ಜಗದ್ಗರುಗಳ ಉಪದೇಶಕ ವಂ. ಸ್ವಾಮಿ ರಾಬರ್ಟೊ ಪಸೋಲಿನಿ ಜಗದ್ಗರುಗಳ ಉಪದೇಶಕ ವಂ. ಸ್ವಾಮಿ ರಾಬರ್ಟೊ ಪಸೋಲಿನಿ  (ANSA)

ಜಗದ್ಗರುಗಳ ಉಪದೇಶಕ: ಪ್ರೀತಿಯ ವಿನಮ್ರ ಶಕ್ತಿ ಸಂಘರ್ಷಗಳ ಮಧ್ಯೆಯೂ ಶಾಂತಿಯನ್ನು ಉಂಟುಮಾಡುತ್ತದೆ

ವಂ. ಸ್ವಾಮಿ ರಾಬರ್ಟೊ ಪಸೋಲಿನಿ, ಜಗದ್ಗುರುಗಳ ಉಪದೇಶಕರಾಗಿ, ಮಾರ್ಚ್ 6ರಿಂದ 27ರವರೆಗೆ ಪ್ರತಿಯೊಂದು ಶುಕ್ರವಾರ ಅವರು ನೀಡಲಿರುವ ತಪಸ್ಸು ಕಾಲದ ಧರ್ಮೋಪದೇಶಗಳ ಕೇಂದ್ರ ವಿಷಯಗಳ ಕುರಿತು ವ್ಯಾಟಿಕನ್ ನ್ಯೂಸ್ ಗೆ ಮಾತನಾಡಿದರು.

ವ್ಯಾಟಿಕನ್ ವರದಿ

ವಂ. ಸ್ವಾಮಿ ರಾಬರ್ಟೊ ಪಸೋಲಿನಿ ಜಗದ್ಗರುಗಳ ಉಪದೇಶಕರಾದ ಅವರು ಈ ವರ್ಷದ ತಪಸ್ಸು ಕಾಲದ ಧ್ಯಾನೋಪದೇಶಗಳ ಕೇಂದ್ರ ವಿಷಯವಾಗಿ ಅಸಿಸಿಯ ಸಂತ ಫ್ರಾನ್ಸಿಸ್ ರವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು. ಈ ವರ್ಷ ಸಂತ ಫ್ರಾನ್ಸಿಸ್ ರವರ ನಿಧನದ 800ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿರುವುದರಿಂದ, ಅವರನ್ನು ಪರಿವರ್ತನೆ ಮತ್ತು ಸುವಾರ್ತಾ ಜೀವನದ ಸ್ಪಷ್ಟ ಮಾರ್ಗವಾಗಿ ಜಗದ್ಗುರುಗಳು ಹಾಗೂ ರೋಮನ್ ಪ್ರಾಂತ್ಯದ ಮುಂದೆ ಪರಿಚಯಿಸುವುದು ಸಹಜವಾದ ಆಯ್ಕೆ ಎಂದು ಅವರು ವಿವರಿಸಿದರು. ಮಾರ್ಚ್ 6ರಿಂದ 27ರವರೆಗೆ ಪ್ರತಿಯೊಂದು ಶುಕ್ರವಾರ ಅವರು ಈ ಧ್ಯಾನೋಪದೇಶಗಳನ್ನು ನೀಡಲಿದ್ದಾರೆ.

ಈ ಧ್ಯಾನೋಪದೇಶಗಳ ಮುಖ್ಯ ವಿಷಯವು “ಯಾರು ಕ್ರಿಸ್ತನಲ್ಲಿ ಇದ್ದಾರೋ ಅವರು ಹೊಸ ಸೃಷ್ಟಿ” (2 ಕೊರಿಂಥದವರಿಗೆ 5:17) ಎಂಬ ವಾಕ್ಯದ ಮೇಲೆ ಆಧಾರಿತವಾಗಿದೆ. ಸಂತ ಫ್ರಾನ್ಸಿಸ್ ರವರ ಸುವಾರ್ತಾ ಜೀವನದ ಮಾದರಿಯ ಮೂಲಕ ಸ್ವಾತಂತ್ರ್ಯ, ನಿರೀಕ್ಷೆ, ಗುರಿ ಮತ್ತು ಸಹೋದರತ್ವದಂತಹ ವಿಷಯಗಳನ್ನು ಈ ಧ್ಯಾನಗಳಲ್ಲಿ ಚರ್ಚಿಸಲಾಗುತ್ತದೆ.

ವಂ.ಸ್ವಾಮಿ ಪಾಸೋಲಿನಿರವರು ಹೇಳುವಂತೆ, ಕ್ರೈಸ್ತ ಭರವಸೆಯು ಸದಾ ಶಿಲುಬೆಯ ಗುರುತು ಹೊಂದಿರುತ್ತದೆ ಅದು ಒಂದೆಡೆ ಪ್ರಕಾಶಮಾನವಾದದ್ದಾಗಿದ್ದರೂ ಮತ್ತೊಂದೆಡೆ ನಾಜೂಕಾಗಿಯೂ ಇರುತ್ತದೆ. ದೇವರು ಪ್ರೀತಿಯ ಮೂಲಕವೇ ಲೋಕವನ್ನು ನಡೆಸಲು ಆಯ್ಕೆ ಮಾಡಿಕೊಂಡಿದ್ದಾನೆ ಮತ್ತು ಮಾನವನ ಸ್ವಾತಂತ್ರ್ಯವನ್ನು ಗೌರವಿಸುತ್ತಾನೆ. ಆದ್ದರಿಂದ ಶಾಂತಿಯ ಮಾರ್ಗಗಳು ನಿಧಾನವಾಗಿರುತ್ತವೆ ಅವು ಶಿಲುಬೆಯ ತತ್ವವನ್ನು ವಿನಮ್ರ ಧೈರ್ಯದಿಂದ ಸ್ವೀಕರಿಸುವ ಹೃದಯಗಳು ಮತ್ತು ಮನಸ್ಸುಗಳ ಮೇಲೆ ಅವಲಂಬಿತವಾಗಿರುತ್ತವೆ.

ಇಂದಿನ ಯುದ್ಧಗಳು, ಉದ್ವಿಗ್ನತೆಗಳು ಮತ್ತು ಭಯಗಳು ಭರವಸೆಯನ್ನು ಪರೀಕ್ಷಿಸುತ್ತಿದ್ದರೂ ಸಹ, ಸಹೋದರತ್ವದ ಹೊಸ ನಾಗರಿಕತೆಯ ಬೀಜ ಈಗಾಗಲೇ ಬಿತ್ತಲಾಗಿದೆ ಎಂದು ಅವರು ಹೇಳಿದರು. ದೇವರ ರಾಜ್ಯವು ವಿಶ್ವದಲ್ಲಿ ಬೆಳೆಯುತ್ತಾ ಫಲಕೊಡುತ್ತಿದೆ. ಆದರೆ ಯುದ್ಧಗಳ ಗದ್ದಲವು ಒಳ್ಳೆಯದಿನ ಶಾಂತ ಬೆಳವಣಿಗೆಯನ್ನು ಮರೆಮಾಡುತ್ತದೆ ಆದರೂ ಪ್ರೀತಿಯ ವಿನಮ್ರ ಶಕ್ತಿ ಅಂತಿಮವಾಗಿ ನ್ಯಾಯ ಮತ್ತು ಶಾಂತಿಯ ಶಾಶ್ವತ ಫಲಗಳನ್ನು ತರುತ್ತದೆ ಎಂಬ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಇಂದಿನ ಕಾಲದಲ್ಲಿ ಕೇವಲ ಶಸ್ತ್ರಾಸ್ತ್ರಗಳ ಹಿಂಸೆ ಮಾತ್ರವಲ್ಲ, ಮಾತಿನ ಹಿಂಸೆಯೂ ಹೆಚ್ಚುತ್ತಿರುವುದನ್ನು ಅವರು ಸೂಚಿಸಿದರು. ಮಾತಿನಲ್ಲಿ ಶಾಂತಿ ಇರಬೇಕಾದರೆ ಕೇವಲ ಕೆಲವು ಪದಗಳನ್ನು ತಪ್ಪಿಸುವುದಷ್ಟೇ ಸಾಕಾಗುವುದಿಲ್ಲ ಬದಲಾಗಿ ಕೇಳುವ ಮನೋಭಾವ, ಪರಸ್ಪರ ಗೌರವ ಮತ್ತು ಸಂವಾದದ ಮನಸ್ಸು ಅಗತ್ಯವಾಗಿದೆ. ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮತ್ತು ಸಮಾನ ಗೌರವದ ಸಂಬಂಧಗಳನ್ನು ನಿರ್ಮಿಸಲು ಸಿದ್ಧರಾಗಿದ್ದರೆ, ಅದೇ ನಿಜವಾದ ಮಾತಿನ ನಿರಾಯುಧೀಕರಣ ಎಂದು ಅವರು ಹೇಳಿದರು.

ಕೊನೆಯಲ್ಲಿ, ಅಸಿಸಿಯ ಸಂತ ಫ್ರಾನ್ಸಿಸ್ ರವರು ಇಂದಿಗೂ ಪ್ರಸ್ತುತವಾಗಿರುವುದು ಏಕೆಂದರೆ ಅವರು ದೇವರು ಜೀವಂತನಾಗಿದ್ದು ನಮ್ಮ ಜೀವನದಲ್ಲಿ ವಾಸಿಸಬಲ್ಲನು ಎಂಬುದನ್ನು ನೆನಪಿಸುತ್ತಾರೆ ಎಂದು ಹೇಳಿದರು. ಅವರ ಜೀವನವು ಸುವಾರ್ತೆಯನ್ನು ಕೇವಲ ಸಿದ್ಧಾಂತವಾಗಿ ಅಲ್ಲ, ಬದುಕಿನಲ್ಲಿ ಅನುಭವಿಸುವ ಜೀವಂತ ವಾಕ್ಯವಾಗಿ ನೋಡಲು ನಮಗೆ ಪ್ರೇರಣೆ ನೀಡುತ್ತದೆ. ದೇವರೊಂದಿಗೆ ಸಮಾಧಾನಗೊಂಡ ಜೀವನವು ಹೆಚ್ಚು ಮಾನವೀಯ, ಸರಳ ಮತ್ತು ಸಹೋದರತ್ವದಿಂದ ಕೂಡಿದ ಜೀವನವಾಗುತ್ತದೆ ಎಂಬುದನ್ನು ಸಂತ ಫ್ರಾನ್ಸಿಸ್ ರವರು ತಮ್ಮ ಜೀವನದ ಮೂಲಕ ತೋರಿಸುತ್ತಾರೆ.

06 ಮಾರ್ಚ್ 2026, 16:11