ಕಾರ್ಡಿನಲ್ ಸಭೆ: ನಾಲ್ಕನೇ ಅಧಿವೇಶನದಲ್ಲಿ ಸಿನೋಡ್ ಮತ್ತು ಯಾಜಕತ್ವದ ಕುರಿತು ಚರ್ಚೆ ಕೇಂದ್ರೀಕೃತವಾಯಿತು.
ವ್ಯಾಟಿಕನ್ ವರದಿ
ಅಸಾಧಾರಣ ಕಾರ್ಡಿನಲ್ ಸಭೆಯ ನಾಲ್ಕನೇ ಅಧಿವೇಶನ ಸಿನೋಡಾಲಿಟಿ ಮತ್ತು ಯಾಜಕತ್ವದ ಕುರಿತು ಆಳವಾದ ಚಿಂತನೆ
ಅಸಾಧಾರಣ ಕಾರ್ಡಿನಲ್ ಸಭೆಯ ನಾಲ್ಕನೇ ಅಧಿವೇಶನದ ಮೊದಲ ಭಾಗವು ಶನಿವಾರ ಮಧ್ಯಾಹ್ನ 4 ಗಂಟೆಗೆ ಆರಂಭವಾಯಿತು. ಈ ಅಧಿವೇಶನದಲ್ಲಿ ಹೊರಹೊಮ್ಮಿದ ಪ್ರಮುಖ ವಿಷಯಗಳಲ್ಲಿ, ಸಿನೋಡಾಲಿಟಿಯ ತಪೋಮಯ ಹಾಗೂ ಐತಿಹಾಸಿಕ ಆಯಾಮಗಳನ್ನು ಇನ್ನಷ್ಟು ಆಳವಾಗಿ ಅರಿಯುವ ಅಗತ್ಯದ ಜೊತೆಗೆ, ವಿಶ್ವಾಸಿಗಳಿಗೆ ಸುವಾರ್ತಾತ್ಮಕವಾಗಿದ್ದು, ಧರ್ಮಾಧಿಕಾರಶಾಹಿ (ಕ್ಲೆರಿಕಲಿಸಂ) ಮನೋಭಾವದಿಂದ ಮುಕ್ತವಾದ ಯಾಜಕತ್ವದ ಆದರ್ಶವನ್ನು ನೀಡುವ ಅಗತ್ಯವೂ ಪ್ರಮುಖವಾಗಿತ್ತು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆಯ ಪ್ರಕಾರ, ಈ ಅಧಿವೇಶನವು ಹೊಸ ಸಿನೋಡ್ ಸಭಾಂಗಣದಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಕಾರ್ಡಿನಲ್ ಜೋಸೆಫ್ ವಿಲಿಯಂ ಟೋಬಿನ್ ವಹಿಸಿದ್ದರು.
ಧರ್ಮ ಸಭೆಯ ಮೇಲೆ ಅನಗತ್ಯ ಭಾರವಾಗದಂತೆ
ಕಾರ್ಡಿನಲ್ ಮಾರಿಯೊ ಗ್ರೆಕ್ ಅವರ ಪ್ರಾರಂಭಿಕ ವರದಿಯ ನಂತರ, ಹಲವಾರು ಕಾರ್ಡಿನಲ್‌ಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಪತ್ರಿಕಾ ಕಚೇರಿಯ ಪ್ರಕಾರ, "ಧರ್ಮ ಸಭೆಯ ಲೋಕಕ್ಕೆ ತನ್ನ ಸಾಕ್ಷಿಯನ್ನು ನೀಡಬೇಕಾದ ಈ ಮಹತ್ವದ ಸಮಯದಲ್ಲಿ, ಸಮಾಲೋಚನಾ ಪ್ರಕ್ರಿಯೆಗಳ ಹೆಚ್ಚುತ್ತಿರುವ ಸಂಕೀರ್ಣತೆಯು ಧರ್ಮ ಸಭೆಯ ಮೇಲೆ ಅನಗತ್ಯ ಭಾರವನ್ನು ಹೊರಿಸಬಹುದಾದ ಅಪಾಯ" ಕುರಿತು ಕಾರ್ಡಿನಲ್‌ಗಳು ಚರ್ಚಿಸಿದರು.
ಅದೇ ವೇಳೆ, ಪವಿತ್ರಾತ್ಮನು ಧರ್ಮ ಸಭೆಯ ಏನು ಹೇಳುತ್ತಿದ್ದಾನೆ ಎಂಬುದನ್ನು ವಿವೇಚಿಸುವ ಕಾರ್ಯದಲ್ಲಿ, ಧರ್ಮ ಸಭೆಯ ಶ್ರೇಣೀಬದ್ಧ ನಾಯಕತ್ವ ಮತ್ತು ದೇವಜನರು ಇಬ್ಬರೂ ತಮ್ಮ ತಮ್ಮ ವಿಭಿನ್ನ ಪಾತ್ರಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದನ್ನು ಪುನರುಚ್ಚರಿಸಲಾಯಿತು.
ಕಾರ್ಡಿನಲ್‌ಗಳು ಪೂರ್ವ ಕಥೋಲಿಕ ಸಮುದಾಯಗಳ ಕೊಡುಗೆಯನ್ನೂ ವಿಶೇಷವಾಗಿ ಶ್ಲಾಘಿಸಿದರು. ಅವರ ಸಿನೋಡಲ್ ಅನುಭವವು ಇಡೀ ಧರ್ಮ ಸಭೆಯ ಸಿನೋಡಲ್ ಪಯಣಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧಿವೇಶನದ ಮೊದಲ ಭಾಗವು ಸಂಜೆ 5 ಗಂಟೆಗೆ ಮುಕ್ತಾಯಗೊಂಡಿತು. ವಿರಾಮದ ನಂತರ, ಜಗದ್ಗುರು XIVನೇ ಲಿಯೋರವರು ಮುಕ್ತ ಸಂವಾದ ನಡೆಸುವ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಈ ಸಂವಾದದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಗರಿಷ್ಠ ಮೂರು ನಿಮಿಷಗಳ ಕಾಲ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು.