ಸಂತ ಪೌಲರ ಬಸಿಲಿಕಾದಲ್ಲಿ ಕಾರ್ಡಿನಲ್ ಯು ರವರ ಅಧ್ಯಕ್ಷತೆಯಲ್ಲಿ ಪವಿತ್ರ ಬಲಿಪೂಜೆ ನೆರವೇರಿತು. ಸಂತ ಪೌಲರ ಬಸಿಲಿಕಾದಲ್ಲಿ ಕಾರ್ಡಿನಲ್ ಯು ರವರ ಅಧ್ಯಕ್ಷತೆಯಲ್ಲಿ ಪವಿತ್ರ ಬಲಿಪೂಜೆ ನೆರವೇರಿತು.  (ANSA)

ಕಾರ್ಡಿನಲ್ ಯು ಹ್ಯೂಂಗ್-ಸಿಕ್: “ಕೊರಿಯಾ ಉಪದ್ವೀಪದಲ್ಲಿ ಶಾಂತಿ ಸ್ಥಾಪನೆಯ ಕನಸನ್ನು ಎಂದಿಗೂ ತ್ಯಜಿಸಲು ಸಾಧ್ಯವಿಲ್ಲ.”

ಧರ್ಮಗುರುಗಳ ಧರ್ಮಾಧಿಕರಣದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಲಾಜರಸ್ ಯು ಹ್ಯೂಂಗ್-ಸಿಕ್ ರವರು, ಕೊರಿಯಾ ಉಪದ್ವೀಪದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲೆಂದು ಪ್ರಾರ್ಥಿಸುವ ಉದ್ದೇಶದಿಂದ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಈ ಬಲಿಪೂಜೆಯಲ್ಲಿ ದಕ್ಷಿಣ ಕೊರಿಯಾದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ಸಹ ಭಾಗವಹಿಸಿದರು.

ವ್ಯಾಟಿಕನ್ ವರದಿ

ಧರ್ಮಗುರುಗಳ ಧರ್ಮಾಧಿಕರಣದ ಪ್ರಿಫೆಕ್ಟ್ ಹಾಗೂ ಡೇಜಿಯೊನ್‌ನ ಮಾಜಿ ಬಿಷಪ್ ಆಗಿರುವ ಕಾರ್ಡಿನಲ್ ಲಾಜರಸ್ ಯು ಹ್ಯೂಂಗ್-ಸಿಕ್ ಅವರು, ರೋಮಿನ ಸಂತ ಪೌಲರ ಬಸಿಲಿಕಾದಲ್ಲಿ ಭಾನುವಾರ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ಉತ್ತರ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲೆಂದು ಪ್ರಾರ್ಥಿಸಿದರು. ಈ ಬಲಿಪೂಜೆಯಲ್ಲಿ ದಕ್ಷಿಣ ಕೊರಿಯಾದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ಭಾಗವಹಿಸಿದ್ದರು.

ತಮ್ಮ ಪ್ರವಚನದಲ್ಲಿ ಕಾರ್ಡಿನಲ್ ಯು, “ಕೊರಿಯಾ ಉಪದ್ವೀಪವು ಇನ್ನೂ ವಿಭಜನೆಯ ಗಾಯಗಳನ್ನು ಹೊತ್ತುಕೊಂಡಿದೆ. ಒಂದೇ ಕುಟುಂಬದ ಸಹೋದರ-ಸಹೋದರಿಯರು ಇನ್ನೂ ಬೇರ್ಪಟ್ಟ ಜೀವನ ನಡೆಸುತ್ತಿದ್ದಾರೆ. ಇದಕ್ಕಿಂತ ದೊಡ್ಡ ನೋವು ಮತ್ತೇನಿರಬಹುದು? ಯಾವುದೇ ಕಾರಣಕ್ಕೂ ನಾವು ಶಾಂತಿಯ ಕನಸನ್ನು ಕೈಬಿಡಬಾರದು. ಶಾಂತಿಯನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಎಲ್ಲರೂ ಒಟ್ಟಾಗಿ ಮತ್ತು ಸಂಪೂರ್ಣ ಶಕ್ತಿಯಿಂದ ಹೊತ್ತುಕೊಳ್ಳಬೇಕು” ಎಂದು ಹೇಳಿದರು.

ರಾಷ್ಟ್ರಪತಿ ಲೀ ಜೇ-ಮ್ಯುಂಗ್ ರವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಂಘರ್ಷಕ್ಕಿಂತ ಸಂವಾದವೇ ಶಕ್ತಿಶಾಲಿಯಾಗಿದೆ, ದ್ವೇಷಕ್ಕಿಂತ ಸೌಹಾರ್ದತೆಯೇ ಬಲಿಷ್ಠವಾಗಿದೆ ಹಾಗೂ ಭಯಕ್ಕಿಂತ ವಿಶ್ವಾಸವೇ ಮಹತ್ತರವಾಗಿದೆ ಎಂಬುದನ್ನು ದಕ್ಷಿಣ ಕೊರಿಯಾ ಜಗತ್ತಿಗೆ ಸಾಕ್ಷಿಯಾಗಿ ತೋರಿಸಲಿ” ಎಂದು ಆಶಿಸಿದರು. ಸಾಮಾನ್ಯ ಕಾಲದ ಹನ್ನೊಂದನೇ ಭಾನುವಾರದ ಸಂದರ್ಭದಲ್ಲಿ, ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿಯೂ ಭರವಸೆಯು ಸದಾ ಜೀವಂತವಾಗಿರುತ್ತದೆ ಎಂದು ಅವರು ನೆನಪಿಸಿದರು.

ಹಿಂಸೆಗೆ ಬದಲಾಗಿ ಕರುಣೆ ಮತ್ತು ನಿರ್ಲಕ್ಷ್ಯಕ್ಕೆ ಬದಲಾಗಿ ಸಂವಹನವು ಸ್ಥಾನ ಪಡೆಯಬೇಕು ಎಂದು ಕಾರ್ಡಿನಲ್ ಒತ್ತಿಹೇಳಿದರು. “ಯಾರೊಂದಿಗಾದರೂ ಸಂವಾದ ಅಸಾಧ್ಯವೆಂದು ತೋರುತ್ತಿದ್ದರೂ, ಕೇಳಲು ಸಿದ್ಧವಾಗಿರುವ ಹೃದಯದಿಂದ ಅವರನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಶಾಂತಿಯ ದಾರಿ ತೆರೆದುಕೊಳ್ಳುತ್ತದೆ” ಎಂದು ಅವರು ಹೇಳಿದರು. ಜಗದ್ಗುರು XIVನೇ ಲಿಯೋರವರು ಮಾರ್ಗದರ್ಶನದಲ್ಲಿ, ಪ್ರತಿಯೊಬ್ಬ ಮಾನವ ಜೀವಿಯ ಘನತೆಯನ್ನು ಕಾಪಾಡಲು ಮತ್ತು ಶಾಂತಿಯ ಜಗತ್ತನ್ನು ನಿರ್ಮಿಸಲು ಕಥೋಲಿಕ ಧರ್ಮ ಸಭೆ ತನ್ನ ಧ್ಯೇಯವನ್ನು ನಿರಂತರವಾಗಿ ಮುಂದುವರಿಸುತ್ತಿದೆ ಎಂದರು.

ನಿಜವಾದ ಶಾಂತಿ ಎಂದರೆ ಕೇವಲ ಸಂಘರ್ಷಗಳ ಅನುಪಸ್ಥಿತಿ ಅಲ್ಲ ಎಂದು ಕಾರ್ಡಿನಲ್ ವಿವರಿಸಿದರು. ಅದು ಪ್ರಾಮಾಣಿಕ ಮತ್ತು ಮುಕ್ತ ಸಂವಾದ, ಪ್ರತಿಯೊಬ್ಬ ಮಾನವ ವ್ಯಕ್ತಿಯ ಘನತೆಯ ಗೌರವ ಹಾಗೂ ಇತರರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಿಂದ ಹುಟ್ಟುತ್ತದೆ ಎಂದು ಹೇಳಿದರು. ರಾಜಕೀಯ ಮತ್ತು ರಾಜತಾಂತ್ರಿಕ ಭಾಷೆಗಳು ವಿಭಿನ್ನವಾಗಿರಬಹುದು, ಆದರೆ ಜೀವವನ್ನು ಕಾಪಾಡುವುದು, ಮಾನವನಿಗೆ ಸೇವೆ ಸಲ್ಲಿಸುವುದು ಮತ್ತು ಸಾಮಾನ್ಯ ಹಿತವನ್ನು ಹುಡುಕುವುದು ಎಂಬ ಗುರಿಗಳು ಯಾವಾಗಲೂ ಸುವಾರ್ತೆಯ ಆತ್ಮದಲ್ಲಿ ಒಂದಾಗಬಹುದು ಎಂದು ಅವರು ತಿಳಿಸಿದರು.

ತಮ್ಮ ಭಾಷಣದ ಕೊನೆಯಲ್ಲಿ, ಕಾರ್ಡಿನಲ್ ಯು ಅವರು 2014ರಲ್ಲಿ ದಕ್ಷಿಣ ಕೊರಿಯಾ ಭೇಟಿಯ ಸಂದರ್ಭದಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಸೆವೋಲ್ ದೋಣಿ ದುರಂತದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾದ ಘಟನೆಯನ್ನು ಸ್ಮರಿಸಿದರು. ಅವರ ನೋವನ್ನು ಮೌನ, ಪ್ರಾರ್ಥನೆ ಮತ್ತು ಪ್ರೀತಿಯಿಂದ ತುಂಬಿದ ದೃಷ್ಟಿಯ ಮೂಲಕ ಜಗದ್ಗುರುಗಳು ಹಂಚಿಕೊಂಡರು ಎಂದು ಅವರು ಹೇಳಿದರು. “ಮಾನವೀಯ ದುಃಖದ ಮುಂದೆ ನಾವು ತಟಸ್ಥರಾಗಿರಲು ಸಾಧ್ಯವಿಲ್ಲ” ಎಂಬ ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿದ ಕಾರ್ಡಿನಲ್, ಸುವಾರ್ತೆಯ ಮಾರ್ಗವು ವಿಭಜನೆಗಳನ್ನು ಸೃಷ್ಟಿಸುವುದಲ್ಲ; ಬದಲಾಗಿ ಗಾಯಗೊಂಡವರ ಪಕ್ಕದಲ್ಲಿ ನಿಲ್ಲುವುದಾಗಿದೆ ಎಂದು ಒತ್ತಿಹೇಳಿದರು.

 

 

14 ಜೂನ್ 2026, 12:13