ಅಂತಿಮ ತಪಸ್ಸು ಕಾಲದ ಧ್ಯಾನ: ನಿಜವಾದ ಸ್ವಾತಂತ್ರ್ಯವು ನಿಬಂಧನೆರಹಿತ ಪ್ರೀತಿಯಲ್ಲಿದೆ
ವ್ಯಾಟಿಕನ್ ವರದಿ
ತಪಸ್ಸು ಕಾಲದ ನಾಲ್ಕನೇ ಮತ್ತು ಅಂತಿಮ ಧ್ಯಾನದಲ್ಲಿ, ಜಗದ್ಗುರು ಮನೆತನದ ಪ್ರಚಾರಕರಾದ ವಂ.ಸ್ವಾಮಿ ರೋಬೆರ್ಟೊ ಪಾಸೋಲಿನಿ ರವರು ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಭೌತಿಕ ಜೀವನದ ಅಂತಿಮ ಹಂತಗಳನ್ನು ಚಿಂತನೆಗೆ ತೆಗೆದುಕೊಂಡರು. ಸಂತ ಫ್ರಾನ್ಸಿಸ್ ರವರು ತಮ್ಮ ದುರ್ಬಲತೆ ಮತ್ತು ಸಣ್ಣತನವನ್ನು ಸ್ವೀಕರಿಸಲು ಕಲಿತರು ಹಾಗೂ ನಿರಾಕರಣೆ, ರೋಗ ಅಥವಾ ಮರಣವೂ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರದು ಎಂಬ ಸತ್ಯವನ್ನು ಅರಿತುಕೊಂಡರು. ಈ ಧ್ಯಾನವು ದೇವರ ಮಕ್ಕಳ ಸ್ವಾತಂತ್ರ್ಯ ಪರಿಪೂರ್ಣ ಸಂತೋಷ ಮತ್ತು ಮರಣವನ್ನು ಸಹೋದರಿಯಾಗಿ ನೋಡುವುದು ಎಂಬ ವಿಷಯದ ಮೇಲೆ ನಡೆಯಿತು.
ವಂ.ಸ್ವಾಮಿ ಪಾಸೋಲಿನಿ ರವರು, ಸಂತ ಫ್ರಾನ್ಸಿಸ್ ರವರು ತಮ್ಮ ಜೀವನದ ದಾರಿದ್ರ್ಯ ಮತ್ತು ವಾಸ್ತವಿಕ ಪರಿಸ್ಥಿತಿಗಳಲ್ಲಿ ದೇವರ ಮಾರ್ಗದರ್ಶನವನ್ನು ಸ್ವೀಕರಿಸಿದ ಕಾರಣವೇ ಅವರು ಸಂತರಾದರು ಎಂದು ಹೇಳಿದರು. ಅವರ ಜೀವನವೇ ನಿರಂತರ ಪ್ರಾರ್ಥನೆಯಾಗಿ ಮಾರ್ಪಟ್ಟಿತು. ಜೀವನದ ಅಂತ್ಯದ ಹಂತಗಳಲ್ಲಿ ಅವರು ಎದುರಿಸಿದ ದೊಡ್ಡ ಪರೀಕ್ಷೆಗಳ ನಡುವೆಯೂ, ನಿಜವಾದ ಸಂತೋಷವು ಬಾಹ್ಯ ಯಶಸ್ಸಿನಲ್ಲಿ ಅಲ್ಲ, ಆದರೆ ಸಂಕಷ್ಟದ ಸಂದರ್ಭಗಳಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರಲ್ಲಿ ಅಡಕವಾಗಿದೆ ಎಂದು ಅವರು ವಿವರಿಸಿದರು.
“ಪರಿಪೂರ್ಣ ಸಂತೋಷ” ಎಂಬುದು ನೋವು ಇಲ್ಲದಿರುವುದಲ್ಲ, ಆದರೆ ನೋವು ನಮ್ಮನ್ನು ನಿರ್ಧರಿಸದಿರುವ ಸ್ವಾತಂತ್ರ್ಯ ಎಂದು ಅವರು ಹೇಳಿದರು. ಮಾನವನು ನೋವನ್ನು ಅನುಭವಿಸಿದರೂ, ಅದನ್ನು ಪ್ರೀತಿಯಿಂದ ಸ್ವೀಕರಿಸಿದಾಗ ಅದು ಆತ್ಮೀಯ ಬೆಳವಣಿಗೆಯ ದಾರಿಯಾಗುತ್ತದೆ. ಕ್ರೈಸ್ತ ಜೀವನವು ವಾಸ್ತವಿಕತೆಯನ್ನು ತಳ್ಳಿಹಾಕುವುದಲ್ಲ, ಆದರೆ ಅದನ್ನು ಅಪ್ಪಿಕೊಳ್ಳುವುದರಲ್ಲಿ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಯೇಸು ಕ್ರಿಸ್ತನು ಸಾರಿದ ಧನ್ಯವಚನಗಳು ಸಂಪೂರ್ಣ ಜೀವನದ ಭರವಸೆಯನ್ನು ನೀಡುತ್ತವೆ ಎಂದು ಅವರು ವಿವರಿಸಿದರು. ಅವು ಕೇವಲ ನಿಯಮಗಳಲ್ಲ, ಆದರೆ ಜೀವನದ ನಿಜವಾದ ಸಂತೋಷವನ್ನು ತೋರಿಸುವ ಮಾರ್ಗವಾಗಿವೆ. ನಮ್ಮ ದೈನಂದಿನ ಅನುಭವಗಳಲ್ಲಿಯೇ ದೇವರ ಕೃಪೆಯನ್ನು ಕಾಣಬಹುದು ಮತ್ತು ಜೀವನದ ಕಷ್ಟಗಳಲ್ಲಿಯೂ ಶಾಂತಿಯನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.
ಸಂತ ಫ್ರಾನ್ಸಿಸ್ ರವರ ಗಾಯಗಳ ಅನುಭವವು ದೇವರ ಪ್ರೀತಿಯ ರೂಪಾಂತರಶಕ್ತಿಯನ್ನು ತೋರಿಸುತ್ತದೆ ಎಂದು ವಂ.ಸ್ವಾಮಿ ಪಾಸೋಲಿನಿ ಹೇಳಿದರು. ನೋವು ಅಳಿದುಹೋಗುವುದಿಲ್ಲ, ಆದರೆ ಅದು ನಮ್ಮನ್ನು ಮುಚ್ಚಿಬಿಡುವುದಿಲ್ಲ ಬದಲಾಗಿ ಅದು ಕ್ರಿಸ್ತನೊಂದಿಗೆ ನಮ್ಮ ಸಂಬಂಧವನ್ನು ಗಾಢಗೊಳಿಸುತ್ತದೆ. ಈ ಮೂಲಕ ಮಾನವನು ಆಂತರಿಕ ಶಾಂತಿಯನ್ನು ಕಂಡುಕೊಳ್ಳುತ್ತಾನೆ.
ತಮ್ಮ ಅಂತಿಮ ದಿನಗಳಲ್ಲಿ ಸಂತ ಫ್ರಾನ್ಸಿಸ್ ರವರು ಸಂಪೂರ್ಣವಾಗಿ ದೇವರ ಮೇಲೆ ಅವಲಂಬಿತರಾಗಿದ್ದು, ಮರಣವನ್ನು ಸಹೋದರಿಯಾಗಿ ಸ್ವೀಕರಿಸಿದರು. ಅವರು ತಮ್ಮ ದುರ್ಬಲತೆಯನ್ನು ಒಪ್ಪಿಕೊಂಡು, ಪ್ರೀತಿಯನ್ನು ಸ್ವೀಕರಿಸುವ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ಕಂಡುಕೊಂಡರು. ಈ ಜೀವನಯಾತ್ರೆಯ ಅಂತ್ಯದಲ್ಲಿ, ಅವರು ಸರಳತೆಯಲ್ಲಿ ಮತ್ತು ವಿನಮ್ರತೆಯಲ್ಲಿ ದೇವರೊಂದಿಗೆ ಏಕೀಭವಿಸಿದರು.
ಕೊನೆಯಲ್ಲಿ, ವಂ.ಸ್ವಾಮಿ ಪಾಸೋಲಿನಿ ರವರು ಸಂತ ಫ್ರಾನ್ಸಿಸ್ ರವರ ಜೀವನವು ಎಲ್ಲ ಕ್ರೈಸ್ತರಿಗೂ ಮಾದರಿಯಾಗಿದೆ ಎಂದು ಹೇಳಿದರು. ಸುವಾರ್ತೆಯ ಮಾರ್ಗವು ಸುಲಭವಾದುದಲ್ಲ, ಆದರೆ ಅದು ಪರಿವರ್ತನೆ ಮತ್ತು ಶುದ್ಧೀಕರಣದ ಮೂಲಕ ದೇವರ ಮಕ್ಕಳ ನಿಜವಾದ ಸ್ವಾತಂತ್ರ್ಯವನ್ನು ನೀಡುತ್ತದೆ. ಈ ಮಾರ್ಗವನ್ನು ನಿಷ್ಠೆಯಿಂದ ಅನುಸರಿಸುವುದು ಪ್ರತಿಯೊಬ್ಬ ವಿಶ್ವಾಸಿಯ ಕರ್ತವ್ಯವಾಗಿದೆ.