ಹುಡುಕಿ

ವಂದನೀಯ ಫುಲ್ಟನ್ ಶೀನ್ ವಂದನೀಯ ಫುಲ್ಟನ್ ಶೀನ್ 

ವಂದನೀಯ ಫುಲ್ಟನ್ ಶೀನ್ ರವರನ್ನು ಸೆಪ್ಟೆಂಬರ್ 24 ರಂದು ಸಂತ ಲೂಯಿಸ್‌ನಲ್ಲಿ ಧನ್ಯರೆಂದು ಘೋಷಿಸಲಾಗುವುದು.

ಪವಿತ್ರರ ಘೋಷಣೆಗಾಗಿ ಇರುವ ಡಿಕಾಸ್ಟ್ರಿಯ ಮಾಹಿತಿಯ ಪ್ರಕಾರ, ಅಮೇರಿಕಾದ ದಿವಂಗತ ಆರ್ಚ್‌ಬಿಷಪ್ ಫುಲ್ಟನ್ ಜೆ. ಶೀನ್ ರವರನ್ನು 2026ರ ಸೆಪ್ಟೆಂಬರ್ 24 ರಂದು ಮಿಸ್ಸೂರಿ ರಾಜ್ಯದ ಸಂತ ಲೂಯಿಸ್ ನಗರದಲ್ಲಿ ನಡೆಯುವ ಪವಿತ್ರ ಬಲಿಪೂಜೆಯಲ್ಲಿ, ಕಾರ್ಡಿನಲ್ ಲೂಯಿಸ್ ಆಂಟೋನಿಯೋ ಟಾಗ್ಲೆ ರವರ ಅಧ್ಯಕ್ಷತೆಯಲ್ಲಿ ಧನ್ಯರೆಂದು ಘೋಷಿಸಲಾಗುವುದು.

ವ್ಯಾಟಿಕನ್ ವರದಿ

ಅಮೇರಿಕಾದ ವಂದನೀಯ ಫುಲ್ಟನ್ ಜೆ. ಶೀನ್ ರವರನ್ನು 2026ರ ಸೆಪ್ಟೆಂಬರ್ 24, ಗುರುವಾರ, ಮಿಸ್ಸೂರಿ ರಾಜ್ಯದ ಸಂತ ಲೂಯಿಸ್‌ನಲ್ಲಿ ಧನ್ಯರೆಂದು ಘೋಷಿಸಲು ನಿಗದಿಯಾಗಿದೆ.

ಸುವಾರ್ತಾ ಪ್ರಸಾರದ ಡಿಕಾಸ್ಟ್ರಿಯ ಪ್ರೋ-ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೋ ಟಾಗ್ಲೆ ರವರು ಜಗದ್ಗುರು XIVನೇ ಲಿಯೋರವರ ಪ್ರತಿನಿಧಿಯಾಗಿ ಧನ್ಯಘೋಷಣೆಯ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.

ಅವರ ವೀರಗುಣಗಳನ್ನು ಮಾನ್ಯಗೊಳಿಸಿದ ನಂತರ, 2012ರಲ್ಲಿ ಜಗದ್ಗುರು XIVನೇ ಬೆನೆಡಿಕ್ಟ್ ರವರು ಫುಲ್ಟನ್ ಶೀನ್ ರವರನ್ನು “ವಂದನೀಯ” ಎಂದು ಘೋಷಿಸಿದರು. 2019ರಲ್ಲಿ, ಜಗದ್ಗುರು ಫ್ರಾನ್ಸಿಸ್ ರವರು ಅವರ ಮಧ್ಯಸ್ಥಿಕೆಯಿಂದ ನಡೆದ ಅದ್ಭುತವನ್ನು ಗುರುತಿಸುವ ಆದೇಶಕ್ಕೆ ಅನುಮೋದನೆ ನೀಡಿದರು.

ಈ ಮಾನ್ಯತೆ ಆರ್ಚ್‌ಬಿಷಪ್ ಶೀನ್ ರವರ ಧನ್ಯಘೋಷಣೆಗೆ ಮಾರ್ಗವನ್ನು ಸುಗಮಗೊಳಿಸಿತು ಧನ್ಯಘೋಷಣೆಯ ನಂತರ ಅವರಿಗೆ “ಧನ್ಯರು” ಎಂಬ ಬಿರುದು ದೊರೆಯುತ್ತದೆ.

ಭವಿಷ್ಯದ ಧನ್ಯರಾದ ಫುಲ್ಟನ್ ಶೀನ್ ರವರು ತಮ್ಮ ಚುರುಕಾದ ಪ್ರಭೋಧನೆಗಳಿಗಾಗಿ ಪ್ರಸಿದ್ಧರಾಗಿದ್ದರು, ವಿಶೇಷವಾಗಿ ದೂರದರ್ಶನ ಮತ್ತು ರೇಡಿಯೊ ಕಾರ್ಯಕ್ರಮಗಳ ಮೂಲಕ.

1895ರ ಮೇ 8ರಂದು ಇಲಿನಾಯಿಸ್ ರಾಜ್ಯದ ಎಲ್ ಪಾಸೋದಲ್ಲಿ ಐರಿಷ್ ಕುಟುಂಬದಲ್ಲಿ ಜನಿಸಿದ ಶೀನ್, 24ನೇ ವಯಸ್ಸಿನಲ್ಲಿ ಯಾಜಕತ್ವದ ಕರೆಯನ್ನು ಅರಿತು, 1919ರಲ್ಲಿ ಯಾಜಕರಾಗಿ ಅಭಿಷಿಕ್ತರಾದರು.

ಅವರು ವಾಷಿಂಗ್ಟನ್‌ನ ಕಥೋಲಿಕ ಅಮೇರಿಕಾದ ವಿಶ್ವವಿದ್ಯಾಲಯ, ಬೆಲ್ಜಿಯಂನ ಲೂವನ್ ಕಥೋಲಿಕ ವಿಶ್ವವಿದ್ಯಾಲಯ ಮತ್ತು ರೋಮ್‌ನ ಸೆಂಟ್ ಥಾಮಸ್ ಅಕ್ವೈನಸ್ ಪಾಂಟಿಫಿಕಲ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದರು.

1926ರಲ್ಲಿ ಅಮೇರಿಕಾಕ್ಕೆ ಮರಳಿ, ಅಮೇರಿಕಾದ ಕಥೋಲಿಕ ವಿಶ್ವವಿದ್ಯಾಲಯ‌ ಬೋಧನೆ ಪ್ರಾರಂಭಿಸಿದರು ಮತ್ತು 1950ರವರೆಗೆ ಅದೇ ಸ್ಥಾನದಲ್ಲಿ ಸೇವೆ ಸಲ್ಲಿಸಿದರು. 1951ರಿಂದ 1969ರವರೆಗೆ ಅವರು ನ್ಯೂಯಾರ್ಕ್‌ನ ರೋಚೆಸ್ಟರ್ ಧರ್ಮಪ್ರಾಂತ್ಯದ ಬಿಷಪ್ ಆಗಿದ್ದರು ನಂತರ 1969ರಲ್ಲಿ ಜಗದ್ಗುರು VIನೇ ಪಾಲ್ ರವರು ಅವರನ್ನು ವೇಲ್ಸ್‌ನ ನ್ಯೂಪೋರ್ಟ್‌ನ ಗೌರವ ಆರ್ಚ್‌ಬಿಷಪ್ ಆಗಿ ನೇಮಿಸಿದರು.

ಅತ್ಯುತ್ತಮ ಶಿಕ್ಷಕ ಮತ್ತು ವಾಗ್ಮಿಯಾಗಿದ್ದ ಶೀನ್ ರವರ ಉಪನ್ಯಾಸಗಳು ಬಹಳ ಮೆಚ್ಚುಗೆ ಪಡೆದವು. 1930ರಲ್ಲಿ ಅವರು “ದಿ ಕ್ಯಾಥೋಲಿಕ್ ಅವರ್” ಎಂಬ ಭಾನುವಾರದ ರೇಡಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಾರಂಭಿಸಿದರು, ಇದು ತನ್ನ ಜನಪ್ರಿಯತೆಯ ಶೃಂಗದಲ್ಲಿ ಸುಮಾರು ನಾಲ್ಕು ಮಿಲಿಯನ್ ಕೇಳುಗರನ್ನು ತಲುಪಿತು.

1951ರಲ್ಲಿ ಅವರು “ಲೈಫ್ ಇಸ್ ವರ್ತ್ ಲಿವಿಂಗ್” ಎಂಬ ವಾರದ ದೂರದರ್ಶನ ಕಾರ್ಯಕ್ರಮವನ್ನು ಆರಂಭಿಸಿದರು, ಇದು ನಂಬಿಕೆ ವಿಷಯಗಳ ಬಗ್ಗೆ  ಸುಮಾರು 30 ಮಿಲಿಯನ್ ಪ್ರೇಕ್ಷಕರನ್ನು ಆಕರ್ಷಿಸಿತು.

1979ರ ಡಿಸೆಂಬರ್ 9ರಂದು, 84ನೇ ವಯಸ್ಸಿನಲ್ಲಿ ಅವರು ನ್ಯೂಯಾರ್ಕ್‌ನಲ್ಲಿ ನಿಧನರಾದರು.

 

25 ಮಾರ್ಚ್ 2026, 08:56