ಸ್ಪೇನ್‌ನಲ್ಲಿ ಬಡತನ ಮತ್ತು ಬಹಿಷ್ಕಾರದಲ್ಲಿ ವಾಸಿಸುತ್ತಿರುವ ಮಹಿಳೆಯ ಛಾಯಚಿತ್ರ ಸ್ಪೇನ್‌ನಲ್ಲಿ ಬಡತನ ಮತ್ತು ಬಹಿಷ್ಕಾರದಲ್ಲಿ ವಾಸಿಸುತ್ತಿರುವ ಮಹಿಳೆಯ ಛಾಯಚಿತ್ರ  (ANSA)

ಜಗದ್ಗರುಗಳ ಅಧಿಕಾರ ಸ್ಥಳ : ಮಹಿಳೆಯರು ನ್ಯಾಯಕ್ಕೆ ಪ್ರವೇಶಿಸುವುದನ್ನು ತಡೆಯುವ ಅಡೆತಡೆಗಳನ್ನು ನಿವಾರಿಸಬೇಕು

ಸಂಯುಕ್ತ ರಾಷ್ಟ್ರಗಳ ಬಳಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ಮಿಷನ್ ಒಂದು ಪ್ರಕಟಣೆಯನ್ನು ಹೊರಡಿಸಿ, ರಚನಾತ್ಮಕ ಅಡೆತಡೆಗಳನ್ನು ನಿವಾರಿಸುವುದರೊಂದಿಗೆ ಭೇದಭಾವವನ್ನು ಎದುರಿಸುವ ಮೂಲಕ ವಿಶ್ವದಾದ್ಯಂತ ಮಹಿಳೆಯರು ಮತ್ತು ಬಾಲಕಿಯರಿಗೆ ನ್ಯಾಯಕ್ಕೆ ಪ್ರವೇಶವನ್ನು ಖಚಿತಪಡಿಸಬೇಕು ಎಂದು ಕರೆ ನೀಡಿದೆ.

ವ್ಯಾಟಿಕನ್ ವರದಿ

ವಿಶ್ವದಾದ್ಯಂತ ಮಹಿಳೆಯರು ಮತ್ತು ಬಾಲಕಿಯರಿಗೆ ನ್ಯಾಯಕ್ಕೆ ಪ್ರವೇಶವನ್ನು ಖಚಿತಪಡಿಸುವುದಕ್ಕೆ ದಾರಿದ್ರ್ಯ ಮತ್ತು ಭೇದಭಾವದಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ಅಗತ್ಯವೆಂದು ಸಂಯುಕ್ತ ರಾಷ್ಟ್ರಗಳ ಬಳಿ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ಮಿಷನ್ ಹೇಳಿದೆ. ಮಾರ್ಚ್ 9ರಿಂದ 19ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಸ್ಥಿತಿ ಕುರಿತ 70ನೇ ಆಯೋಗದ ಸಂದರ್ಭದಲ್ಲಿ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.

“ಮಹಿಳೆಯರು ಮತ್ತು ಬಾಲಕಿಯರಿಗೆ ನ್ಯಾಯಕ್ಕೆ ಪ್ರವೇಶವನ್ನು ಖಚಿತಪಡಿಸುವುದು ಕೇವಲ ಕಾನೂನು ರಕ್ಷಣೆಯನ್ನು ಒದಗಿಸುವುದರಿಂದ ಮಾತ್ರ ಸಾಧ್ಯವಲ್ಲ,” ಎಂದು ಪ್ರಕಟಣೆ ಒತ್ತಿ ಹೇಳುತ್ತದೆ. “ಅವರನ್ನು ಅಪಾಯಕ್ಕೆ ಒಳಪಡಿಸುವ, ನ್ಯಾಯವನ್ನು ಹುಡುಕುವುದನ್ನು ತಡೆಯುವ ಮತ್ತು ಅಂತಿಮವಾಗಿ ದೇವರಿಂದ ನೀಡಲ್ಪಟ್ಟ ಮಾನವ ಗೌರವವನ್ನು ಹೀನಗೊಳಿಸುವ ಮೂಲ ಕಾರಣಗಳನ್ನು ಪರಿಹರಿಸುವುದೂ ಅಗತ್ಯವಾಗಿದೆ.

ನ್ಯಾಯಕ್ಕೆ ಪ್ರವೇಶವನ್ನು ಖಚಿತಪಡಿಸುವುದು ನ್ಯಾಯಸಮ್ಮತ ಸಮಾಜವನ್ನು ನಿರ್ಮಿಸಲು ಅತ್ಯಂತ ಮುಖ್ಯವಾಗಿದ್ದು, ಇದಕ್ಕಾಗಿ ದಾರಿದ್ರ್ಯ ನಿರ್ಮೂಲನೆ, ಭೇದಭಾವ ಮತ್ತು ಹಿಂಸಾಚಾರದ ವಿರುದ್ಧ ಹೋರಾಟ, ಸಂಸ್ಥೆಗಳ ಬಲಪಡಿಕೆ ಮತ್ತು ಶಿಕ್ಷಣಗಳನ್ನು ಒಳಗೊಂಡ ಸಮಗ್ರ ವಿಧಾನ ಅಗತ್ಯವೆಂದು ಪ್ರಕಟಣೆ ತಿಳಿಸಿದೆ.

ಹಿಂಸಾಚಾರ ಮತ್ತು ಭೇದಭಾವವನ್ನು ಎದುರಿಸುವುದು

ಮಹಿಳೆಯರು ಮತ್ತು ಬಾಲಕಿಯರು ಎದುರಿಸುವ ಹಿಂಸಾಚಾರ ಮತ್ತು ಭೇದಭಾವದಂತಹ ಅಡೆತಡೆಗಳನ್ನು ಗುರುತಿಸಿ ಅವನ್ನು ನಿವಾರಿಸುವುದು ಅಗತ್ಯವೆಂದು ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ಮಿಷನ್ ಒತ್ತಿ ಹೇಳಿದೆ. ದುರುಪಯೋಗವನ್ನು ತಡೆಗಟ್ಟಲು ಮತ್ತು ಉಲ್ಲಂಘನೆಗಳನ್ನು ಎದುರಿಸಲು ಪರಿಣಾಮಕಾರಿ ಹೊಣೆಗಾರಿಕೆಯ ವ್ಯವಸ್ಥೆಗಳು ಮತ್ತು ಜವಾಬ್ದಾರಿತ್ವದ ಸಂಸ್ಕೃತಿ ಬೇಕೆಂದು ಕರೆ ನೀಡಲಾಗಿದೆ.

ಈ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದರೆ ಮಹಿಳೆಯರು ಮತ್ತು ಬಾಲಕಿಯರು ಮರುಬಲಾತ್ಕಾರ ಮತ್ತು ದುರುಪಯೋಗಕ್ಕೆ ಒಳಗಾಗುವ ಅಪಾಯ ಹೆಚ್ಚುತ್ತದೆ ಎಂದು ಪ್ರಕಟಣೆ ಸೂಚಿಸಿದೆ, ವಿಶೇಷವಾಗಿ ಮಾನವ ಕಳ್ಳಸಾಗಣೆಯ ವಿಷಯದಲ್ಲಿ. ಮಾನವ ಕಳ್ಳಸಾಗಣೆಯ ಬಲಿಗಳಲ್ಲಿ ಬಹುಪಾಲು ಮಹಿಳೆಯರು ಮತ್ತು ಬಾಲಕಿಯರೇ ಆಗಿದ್ದು, ಅವರನ್ನು ವೇಶ್ಯಾವೃತ್ತಿಗೆ ದುರುಪಯೋಗಪಡಿಸಿಕೊಳ್ಳುವುದು, ಬಲವಂತದ ಮದುವೆ, ಬಾಡಿಗೆ ಗರ್ಭಧಾರಣೆ ಅಥವಾ ಅಪರಾಧ ಚಟುವಟಿಕೆಗಳಿಗೆ ಒತ್ತಾಯಿಸುವುದು ಸಾಮಾನ್ಯವಾಗಿದೆ ಎಂದು ವಿವರಿಸಲಾಗಿದೆ.

ಅಪರಾಧ ಆರೋಪಕ್ಕೆ ಒಳಗಾದ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಗೌರವಿಸುವುದೂ ಮಹತ್ವದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದರಲ್ಲಿ ನ್ಯಾಯಸಮ್ಮತ ವಿಚಾರಣೆಗಾಗಿ ಭದ್ರತೆಗಳು, ಸಮರ್ಪಕ ಕಾನೂನು ಸಹಾಯ,ಸುರಕ್ಷಿತ, ಸ್ವಚ್ಛ, ಪ್ರತ್ಯೇಕ ಮಹಿಳಾ ಬಂಧನ ಸೌಲಭ್ಯಗಳು,ಮತ್ತು ತಾಯಂದಿರು ಹಾಗೂ ಗರ್ಭಿಣಿಯರಿಗೆ ಅಗತ್ಯ ಆರೈಕೆ ಒದಗಿಸುವುದು ಸೇರಿವೆ.

ದಾರಿದ್ರ್ಯವನ್ನು ಎದುರಿಸುವುದು

ದಾರಿದ್ರ್ಯವು ಮಹಿಳೆಯರ ನ್ಯಾಯ ಪ್ರವೇಶಕ್ಕೆ ದೊಡ್ಡ ಅಡೆತಡೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಮಿಷನ್ ಸೂಚಿಸಿದೆ. ಬಡ ಮಹಿಳೆಯರು ಮತ್ತು ಬಾಲಕಿಯರು ಕಾನೂನು ಸಹಾಯ ಪಡೆಯಲು ಅಗತ್ಯ ಸಂಪನ್ಮೂಲಗಳಿಲ್ಲದಿರುವುದು, ಉತ್ತಮ ಶಿಕ್ಷಣದ ಕೊರತೆ, ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದಿರುವುದು ಮತ್ತು ನ್ಯಾಯ ವ್ಯವಸ್ಥೆಯನ್ನು ಬಳಸಿಕೊಳ್ಳುವ ವಿಧಾನವನ್ನು ತಿಳಿಯದಿರುವುದು ಸಾಮಾನ್ಯವಾಗಿದೆ.

ಇದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ವಿಶ್ವಾಸಾರ್ಹ ಸಾರಿಗೆ ಮತ್ತು ಸಂವಹನ ವ್ಯವಸ್ಥೆಗಳ ಕೊರತೆಯಿಂದ ಮಹಿಳೆಯರು ಮತ್ತು ಬಾಲಕಿಯರು ಇನ್ನಷ್ಟು ಹಿಂದುಳಿದಿದ್ದಾರೆ.

ನ್ಯಾಯಕ್ಕೆ ಸಮಾನ ಪ್ರವೇಶವು ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆ ಸಮಾನ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ನೀಡುವುದನ್ನೂ, ಹಾಗೂ ಕುಟುಂಬಗಳು ಎಲ್ಲರಿಗೂ ಆರೋಗ್ಯಕರ ಮತ್ತು ಶಾಂತಿಯುತ ಪರಿಸರವಾಗಿರಬೇಕೆಂಬುದನ್ನೂ ಒಳಗೊಂಡಿದೆ ಎಂದು ಪ್ರಕಟಣೆ ಕೊನೆಯಲ್ಲಿ ತಿಳಿಸಿದೆ.

18 ಮಾರ್ಚ್ 2026, 18:17