ಕಾರ್ಡಿನಲ್ ಪಾರೊಲಿನ್: ಯುವಜನರ ಮಾನಸಿಕ ಆರೋಗ್ಯಕ್ಕೆ ವ್ಯವಸ್ಥಾತ್ಮಕ ಪರಿಹಾರಗಳ ಅಗತ್ಯವಿದೆ.
ವ್ಯಾಟಿಕನ್ ವರದಿ
ಯುವಜನರನ್ನು ಬಾಧಿಸುತ್ತಿರುವ ಮಾನಸಿಕ ಆರೋಗ್ಯದ ಬಿಕ್ಕಟ್ಟನ್ನು “ವ್ಯವಸ್ಥಾತ್ಮಕ ಪರಿಹಾರಗಳನ್ನು ಅಗತ್ಯವಿರುವ ತುರ್ತು ಪರಿಸ್ಥಿತಿ” ಎಂದು ಬಣ್ಣಿಸಿದ ಕಾರ್ಡಿನಲ್ ಪಿಯೆತ್ರೋ ಪಾರೊಲಿನ್ ರವರು, ಇಂದಿನ ಸಮಾಜವು ಯುವಜನರಿಗೆ ಎಲ್ಲಾ ಸಾಧನಗಳನ್ನು ಒದಗಿಸುತ್ತಿದ್ದರೂ, ಜೀವನದ ಗುರಿಯನ್ನು ನೀಡುತ್ತಿಲ್ಲ ಎಂದು ಎಚ್ಚರಿಸಿದರು.
ವ್ಯಾಟಿಕನ್‌ನ ಕಾಸಿನಾ ಪಿಯೋ IV ರಲ್ಲಿ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು ಮತ್ತು ಅಂತರರಾಷ್ಟ್ರೀಯ ಪರಿಣಿತರ ಉಪಸ್ಥಿತಿಯಲ್ಲಿ ನಡೆದ “ಪ್ರಾದೇಶಿಕ ಶಿಕ್ಷಣ ಕಾರ್ಯಸೂಚಿಗಾಗಿ ಭರವಸೆಯ ನಕ್ಷೆಗಳು ಮಾನಸಿಕ ಆರೋಗ್ಯ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಶಿಕ್ಷಣ” ಎಂಬ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಾರೊಲಿನ್ ಮಾತನಾಡುತ್ತಿದ್ದರು.
ಶಿಕ್ಷಣವು “ಸಮಗ್ರ ಮಾನವ ಅಭಿವೃದ್ಧಿ, ಶಾಂತಿಯುತ ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯದ ಪ್ರಮುಖ ಸ್ತಂಭ”ವಾಗಿಯೇ ಉಳಿದಿದೆ ಎಂದು ಅವರು ಹೇಳಿದರು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಗಳು ವ್ಯಕ್ತಿಯ ಸಮಗ್ರ ರೂಪುಗೊಳಿಸುವಿಕೆ, ಸಾಮಾಜಿಕ-ಭಾವನಾತ್ಮಕ ಬೆಳವಣಿಗೆ, ದುರ್ಬಲರ ರಕ್ಷಣೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಜವಾಬ್ದಾರಿಯುತ ಅಳವಡಿಕೆ ಸೇರಿದಂತೆ ಹೊಸ ಗುಣಾತ್ಮಕ ಸವಾಲುಗಳನ್ನು ಎದುರಿಸುತ್ತಿವೆ ಎಂದು ಅವರು ಗಮನಿಸಿದರು.
ಜಾಗತಿಕ ಶಿಕ್ಷಣ ಒಪ್ಪಂದ
ಈ ಸವಾಲುಗಳನ್ನು ಚದುರಿದ ಅಥವಾ ಪ್ರತ್ಯೇಕ ಕ್ರಮಗಳ ಮೂಲಕ ಎದುರಿಸಲು ಸಾಧ್ಯವಿಲ್ಲ ಬದಲಾಗಿ “ಸುಸಂಘಟಿತ, ಬಹುಆಯಾಮಿಕ ಮತ್ತು ದೀರ್ಘಕಾಲೀನ ಸಹಕಾರ” ಅಗತ್ಯವೆಂದು ಕಾರ್ಡಿನಲ್ ಪುನರುಚ್ಚರಿಸಿದರು.
2019ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಆರಂಭಿಸಿದ ಜಾಗತಿಕ ಶಿಕ್ಷಣ ಒಪ್ಪಂದವನ್ನು ಸ್ಮರಿಸಿದ ಅವರು, ಶಿಕ್ಷಣದ ಕುರಿತು ಜಗದ್ಗುರು XIVನೇ ಲಿಯೋರವರು ಇತ್ತೀಚೆಗೆ ಪ್ರಕಟಿಸಿದ ಪ್ರೇಷಿತರ ಪತ್ರವನ್ನು ಉಲ್ಲೇಖಿಸಿದರು. ಆ ಪತ್ರವು ಭ್ರಾತೃತ್ವ, ಶಾಂತಿ ಮತ್ತು ನ್ಯಾಯವನ್ನು ಬೆಳೆಸುವ ಸಾಮರ್ಥ್ಯವುಳ್ಳ ಜಾಗತಿಕ “ಶೈಕ್ಷಣಿಕ ನಕ್ಷತ್ರಮಂಡಲ”ವನ್ನು ರೂಪಿಸುವಂತೆ ಕರೆ ನೀಡುತ್ತದೆ ಎಂದು ಹೇಳಿದರು.
ಜಗದ್ಗುರು XIVನೇ ಲಿಯೋರವರು ಒತ್ತಿಹೇಳಿರುವ ಮೂರು ಆದ್ಯತೆಗಳನ್ನು ಅವರು ಪ್ರಸ್ತಾಪಿಸಿದರು. ಆಂತರಿಕ ಜೀವನದ ಪೋಷಣೆ, “ಮಾನವಕೇಂದ್ರಿತ ಡಿಜಿಟಲ್ ಸಂಸ್ಕೃತಿ” ಮತ್ತು ಶಾಂತಿಗಾಗಿ ಶಿಕ್ಷಣ.
ಮಾನಸಿಕ ಆರೋಗ್ಯದ ಕುರಿತ ಕಳವಳ
ಮಾನಸಿಕ ಆರೋಗ್ಯದ ವಿಷಯವನ್ನು ಪ್ರಸ್ತಾಪಿಸಿದ ಕಾರ್ಡಿನಲ್ ಪಾರೊಲಿನ್, ಯುವಜನರಿಗೆ ಸಂಬಂಧಿಸಿದ ಅಂಕಿಅಂಶಗಳು “ಸ್ಪಷ್ಟವಾಗಿದ್ದು, ಅನೇಕ ರೀತಿಯಲ್ಲಿ ಆತಂಕಕಾರಿ” ಎಂದು ಹೇಳಿದರು. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಆತಂಕ, ಖಿನ್ನತೆ ಹಾಗೂ ಮಾನಸಿಕ ಸಂಕಟಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಅವರು ಉಲ್ಲೇಖಿಸಿದರು.
ದೇಹ, ಮನಸ್ಸು ಮತ್ತು ಆತ್ಮದ ಅವಿಭಾಜ್ಯ ಏಕತೆ
ಈ ಸಮಸ್ಯೆಯನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ಪರಿಗಣಿಸಿ ಆರೋಗ್ಯ ವ್ಯವಸ್ಥೆಗಳ ಹೊಣೆಗಾರಿಕೆಗೆ ಮಾತ್ರ ಸೀಮಿತಗೊಳಿಸಬಾರದು ಎಂದು ರಾಜ್ಯ ಕಾರ್ಯದರ್ಶಿ ಎಚ್ಚರಿಸಿದರು.
“ಮಾನವ ವ್ಯಕ್ತಿಯು ದೇಹ, ಮನಸ್ಸು ಮತ್ತು ಆತ್ಮದ ಅವಿಭಾಜ್ಯ ಏಕತೆಯಾಗಿದೆ ಎಂದು ಧರ್ಮ ಸಭೆಯು ಯಾವಾಗಲೂ ಬೋಧಿಸಿದೆ,” ಎಂದು ಅವರು ಹೇಳಿದರು. ಈ ಆಯಾಮಗಳಲ್ಲಿ ಯಾವುದನ್ನಾದರೂ ನಿರ್ಲಕ್ಷಿಸುವ ಶಿಕ್ಷಣ ಮಾದರಿಯು “ಅಪೂರ್ಣ”ವಾಗಿದ್ದು, ಮಾನವನ ಸಂಪೂರ್ಣ ಅಗತ್ಯಗಳಿಗೆ ಸ್ಪಂದಿಸಲು ಅಸಮರ್ಥವಾಗಿರುತ್ತದೆ ಎಂದು ಅವರು ಸೇರಿಸಿದರು.
ಅದರ ಬದಲು, ಶಿಕ್ಷಣವು ಯುವಜನರಿಗೆ ಕೇವಲ ಜ್ಞಾನ ಮತ್ತು ಕೌಶಲ್ಯಗಳನ್ನು ಮಾತ್ರವಲ್ಲದೆ, ತಮ್ಮನ್ನು ತಾವು ಅರ್ಥಮಾಡಿಕೊಳ್ಳಲು, ಭಾವನೆಗಳನ್ನು ನಿರ್ವಹಿಸಲು, ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸಲು ಹಾಗೂ ಜೀವನದ ಗುರಿಯನ್ನು ಕಂಡುಕೊಳ್ಳಲು ನೆರವಾಗುವ ಸಾಧನಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು.
ಈ ದೃಷ್ಟಿಕೋನವನ್ನು ಅವರು ಕ್ರೈಸ್ತ ಸಂಪ್ರದಾಯದಲ್ಲಿನ “ಆತ್ಮದ ಆರೈಕೆ” ಎಂಬ ಪರಿಕಲ್ಪನೆಗೆ ಸಂಬಂಧಿಸಿದರು. ಇಂದು ಇದನ್ನು ಸಾಮಾಜಿಕ-ಭಾವನಾತ್ಮಕ ಸಾಮರ್ಥ್ಯಗಳು ಮತ್ತು ಮಾನಸಿಕ ಕ್ಷೇಮದ ಭಾಷೆಯಲ್ಲಿ ಹೆಚ್ಚಾಗಿ ವ್ಯಕ್ತಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಾಲೆಗಳು ಮತ್ತು ಕುಟುಂಬಗಳ ಪಾತ್ರ
ಕಾರ್ಡಿನಲ್ ಪಾರೊಲಿನ್ ಶಾಲೆಗಳು ಮತ್ತು ಕುಟುಂಬಗಳ ಅವಿಭಾಜ್ಯ ಪಾತ್ರವನ್ನು ಒತ್ತಿಹೇಳಿದರು.
ಪ್ರತಿ ವಿದ್ಯಾರ್ಥಿಯೂ ತಾನು ಗಮನಿಸಲ್ಪಟ್ಟಿದ್ದೇನೆ, ಆಲಿಸಲ್ಪಟ್ಟಿದ್ದೇನೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದು ಅನುಭವಿಸುವ ಸ್ಥಳಗಳಾಗಿರಬೇಕು ಶಾಲೆಗಳು ಎಂದು ಅವರು ಹೇಳಿದರು. ಅದೇ ವೇಳೆ, ಸೂಕ್ತ ಬೆಂಬಲ ದೊರೆತಾಗ ಕುಟುಂಬಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಅತ್ಯಂತ ಬಲವಾದ ರಕ್ಷಣಾತ್ಮಕ ಆಧಾರವಾಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಡಿಜಿಟಲ್ ತಂತ್ರಜ್ಞಾನಗಳ ಅವಕಾಶಗಳು ಮತ್ತು ಅಪಾಯಗಳು
ಡಿಜಿಟಲ್ ತಂತ್ರಜ್ಞಾನಗಳ ಕುರಿತು ಮಾತನಾಡಿದ ಅವರು, ವಿಶೇಷವಾಗಿ ಐಬೆರೋ-ಅಮೆರಿಕದಂತಹ ವಿಶಾಲ ಮತ್ತು ವೈವಿಧ್ಯಮಯ ಪ್ರದೇಶಗಳಲ್ಲಿ ಅಸಮಾನತೆಗಳನ್ನು ಕಡಿಮೆ ಮಾಡುವಲ್ಲಿ ಅವುಗಳ ಅಪಾರ ಶೈಕ್ಷಣಿಕ ಸಾಮರ್ಥ್ಯವನ್ನು ಒಪ್ಪಿಕೊಂಡರು.
ಆದಾಗ್ಯೂ, ಸಮರ್ಪಕ ಶೈಕ್ಷಣಿಕ ಮಾರ್ಗದರ್ಶನವಿಲ್ಲದೆ ಡಿಜಿಟಲ್ ವಾತಾವರಣಗಳಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯು ಯುವಜನರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದರು. ಗಮನದ ಚಿತ್ತಭಂಗ, ಪರದೆ ಅವಲಂಬನೆ, ಸೈಬರ್ ಕಿರುಕುಳ, ಸಾಮಾಜಿಕ ಪ್ರತ್ಯೇಕತೆ ಹಾಗೂ ಹಾನಿಕಾರಕ ವಿಷಯಗಳಿಗೆ ಒಡ್ಡಿಕೊಳ್ಳುವಿಕೆ ಇದರ ಪರಿಣಾಮಗಳಾಗಿವೆ ಎಂದು ಅವರು ಹೇಳಿದರು.
ಸವಾಲು ತಂತ್ರಜ್ಞಾನಗಳನ್ನು ಒಪ್ಪಿಕೊಳ್ಳುವುದೋ ಅಥವಾ ತಿರಸ್ಕರಿಸುವುದೋ ಅಲ್ಲ ಅವುಗಳನ್ನು ಜವಾಬ್ದಾರಿಯುತವಾಗಿ ನಿಯಂತ್ರಿಸಿ ನಿರ್ವಹಿಸುವುದಾಗಿದೆ, ಎಂದು ಅವರು ಹೇಳಿದರು. ತಾಂತ್ರಿಕ ಕೌಶಲ್ಯಗಳ ಜೊತೆಗೆ ಸಾಮಾಜಿಕ-ಭಾವನಾತ್ಮಕ ರೂಪುಗೊಳಿಸುವಿಕೆಯನ್ನು ಒಳಗೊಂಡ ಡಿಜಿಟಲ್ ಶಿಕ್ಷಣದ ಅಗತ್ಯವನ್ನು ಅವರು ಒತ್ತಿಹೇಳಿದರು.
“ಅರ್ಥದ ಬಿಕ್ಕಟ್ಟು”
ಈ ಬಿಕ್ಕಟ್ಟಿನ ಮೂಲದಲ್ಲಿ ಇನ್ನೂ ಆಳವಾದ ಅರ್ಥದ ಬಿಕ್ಕಟ್ಟು ಅಡಗಿದೆ ಎಂದು ಕಾರ್ಡಿನಲ್ ಪಾರೊಲಿನ್ ಹೇಳಿದರು.
ಅನೇಕ ಯುವಜನರು ಮಾಹಿತಿ ಅಥವಾ ಅವಕಾಶಗಳ ಕೊರತೆಯಿಂದಲ್ಲ, ತಮ್ಮ ಜೀವನ ಮತ್ತು ಆಶಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಅರ್ಥಪೂರ್ಣ ದಿಕ್ಕು ಇಲ್ಲದ ಕಾರಣ ಗೊಂದಲಕ್ಕೊಳಗಾಗಿದ್ದಾರೆ ಎಂದು ಅವರು ಗಮನಿಸಿದರು.
ಯುವಜನರಿಗೆ ಎಲ್ಲಾ ಸಾಧನಗಳನ್ನು ನೀಡುವ ಆದರೆ ಯಾವುದೇ ಗುರಿಯನ್ನು ನೀಡದ ಎಲ್ಲಾ ಸಂಪರ್ಕಗಳನ್ನು ನೀಡುವ ಆದರೆ ನಿಜವಾದ ಸಂಬಂಧಗಳನ್ನು ನೀಡದ ಎಲ್ಲಾ ಉತ್ತರಗಳನ್ನು ನೀಡುವ ಆದರೆ ಆಳವಾದ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸದ ಸಮಾಜವು, ಅಂತಿಮವಾಗಿ ಅವರನ್ನು ಕೈಬಿಡುವ ಸಮಾಜವಾಗುತ್ತದೆ, ಎಂದು ಅವರು ಹೇಳಿದರು.
ಭರವಸೆಯ ರೂಪಶಿಲ್ಪಿಗಳಾಗಲು ಕರೆ
ತಮ್ಮ ಭಾಷಣದ ಕೊನೆಯಲ್ಲಿ, ಯುವಜನರ ಮಾನಸಿಕ ಆರೋಗ್ಯವನ್ನು ಅತ್ಯುನ್ನತ ಆದ್ಯತೆಯ ವಿಷಯವಾಗಿ ಪರಿಗಣಿಸಿ, ಶಿಕ್ಷಣ, ಆರೋಗ್ಯ ಸೇವೆ, ಶಿಕ್ಷಕರ ತರಬೇತಿ ಹಾಗೂ ಕುಟುಂಬ ಬೆಂಬಲ ಕ್ಷೇತ್ರಗಳಲ್ಲಿ ಸಮನ್ವಯಿತ ಹೂಡಿಕೆಗಳನ್ನು ಮಾಡುವಂತೆ ಸರ್ಕಾರಗಳಿಗೆ ಕಾರ್ಡಿನಲ್ ಪಾರೊಲಿನ್ ಕರೆ ನೀಡಿದರು.
ತಮ್ಮ ಪ್ರೇಷಿತರ ಪತ್ರದಲ್ಲಿ ಧರ್ಮಶಿಕ್ಷಕರನ್ನು ಭರವಸೆಯ ರೂಪಶಿಲ್ಪಿಗಳು ಆಗುವಂತೆ ಜಗದ್ಗುರು XIVನೇ ಲಿಯೋರವರು ನೀಡಿದ ಕರೆಯನ್ನು ಸ್ಮರಿಸಿದ ಅವರು, ಶಿಕ್ಷಣವು ಯುವಜನರಿಗೆ ಪೂರ್ಣ, ಸ್ವತಂತ್ರ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಅಗತ್ಯವಾದ ಸಾಧನಗಳು ಮತ್ತು ವಿಶಾಲ ದೃಷ್ಟಿಕೋನಗಳನ್ನು ಕಂಡುಕೊಳ್ಳಲು ನೆರವಾಗಬೇಕು ಎಂದು ಹೇಳಿದರು.