ಹುಡುಕಿ

ತೆರೇಸಾ ಕೆಟ್ಟೆಲ್‌ಕ್ಯಾಂಪ್ ತೆರೇಸಾ ಕೆಟ್ಟೆಲ್‌ಕ್ಯಾಂಪ್ 

ಅಪ್ರಾಪ್ತರ ರಕ್ಷಣೆಗೆ ಸಂಬಂಧಿಸಿದ ಜಗದ್ಗುರುಗಳ ಆಯೋಗದ ಸಹಾಯಕ ಕಾರ್ಯದರ್ಶಿ ರಾಜೀನಾಮೆ ನೀಡಿದರು

ಕುಟುಂಬ ಸಂಬಂಧಿತ ಕಾರಣಗಳಿಂದ, ತೆರೆಸಾ ಮೋರಿಸ್ ಕೆಟೆಲ್ಕಾಂಪ್ ರವರು ಅಪ್ರಾಪ್ತರ ರಕ್ಷಣೆಗೆ ಸಂಬಂಧಿಸಿದ ಜಗದ್ಗುರುಗಳ ಆಯೋಗದ ಸಹಾಯಕ ಕಾರ್ಯದರ್ಶಿಯ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ. ಮಕ್ಕಳ ರಕ್ಷಣೆಗೆ ಧರ್ಮ ಸಭೆ ನಡೆಸುತ್ತಿರುವ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

ತೆರೆಸಾ ಮೋರಿಸ್ ಕೆಟೆಲ್ಕಾಂಪ್ ರವರು ಅಪ್ರಾಪ್ತರ ರಕ್ಷಣೆಗೆ ಸಂಬಂಧಿಸಿದ ಜಗದ್ಗುರುಗಳ ಆಯೋಗದ ಸಹಾಯಕ ಕಾರ್ಯದರ್ಶಿ ಸ್ಥಾನದಿಂದ ರಾಜೀನಾಮೆ ನೀಡಿದ್ದಾರೆ.

ಮಾರ್ಚ್ 27ರಂದು ಬಿಡುಗಡೆಯಾದ ಪ್ರಕಟಣೆಯಲ್ಲಿ, ಆಯೋಗದ ಅಧ್ಯಕ್ಷರಾದ ಆರ್ಚ್‌ಬಿಷಪ್ ತಿಬೋ ವರ್ನಿ ರವರು ಅಪಾರ ಕೃತಜ್ಞತೆ ಮತ್ತು ಆಳವಾದ ದುಃಖದೊಂದಿಗೆ ಕೆಟೆಲ್ಕಾಂಪ್ ರವರು ಕುಟುಂಬ ಕಾರಣಗಳಿಂದ ಏಪ್ರಿಲ್ 1ರಂದು ತಮ್ಮ ಹುದ್ದೆಯಿಂದ ಹೊರನಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕಟಣೆಯಲ್ಲಿ ಆರ್ಚ್‌ಬಿಷಪ್ ವರ್ನಿ ರವರು, ಕಳೆದ ಹತ್ತು ವರ್ಷಗಳಿಂದ ತೆರೆಸಾ ಕೆಟೆಲ್ಕಾಂಪ್ ರವರು ಅಪ್ರಾಪ್ತರ ರಕ್ಷಣಾ ಆಯೋಗಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಕಾನೂನು ಜಾರಿಗೊಳಿಸುವಿಕೆ ಮತ್ತು ಸುರಕ್ಷತಾ ಕ್ಷೇತ್ರದ ತಮ್ಮ ಅನುಭವವನ್ನು ಜಾಗತಿಕ ಧರ್ಮ ಸಭೆಯ ಸೇವೆಗೆ ಅರ್ಪಿಸಿದ್ದಾರೆ. ಅವರ ಜ್ಞಾನ, ವೃತ್ತಿಪರತೆ ಮತ್ತು ಪೀಡಿತರು/ಬದುಕುಳಿದವರಿಗಾಗಿ ಅವರ ಅಚಲ ಬದ್ಧತೆ ಆಯೋಗದ ಕಾರ್ಯದಲ್ಲಿ ಶಾಶ್ವತ ಗುರುತು ಮೂಡಿಸಿದೆ ಎಂದು ಬರೆದಿದ್ದಾರೆ.

ಅವರು ಅವರಿಗೂ ಅವರ ಕುಟುಂಬಕ್ಕೂ ಕೃತಜ್ಞತೆ ಹಾಗೂ ಪ್ರಾರ್ಥನೆಗಳನ್ನು ವ್ಯಕ್ತಪಡಿಸಿದರು.

ನಂತರ ಪ್ರಕಟಣೆಯಲ್ಲಿ ಕೆಟೆಲ್ಕಾಂಪ್ ರವರ ರಾಜೀನಾಮೆಯ ಕುರಿತು ಅವರದೇ ಹೇಳಿಕೆಯನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಅವರು ಜಗದ್ಗುರುಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಆಳವಾದ ವಿನಮ್ರತೆಯೊಂದಿಗೆ, ಅವರು ಜಗದ್ಗುರು XIVನೇ ಲಿಯೋರವರಿಗೆ ಧರ್ಮ ಸಭೆಯ ಈ ಮಹತ್ವದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ, ಆಯೋಗದ ಪ್ರಮುಖ ಕಾರ್ಯಗಳಲ್ಲಿ ಭಾಗವಹಿಸುವ ಗೌರವ ನನಗೆ ದೊರಕಿದೆ. ಮಕ್ಕಳ ಮತ್ತು ದುರ್ಬಲ ವ್ಯಕ್ತಿಗಳ ರಕ್ಷಣೆಗೆ ನನ್ನ ಬದ್ಧತೆ ಪ್ರತಿಯೊಬ್ಬ ಮಾನವನು ದೇವರ ಸ್ವರೂಪ ಮತ್ತು ಸಾಮ್ಯದಲ್ಲಿ ಸೃಷ್ಟಿಸಲ್ಪಟ್ಟವನು ಎಂಬ ಕ್ರೈಸ್ತ ನಂಬಿಕೆಯಲ್ಲಿ ನೆಲೆಗೊಂಡಿದೆ ಎಂದು ಅವರು ಹೇಳಿದ್ದಾರೆ.

2015ರಲ್ಲಿ ಆಯೋಗಕ್ಕೆ ಸೇರಿದ್ದ ನಂತರ ತಮ್ಮ ಕೆಲಸವು ಸುರಕ್ಷತಾ ಕ್ರಮಗಳ ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ದೌರ್ಜನ್ಯದಿಂದ ಪೀಡಿತರಾದವರಿಗೆ ಬೆಂಬಲ ನೀಡುವುದರ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಅವರು ವಿವರಿಸಿದರು.

2018 ಮತ್ತು 2022ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅವರನ್ನು ಆಯೋಗದ ಸದಸ್ಯರಾಗಿ ನೇಮಕ ಮಾಡಿದ್ದನ್ನು ಅವರು ಸ್ಮರಿಸಿದರು. ಪೀಡಿತರ ಗುಣಮುಖತೆಗಾಗಿ ಕಾರ್ಯನಿರ್ವಹಿಸುವ ಕಾರ್ಯಗುಂಪಿನ ಸಂಯೋಜಕಿಯಾಗಿ ಸೇವೆ ಸಲ್ಲಿಸಿ, ಅವರ ಧ್ವನಿಯನ್ನು ಧರ್ಮ ಸಭೆಯ ಜೀವನ ಮತ್ತು ಸೇವೆಯಲ್ಲಿ ಒಳಗೊಳ್ಳಲು ಸಹಾಯ ಮಾಡಿದ್ದಾಗಿ ಹೇಳಿದರು.

ಈ ಅವಧಿಯಲ್ಲೆಲ್ಲಾ, ಅವರು ಬರೆದಂತೆ, ನನ್ನ ಮಾರ್ಗದರ್ಶಕ ಆದ್ಯತೆಗಳು ಎಂದಿಗೂ ಬದಲಾಗಿಲ್ಲ ದೇವರು, ಕುಟುಂಬ ಮತ್ತು ಕೆಲಸ. ಈಗ ನಾನು ನನ್ನ ಕುಟುಂಬಕ್ಕೆ ಆದ್ಯತೆ ನೀಡಬೇಕೆಂಬುದು ಸ್ಪಷ್ಟವಾಗಿದೆ. 2025ರ ಏಪ್ರಿಲ್‌ನಲ್ಲಿ ಅವರ ಮೊಮ್ಮಗಳು ಅವಧಿಗೆ ಮುನ್ನ ಜನಿಸಿದ್ದು ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ ಮತ್ತು ಇನ್ನೂ ಸವಾಲುಗಳನ್ನು ಎದುರಿಸುತ್ತಿದ್ದಾಳೆ ಎಂದು ಅವರು ಹೇಳಿದರು. ಈ ಕಾರಣದಿಂದ, ತಮ್ಮ ಮಗಳು ಮತ್ತು ಮೊಮ್ಮಗಳೊಂದಿಗೆ ಸಂಪೂರ್ಣವಾಗಿ ಇರಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಕೆಟೆಲ್ಕಾಂಪ್ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುತ್ತಾ, “ಚರ್ಚಿನಲ್ಲಿರುವ ನಾವು ಎಲ್ಲರೂ ಮಕ್ಕಳ ಮತ್ತು ದುರ್ಬಲ ವಯಸ್ಕರ ರಕ್ಷಣೆಯ ಪವಿತ್ರ ಕರ್ತವ್ಯವನ್ನು ದೃಢವಾಗಿ ಮುಂದುವರಿಸಬೇಕು” ಎಂಬ ತಮ್ಮ ಆಶೆಯನ್ನು ವ್ಯಕ್ತಪಡಿಸಿದರು.

ಸುರಕ್ಷತೆ ಕೇವಲ ಸಂಸ್ಥೆಯ ಹೊಣೆಗಾರಿಕೆ ಮಾತ್ರವಲ್ಲ ಅದು ಒಳ್ಳೆಯ ಮನಸ್ಸಿನ ಪ್ರತಿಯೊಬ್ಬರ ಮೇಲಿರುವ ನೈತಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ನನ್ನ ಮೊಮ್ಮಗಳು ಮತ್ತು ಕುಟುಂಬಕ್ಕಾಗಿ, ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲ ಮಕ್ಕಳ ಮತ್ತು ವಯಸ್ಕರಿಗಾಗಿ, ಹಾಗೆಯೇ ಅವರನ್ನು ಆರೈಕೆ ಮಾಡುವವರಿಗಾಗಿ ಪ್ರಾರ್ಥಿಸಿರಿ” ಎಂದು ಅವರು ವಿನಂತಿಸಿದರು.

27 ಮಾರ್ಚ್ 2026, 10:02