೆಡಿಕ್ಟ್ ರವರ ಬೋಧನೆಯೊಂದಿಗೆ ಹೊಸದಾಗಿ ಮುಖಾಮುಖಿಯಾಗುವ ಅವಕಾಶವನ್ನು ನೀಡುವುದರ ಜೊತೆಗೆ, ವಿಶ್ವಾಸ ಮತ್ತು ಇತಿಹಾಸದ ಕೇಂದ್ರದಲ್ಲಿ ಕ್ರಿಸ್ತನನ್ನು ಸ್ಥಾಪಿಸಬೇಕೆಂಬ ಅವರ ಜೀವಮಾನದ ಆಹ್ವಾನವನ್ನು ಮತ್ತೊಮ್ಮೆ ನೆನಪಿಸುತ್ತವೆ.

24 ಜೂನ್ 2026, 19:57