ಕಾರ್ಡಿನಲ್ ಗುಗೇರೋಟ್ಟಿ: ಲೋಕವನ್ನು ಬೆಂಕಿಗೆ ಆಹುತಿಯಾಗಿಸುತ್ತಿರುವವರೊಂದಿಗೆ ಸಹಭಾಗಿಯಾಗದಿರಲು ದಾನ ಮಾಡಿ
ವ್ಯಾಟಿಕನ್ ವರದಿ
ಪ್ರತಿ ವರ್ಷದಂತೆ, ಪವಿತ್ರ ಶುಕ್ರವಾರದ ದಿನ ಪವಿತ್ರ ಭೂಮಿಗಾಗಿ ವಿಶೇಷ ದೇಣಿಗೆ ಸಂಗ್ರಹ ನಡೆಯುತ್ತದೆ. ಇದು ವಿಶ್ವ ಧರ್ಮ ಸಭೆಯಿಂದ ಪವಿತ್ರ ಭೂಮಿಯ ಧರ್ಮ ಸಭೆಗಳು ಮತ್ತು ಕ್ರೈಸ್ತ ಸಮುದಾಯಗಳಿಗೆ ನೀಡುವ ಮಹತ್ವದ ಸಹಾನುಭೂತಿ ಮತ್ತು ಐಕ್ಯತೆಯ ಚಿಹ್ನೆಯಾಗಿದೆ. ಆದರೆ ಈ ವರ್ಷ, ಯುದ್ಧವು ವೇಗವಾಗಿ ವ್ಯಾಪಿಸುತ್ತಿರುವ ಸಂಕಷ್ಟಕರ ಪರಿಸ್ಥಿತಿಯಲ್ಲಿ ಈ ಸಂಗ್ರಹ ನಡೆಯುತ್ತಿದ್ದು, ಆ ಪ್ರದೇಶದ ಎಲ್ಲರ ಮೇಲೂ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದೆ.
ಪೂರ್ವ ಧರ್ಮ ಸಭೆಗಳ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ಕ್ಲಾಡಿಯೊ ಗುಗೆರೊಟ್ಟಿರವರು ತಮ್ಮ ಪತ್ರದಲ್ಲಿ ನಿರಂತರವಾಗಿ ಕೇಳಿಬರುತ್ತಿರುವ ಯುದ್ಧದ ಶಬ್ದಗಳನ್ನು ಖಂಡಿಸಿ, ಜನರು ಯುದ್ಧವನ್ನು ಪ್ರೋತ್ಸಾಹಿಸುವವರೊಂದಿಗೆ ಸಹಪಾಲಿಯಾಗದಂತೆ ಎಚ್ಚರಿಸಿದ್ದಾರೆ. ಅವರ ಮಾತಿನಂತೆ, ಇಂದಿನ ಯುದ್ಧವು ದ್ವಿತೀಯ ವಿಶ್ವಯುದ್ಧದ ನಂತರ ನಿರ್ಮಿಸಲಾದ ಮಾನವೀಯ ಮೌಲ್ಯಗಳು, ಜನರು ಹಾಗೂ ಐತಿಹಾಸಿಕ ಪರಂಪರೆಯನ್ನು ಸಹ ನಾಶಮಾಡುತ್ತಿದೆ.
ಈ ಹಿನ್ನೆಲೆಯಲ್ಲಿಯೇ, ಪವಿತ್ರ ಭೂಮಿಯ ಸಂಗ್ರಹವು ಕೇವಲ ದಾನವಲ್ಲ, ಬದಲಾಗಿ ಕಷ್ಟದಲ್ಲಿರುವ ಸಹೋದರರು ಮತ್ತು ಸಹೋದರಿಯರಿಗಾಗಿ ಹೊಣೆಗಾರಿಕೆಯನ್ನು ಸ್ವೀಕರಿಸುವ ಕಾರ್ಯವಾಗಿದೆ. ಯುದ್ಧದಿಂದ ಬಳಲುತ್ತಿರುವ, ಆಹಾರ ಮತ್ತು ಚಿಕಿತ್ಸೆ ಇಲ್ಲದೆ ಬದುಕುಳಿಯಲು ಹೋರಾಡುತ್ತಿರುವ ಜನರ ದುಃಖವನ್ನು ನಾವು ನಮ್ಮದೇ ಎಂದು ಪರಿಗಣಿಸಬೇಕು. ಅವರು ಇತರರು ಅಲ್ಲ, ನಮ್ಮದೇ ಜನರು ಎಂಬ ಭಾವನೆ ಮುಖ್ಯವಾಗಿದೆ.
ಯುದ್ಧದ ಪರಿಣಾಮವಾಗಿ ಪವಿತ್ರ ಭೂಮಿಯ ಕ್ರೈಸ್ತ ಸಮುದಾಯಗಳು ಭಯಭೀತರಾಗಿದ್ದು, ತಮ್ಮ ನೆಲವನ್ನು ತೊರೆಯುವ ಸ್ಥಿತಿಗೆ ತಲುಪಿವೆ. ಉದಾಹರಣೆಗೆ, ಸಿರಿಯಾದಲ್ಲಿ ಕೆಲವೇ ವರ್ಷಗಳಲ್ಲಿ 80% ಕ್ರೈಸ್ತರು ಕಣ್ಮರೆಯಾಗಿದ್ದಾರೆ. ಇದು ಕ್ರೈಸ್ತ ಧರ್ಮದ ಮೂಲಸ್ಥಳವಾದ ಪವಿತ್ರ ಭೂಮಿ ತನ್ನ ಜೀವಂತ ಕ್ರೈಸ್ತ ಪರಂಪರೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಧಮ೯ ಸಭೆ ಈ ಸಮುದಾಯಗಳನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಇವು ಬಹಳ ಹಳೆಯ, ದೃಢ ನಂಬಿಕೆ ಹೊಂದಿರುವ ಸಮುದಾಯಗಳಾಗಿದ್ದು, ಧರ್ಮ ಸಭೆ ಅವರಿಗೆ ಶಿಕ್ಷಣ, ವಾಸಸ್ಥಳ, ಉದ್ಯೋಗ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ನೀಡುತ್ತ ಬಂದಿದೆ. ಇಂದು ಅವರ ಗುರುತಿನ ಮತ್ತು ಭವಿಷ್ಯದ ರಕ್ಷಣೆ ಅತ್ಯಂತ ಅಗತ್ಯವಾಗಿದೆ.
ಈ ವರ್ಷ ಸಂಗ್ರಹದ ಪ್ರಮುಖ ಉದ್ದೇಶ ಅಭಿವೃದ್ಧಿ ಯೋಜನೆಗಳಿಗಿಂತಲೂ ಬದುಕುಳಿಯುವಿಕೆಗೆ ಸಹಾಯ ಮಾಡುವುದಾಗಿದೆ. ವಿಶೇಷವಾಗಿ ಶಿಕ್ಷಣ ಮತ್ತು ಯುವಜನರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಬಡ ಕ್ರೈಸ್ತ ಕುಟುಂಬಗಳ ಮಕ್ಕಳಿಗೆ ಶಾಲಾ ಶುಲ್ಕವನ್ನು ಪಾವತಿಸಲು ಸಹಾಯ ಮಾಡುವ ಯೋಜನೆ ಇದೆ. ಈ ಮೂಲಕ ಅವರು ತಮ್ಮ ದೇಶದಲ್ಲಿಯೇ ಉಳಿದು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.