ಜಗದ್ಗುರುಗಳು: ‘ಪ್ರೀತಿಯ ನಾಗರಿಕತೆಯನ್ನು’ ನಿರ್ಮಿಸಲು ಧೈರ್ಯ ಮತ್ತು ವಿನಮ್ರ ನಾಯಕತ್ವ ಅಗತ್ಯ.
ವ್ಯಾಟಿಕನ್ ವರದಿ
“ಅಗ್ನಿ” — ಇದು ಸಾಂಪ್ರದಾಯಿಕವಾಗಿ ಅಜರ್‌ಬೈಜಾನ್ ಜನರ ಗುರುತಿನೊಂದಿಗೆ ಸಂಬಂಧ ಹೊಂದಿರುವ ಒಂದು ಸಂಕೇತ. “ಗಾಳಿ” — ಇದು ಅದರ ರಾಜಧಾನಿಯಾದ ಬಾಕು ನಗರಕ್ಕೆ ಪ್ರಸಿದ್ಧಿಯನ್ನು ತಂದಿರುವ ಒಂದು ಅಂಶ. ಪ್ರೀತಿ ಮತ್ತು ಸೌಹಾರ್ದತೆಯ ಪ್ರತೀಕಗಳಾದ ಈ ಎರಡು ಸಂಕೇತಗಳು, ಅಂತರಧಾರ್ಮಿಕ ಸಂವಾದಕ್ಕಾಗಿ ಇರುವ ಡಿಕಾಸ್ಟರಿಯ ಪ್ರೀಫೆಕ್ಟ್ ಕಾರ್ಡಿನಲ್ ಜಾರ್ಜ್ ಜೇಕಬ್ ಕೂವಕ್ಕಾಡ್ ಅವರ ಜೂನ್ 15ರಿಂದ 19ರವರೆಗೆ ನಡೆದ ಭೇಟಿಯ ಮೂಲಕ ಪವಿತ್ರ ಸಿಂಹಾಸನ ಮತ್ತು ಕಾಕೇಸಸ್ ಪ್ರದೇಶದ ಈ ರಾಷ್ಟ್ರವು ಪುನರುಜ್ಜೀವನಗೊಳಿಸುತ್ತಿರುವ ಜಂಟಿ ಬದ್ಧತೆಯ ಹೃದಯಭಾಗದಲ್ಲಿವೆ.
ಅಜರ್‌ಬೈಜಾನ್ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವಿನ ಸಂಬಂಧ
ಜೂನ್ 18ರ ಮಧ್ಯಾಹ್ನ, ಬಾಕುವಿನಲ್ಲಿರುವ ಕಾಕೇಸಸ್‌ನ ಶೇಖ್ ಉಲ್-ಇಸ್ಲಾಂ ಅಲ್ಲಾಹ್ಶುಕೂರ್ ಪಾಶಾಜಾದೆ ಅವರ ನಿವಾಸದಲ್ಲಿ ಕಾರ್ಡಿನಲ್ ಕೂವಕ್ಕಾಡ್ ಅವರು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಪಡೆದ ಆತ್ಮೀಯ ಸ್ವಾಗತಕ್ಕಾಗಿ ಹಾಗೂ ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಅಜರ್‌ಬೈಜಾನ್‌ನ ಧಾರ್ಮಿಕ ಸಮುದಾಯಗಳ ನಡುವಿನ ದೀರ್ಘಕಾಲದ ಸ್ನೇಹಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ಅಜರ್‌ಬೈಜಾನ್‌ನ ಪ್ರೇಷಿತರ ಪ್ರೀಫೆಕ್ಟ್ ವ್ಲಾದಿಮಿರ್ ಫೆಕೆಟೆ, ಜಗದ್ಗುರುಗಳ ಅಧಿಕಾರ ಸ್ಥಳದ ಅಜರ್‌ಬೈಜಾನ್‌ನ ರಾಯಭಾರಿ ಇಲ್ಗಾರ್ ಮುಖ್ತಾರೋವ್ ಹಾಗೂ ಸ್ಥಳೀಯ ಕ್ರೈಸ್ತ ಮತ್ತು ಯೆಹೂದಿ ಸಮುದಾಯಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಾತನಾಡಿದ ಅವರು, 2002ರಲ್ಲಿ ಸಂತ ದ್ವಿತೀಯ ಜಾನ್ ಪಾಲ್ ಮತ್ತು 2016ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅಜರ್‌ಬೈಜಾನ್‌ಗೆ ನೀಡಿದ ಭೇಟಿಗಳನ್ನು ಸ್ಮರಿಸಿದರು. ಈ ಭೇಟಿಗಳು ಹಾಗೂ ಅನೇಕ ಸಭೆಗಳು ಮತ್ತು ಉಪಕ್ರಮಗಳು ಉಭಯ ಪಕ್ಷಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಹೇಳಿದರು.
ಕ್ರೈಸ್ತರು ಮತ್ತು ಮುಸ್ಲಿಮರು ಒಟ್ಟಾಗಿ
ಕ್ರೈಸ್ತೇತರ ಧರ್ಮಗಳೊಂದಿಗೆ ಧರ್ಮ ಸಭೆಯ ಸಂಬಂಧಗಳ ಕುರಿತು ದ್ವಿತೀಯ ವ್ಯಾಟಿಕನ್ ಮಹಾಸಭೆಯ ನೋಸ್ತ್ರಾ ಏಟಾತೆ ಘೋಷಣೆಯಿಂದ ಪ್ರೇರಣೆ ಪಡೆದ ಕಾರ್ಡಿನಲ್ ಕೂವಕ್ಕಾಡ್, “ಕ್ರೈಸ್ತರು ಮತ್ತು ಮುಸ್ಲಿಮರು ಶಾಂತಿಯ ಸೇವೆಯಲ್ಲಿ ಒಟ್ಟಾಗಿ ನಡೆಯಲು ಪ್ರಯತ್ನಿಸಿದ್ದಾರೆ, ಏಕೆಂದರೆ ನಾವು ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತನಾದ ಒಬ್ಬನೇ ದೇವರನ್ನು ಆರಾಧಿಸುತ್ತೇವೆ ಎಂಬುದನ್ನು ಗುರುತಿಸಿದ್ದೇವೆ” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, 2011ರಲ್ಲಿ ಸಹಿ ಮಾಡಲಾದ ದ್ವಿಪಕ್ಷೀಯ ಒಪ್ಪಂದ ಹಾಗೂ ಕಳೆದ ವರ್ಷ ಧಾರ್ಮಿಕ ಸಹಕಾರಕ್ಕಾಗಿ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದವು “ಸಂವಾದವು ಕೇವಲ ವಿಚಾರಗಳ ವಿನಿಮಯವಲ್ಲ, ಅದು ಆಳವಾದ ಪರಸ್ಪರ ಅರ್ಥೈಸಿಕೆ, ವಿಶ್ವಾಸ ಮತ್ತು ಸಹಕಾರದತ್ತ ಸಾಗುವ ಒಂದು ಪಯಣ” ಎಂಬ ಸಾಮಾನ್ಯ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭವಿಷ್ಯದ ಬದ್ಧತೆಗಳು
ಇಲ್ಲಿಯವರೆಗೆ ನಿರ್ಮಿಸಲಾದ ಸಾಧನೆಗಳು, ಜಗದ್ಗುರು XIVನೇ ಲಿಯೋರವರು ತಮ್ಮ ಮ್ಯಾಗ್ನಿಫಿಕಾ ಹ್ಯೂಮಾನಿಟಾಸ್ ವಿಶ್ವಪತ್ರಿಕೆಯಲ್ಲಿ ಪುನರುಚ್ಚರಿಸಿರುವ “ಪ್ರೀತಿಯ ನಾಗರಿಕತೆ” ಎಂಬ ಆದರ್ಶದತ್ತ ಸಾಗಲು ಪ್ರೇರಣೆಯಾಗಬೇಕು ಎಂದು ಕಾರ್ಡಿನಲ್ ಹೇಳಿದರು.
ಈ ಮನೋಭಾವದಲ್ಲಿ, ವಿಶ್ವಪತ್ರಿಕೆಯಲ್ಲಿ ಪುನಃ ದೃಢೀಕರಿಸಲಾದ ಐದು ಪ್ರಮುಖ ಬದ್ಧತೆಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಅವರು ಹೇಳಿದರು ದ್ವೇಷ ಮತ್ತು ವಿಭಜನೆಯನ್ನು ಹುಟ್ಟುಹಾಕುವ ಮಾತುಗಳನ್ನು ತ್ಯಜಿಸುವುದು; ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ರಕ್ಷಿಸುವ ಮೂಲಕ ನ್ಯಾಯದ ಆಧಾರದ ಮೇಲೆ ಶಾಂತಿಯನ್ನು ನಿರ್ಮಿಸುವುದು; ಬಲಿಪಶುಗಳ ದೃಷ್ಟಿಕೋನವನ್ನು ಅಳವಡಿಸಿಕೊಂಡು ನೋವಿನಲ್ಲಿ ಇರುವವರ ಕೂಗನ್ನು ಆಲಿಸುವುದು; ಧರ್ಮಗಳು, ಸಂಸ್ಕೃತಿಗಳು ಮತ್ತು ಜನರ ನಡುವೆ ಸಂವಾದವನ್ನು ನವೀಕರಿಸುವುದು; ಹಾಗೂ ಸಮಕಾಲೀನ ಜಗತ್ತಿನ ಸವಾಲುಗಳನ್ನು ಎದುರಿಸಲು ರಾಜತಾಂತ್ರಿಕತೆ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವುದು.
ಈ ತತ್ವಗಳು ಕೇವಲ “ಉನ್ನತ ಆದರ್ಶಗಳು” ಮಾತ್ರವಲ್ಲ, ಬದಲಾಗಿ “ತುರ್ತು ಹೊಣೆಗಾರಿಕೆಗಳು” ಎಂದು ಅವರು ಒತ್ತಿಹೇಳಿದರು.
ಅಧ್ಯಕ್ಷ ಅಲಿಯೆವ್ ರವರೊಂದಿಗೆ ಭೇಟಿ
ಜೂನ್ 16ರಂದು ಕಾರ್ಡಿನಲ್ ಕೂವಕ್ಕಾಡ್ ರವರು ಅಜರ್‌ಬೈಜಾನ್ ಗಣರಾಜ್ಯದ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ರವರನ್ನು ಭೇಟಿಯಾದರು.
ರಾಜ್ಯ ಸುದ್ದಿ ಸಂಸ್ಥೆ ಅಜರ್‌ಟಾಗ್ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಕಾರ್ಡಿನಲ್ ರವರು ಜಗದ್ಗುರು XIVನೇ ಲಿಯೋರವರು ಹಾಗೂ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ರವರ ಶುಭಾಶಯಗಳನ್ನು ಅಧ್ಯಕ್ಷರಿಗೆ ತಲುಪಿಸಿದರು.
ಸಭೆಯಲ್ಲಿ ಅಜರ್‌ಬೈಜಾನ್‌ನ ಸ್ಥಳೀಯ ಕಥೊಲಿಕ ಧರ್ಮ ಸಭೆಯ ಪಾತ್ರ ಹಾಗೂ ದೇಶದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಧರ್ಮ ಸಭೆಯ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಶಾಂತಿ ಮತ್ತು ಅಂತರಧಾರ್ಮಿಕ ಸಂವಾದವನ್ನು ಉತ್ತೇಜಿಸುವಲ್ಲಿ ಸಹಿಷ್ಣುತೆ ಮತ್ತು ಬಹುಸಂಸ್ಕೃತಿತ್ವದ ಮಹತ್ವವನ್ನು ಒತ್ತಿಹೇಳುತ್ತಾ, ಜಗದ್ಗುರುಗಳ ಮತ್ತು ಪ್ರಸ್ತುತ ಅಧ್ಯಕ್ಷರ ತಂದೆಯ ಹೆಸರಿನಲ್ಲಿರುವ ಹೇದರ್ ಅಲಿಯೆವ್ ಪ್ರತಿಷ್ಠಾನ ನಡುವಿನ ಸಹಕಾರದ ಕುರಿತೂ ಮಾತುಕತೆ ನಡೆಯಿತು. ವಿಶೇಷವಾಗಿ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ವಿವಿಧ ಯೋಜನೆಗಳ ಮೂಲಕ ಅಂತರಧಾರ್ಮಿಕ ಸಂವಾದದ ಉತ್ತೇಜನಕ್ಕೆ ಆ ಪ್ರತಿಷ್ಠಾನ ನೀಡುತ್ತಿರುವ ಕೊಡುಗೆಯನ್ನು ಸಭೆಯಲ್ಲಿ ಪ್ರಶಂಸಿಸಲಾಯಿತು.