ಹುಡುಕಿ

ಜಗದ್ಗುರು XIVನೇ ಲಿಯೋರವರೊಂದಿಗೆ ಮಾನ್ಸ್ ತಿಬಾಲ್ಟ್ ವರ್ನಿಯ ಛಾಯಚಿತ್ರ ಜಗದ್ಗುರು XIVನೇ ಲಿಯೋರವರೊಂದಿಗೆ ಮಾನ್ಸ್ ತಿಬಾಲ್ಟ್ ವರ್ನಿಯ ಛಾಯಚಿತ್ರ  (@VATICAN MEDIA)

ಟ್ಯೂಟೆಲಾ ಮಿನೋರಮ್ ತನ್ನ ಮಾರ್ಗಸೂಚಿಗಳನ್ನು ಮರುದೃಢಪಡಿಸಿ, ದುರುಪಯೋಗದ ಹೊಸ ರೂಪಗಳನ್ನು ಬೆಳಗಿಸುತ್ತದೆ.

ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಜಗದ್ಗುರುಗಳ ಆಯೋಗ ತನ್ನ ವಸಂತ ಸಭೆಯನ್ನು ಸಮಾಪ್ತಿಗೊಳಿಸಿ, ಜಗದ್ಗುರು XIVನೇ ಲಿಯೋರವರ ನೇತೃತ್ವದಲ್ಲಿ, ರಕ್ಷಣಾ ಕ್ರಮಗಳನ್ನು ಧರ್ಮ ಸಭೆಯ ಗುರಿಯ ಕೇಂದ್ರ ಭಾಗವೆಂದು ಮರುದೃಢಪಡಿಸಿದೆ.

ವ್ಯಾಟಿಕನ್ ವರದಿ

ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ಜಗದ್ಗುರುಗಳ ಆಯೋಗ ವಸಂತ ಪ್ಲೀನರಿ ಸಭೆ ಐದು ದಿನಗಳ ಚಿಂತನೆ, ಸಂವಾದ ಮತ್ತು ಯೋಜನೆಯೊಂದಿಗೆ ಸಮಾಪ್ತಿಯಾಯಿತು. ಈ ಸಭೆಯ ಉದ್ದೇಶ ವಿಶ್ವವ್ಯಾಪಿ ಧರ್ಮ ಸಭೆಯಲ್ಲಿ ರಕ್ಷಣಾ ಕ್ರಮಗಳನ್ನು ಬಲಪಡಿಸುವುದಾಗಿತ್ತು. ವಿಶ್ವದ ವಿವಿಧ ಭಾಗಗಳಿಂದ ಸದಸ್ಯರು ಮತ್ತು ಸಿಬ್ಬಂದಿ ಭಾಗವಹಿಸಿ, ಪೀಡಿತರು ಮತ್ತು ಬದುಕುಳಿದವರೊಂದಿಗೆ ಸಂಬಂಧವನ್ನು ಬಲಪಡಿಸುವುದು, ಜಾಗತಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಧರ್ಮ ಸಭೆಯ ಎಲ್ಲ ಮಟ್ಟಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರ ಮೇಲೆ ಗಮನಹರಿಸಿದರು.

ಸಭೆಯ ಆರಂಭದಲ್ಲಿ, ಭಾಗವಹಿಸಿದವರು ಜಗದ್ಗುರು XIVನೇ ಲಿಯೋರವರ ನೇತೃತ್ವಕ್ಕೆ ಕೃತಜ್ಞತೆ ಸಲ್ಲಿಸಿದರು. ಮಕ್ಕಳ, ಕಿಶೋರರ ಮತ್ತು ದುರ್ಬಲ ವ್ಯಕ್ತಿಗಳ ಗೌರವವನ್ನು ಕಾಪಾಡುವುದು ಧಮ೯ ಸಭೆಯ ಪ್ರಮುಖ ಧ್ಯೇಯವೆಂದು ಅವರು ಪುನರುಚ್ಚರಿಸಿದ ಹಿನ್ನೆಲೆಯಲ್ಲಿ, ಈ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಜಾಗತಿಕ ಸಂಘರ್ಷಗಳು ಮತ್ತು ಅದರ ಪರಿಣಾಮವಾಗಿ ದುರ್ಬಲರ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಸಭೆಯಲ್ಲಿ ಹೊಸ ಬದ್ಧತೆ ಮತ್ತು ಸಹಕಾರದ ಅಗತ್ಯವಿದೆ ಎಂದು ಚರ್ಚಿಸಲಾಯಿತು. ಆಯೋಗದ ಅಧ್ಯಕ್ಷರಾದ

ಮಾನ್ಸಿಗ್ನರ್ ತಿಬಾಲ್ಟ್ ವರ್ನಿ, ಗಮನದಿಂದ ಕೇಳುವುದು, ವಿನಯ ಮತ್ತು ಹಂಚಿಕೊಂಡ ಜವಾಬ್ದಾರಿ ಅತ್ಯಗತ್ಯ ಎಂದು ಹೇಳಿದರು. ಧರ್ಮ ಸಭೆ ಮತ್ತು ನಾಗರಿಕ ಸಮಾಜದ ನಡುವಿನ ಸಹಕಾರವೂ ಬಹಳ ಮುಖ್ಯ ಎಂದು ತಜ್ಞರು ಒತ್ತಿ ಹೇಳಿದರು.

ಈ ಸಭೆಯಲ್ಲಿ ಪೀಡಿತರು ಮತ್ತು ಬದುಕುಳಿದವರ ಪಾತ್ರಕ್ಕೆ ವಿಶೇಷ ಮಹತ್ವ ನೀಡಲಾಯಿತು. ಅವರ ಅನುಭವಗಳು ಧರ್ಮ ಸಭೆಯ ನೀತಿಗಳು, ತರಬೇತಿ ಮತ್ತು ವರದಿ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಕೇಂದ್ರವಾಗಿರಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು. ದುರುಪಯೋಗದ ಇತ್ತೀಚಿನ ವರದಿಗಳು, ಧರ್ಮ ಸಭೆಯೊಳಗಿನ ಗಂಭೀರ ವಿಫಲತೆಗಳನ್ನು ಮತ್ತು ಪೀಡಿತರು ಅನುಭವಿಸಿದ ನೋವನ್ನು ನೆನಪಿಸುತ್ತವೆ ಎಂದು ಅವರು ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ, ಕೇಳುವುದು, ಜೊತೆಯಾಗಿರುವುದು ಮತ್ತು ನ್ಯಾಯ, ಪಾರದರ್ಶಕತೆ ಹಾಗೂ ಆರೈಕೆಯನ್ನು ಕಾಪಾಡುವುದು ಅಗತ್ಯ ಎಂದು ಆಯೋಗ ತಿಳಿಸಿದೆ.

ಸಭೆಯಲ್ಲಿ ಸಾರ್ವತ್ರಿಕ ಮಾರ್ಗಸೂಚಿಗಳ ಚೌಕಟ್ಟು ಎಂಬ ಪ್ರಮುಖ ಮಾರ್ಗಸೂಚಿಗಳ ಅಭಿವೃದ್ಧಿಗೂ ಗಮನ ನೀಡಲಾಯಿತು. ಈ ಮಾರ್ಗಸೂಚಿಗಳು ಜಗತ್ತಿನ ಎಲ್ಲಾ ಧರ್ಮ ಸಭೆಗಳಿಗೆ ಸಹಾಯಕವಾಗುವಂತೆ, ಸುಲಭವಾಗಿ ಅರ್ಥವಾಗುವ, ಸಂಸ್ಕೃತಿಗೆ ಹೊಂದಿಕೊಳ್ಳುವ ಮತ್ತು ಆತ್ಮಿಕವಾಗಿ ನೆಲೆಗೊಂಡಿರುವ ರೀತಿಯಲ್ಲಿ ರೂಪುಗೊಳ್ಳಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು.

ಕೊನೆಗೆ, ಆನ್‌ಲೈನ್ ದುರುಪಯೋಗ ಸೇರಿದಂತೆ ಹೊಸ ಸವಾಲುಗಳ ಬಗ್ಗೆ ಚರ್ಚಿಸಲಾಯಿತು. ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ಮತ್ತು ದುರ್ಬಲರ ಮೇಲೆ ಹೆಚ್ಚುತ್ತಿರುವ ದುರುಪಯೋಗವನ್ನು ತಡೆಯಲು ತಕ್ಷಣದ ಕ್ರಮ ಅಗತ್ಯವಿದೆ ಎಂದು ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ, ರಕ್ಷಣಾ ಸಂಸ್ಕೃತಿಯನ್ನು ಬಲಪಡಿಸುವುದು, ಜವಾಬ್ದಾರಿತನವನ್ನು ಹೆಚ್ಚಿಸುವುದು ಮತ್ತು ಪ್ರತಿಯೊಬ್ಬರಿಗೂ ಸುರಕ್ಷಿತ ಪರಿಸರವನ್ನು ನಿರ್ಮಿಸುವುದು ಧರ್ಮ ಸಭೆಯ ಪ್ರಮುಖ ಕರ್ತವ್ಯವಾಗಿದೆ ಎಂದು ಸಭೆ ಸಮಾಪನಗೊಂಡಿತು.

20 ಮಾರ್ಚ್ 2026, 15:14