ಹುಡುಕಿ

ವಿಶ್ವಸಂಸ್ಥೆಯ ಪ್ರಧಾನ ಕಛೇರಿ ವಿಶ್ವಸಂಸ್ಥೆಯ ಪ್ರಧಾನ ಕಛೇರಿ 

“ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಮಾನವ ಗೌರವದ ಪುನರುಜ್ಜೀವಿತ ಬದ್ಧತೆಯನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಕೋರಿದೆ.”

ಸಂಯುಕ್ತ ರಾಷ್ಟ್ರಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳವು, ವಂಶವೈಷಮ್ಯವನ್ನು ಖಂಡಿಸಿ, ಉದಯಿಸುತ್ತಿರುವ ಡಿಜಿಟಲ್ ಪಕ್ಷಪಾತಗಳ ಬಗ್ಗೆ ಎಚ್ಚರಿಕೆ ನೀಡಿತು ಹಾಗೂ ಪ್ರತಿಯೊಬ್ಬರ ಸಮಾನ ಮಾನವ ಗೌರವದ ಆಧಾರದ ಮೇಲೆ ನೀತಿಗಳನ್ನು ರೂಪಿಸುವಂತೆ ಕೋರಿತು.

ವ್ಯಾಟಿಕನ್ ವರದಿ

ಸಂಯುಕ್ತ ರಾಷ್ಟ್ರಗಳಲ್ಲಿ ನಡೆದ “ವಣ೯ ಭೇದಭಾವ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನ”ದ ಅಂಗವಾಗಿ ಆಯೋಜಿಸಲಾದ ಸ್ಮಾರಕ ಸಭೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು “ವಣ೯ವೈಷಮ್ಯ ಮತ್ತು ಎಲ್ಲಾ ರೀತಿಯ ವಣ೯ ಭೇದಭಾವವನ್ನು ಸಂಪೂರ್ಣವಾಗಿ ಮತ್ತು ದೃಢವಾಗಿ ಖಂಡಿಸುತ್ತೇವೆ” ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿತು.

ತನ್ನ ಪ್ರಕಟಣೆಯಲ್ಲಿ, 1966ರಲ್ಲಿ ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯು ಈ ದಿನಾಚರಣೆಯನ್ನು ಸ್ಥಾಪಿಸಿತು ಎಂಬುದನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪ್ರತಿನಿಧಿ ಮಂಡಳಿ ಸ್ಮರಿಸಿತು. ವಣ೯ ಭೇದಭಾವವು ಮಾನವ ಗೌರವದ ವಿರುದ್ಧದ ಅಪರಾಧ, ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ನಿರಾಕರಣೆ ಹಾಗೂ ಗಂಭೀರ ಅನ್ಯಾಯ ಎಂದು ಗುರುತಿಸಲ್ಪಟ್ಟಿತ್ತು ಎಂದು ಅದು ಹೇಳಿತು.

ಅರವತ್ತು ವರ್ಷಗಳಾದರೂ, ವಣ೯ವೈಷಮ್ಯ ಇನ್ನೂ ಮುಂದುವರಿಯುತ್ತಿದೆ ಎಂದು ಪ್ರತಿನಿಧಿ ಮಂಡಳಿ ಸೂಚಿಸಿತು. ಇದಕ್ಕೆ ಒಂದು ಕಾರಣವೆಂದರೆ ಪ್ರತಿಯೊಬ್ಬರ ಅಂತರ್ನಿಹಿತ ಗೌರವವು ಅವರ ಉಪಯೋಗ ಅಥವಾ ಪರಿಸ್ಥಿತಿಗಳ ಮೇಲೆ ಅವಲಂಬಿತವಲ್ಲ ಎಂಬ ಸತ್ಯವನ್ನು ಸಮರ್ಪಕವಾಗಿ ಒಪ್ಪಿಕೊಳ್ಳದಿರುವುದು ಎಂದು ಅದು ತಿಳಿಸಿತು.

ವಣ೯ವೈಷಮ್ಯವು ಇನ್ನೂ ಬಹಿರಂಗ ರೂಪಗಳಲ್ಲಿ ಕಾಣಿಸಿಕೊಂಡರೂ, ಜಗದ್ಗುರುಗಳ ಅಧಿಕಾರ ಸ್ಥಳವು ಹೆಚ್ಚು ಸಂಕೀರ್ಣ ಮತ್ತು ಅಷ್ಟಾಗಿ ಗೋಚರಿಸದ ವಿಧಾನಗಳನ್ನೂ ಉಲ್ಲೇಖಿಸಿತು. ಈ ವ್ಯಾಪಕ ಸಮಸ್ಯೆ ಸೂಕ್ಷ್ಮ ಮತ್ತು ಸಂಕೀರ್ಣ ವಿಧಾನಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ತಕ್ಷಣ ಗುರುತಿಸುವುದು ಕಷ್ಟವಾಗುತ್ತದೆ ಎಂದು ಅದು ಗಮನಿಸಿದೆ.

ಈ ಹೊಸ ಸವಾಲುಗಳ ಸ್ಪಷ್ಟ ಉದಾಹರಣೆಯಾಗಿ ಡಿಜಿಟಲ್ ವಲಯವನ್ನು ಹೇಳಿಕೆಯಲ್ಲಿ ಪ್ರಸ್ತಾಪಿಸಲಾಯಿತು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಾ, ಈ ಉದಯೋನ್ಮುಖ ವ್ಯವಸ್ಥೆಗಳ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಪಕ್ಷಪಾತ ಇದು ವಾಸ್ತವದ ವಿಕೃತ ಗ್ರಹಿಕೆಯನ್ನು ರೂಪಿಸಿ ಹರಡುವುದಕ್ಕೆ ಕಾರಣವಾಗುತ್ತದೆ ಎಂದು ತಿಳಿಸಲಾಯಿತು.

ಎಐ ಮಾದರಿಗಳು ಅವುಗಳನ್ನು ನಿರ್ಮಿಸುವವರ ದೃಷ್ಟಿಕೋನದಿಂದ ರೂಪುಗೊಳ್ಳುತ್ತವೆ ಹಾಗೆಯೇ ಅವು ಬಳಸುವ ದತ್ತಾಂಶದಲ್ಲಿರುವ ರೂಪಕಲ್ಪನೆಗಳು ಮತ್ತು ಪೂರ್ವಾಗ್ರಹಗಳನ್ನು ಪುನರುತ್ಪಾದಿಸುವ ಮೂಲಕ ಅದೇ ಚಿಂತನೆಗಳನ್ನು ಮತ್ತೊಮ್ಮೆ ಹೇರಿಕೊಳ್ಳಬಹುದು ಎಂದು ಪ್ರತಿನಿಧಿ ಮಂಡಳಿ ವಿವರಿಸಿತು.

ಇದಕ್ಕೆ ಪ್ರತಿಕ್ರಿಯೆಯಾಗಿ, ವಿಶೇಷವಾಗಿ ಡಿಜಿಟಲ್ ಸಾಕ್ಷರತೆ ಕ್ಷೇತ್ರದಲ್ಲಿ ಶಿಕ್ಷಣವನ್ನು ಹೆಚ್ಚಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಕೋರಿತು, ಏಕೆಂದರೆ ಅಲ್ಗೋರಿದಮ್‌ಗಳು ಹೇಗೆ ನಮ್ಮ ಗ್ರಹಿಕೆಗಳನ್ನು ಪ್ರಭಾವಿಸುತ್ತವೆ ಮತ್ತು ಮಾನವ ಗೌರವದ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಅರಿವು ಮೂಡಿಸಬೇಕಾಗಿದೆ.

ಸಭೆಯ ವಿಷಯವನ್ನು ಉಲ್ಲೇಖಿಸಿ, ರಾಜಕೀಯ ಇಚ್ಛಾಶಕ್ತಿಯನ್ನು ಮಾತ್ರ ಸಕ್ರಿಯಗೊಳಿಸುವುದು ಸಾಕಾಗುವುದಿಲ್ಲ ಪ್ರತಿಯೊಬ್ಬರ ಸಮಾನ ಗೌರವ ಮತ್ತು ಹಕ್ಕುಗಳನ್ನು ನಿಜವಾದ ಬದ್ಧತೆಯೊಂದಿಗೆ ಗುರುತಿಸುವುದು ಸಹ ಅಗತ್ಯ ಎಂದು ಪ್ರತಿನಿಧಿ ಮಂಡಳಿ ತಿಳಿಸಿತು.

ಜಗದ್ಗರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿ, ಮಾನವರು ದೇವರ ಸ್ವರೂಪ ಮತ್ತು ಸಾದೃಶ್ಯದಲ್ಲಿ ಸೃಷ್ಟಿಸಲ್ಪಟ್ಟಿದ್ದಾರೆ ಪ್ರೀತಿಯಿಂದ ಅವರನ್ನು ಅಸ್ತಿತ್ವಕ್ಕೆ ಕರೆತಂದ ದೇವರು, ಅವರನ್ನು ಪ್ರೀತಿಸಲು ಕೂಡ ಕರೆದಿದ್ದಾರೆ ಎಂದು ಹೇಳಿಕೆಯನ್ನು ಸಮಾಪಿಸಿದರು.

ಈ ತತ್ವವನ್ನು ನೀತಿಗಳು ಮತ್ತು ಕಾರ್ಯಪದ್ಧತಿಗಳಾಗಿ ರೂಪಾಂತರಿಸುವುದು ವಣ೯ವೈಷಮ್ಯದ ಮೂಲ ಕಾರಣಗಳನ್ನು ಎದುರಿಸಲು ಮತ್ತು ನಮ್ಮ ಜಾಗತಿಕ ಕುಟುಂಬದ ಬಾಂಧವ್ಯಗಳನ್ನು ಬಲಪಡಿಸಲು ಅತ್ಯಾವಶ್ಯಕ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಒತ್ತಿಹೇಳಿತು.

 

24 ಮಾರ್ಚ್ 2026, 08:36