ಹುಡುಕಿ

ಜಗದ್ಗರುಗಳ ಉಪದೇಶಕರಾದ , ವಂ. ಸ್ವಾಮಿ ರಾಬರ್ಟೊ ಪಸೋಲಿನಿರವರು VI ನೇ ಪಾಲ್ ಪ್ರೇಕ್ಷಕರ ಸಭಾಂಗಣದಲ್ಲಿ ತಮ್ಮ ಮೊದಲ ತಪಸ್ಸು ಕಾಲದ ಧ್ಯಾನವನ್ನು ನೀಡುತ್ತಿದ್ದಾರೆ ಜಗದ್ಗರುಗಳ ಉಪದೇಶಕರಾದ , ವಂ. ಸ್ವಾಮಿ ರಾಬರ್ಟೊ ಪಸೋಲಿನಿರವರು VI ನೇ ಪಾಲ್ ಪ್ರೇಕ್ಷಕರ ಸಭಾಂಗಣದಲ್ಲಿ ತಮ್ಮ ಮೊದಲ ತಪಸ್ಸು ಕಾಲದ ಧ್ಯಾನವನ್ನು ನೀಡುತ್ತಿದ್ದಾರೆ  (ANSA)

ತಪಸ್ಸು ಕಾಲದ ಮೊದಲ ಧ್ಯಾನ:ಶಾಂತಿಯು ಸಣ್ಣದಾಗಿರುವ ಧೈರ್ಯದಿಂದ ಬರುತ್ತದೆ

ಜಗದ್ಗರುಗಳ ಉಪದೇಶಕರಾದ , ವಂ. ಸ್ವಾಮಿ ರಾಬರ್ಟೊ ಪಸೋಲಿನಿರವರು ಜಗದ್ಗುರುಗಳ ಸಮ್ಮುಖದಲ್ಲಿ ತಮ್ಮ ಮೊದಲ ತಪಸ್ಸು ಕಾಲದ ಧ್ಯಾನೋಪದೇಶವನ್ನು ನೀಡಿದರು. ಅದರಲ್ಲಿ ನಮ್ಮ ನಿರಂತರ ಪರಿವರ್ತನೆಯ (ಮನಸ್ಸು ಬದಲಾವಣೆಯ) ಭಾಗವಾಗಿ ವಿನಮ್ರತೆಯ ಮಹತ್ವದ ಕುರಿತು ಅವರು ಚಿಂತನೆಗಳನ್ನು ಹಂಚಿಕೊಂಡರು

ವ್ಯಾಟಿಕನ್ ವರದಿ

ವಂ. ಸ್ವಾಮಿ ರಾಬರ್ಟೊ ಪಸೋಲಿನಿರವರು ಮಾರ್ಚ್ 6ರಂದು ತಮ್ಮ ತಪಸ್ಸು ಕಾಲದ ಮೊದಲ ಧ್ಯಾನೋಪದೇಶವನ್ನು ನೀಡಿದರು. ಈ ಧ್ಯಾನೋಪದೇಶಗಳು ಮಾರ್ಚ್ 27ರವರೆಗೆ ಪ್ರತಿಯೊಂದು ಶುಕ್ರವಾರ ವ್ಯಾಟಿಕನ್‌ನ VI ನೇ ಪಾಲ್  ಪ್ರೇಕ್ಷಕರ ಸಭಾಂಗಣದಲ್ಲಿ  ನಡೆಯಲಿದ್ದು, ಜಗದ್ಗುರು XIVನೇ ಲಿಯೋರವರ ಸಮ್ಮುಖದಲ್ಲಿ ನಡೆಯುತ್ತವೆ. ಈ ಉಪದೇಶಗಳ ಸರಣಿಯ ಮುಖ್ಯ ವಿಷಯವು: “ಯಾರು ಕ್ರಿಸ್ತನಲ್ಲಿ ಇದ್ದಾರೋ ಅವರು ಹೊಸ ಸೃಷ್ಟಿ” (2 ಕೊರಿಂಥದವರಿಗೆ 5:17) ಎಂಬ ವಾಕ್ಯದ ಮೇಲೆ ಆಧಾರಿತವಾಗಿದ್ದು, ಅಸಿಸಿಯ ಸಂತ ಫ್ರಾನ್ಸಿಸ್ ರವರ ಉದಾಹರಣೆಯ ಪ್ರಕಾರ ಸುವಾರ್ತೆಗೆ ಪರಿವರ್ತನೆ ಎಂಬುದಾಗಿದೆ. ಮೊದಲ ಧ್ಯಾನದ ವಿಷಯ ವಿನಮ್ರತೆಯ ಮಾರ್ಗದಲ್ಲಿ ಯೇಸು ಕ್ರಿಸ್ತನನ್ನು ಅನುಸರಿಸುವ ಪರಿವರ್ತನೆ ಎಂಬುದಾಗಿತ್ತು.

ವಂ.ಸ್ವಾಮಿ ಪಾಸೋಲಿನಿರವರು ವಿವರಿಸಿದಂತೆ, ಇಂದಿನ ಯುಗದಲ್ಲಿ ನೋವು ಮತ್ತು ಹಿಂಸೆ ಹೆಚ್ಚಾಗಿರುವ ಸಂದರ್ಭದಲ್ಲಿ “ಸಣ್ಣತನ” ಕುರಿತು ಮಾತನಾಡುವುದು ಕೆಲವರಿಗೆ ಅಪ್ರಸ್ತುತವಾಗಿ ಕಾಣಬಹುದು. ಆದರೆ ವಾಸ್ತವವಾಗಿ ಇದು ಜಗತ್ತಿನ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಜವಾಬ್ದಾರಿಯಾಗಿದೆ. ಶಾಂತಿ ಕೇವಲ ರಾಜಕೀಯ ಒಪ್ಪಂದಗಳು ಅಥವಾ ಸೈನಿಕ ತಂತ್ರಗಳಿಂದ ಮಾತ್ರ ಬರದು; ಸಣ್ಣವರಾಗಲು ಧೈರ್ಯವಿರುವ ಮಹಿಳಾ-ಪುರುಷರಿಂದಲೇ ನಿಜವಾದ ಶಾಂತಿ ಹುಟ್ಟುತ್ತದೆ. ಜನರು ಪ್ರತೀಕಾರವನ್ನು ತ್ಯಜಿಸಿ, ಹಿಂಸೆಯನ್ನು ನಿರಾಕರಿಸಿ, ಸಂವಾದದ ಮಾರ್ಗವನ್ನು ಆಯ್ಕೆ ಮಾಡಿದಾಗ ಶಾಂತಿಯ ಬೀಜ ಬೆಳೆಯುತ್ತದೆ.

ಅವರು “ಸುವಾರ್ತಾ ಪರಿವರ್ತನೆ” ಎಂದರೆ ಮೊದಲು ದೇವರ ಕೃಪೆಯ ಉಪಕ್ರಮವೆಂದು ಹೇಳಿದರು. ಮನುಷ್ಯನು ತನ್ನ ಸಂಪೂರ್ಣ ಸ್ವಾತಂತ್ರ್ಯದಿಂದ ಅದರಲ್ಲಿ ಪಾಲ್ಗೊಳ್ಳಲು ಆಹ್ವಾನಿತನಾಗುತ್ತಾನೆ. ಈ ಪರಿವರ್ತನೆ ಮಾನವನ ಅಂತರಂಗದ ಅತ್ಯಂತ ಆಳದಲ್ಲಿ ಸಂಭವಿಸುತ್ತದೆ ಅಲ್ಲಿ ದೇವರ ಪ್ರತಿರೂಪ ನಮ್ಮೊಳಗೆ ಅಚ್ಚೊತ್ತಲ್ಪಟ್ಟಿದ್ದು, ಅದು ಎಚ್ಚರಗೊಳ್ಳಲು ಕಾಯುತ್ತಿದೆ.

ಪರಿವರ್ತನೆಯ ಮಾರ್ಗದಲ್ಲಿ ಅಸಿಸಿಯ ಸಂತ ಫ್ರಾನ್ಸಿಸ್ ರವರ ಪಶ್ಚಾತ್ತಾಪದ ಬಗ್ಗೆ ಮಾತನಾಡುತ್ತಾರೆ. ಅದು ಕೇವಲ ತಪ್ಪಿಗೆ ಪಶ್ಚಾತ್ತಾಪಪಡುವುದಲ್ಲ ಬದಲಾಗಿ ಲೋಕವನ್ನು ಮತ್ತು ಇತರರನ್ನು ಕರುಣೆಯ ದೃಷ್ಟಿಯಿಂದ ನೋಡುವ ಹೊಸ ಮನೋಭಾವ. ಸುವಾರ್ತೆಯ ಬೆಳಕಿನಲ್ಲಿ ಬದುಕನ್ನು ನೋಡಲು ಪ್ರಾರಂಭಿಸಿದಾಗ, ಅರ್ಥವಿಲ್ಲದ ಜೀವನದ ಕಹಿತನವನ್ನು ದೂರ ಮಾಡಬಹುದು.

ವಂ.ಸ್ವಾಮಿ ಪಾಸೋಲಿನಿರವರು ಪಾಪದ ವಾಸ್ತವಿಕತೆಯನ್ನೂ ನೆನಪಿಸಿದರು. ಇಂದಿನ ಕಾಲದಲ್ಲಿ ಪಾಪವನ್ನು ಕೇವಲ ದುರ್ಬಲತೆ ಅಥವಾ ಸಣ್ಣ ತಪ್ಪಾಗಿ ಮಾತ್ರ ನೋಡಲಾಗುತ್ತದೆ. ಆದರೆ ಪಾಪವನ್ನು ಗಂಭೀರವಾಗಿ ಅರಿಯದೆ ಇದ್ದರೆ, ಮನುಷ್ಯನ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ಮಹತ್ವವನ್ನು ನಾವು ಕಳೆದುಕೊಳ್ಳುತ್ತೇವೆ. ಪಾಪವನ್ನು ಅರಿತುಕೊಳ್ಳುವುದು ದೇವರೊಂದಿಗೆ ನಮ್ಮ ಸಂಬಂಧವನ್ನು ಪುನಃ ನಿರ್ಮಿಸಲು ಅಗತ್ಯವಾದ ಆಂತರಿಕ ಗುಣಮುಖತೆಯ ಮಾರ್ಗವನ್ನು ತೆರೆಯುತ್ತದೆ.

ಅವರು ವಿನಮ್ರತೆಯ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಿದರು. ಅಸಿಸಿಯ ಸಂತ ಫ್ರಾನ್ಸಿಸ್ ರವರನ್ನು ಸಾಮಾನ್ಯವಾಗಿ ದಾರಿದ್ರ್ಯದ ಸಂತನಾಗಿ ನೋಡಲಾಗುತ್ತದೆ, ಆದರೆ ಅವರ ಜೀವನವನ್ನು ವಿನಮ್ರತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ವಿನಮ್ರತೆ ಮನುಷ್ಯನನ್ನು ಕುಗ್ಗಿಸುವುದಿಲ್ಲ ಬದಲಾಗಿ ಅವನನ್ನು ತನ್ನ ನಿಜವಾದ ಮಹತ್ವಕ್ಕೆ ಹಿಂತಿರುಗಿಸುತ್ತದೆ. ಇದು ಕ್ರೈಸ್ತ ಜೀವನದಲ್ಲಿ ದೇವರ ಕೃಪೆಯನ್ನು ಸಂಪೂರ್ಣವಾಗಿ ಸ್ವೀಕರಿಸಲು ಪ್ರತಿಯೊಬ್ಬ ದೀಕ್ಷಾಸ್ನಾನ ಪಡೆದವನು ನಡೆಯಬೇಕಾದ ಮಾರ್ಗವಾಗಿದೆ.

ಕೊನೆಯಲ್ಲಿ, ವಂ.ಸ್ವಾಮಿ ಪಾಸೋಲಿನಿರವರು ಪರಿವರ್ತನೆ ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ಹೇಳಿದರು. ಕ್ರೈಸ್ತನು ತನ್ನ ದುರ್ಬಲತೆಯಲ್ಲಿಯೇ ದೇವರ ಕೃಪೆಗೆ ಹೃದಯವನ್ನು ತೆರೆದು ನಿರಂತರವಾಗಿ ಹೊಸದಾಗಿ ಆರಂಭಿಸಬೇಕು. ವಿಶೇಷವಾಗಿ ಸಂಘರ್ಷಗಳು ಮತ್ತು ಕಷ್ಟಗಳ ನಡುವೆ ಸಣ್ಣತನದ ಸುವಾರ್ತೆಯನ್ನು ಬದುಕುವುದು ಇನ್ನಷ್ಟು ಅಗತ್ಯ. ಧ್ಯಾನೋಪದೇಶವು ದೇವರ ಪ್ರಿಯ ಪುತ್ರನಾದ ಯೇಸು ಕ್ರಿಸ್ತನ ಹೆಜ್ಜೆಗುರುತುಗಳಲ್ಲಿ ನಡೆಯಲು ಪ್ರಾರ್ಥನೆಯೊಂದಿಗೆ ಅಂತ್ಯಗೊಂಡಿತು.

06 ಮಾರ್ಚ್ 2026, 16:19