ವ್ಯಾಟಿಕನ್ ರೇಡಿಯೋ ವ್ಯಾಟಿಕನ್ ನ್ಯೂಸ್‌ನ ಅರ್ಮೇನಿಯನ್ ವಿಭಾಗಕ್ಕೆ 60 ವರ್ಷಗಳು ಪೂರ್ಣಗೊಂಡವು.
ವ್ಯಾಟಿಕನ್ ವರದಿ
2026ರಲ್ಲಿ ವ್ಯಾಟಿಕನ್ ರೇಡಿಯೋ ಸ್ಥಾಪನೆಯ 95ನೇ ವಾರ್ಷಿಕೋತ್ಸವ ಆಚರಿಸಲ್ಪಡುತ್ತಿರುವ ಸಂದರ್ಭದಲ್ಲಿ, ವ್ಯಾಟಿಕನ್ ರೇಡಿಯೋ ವ್ಯಾಟಿಕನ್ ನ್ಯೂಸ್‌ನ ಅರ್ಮೇನಿಯನ್ ವಿಭಾಗದ ಸ್ಥಾಪನೆಯ 60ನೇ ವರ್ಷದ ಸಂಭ್ರಮವೂ ವಿಶೇಷವಾಗಿ ಆಚರಿಸಲಾಯಿತು. ಈ ಮಹತ್ವದ ಮೈಲಿಗಲ್ಲನ್ನು ಸ್ಮರಿಸಲು ಮೇ 28ರಂದು ವ್ಯಾಟಿಕನ್‌ನಲ್ಲಿ ಅರ್ಮೇನಿಯನ್ ಸಂಗೀತ ಕಚೇರಿ ಆಯೋಜಿಸಲಾಯಿತು.
ಸಂವಹನ ವಿಭಾಗದ ಸಂಪಾದಕೀಯ ನಿರ್ದೇಶಕರಾದ ಆಂಡ್ರಿಯಾ ಟೋರ್ನಿಯೆಲ್ಲಿ ರವರು ಅರ್ಮೇನಿಯನ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಮಾತನಾಡುತ್ತಾ, “ಅರ್ಮೇನಿಯನ್ ವಿಭಾಗದ ಸ್ಥಾಪನೆಯ 60ನೇ ವರ್ಷಾಚರಣೆಯನ್ನು ಆಚರಿಸುವುದು ಸಂತಸದ ಸಂಗತಿ” ಎಂದು ಹೇಳಿದರು. ಅರ್ಮೇನಿಯನ್ ಜನರ ಇತಿಹಾಸದಲ್ಲಿ ಕ್ರೈಸ್ತ ನಂಬಿಕೆ ಪ್ರಮುಖ ಪಾತ್ರವಹಿಸಿದ್ದು, ಇತಿಹಾಸದ ಕಠಿಣ ಸಂದರ್ಭಗಳಲ್ಲಿಯೂ ಅವರು ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಸ್ಮರಿಸಿದರು. ಇಂದು ಈ ವಿಭಾಗವು ಶಾಂತಿ ಮತ್ತು ಸಂವಾದದ ಸೇತುವೆಯಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಹೇಳಿದರು.
ವ್ಯಾಟಿಕನ್ ರೇಡಿಯೋವು 1966ರ ಮೇ 29ರಂದು ದೇವಸೇವಕರಾದ ಅರ್ಮೇನಿಯನ್ ಕಾರ್ಡಿನಲ್ ಗ್ರೆಗೋರಿಯೋ ಪಿಯೆತ್ರೊ XV ಅಗಾಜಾನಿಯನ್ ರವರ ಪ್ರಯತ್ನದಿಂದ ಅರ್ಮೇನಿಯನ್ ವಿಭಾಗವನ್ನು ಆರಂಭಿಸಿತು. ಇಂದು ವ್ಯಾಟಿಕನ್ ರೇಡಿಯೋ ವ್ಯಾಟಿಕನ್ ನ್ಯೂಸ್ 57 ಭಾಷೆಗಳಲ್ಲಿ ಜಗದ್ಗುರುಗಳು, ವ್ಯಾಟಿಕನ್ ಮತ್ತು ಧರ್ಮ ಸಭೆಯ ಕುರಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಈ ಸಂಗೀತ ಕಾರ್ಯಕ್ರಮದಲ್ಲಿ 18ನೇ ಶತಮಾನದಿಂದ 20ನೇ ಶತಮಾನದ ಕೊನೆಯವರೆಗಿನ ಅರ್ಮೇನಿಯನ್ ಸಂಗೀತವನ್ನು ಇಟಾಲಿಯನ್ ಸಂಗೀತಗಾರರು, ಜಾರ್ಜಿಯನ್-ಅರ್ಮೇನಿಯನ್ ಫ್ಲೂಟ್ ವಾದಕಿ ವೆರೋನಿಕಾ ಖಿಜಾನಿಶ್ವಿಲಿ ಅವರ ನೇತೃತ್ವದಲ್ಲಿ ಆಯೋಜಿಸಿದರು.
ಕಾರ್ಯಕ್ರಮದಲ್ಲಿ ಅರ್ಮೇನಿಯನ್ ಕಥೋಲಿಕ ಧರ್ಮಸಭೆ ಮತ್ತು ವ್ಯಾಟಿಕನ್ ವಿಭಾಗಗಳ ಪ್ರತಿನಿಧಿಗಳೂ ಭಾಗವಹಿಸಿದರು. ಅರ್ಮೇನಿಯನ್ ಕಥೋಲಿಕ ಧರ್ಮ ಸಭೆಯ ಪ್ಯಾಟ್ರಿಯಾರ್ಕ್ ರಫಾಯೇಲ್ ಬೇಡ್ರೋಸ್ XXI ಮಿನಾಸಿಯನ್ ರವರು, “ತಪ್ಪುಮಾಹಿತಿ ಮತ್ತು ಮಾಹಿತಿಯ ದುರುಪಯೋಗ ಹೆಚ್ಚುತ್ತಿರುವ ಇಂದಿನ ಜಗತ್ತಿನಲ್ಲಿ ವ್ಯಾಟಿಕನ್ ರೇಡಿಯೋ ವ್ಯಾಟಿಕನ್ ನ್ಯೂಸ್‌ನ ನಂಬಿಕಸ್ಥ ಮತ್ತು ಪ್ರಾಮಾಣಿಕ ಧ್ವನಿ ಅತ್ಯಂತ ಅಮೂಲ್ಯ” ಎಂದು ಹೇಳಿದರು. ಶಾಂತಿ, ಸಾಮಾಜಿಕ ನ್ಯಾಯ, ಸಹೋದರತ್ವ ಮತ್ತು ಸುವಾರ್ತೆಯ ಪ್ರೀತಿಯ ಸಂದೇಶವನ್ನು ಈ ಮಾಧ್ಯಮವು ಜಗತ್ತಿಗೆ ಸಾರುತ್ತಿದೆ ಎಂದು ಅವರು ಪ್ರಶಂಸಿಸಿದರು.
ಪೂರ್ವ ಧರ್ಮ ಸಭೆಗಳ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ಕ್ಲಾಡಿಯೋ ಗುಜೆರೊಟ್ಟಿ ರವರು, ಅರ್ಮೇನಿಯನ್ ವಿಭಾಗವು “ಸಹಭಾಗಿತ್ವ, ಸಹೋದರತ್ವ ಮತ್ತು ಸುವಾರ್ತಾ ಸಾಕ್ಷ್ಯದ ಸೇತುವೆಯಾಗಿ” ಕಾರ್ಯನಿರ್ವಹಿಸಿದೆ ಎಂದು ಹೇಳಿದರು. ಅನೇಕ ಇತಿಹಾಸದ ಸಂಕಷ್ಟಗಳ ನಡುವೆಯೂ ಅರ್ಮೇನಿಯನ್ ಜನರ ಆಧ್ಯಾತ್ಮಿಕ ಚೈತನ್ಯವನ್ನು ಜೀವಂತವಾಗಿಡುವಲ್ಲಿ ಈ ವಿಭಾಗ ಮಹತ್ವದ ಪಾತ್ರವಹಿಸಿದೆ ಎಂದು ಅವರು ಶ್ಲಾಘಿಸಿದರು.
ಅರ್ಮೇನಿಯನ್ ವಿಭಾಗದ ಮುಖ್ಯಸ್ಥ ರಾಬರ್ಟ್ ಅಟ್ಟಾರಿಯನ್ ರವರು ಕಳೆದ 60 ವರ್ಷಗಳ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಸಹೋದ್ಯೋಗಿಗಳನ್ನೂ, ವಿಶೇಷವಾಗಿ ಹತ್ತು ವರ್ಷಗಳ ಹಿಂದೆ ನಿಧನರಾದ ಮಾಜಿ ಮುಖ್ಯಸ್ಥ ಮಿಶೆಲ್ ಜ್ಯಾಂಗೆ ರವರನ್ನು ಸ್ಮರಿಸಿದರು. ಭವಿಷ್ಯದತ್ತ ಮುಖಮಾಡಿ, “ನಾವು ಭಯವಿಲ್ಲದೆ ಸತ್ಯವನ್ನು ಘೋಷಿಸುತ್ತಲೇ ಇರುತ್ತೇವೆ” ಎಂದು ಅವರು ದೃಢವಾಗಿ ಹೇಳಿದರು.