ಜನವರಿ 8, 2026 ರಂದು VIನೇ ಪಾಲ್ ನ ಹಾಲ್‌ನಲ್ಲಿ ನಡೆದ ಅಸಾಧಾರಣ ಕನ್ಸಿಸ್ಟರಿಯ ಫೈಲ್ ಫೋಟೋ. ಜನವರಿ 8, 2026 ರಂದು VIನೇ ಪಾಲ್ ನ ಹಾಲ್‌ನಲ್ಲಿ ನಡೆದ ಅಸಾಧಾರಣ ಕನ್ಸಿಸ್ಟರಿಯ ಫೈಲ್ ಫೋಟೋ.  (ANSA)

"ಕಾರ್ಡಿನಲ್‌ಗಳ ಸಭೆಯಲ್ಲಿ ಜಾಗತಿಕ ಪರಿಸ್ಥಿತಿ, ಮ್ಯಾಗ್ನಿಫಿಕಾ ಹುಮಾನಿತಾಸ್ ಮತ್ತು ಸಿನೊಡ್ ಪ್ರಮುಖ ಚರ್ಚಾ ವಿಷಯಗಳು"

ಜೂನ್ ಅಂತ್ಯದಲ್ಲಿ ಜಗದ್ಗುರು ಲಿಯೋರವರೊಂದಿಗೆ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿರುವ ಕಾರ್ಡಿನಲ್‌ಗಳಿಗೆ ಬರೆದ ಪತ್ರದಲ್ಲಿ, ಕಾರ್ಡಿನಲ್ ರೇ ಅವರು VIನೇ ಪೌಲ್ ಸಭಾಂಗಣ ಮತ್ತು ಸಿನೊಡ್ ಸಭಾಂಗಣದಲ್ಲಿ ನಡೆಯಲಿರುವ ನಾಲ್ಕು ಕಾರ್ಯಾಧಿವೇಶನಗಳ ಪ್ರಮುಖ ಚರ್ಚಾ ವಿಷಯಗಳನ್ನು ವಿವರಿಸಿದ್ದಾರೆ.

ವ್ಯಾಟಿಕನ್ ವರದಿ

ಜೂನ್ 26, 27 ಮತ್ತು 29ರಂದು ಜಗದ್ಗುರು XIVನೇ ಲಿಯೋರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಡಿನಲ್‌ಗಳ ವಿಶೇಷ ಸಭೆ (ಕನ್ಸಿಸ್ಟರಿ)ಯಲ್ಲಿ ಜಾಗತಿಕ ಪರಿಸ್ಥಿತಿ, ಸ್ಥಳೀಯ ಧರ್ಮ ಸಭೆಗಳ ಜೀವನ, ಜಗದ್ಗುರುಗಳ ಮೊದಲ ಎನ್‌ಸೈಕ್ಲಿಕಲ್ ‘ಮ್ಯಾಗ್ನಿಫಿಕಾ ಹುಮಾನಿತಾಸ್’ ಹಾಗೂ ಸಿನೊಡ್ ಅನುಷ್ಠಾನದ ಪ್ರಗತಿ ಪ್ರಮುಖ ಚರ್ಚಾ ವಿಷಯಗಳಾಗಿವೆ. ಜೂನ್ 3ರಂದು ಕಾರ್ಡಿನಲ್‌ಗಳ ಮಂಡಳಿಯ ಮುಖ್ಯಸ್ಥ ಕಾರ್ಡಿನಲ್ ಜಿಯೋವನ್ನಿ ಬತ್ತಿಸ್ತಾ ರೇ ರವರು ಎಲ್ಲ ಕಾರ್ಡಿನಲ್‌ಗಳಿಗೆ ಕಳುಹಿಸಿದ ಪತ್ರದಲ್ಲಿ ಈ ವಿಷಯಗಳನ್ನು ವಿವರಿಸಿದ್ದಾರೆ.

ಈ ಸಭೆಯು ಪರಸ್ಪರ ಆಲಿಸುವಿಕೆ, ವಿವೇಚನೆ ಮತ್ತು ಧರ್ಮ ಸಭೆಯ ಇಂದಿನ ಜೀವನ ಹಾಗೂ ಧ್ಯೇಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಾಮೂಹಿಕ ಚಿಂತನೆ ನಡೆಸುವ ವೇದಿಕೆಯಾಗಬೇಕೆಂದು ಜಗದ್ಗುರುಗಳು ಬಯಸಿದ್ದಾರೆ ಎಂದು ಕಾರ್ಡಿನಲ್ ರೇ ತಿಳಿಸಿದ್ದಾರೆ. ಜಗತ್ತಿನ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಡಿನಲ್‌ಗಳ ಅನುಭವ ಮತ್ತು ಸಲಹೆಗಳನ್ನು ಆಲಿಸಿ, ಧರ್ಮ ಸಭೆಯ ಭವಿಷ್ಯದ ಪಯಣಕ್ಕೆ ಮಾರ್ಗದರ್ಶನ ಪಡೆಯುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.

ಮೊದಲ ಅಧಿವೇಶನದಲ್ಲಿ ಅಂತರರಾಷ್ಟ್ರೀಯ ಪರಿಸ್ಥಿತಿ ಮತ್ತು ಸ್ಥಳೀಯ ಧರ್ಮ ಸಭೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚೆ ನಡೆಯಲಿದೆ. ಯುದ್ಧ, ಸಂಘರ್ಷ, ಉದ್ವಿಗ್ನತೆ ಮತ್ತು ಸಾಮಾಜಿಕ ಅಶಾಂತಿಯ ನಡುವೆ ತಮ್ಮ ಪ್ರದೇಶಗಳ ಜನರು ಹಾಗೂ ಧರ್ಮ ಸಭೆಗಳು ಅನುಭವಿಸುತ್ತಿರುವ ನೋವುಗಳನ್ನು ಕಾರ್ಡಿನಲ್‌ಗಳು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಸುವಾರ್ತೆಗೆ ನಿಷ್ಠೆ, ಭರವಸೆ ಮತ್ತು ಸಮನ್ವಯದ ಹೊಸ ಸಾಧ್ಯತೆಗಳ ಬಗ್ಗೆ ತಮ್ಮ ಅನುಭವಗಳನ್ನು ಮಂಡಿಸಲಿದ್ದಾರೆ.

ಎರಡನೇ ಮತ್ತು ಮೂರನೇ ಅಧಿವೇಶನಗಳು ಮೇ 25ರಂದು ಪ್ರಕಟವಾದ ಜಗದ್ಗುರು XIVನೇ ಲಿಯೋರವರ ‘ಮ್ಯಾಗ್ನಿಫಿಕಾ ಹುಮಾನಿತಾಸ್’ ಎನ್‌ಸೈಕ್ಲಿಕಲ್‌ಗೆ ಮೀಸಲಾಗಿವೆ. ವಿಶೇಷವಾಗಿ "ಅಧಿಕಾರದ ಸಂಸ್ಕೃತಿ ಮತ್ತು ಪ್ರೀತಿಯ ನಾಗರಿಕತೆ" ಎಂಬ ಅಧ್ಯಾಯದ ಆಧಾರದ ಮೇಲೆ, ಯುದ್ಧ ಮತ್ತು ಧ್ರುವೀಕರಣದಿಂದ ಗಾಯಗೊಂಡಿರುವ ಜಗತ್ತಿನಲ್ಲಿ ಶಾಂತಿಯ ಮಹತ್ವದ ಕುರಿತು ಚರ್ಚೆ ನಡೆಯಲಿದೆ. ಯುದ್ಧಪೀಡಿತ ಪ್ರದೇಶಗಳಿಂದ ಬಂದಿರುವ ಕಾರ್ಡಿನಲ್‌ಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, ನ್ಯಾಯಯುತ ಯುದ್ಧ ಎಂಬ ಕಲ್ಪನೆಯನ್ನು ಮೀರಿ ಶಾಂತಿ ಮತ್ತು ಸೌಹಾರ್ದವನ್ನು ಹೇಗೆ ಬೆಳೆಸಬಹುದು ಎಂಬುದರ ಕುರಿತು ಚಿಂತನೆ ನಡೆಸಲಾಗುತ್ತದೆ.

ಕೊನೆಯ ಅಧಿವೇಶನದಲ್ಲಿ ಸಿನೊಡ್ ಅನುಷ್ಠಾನದ ಪ್ರಗತಿ ಹಾಗೂ 2027–2028ರ ಸಿನೊಡಲ್ ಸಭೆಗಳ ಸಿದ್ಧತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ನಂತರ ಕಾರ್ಡಿನಲ್‌ಗಳು ಮತ್ತು ಜಗದ್ಗುರುಗಳ ನಡುವೆ ಮುಕ್ತ ಸಂವಾದ ನಡೆಯಲಿದ್ದು, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಜೂನ್ 29ರಂದು ಸಂತ ಪೇತ್ರರ ಮಹಾದೇವಾಲಯಲ್ಲಿ ಪವಿತ್ರ ಪೇತ್ರ ಮತ್ತು ಪೌಲರ ಮಹಾಪರ್ವದ ಬಲಿಪೂಜೆಯೊಂದಿಗೆ ಈ ಸಭೆ ಮುಕ್ತಾಯಗೊಳ್ಳಲಿದ್ದು, ಆ ಸಂದರ್ಭದಲ್ಲಿ ಹೊಸ ಮಹಾನಗರ ಆರ್ಚ್‌ಬಿಷಪ್‌ಗಳಿಗೆ ಜಗದ್ಗುರು XIVನೇ ಲಿಯೋರವರು ಪಾಲಿಯಂಗಳನ್ನು ಆಶೀರ್ವದಿಸಿ ಧರಿಸಲಿದ್ದಾರೆ.

04 ಜೂನ್ 2026, 14:56