ಕಾರ್ಡಿನಲ್ ಗ್ರೆಕ್: ಸಿನೋಡ್ ಎಂದರೆ ಸೌಮ್ಯ ಮನೋಭಾವದಿಂದ ಆಲಿಸುವಿಕೆಯ ಜೀವಂತ ಸಂಕೇತ.
ವ್ಯಾಟಿಕನ್ ವರದಿ
ಸಿನೋಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೊ ಗ್ರೆಕ್ ರವರು, ಆಲಿಸುವಿಕೆಯ ನಿಜವಾದ ಮಹತ್ವವು ಅದರ ವಿನಮ್ರತೆಯಲ್ಲಿದೆ ಎಂದು ಹೇಳಿದರು. ಯುದ್ಧ ಮತ್ತು ಆರ್ಥಿಕ ಬಲಾತ್ಕಾರವನ್ನು ಸಾಮಾನ್ಯವೆಂದು ಒಪ್ಪಿಕೊಳ್ಳುತ್ತಿರುವ ಇಂದಿನ ಜಗತ್ತಿನಲ್ಲಿ, ಸಂವಾದ ಮತ್ತು ಪರಸ್ಪರ ಆಲಿಸುವಿಕೆಯ ಮನೋಭಾವವೇ ಧರ್ಮ ಸಭೆಯ ಲೋಕಕ್ಕೆ ನೀಡುತ್ತಿರುವ ಮಹತ್ವದ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಜೂನ್ 27ರಂದು ನಡೆದ ವಿಶೇಷ ಕಾರ್ಡಿನಲ್‌ಗಳ ಮಹಾಸಭೆಯ ನಾಲ್ಕನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿನೋಡ್ ಈಗ ಅನುಷ್ಠಾನದ ಹಂತವನ್ನು ಪ್ರವೇಶಿಸಿದ್ದು, ಇದು ಕೇವಲ ನಿರ್ಧಾರಗಳನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲ ಎಂದು ಹೇಳಿದರು. ಸಿನೋಡ್ ಪಯಣದಲ್ಲಿ ದೊರೆತ ಒಳನೋಟಗಳು ಮತ್ತು ಅನುಭವಗಳು ಧರ್ಮ ಸಭೆಯ ಸಮುದಾಯಗಳ ಜೀವನದಲ್ಲಿ ಪರಿಪಕ್ವಗೊಂಡು, ವಿಶ್ವದ ವಿವಿಧ ಸ್ಥಳೀಯ ಧರ್ಮ ಸಭೆಗಳ ನಡುವೆ ಹೆಚ್ಚಿನ ಸಂವಾದ ಮತ್ತು ಸಹಭಾಗಿತ್ವವನ್ನು ಬೆಳೆಸಬೇಕೆಂಬುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.
2021ರಲ್ಲಿ ಸಿನೋಡಾಲಿಟಿ ಕುರಿತ ಸಿನೋಡ್ ಆರಂಭವಾದಾಗ ಇಷ್ಟೊಂದು ವ್ಯಾಪಕವಾದ ಜನಪಾಲ್ಗೊಳ್ಳುವಿಕೆ ಉಂಟಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಕಾರ್ಡಿನಲ್ ಗ್ರೆಕ್ ಸ್ಮರಿಸಿದರು. ವಿವಿಧ ದೇಶಗಳ ಮತ್ತು ಧರ್ಮ ಸಭೆಯ ವಿವಿಧ ವಲಯಗಳ ವಿಶ್ವಾಸಿಗಳು ಮೊದಲ ಬಾರಿಗೆ ಆಲಿಸುವಿಕೆ ಮತ್ತು ಧರ್ಮ ಸಭೆಯ ವಿವೇಚನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಎಲ್ಲರ ವರದಾನ ಮತ್ತು ಹೊಣೆಗಾರಿಕೆಗೆ ಗೌರವ ನೀಡಿ ಒಟ್ಟಾಗಿ ನಡೆಯುವ ಮನೋಭಾವವನ್ನು ವ್ಯಕ್ತಪಡಿಸಿದರು ಎಂದು ಹೇಳಿದರು.
ಸಿನೋಡಿನ ಅನುಭವವು "ಆತ್ಮದಲ್ಲಿ ಸಂವಾದ" ಎಂಬ ವಿಧಾನದಿಂದ ಸಮೃದ್ಧಗೊಂಡಿದೆ ಎಂದು ಅವರು ತಿಳಿಸಿದರು. ಈಗ ಆರಂಭವಾಗಿರುವ ಅನುಷ್ಠಾನದ ಹಂತದಲ್ಲಿ ವಿವಿಧ ಧರ್ಮ ಸಭೆಗಳು ತಮ್ಮ ಅನುಭವಗಳು ಮತ್ತು ವರದಾನಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಒಂದೇ ದೇವಜನರ ಸದಸ್ಯರಾಗಿರುವ ಭಾವನೆಯನ್ನು ಇನ್ನಷ್ಟು ಬಲಪಡಿಸಬಹುದು. ಈ ಪ್ರಕ್ರಿಯೆಯು ಪ್ರತಿಯೊಂದು ಸಂಸ್ಕೃತಿಯ ಸಂದರ್ಭಗಳಿಗೆ ಅನುಗುಣವಾಗಿ ಕ್ರಮೇಣ ಬೆಳೆಯುತ್ತದೆ ಎಂದು ಅವರು ಹೇಳಿದರು.
2028ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಧರ್ಮ ಸಭೆಯ ಸಭೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತಿದೆ. ದೇವಜನರ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಬಿಷಪ್‌ರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರೊಂದಿಗೆ ಗುರುಗಳು, ಸಮರ್ಪಿತ ಧಾರ್ಮಿಕರು, ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಯುವಜನರು ಮತ್ತು ಸ್ಥಳೀಯ ಸಮುದಾಯಗಳು ಸಹಭಾಗಿಗಳಾಗಬೇಕು ಎಂದು ಕಾರ್ಡಿನಲ್ ಗ್ರೆಕ್ ಒತ್ತಿ ಹೇಳಿದರು.
ಅಂತಿಮವಾಗಿ, ಇಂದಿನ ಜಗತ್ತಿನಲ್ಲಿ ಎದುರಾಗುತ್ತಿರುವ ಸಂಕೀರ್ಣ ಸವಾಲುಗಳ ನಡುವೆ ಸಿನೋಡಾಲಿಟಿಯು ಧರ್ಮ ಸಭೆಯ ಮಿಷನರಿ ಕಾರ್ಯಕ್ಕೆ ಅತ್ಯಮೂಲ್ಯ ಸಾಧನವಾಗಿದೆ ಎಂದು ಅವರು ಹೇಳಿದರು. ಇದು ಮಾನವಕುಲದ ಪ್ರಶ್ನೆಗಳನ್ನು ಆಲಿಸಿ, ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಒಟ್ಟಾಗಿ ವಿವೇಚಿಸಿ, ಧರ್ಮ ಸಭೆ ಅನುಸರಿಸಬೇಕಾದ ಮಾರ್ಗವನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದು ಅವರು ತಿಳಿಸಿದರು..