ಲೌದಾತೋ ಸಿ’ ಗ್ರಾಮ — ಸಮಗ್ರ ಪರಿಸರ ಸಂರಕ್ಷಣೆಗೆ ಸಮರ್ಪಿತ ಹೊಸ ಜಾಗತಿಕ ಮೈತ್ರಿ
ವ್ಯಾಟಿಕನ್ ವರದಿ
ಮಾರ್ಚ್ 9 ಮತ್ತು 10ರಂದು,ಲೌದಾತೋ ಸಿ’ ಉನ್ನತ ಶಿಕ್ಷಣ ಕೇಂದ್ರ ಹಾಗೂ ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಗ್ಲೋಬಲ್ ಅಲಯನ್ಸ್ ಎಂಬ ಅಂತರರಾಷ್ಟ್ರೀಯ ಉಪಕ್ರಮವನ್ನು ಆರಂಭಿಸಲಾಗುತ್ತದೆ. ಈ ಉಪಕ್ರಮವು ಸಮಗ್ರ ಪರಿಸರಶಾಸ್ತ್ರ ಮತ್ತು ಸ್ಥಿರತೆಯ ಅಭಿವೃದ್ಧಿಗೆ ಸಮರ್ಪಿತವಾಗಿದೆ.
ಯೂರೋಪ್, ಏಷ್ಯಾ, ಅಮೆರಿಕಾ ಮತ್ತು ಆಫ್ರಿಕಾದ 60 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಹಾಗೂ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳ ನಾಯಕರು ಈ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಲೌದಾತೋ ಸಿ’ ಗ್ರಾಮದಲ್ಲಿ ಸೇರಲಿದ್ದಾರೆ. ಈ ಸ್ಥಳವು ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ಜಗದ್ಗುರುಗಳ ತೋಟಗಳಲ್ಲಿ ಇದ್ದು, ರೋಮ್ ನಗರದಿಂದ ಸುಮಾರು ಒಂದು ಗಂಟೆಯ ದೂರದಲ್ಲಿದೆ.
ಈ ಕಾರ್ಯಕ್ರಮವು ಎರಡು ದಿನಗಳ ಕಾಲ ನಡೆಯಲಿದ್ದು, ಉಪನ್ಯಾಸಗಳು, ಚರ್ಚೆ ಮತ್ತು ಮನನದ ಅವಕಾಶಗಳು, ಹಾಗೆಯೇ ಸ್ಥಿರತೆಯತ್ತ ಸಮಗ್ರ ದೃಷ್ಟಿಕೋನವನ್ನು ಬೆಳೆಸುವ ಕುರಿತು ಅನುಭವಗಳನ್ನು ಹಂಚಿಕೊಳ್ಳುವ ಕ್ಷಣಗಳನ್ನು ಒಳಗೊಂಡಿರುತ್ತದೆ. ಈ ದೃಷ್ಟಿಕೋನವು ಜಗದ್ಗುರು ಫ್ರಾನ್ಸಿಸ್ ರವರು 2015ರಲ್ಲಿ ಪ್ರಕಟಿಸಿದ ಪರಿಪತ್ರ ಲೌದಾತೋ ಸಿ ಹಾಗೂ ಧರ್ಮ ಸಭೆಯ ಸಾಮಾಜಿಕ ಉಪದೇಶಗಳ ತತ್ವಗಳ ಮೇಲೆ ಆಧಾರಿತವಾಗಿದೆ.
ಭರವಸೆಯ ಸಹಯಾತ್ರೆ
“ಗ್ಲೋಬಲ್ ಅಲಯನ್ಸ್ ಭರವಸೆಯ ಸಹಯಾತ್ರೆಯಾಗಿ ಹುಟ್ಟಿಕೊಂಡಿದೆ. ಇದು ಸೃಷ್ಟಿಯ ಆರೈಕೆಗೆ ವಿಜ್ಞಾನ, ಸಮುದಾಯಗಳು ಮತ್ತು ನಂಬಿಕೆಯನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತದೆ, ಎಂದು ಕಾರ್ಡಿನಲ್ ಫ್ಯಾಬಿಯೊ ಬ್ಯಾಗಿಯೊ ಹೇಳಿದರು. ಅವರು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಮಹಾನಿರ್ದೇಶಕರಾಗಿದ್ದು, ಗ್ಲೋಬಲ್ ಅಲಯನ್ಸ್‌ನ ಸ್ಥಾಪಕರಲ್ಲಿ ಒಬ್ಬರು.
ಇದು ಅತ್ಯಂತ ಅಸುರಕ್ಷಿತ ವ್ಯಕ್ತಿಗಳನ್ನು ರಕ್ಷಿಸುವುದಕ್ಕೂ ಹಾಗೂ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವ ನ್ಯಾಯಸಮ್ಮತ ಮತ್ತು ಸ್ಥಿರ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸಲು ಪ್ರಯತ್ನಿಸುತ್ತದೆ, ಎಂದರು.
ಇದಲ್ಲದೆ ರೆವರೆಂಡ್ ರಾಬರ್ಟ್ ಎ. ಡೌಡ್, ನೊಟ್ರೆ ಡೇಮ್ ವಿಶ್ವವಿದ್ಯಾಲಯ ಅಧ್ಯಕ್ಷರು, ಈ ಉಪಕ್ರಮವು ಲೌದಾತೋ ಸಿ ಪರಿಪತ್ರದ ನೈತಿಕ ದೃಷ್ಟಿಕೋನಕ್ಕೆ ಆಳವಾಗಿ ಬದ್ಧವಾಗಿದೆ. ಅಂಚಿನಲ್ಲಿರುವವರನ್ನು ರಕ್ಷಿಸುವುದಕ್ಕೂ ಹಾಗೂ ನಮ್ಮ ಸಾಮಾನ್ಯ ಗೃಹವಾದ ಭೂಮಿಯ ಆರೈಕೆಗೆ ಇದು ಸಹಕಾರಿಯಾಗಿದೆ ಎಂದು ಹೇಳಿದರು.
ವಿಶ್ವದಾದ್ಯಂತದಿಂದ ಸ್ಥಿರತೆ ಮತ್ತು ಸಮಗ್ರ ಪರಿಸರಶಾಸ್ತ್ರ ಕ್ಷೇತ್ರದಲ್ಲಿ ತೊಡಗಿರುವ ಗಣ್ಯ ನಾಯಕರು ಮತ್ತು ಸಂಶೋಧಕರನ್ನು ಒಂದೇ ವೇದಿಕೆಗೆ ತರಲಿರುವ ಈ ಗ್ಲೋಬಲ್ ಅಲಯನ್ಸ್‌ನಲ್ಲಿ ವ್ಯಾಟಿಕನ್ ಜೊತೆ ಸಹಭಾಗಿಯಾಗಿರುವುದು ನಮಗೆ ಗೌರವದ ಸಂಗತಿಯಾಗಿದೆ, ಎಂದು ಅವರು ಮುಂದುವರಿಸಿದರು. ಇದು ಎಲ್ಲರಿಗೂ ಹೆಚ್ಚು ನ್ಯಾಯಸಮ್ಮತ ಮತ್ತು ಸ್ಥೈರ್ಯಯುತ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಪರಿಸರ ಸಮಸ್ಯೆಗಳನ್ನು ಎದುರಿಸಲು ಜಾಲತಂತ್ರ
ಗ್ಲೋಬಲ್ ಅಲಯನ್ಸ್ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ಪರಸ್ಪರ ಸಂಪರ್ಕಿಸಲು ರಚಿಸಲಾಗಿದೆ. ಇವು ಸ್ಥಿರತೆಯ ಅಭ್ಯಾಸಗಳನ್ನು ಉತ್ತೇಜಿಸಲು ಬದ್ಧವಾಗಿದ್ದು, ಸಂಶೋಧನೆ, ಶಿಕ್ಷಣ ಮತ್ತು ಸಮುದಾಯ ಕಾರ್ಯಗಳ ನಡುವಿನ ಸಹಕಾರವನ್ನು ಬಲಪಡಿಸಲು ಉದ್ದೇಶಿಸಿದೆ.
ಈ ಜಾಲತಂತ್ರವು ನಂಬಿಕೆ, ವಿಜ್ಞಾನ ಮತ್ತು ಸಾಮಾಜಿಕ ನ್ಯಾಯವನ್ನು ಒಂದಾಗಿಸುವ ಮೂಲಕ ಸಮಗ್ರ ಪರಿಸರಶಾಸ್ತ್ರದ ಜಾಗತಿಕ ಪ್ರಭಾವವನ್ನು ವಿಸ್ತರಿಸುವ ಸಾಮರ್ಥ್ಯವಿರುವ ಸಾಮಾನ್ಯ ಮೂಲಸೌಕರ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದರ ಮೂಲಕ ಪರಿಸರ ಹಾನಿ, ಅಸಮಾನತೆ ಮತ್ತು ಪರಿಸರ ನ್ಯಾಯದ ಕೊರತೆಗಳಂತಹ ಸಮಸ್ಯೆಗಳನ್ನು ಎದುರಿಸಲು ಸಹಾಯವಾಗಲಿದೆ.
ಈ ಕಾರ್ಯಕ್ರಮದಿಂದ ನಿರೀಕ್ಷಿಸಲಾದ ಫಲಿತಾಂಶಗಳಲ್ಲಿ ಜಾಗತಿಕ ಸಂಸ್ಥೆಗಳ ಜಾಲವನ್ನು ರೂಪಿಸುವುದು, ಸಂಶೋಧನಾ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಾಧನಗಳನ್ನು ಅಭಿವೃದ್ಧಿಪಡಿಸಲು ವಿಷಯಾಧಾರಿತ ಕಾರ್ಯಗುಂಪುಗಳನ್ನು ರಚಿಸುವುದು, ಮತ್ತು ಅಂತರರಾಷ್ಟ್ರೀಯ ಸ್ಥಿರತಾ ಸಂವಾದದಲ್ಲಿ ಕಥೋಲಿಕ ಧರ್ಮ ಸಭೆಯ ಉಪಾತ್ರ ಮತ್ತು ಕೊಡುಗೆಯನ್ನು ಮತ್ತಷ್ಟು ಬಲಪಡಿಸುವುದು ಸೇರಿವೆ.