ಕಾಸ್ಟೆಲ್ ಗಾಂಡೋಲ್ಫೋದಲ್ಲಿ ‘ಬೊರ್ಗೊ ಡೈಲಾಗ್ಸ್’ ಉದ್ಘಾಟನೆಗೊಂಡವು.
ವ್ಯಾಟಿಕನ್ ವರದಿ
2026ರ ಜೂನ್ 17ರಿಂದ 19ರವರೆಗೆ, ಬೊರ್ಗೊ ಲೌದಾತೋ ಸಿ’ ಗ್ರಾಮ ಮೊದಲ ಬಾರಿಗೆ ಬೊರ್ಗೊ ಲೌದಾತೋ ಸಿ’ ಸಂವಾದಗಳ ಉದ್ಘಾಟನಾ ಆವೃತ್ತಿಗೆ ಆತಿಥ್ಯ ವಹಿಸಲಿದೆ.
ಈ ಕಾರ್ಯಕ್ರಮವನ್ನು ಲೌದಾತೋ ಸಿ’ ಉನ್ನತ ಶಿಕ್ಷಣ ಕೇಂದ್ರ, ನೋಟ್ರ್ ಡೇಮ್ ವಿಶ್ವವಿದ್ಯಾಲಯ, ಡೆಲಾಯ್ಟ್ ಸ್ವಿಟ್ಜರ್ಲ್ಯಾಂಡ್ ಮತ್ತು ಹ್ಯಾಂಡ್‌ಶೇಕ್ ಸ್ಟ್ರಾಟೆಜೀಸ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಕಾಸ್ಟೆಲ್ ಗಾಂಡೋಲ್ಫೋದ ಪಾಪಲ್ ಉದ್ಯಾನಗಳೊಳಗೆ ಇರುವ ಬೊರ್ಗೊ ಲೌದಾತೋ ಸಿ’, ಸಮಗ್ರ ಪರಿಸರಶಾಸ್ತ್ರ, ಪರಿಸರ ಸುಸ್ಥಿರತೆ ಮತ್ತು ವೃತ್ತಾಕಾರದ ಆರ್ಥಿಕತೆಯ ಕುರಿತ ತರಬೇತಿಗೆ ಸಮರ್ಪಿತ ಕೇಂದ್ರವಾಗಿದೆ. ಜಗದ್ಗುರು ಫ್ರಾನ್ಸಿಸ್ ರವರ ಲೌದಾತೋ ಸಿ ಪರಿಪತ್ರಿಕೆಯಲ್ಲಿ ವ್ಯಕ್ತವಾದ ತತ್ವಗಳನ್ನು ಸ್ಪಷ್ಟ, ಕಾರ್ಯರೂಪಕ್ಕೆ ತರಬಹುದಾದ ಹಾಗೂ ಪುನರಾವರ್ತಿಸಬಹುದಾದ ಅಭ್ಯಾಸಗಳಾಗಿ ಪರಿವರ್ತಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಬೊರ್ಗೊ ಸಂವಾದಗಳು ನಮ್ಮ ಕಾಲದ ಪ್ರಮುಖ ಸವಾಲುಗಳ ಕುರಿತು ಚರ್ಚಿಸಲು ಉದ್ಯಮ ಕ್ಷೇತ್ರದ ನಾಯಕರು, ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು, ಶೈಕ್ಷಣಿಕ ವಲಯದ ತಜ್ಞರು, ಸಾಂಸ್ಕೃತಿಕ ಕ್ಷೇತ್ರದ ವ್ಯಕ್ತಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಧರ್ಮ ಸಭೆಯ ನಾಯಕರನ್ನು ಒಂದೇ ವೇದಿಕೆಗೆ ತರಲಿವೆ.
ವೈವಿಧ್ಯಮಯ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುವ ವ್ಯಕ್ತಿಗಳ ನಡುವಿನ ನಿರಂತರ ಸಂವಾದಕ್ಕೆ ವೇದಿಕೆಯಾಗುವಂತೆ ಈ ಉಪಕ್ರಮವನ್ನು ರೂಪಿಸಲಾಗಿದೆ. ಇದರ ಮೂಲಕ ಪರಸ್ಪರ ಅಭಿಪ್ರಾಯ ವಿನಿಮಯ, ಸಹಕಾರ ಹಾಗೂ ಸಾಮಾನ್ಯ ಸವಾಲುಗಳಿಗೆ ಹಂಚಿಕೆಯ ಪ್ರತಿಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದನ್ನು ಉತ್ತೇಜಿಸಲಾಗುತ್ತದೆ.
ಲೌದಾತೋ ಸಿ’ ಪರಿಪತ್ರಿಕೆಯ ಸ್ಫೂರ್ತಿಯಿಂದ ಪ್ರೇರಿತವಾದ ಧೈರ್ಯಶಾಲಿ ನಾಯಕತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಮುದಾಯವೊಂದನ್ನು ನಿರ್ಮಿಸುವ ಉದ್ದೇಶವೂ ಈ ಕಾರ್ಯಕ್ರಮಕ್ಕಿದೆ. ಜಾಗತಿಕ ಮಟ್ಟದಲ್ಲಿ ಮಹತ್ವದ ಘಟ್ಟದಲ್ಲಿರುವ ಈ ಸಂದರ್ಭದಲ್ಲಿ, ಧಾರ್ಮಿಕ ಸಂಸ್ಥೆಗಳು, ಶೈಕ್ಷಣಿಕ ವಲಯ, ನಾಗರಿಕ ಸಮಾಜ ಹಾಗೂ ಖಾಸಗಿ ಕ್ಷೇತ್ರಗಳ ನಾಯಕರು ಒಟ್ಟುಗೂಡಿ ತುರ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಲು ಈ ವೇದಿಕೆ ಸಹಕಾರಿಯಾಗಲಿದೆ.