ಇಂಡೋನೇಷಿಯಾದ ಭಾಷೆ ವ್ಯಾಟಿಕನ್ ನ್ಯೂಸ್‌ನ 57ನೇ ಅಧಿಕೃತ ಭಾಷೆಯಾಯಿತು.
ವ್ಯಾಟಿಕನ್ ವರದಿ
ಇಂಡೋನೇಷಿಯಾದ ಭಾಷೆ ಈಗ ವ್ಯಾಟಿಕನ್ ನ್ಯೂಸ್‌ನಲ್ಲಿ ಲಭ್ಯವಿರುವ 57ನೇ ಭಾಷೆಯಾಗಿದೆ. ಮಾರ್ಚ್ 25 ಬುಧವಾರ ಇಂಡೋನೇಷಿಯಾದ ಪ್ರತಿನಿಧಿಗಳು ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ಸಂವಹನ ದಿಕಾಸ್ಟರಿಯ ನಡುವೆ ಸಹಮತ ಪತ್ರಕ್ಕೆ ಸಹಿ ಮಾಡಿರುವುದರಿಂದ, ಇನ್ನಷ್ಟು ಜನರು ಜಗದ್ಗುರುಗಳ ಸಂದೇಶವನ್ನು ತಮ್ಮ ಸ್ವಂತ ಭಾಷೆಯಲ್ಲಿ ಸ್ವೀಕರಿಸಲು ಸಾಧ್ಯವಾಗಿದೆ.
ಈ ಒಪ್ಪಂದದ ಸಹಿ ಕಾರ್ಯಕ್ರಮವು ರೋಮಿನಲ್ಲಿರುವ ವ್ಯಾಟಿಕನ್ ನ್ಯೂಸ್ ಮತ್ತು ವ್ಯಾಟಿಕನ್ ರೇಡಿಯೋ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂವಹನ ಡಿಕಾಸ್ಟರಿ, ಇಂಡೋನೇಷಿಯಾದ ಬಿಷಪ್‌ಗಳ ಸಭೆಯ ಸಾಮಾಜಿಕ ಸಂವಹನ ಆಯೋಗ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳಕ್ಕೆ ಇಂಡೋನೇಷಿಯಾದ ರಾಯಭಾರಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇಂಡೋನೇಷಿಯಾದ ಬಿಷಪ್‌ಗಳ ಸಭೆಯ ಸಾಮಾಜಿಕ ಸಂವಹನ ಆಯೋಗದ ಅಧ್ಯಕ್ಷರಾದ ಬಿಷಪ್ ಅಗಸ್ಟಿನಸ್ ಟ್ರಿ ಬುಡಿ ಉತೋಮೊರವರು ಈ ಘಟನೆಗೆ “ನಿರಂತರ ಸ್ನೇಹದ ಆಚರಣೆ, ನಮ್ಮ ರಾಷ್ಟ್ರೀಯ ಗುರುತಿನ ಮಾನ್ಯತೆ ಮತ್ತು ಇಂಡೋನೇಷಿಯಾ ಹಾಗೂ ವಿಶ್ವ ಧರ್ಮ ಸಭೆಯ ಹೃದಯದ ನಡುವೆ ನಂಬಿಕೆಯ ಸೇತುವೆಯನ್ನು ಬಲಪಡಿಸುವ ಕ್ಷಣ” ಎಂದು ವರ್ಣಿಸಿದರು.
ಅವರು ಇದನ್ನು ಇಂಡೋನೇಷಿಯಾದ ಕಥೋಲಿಕರಿಗೆ ಸುಸಂದೇಶದ ಆಧುನಿಕ ರೂಪ ಎಂದು ಹೇಳಿ, ಇದು ಇಂಡೋನೇಷಿಯಾ ಮತ್ತು ಮಲೇಷ್ಯಾದ ವಿಶ್ವಾಸಿಗಳಿಗೆ ಜಗದ್ಗುರುಗಳ ಧ್ವನಿ ಮತ್ತು ವಿಶ್ವ ಧರ್ಮ ಸಭೆಯ ಸಂದೇಶವನ್ನು ತಮ್ಮ ತಾಯಿಭಾಷೆಯಲ್ಲಿ ನೇರವಾಗಿ ಕೇಳುವ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.
ಸಂವಹನ ಡಿಕಾಸ್ಟರಿಯ ಮುಖ್ಯಸ್ಥ ಪೌಲೊ ರುಫಿನಿ ಹಾಗೂ ಇತರ ಅಧಿಕಾರಿಗಳು ಈ ಒಪ್ಪಂದವು ಸಮಾವೇಶಾತ್ಮಕತೆಯನ್ನು ಉತ್ತೇಜಿಸಿ, ಧರ್ಮಾಧ್ಯಕ್ಷೀಯ ಸಂವಹನವನ್ನು ಬಲಪಡಿಸಿ, ವ್ಯಾಟಿಕನ್ ಮತ್ತು ಸ್ಥಳೀಯ ವಿಶ್ವಾಸಿಗಳ ನಡುವೆ ಆಳವಾದ ಸಂಬಂಧವನ್ನು ಬೆಳೆಸಲಿದೆ ಎಂದು ತಿಳಿಸಿದರು. ಇದು ಶಾಂತಿ ಮತ್ತು ಸಹೋದರತ್ವದಂತಹ ವಿಶ್ವಮಟ್ಟದ ಸಂದೇಶಗಳನ್ನು ಸ್ಥಳೀಯ ಸಂಸ್ಕೃತಿಯಲ್ಲಿ ಸ್ಪಷ್ಟವಾಗಿ ಹಂಚಲು ಸಹಾಯಕವಾಗಲಿದೆ.
ಇಂಡೋನೇಷಿಯಾದ ರಾಯಭಾರಿ ಮೈಕೆಲ್ ಟ್ರಿಯಾಸ್ ಕುನ್ಚಹ್ಯೋನೋರವರು ಇದನ್ನು ಇಂಡೋನೇಷಿಯಾದ ಇತಿಹಾಸದಲ್ಲಿನ ಮಹತ್ವದ ಕ್ಷಣ ಎಂದು ಕರೆದರು. ಈಗ ಇಂಡೋನೇಷಿಯಾದ ಭಾಷೆಯ ಸೇರ್ಪಡೆಯಿಂದ, ಜನರು ಜಗದ್ಗುರುಗಳು ಮತ್ತು ವ್ಯಾಟಿಕನ್ ಕುರಿತು ಸುದ್ದಿಗಳನ್ನು ತಮ್ಮ ತಾಯಿಭಾಷೆಯಲ್ಲಿ ಓದಲು ಸಾಧ್ಯವಾಗುತ್ತದೆ. ಇದು ಜಗತ್ತಿನ ಜನರನ್ನು ಒಗ್ಗೂಡಿಸಿ, ಶಾಂತಿ, ಸಹೋದರತ್ವ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಉತ್ತೇಜಿಸುವ ದಾರಿಗೆ ನೆರವಾಗುತ್ತದೆ.