ಹುಡುಕಿ

ವ್ಯಾಟಿಕನ್ ಮಾಧ್ಯಮಕ್ಕೆ ಭೇಟಿ ನೀಡಿದ ವೇಳೆ ಇಸಿಐಸಿ ಸಮ್ಮೇಳನದ ಪ್ರತಿನಿಧಿಗಳು. ವ್ಯಾಟಿಕನ್ ಮಾಧ್ಯಮಕ್ಕೆ ಭೇಟಿ ನೀಡಿದ ವೇಳೆ ಇಸಿಐಸಿ ಸಮ್ಮೇಳನದ ಪ್ರತಿನಿಧಿಗಳು. 

ಇಸಿಐಸಿ ಸದಸ್ಯರಾದ ಯುರೋಪಿನ ಕ್ರೈಸ್ತ ಸಂವಹನಕಾರರು ವ್ಯಾಟಿಕನ್ ಮಾಧ್ಯಮದ ಕಾರ್ಯಚಟುವಟಿಕೆಗಳನ್ನು ಪರಿಚಯಿಸಿಕೊಂಡರು.

ರೋಮಿನಲ್ಲಿ ಪ್ರಸ್ತುತ ನಡೆಯುತ್ತಿರುವ ಯುರೋಪಿಯನ್ ಕ್ರೈಸ್ತ ಇಂಟರ್ನೆಟ್ ಸಮ್ಮೇಳನದ ವಾರ್ಷಿಕ ಸಭೆಯ ಸಂದರ್ಭದಲ್ಲಿ, ವಿವಿಧ ಕ್ರೈಸ್ತ ಪಂಗಡಗಳಿಗೆ ಸೇರಿದ 30ಕ್ಕೂ ಹೆಚ್ಚು ಯುರೋಪಿನ ಸಂವಹನ ತಜ್ಞರು, ದೇವಶಾಸ್ತ್ರಜ್ಞರು ಹಾಗೂ ಡಿಜಿಟಲ್ ಪರಿಣಿತರು, ಜಗದ್ಗುರುಗಳ ಅಧಿಕಾರ ಸ್ಥಳದ ಮಾಧ್ಯಮ ಕಾರ್ಯಾಚರಣೆಗಳ ಕೇಂದ್ರ ಕಚೇರಿಯಾಗಿರುವ ಪಲಾಝೊ ಪಿಯೊಗೆ ಭೇಟಿ ನೀಡಿದರು.

ವ್ಯಾಟಿಕನ್ ವರದಿ

ಈ ವರ್ಷದ ಇಸಿಐಸಿ ಸಮ್ಮೇಳನದ ವಿಷಯ “ಪ್ರಾಂಪ್ಟ್‌ಗಳಿಂದ ಪ್ರಾರ್ಥನೆಗಳತ್ತ: ಕೃತಕ ಬುದ್ಧಿಮತ್ತೆ ಮತ್ತು ನೈಜ ಆಧ್ಯಾತ್ಮಿಕತೆ” ಎಂಬುದಾಗಿದೆ. ರೋಮಿನ ಕಾಸಾ ಲಾ ಸಾಲೆಯಲ್ಲಿ ನಡೆಯುತ್ತಿರುವ ಈ ಯುರೋಪಿಯನ್ ಕ್ರೈಸ್ತ ಇಂಟರ್ನೆಟ್ ಸಮ್ಮೇಳನವು, ಯುರೋಪಿನಾದ್ಯಂತದ ಕ್ರೈಸ್ತ ನಾಯಕರು, ಡಿಜಿಟಲ್ ತಜ್ಞರು, ದೇವಶಾಸ್ತ್ರಜ್ಞರು ಹಾಗೂ ವಿವಿಧ ಧರ್ಮ ಸಭೆಗಳು ಮತ್ತು ಧರ್ಮ ಸಭೆಯ-ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುವ ಒಂದು ಏಕ್ಯತಾವಾದಿ (ಎಕ್ಯುಮೆನಿಕಲ್) ಜಾಲವಾಗಿದೆ.

ಪ್ರಸ್ತುತ ಪೋಲೆಂಡ್‌ನ ಲೂಥರನ್ ಧರ್ಮ ಸಭೆಯ ವಕ್ತಾರರಾದ ಅಗ್ನೆಶ್ಕಾ ಗೊದ್ಫ್ರೆಯೋವ್-ಟಾರ್ನೊಗೋರ್ಸ್ಕಾ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಇಸಿಐಸಿಯ ಉದ್ದೇಶ, ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಕ್ರೈಸ್ತ ಸಂವಹನ, ಸಾಕ್ಷ್ಯ ಮತ್ತು ಸುವಾರ್ತಾ ಪ್ರಸಾರಕ್ಕೆ ಡಿಜಿಟಲ್ ತಂತ್ರಜ್ಞಾನಗಳು ಹೇಗೆ ನೆರವಾಗಬಹುದು ಮತ್ತು ಅವುಗಳನ್ನು ಹೇಗೆ ರೂಪಿಸಬಹುದು ಎಂಬುದರ ಕುರಿತು ಒಟ್ಟಾಗಿ ಚಿಂತನೆ ನಡೆಸುವುದಾಗಿದೆ.

ಆಯೋಜಕರ ಪ್ರಕಾರ, ಈ ವಾರ್ಷಿಕ ಸಮ್ಮೇಳನವು ವಿವಿಧ ಕ್ರೈಸ್ತ ಸಂಪ್ರದಾಯಗಳು ಮತ್ತು ಯುರೋಪಿನ ವಿಭಿನ್ನ ಸನ್ನಿವೇಶಗಳನ್ನು ಪ್ರತಿನಿಧಿಸುವ ಸುಮಾರು 30 ಮಂದಿ ಭಾಗವಹಿಸುವವರನ್ನು ಒಟ್ಟುಗೂಡಿಸುತ್ತದೆ. ಇದರ ಮೂಲಕ ಆಳವಾದ ವಿಚಾರ ವಿನಿಮಯ, ಪರಸ್ಪರ ಕಲಿಕೆ ಮತ್ತು ಎಕ್ಯುಮೆನಿಕಲ್ ಸಂವಾದಕ್ಕೆ ಉತ್ತೇಜನ ದೊರೆಯುತ್ತದೆ. ಇದುವರೆಗೆ ನಡೆದ 29 ಇಸಿಐಸಿ ಸಮ್ಮೇಳನಗಳಲ್ಲಿ ಎರಡು ಸಮ್ಮೇಳನಗಳು 2005 ಮತ್ತು 2012ರಲ್ಲಿ ರೋಮಿನಲ್ಲಿ ನಡೆದಿದ್ದವು.

ಸಮ್ಮೇಳನದ ಭಾಗವಾಗಿ, ಪ್ರತಿನಿಧಿಗಳು ಪಲಾಝೊ ಪಿಯೊದಲ್ಲಿರುವ ಸಂವಹನ ವಿಭಾಗದ ಡಿಕಾಸ್ಟರಿಯನ್ನು  ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಜಗದ್ಗುರುಗಳ ಅಧಿಕಾರ ಸ್ಥಳದ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಉಪ ಸಂಪಾದಕೀಯ ನಿರ್ದೇಶಕರಾದ ಅಲೆಸ್ಸಾಂದ್ರೊ ಜಿಸೊಟ್ಟಿ ಅವರೊಂದಿಗೆ ಚರ್ಚೆ ನಡೆಸಿದರು. ಜೊತೆಗೆ, ವ್ಯಾಟಿಕನ್ ರೇಡಿಯೊ, ವ್ಯಾಟಿಕನ್ ನ್ಯೂಸ್ ಮತ್ತು ಎಲ್’ಒಸ್ಸೆರ್ವತೊರೆ ರೊಮಾನೊ ಪತ್ರಿಕೆಗಳು ಸ್ಪೇನ್‌ನಲ್ಲಿ ನಡೆಯುತ್ತಿರುವ ಜಗದ್ಗುರು ಲಿಯೋರವರು ಪ್ರೇಷಿತರ ಪ್ರವಾಸದ ವರದಿಯನ್ನು ಹೇಗೆ ನೀಡುತ್ತಿವೆ ಎಂಬುದನ್ನೂ ಅವರು ವಿವರಿಸಿದರು.

ನಂತರ ಸಾಲಾ ಮಾರ್ಕೋನಿ ಸಭಾಂಗಣದಲ್ಲಿ ನಡೆದ ಚರ್ಚೆಯ ಬಳಿಕ, ಇಸಿಐಸಿ ಸದಸ್ಯರಿಗೆ ಉತ್ಪಾದನಾ ನಿಯಂತ್ರಣ ಕೊಠಡಿಗಳ  ವೀಕ್ಷಣೆಯ ಅವಕಾಶ ಕಲ್ಪಿಸಲಾಯಿತು. ಇದೇ ವೇಳೆ, ಜಗದ್ಗುರು ಲಿಯೋರವರು ಕ್ಯಾನರಿ ದ್ವೀಪಗಳಿಗೆ ತಮ್ಮ ಧರ್ಮಾಧ್ಯಕ್ಷೀಯ ಭೇಟಿಗಾಗಿ ಆಗಮಿಸುತ್ತಿದ್ದ ಸಂದರ್ಭದಲ್ಲೇ, ವ್ಯಾಟಿಕನ್ ಮಾಧ್ಯಮಗಳು ಅವರ ಭೇಟಿಯ ಸುದ್ದಿಯನ್ನು ಹೇಗೆ ಪ್ರಸಾರ ಮಾಡುತ್ತಿವೆ ಎಂಬುದನ್ನು ಅವರು ನೇರವಾಗಿ ವೀಕ್ಷಿಸಿದರು.

ವ್ಯಾಟಿಕನ್ ಮಾಧ್ಯಮಗಳ ಭೇಟಿಯ ಸಂದರ್ಭದಲ್ಲಿ, ಸಂವಹನ ವಿಭಾಗದ ಡಿಕಾಸ್ಟರಿಯ ಕಾರ್ಯದರ್ಶಿಯಾದ ಮಾನ್ಸಿನ್ಯೋರ್ ಲೂಸಿಯೊ ಅಡ್ರಿಯನ್ ರೂಯಿಸ್ ರವರು, ಜಗದ್ಗುರು ಲಿಯೋರವರ "ಮ್ಯಾಗ್ನಿಫಿಕಾ ಹ್ಯುಮಾನಿಟಾಸ್" ಎನ್ಸೈಕ್ಲಿಕಲ್ ಪತ್ರಿಕೆಯ ಬೆಳಕಿನಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಇಸಿಐಸಿ ಸದಸ್ಯರಿಗೆ ವಿಶೇಷ ಉಪನ್ಯಾಸವನ್ನು ನೀಡಿದರು.

 

12 ಜೂನ್ 2026, 21:45