ಐಟಿಸಿ: ಮಾನವಕುಲದ ಭವಿಷ್ಯ ತಂತ್ರಜ್ಞಾನದಲ್ಲಲ್ಲ, ಸಂಬಂಧಗಳಲ್ಲಿ ನೆಲೆಸಿದೆ
ವ್ಯಾಟಿಕನ್ ವರದಿ
ಮಾನವಕುಲವೇ, ನೀನು ಎಲ್ಲಿಗೆ ಸಾಗುತ್ತಿದ್ದೀಯ? ಎಂಬ ಶೀರ್ಷಿಕೆಯ ಹೊಸ ದಸ್ತಾವೇಜನ್ನು ಅಂತರರಾಷ್ಟ್ರೀಯ ಧಾರ್ಮಿಕ ತತ್ವಶಾಸ್ತ್ರ ಆಯೋಗ (ಐಟಿಸಿ) ಪ್ರಕಟಿಸಿದೆ. ಫೆಬ್ರವರಿ 9ರಂದು ಜಗದ್ಗುರು XIVನೇ ಲಿಯೋರವರ ಅನುಮೋದನೆ ಪಡೆದ ಈ ದಸ್ತಾವೇಜು, ಕೃತಕ ಬುದ್ಧಿಮತ್ತೆ ಮತ್ತು ಪೋಸ್ಟ್‌ಹ್ಯೂಮನಿಸಮ್ ಯುಗದಲ್ಲಿ ಕ್ರೈಸ್ತ ಮಾನವಶಾಸ್ತ್ರ ಎದುರಿಸುತ್ತಿರುವ ಮಹತ್ವದ ಸವಾಲುಗಳನ್ನು ವಿಶ್ಲೇಷಿಸುತ್ತದೆ. ಸುವಾರ್ತೆಯ ಬೆಳಕಿನಲ್ಲಿ ಮಾನವ ಜೀವನವನ್ನು ಸಂಪೂರ್ಣ ಕರೆಯಾಗಿ ನೋಡಿ, ದೇವರತ್ತ ಹಾಗೂ ಇತರರತ್ತ ಸಹಜವಾಬ್ದಾರಿಯೊಂದಿಗೆ ಬದುಕುವಂತೆ ಇದು ಆಹ್ವಾನಿಸುತ್ತದೆ.
ದಸ್ತಾವೇಜಿನ ಆಧಾರವು ದ್ವಿತೀಯ ವ್ಯಾಟಿಕನ್ ಪರಿಷತ್ತಿನ ಗೌಡಿಯಂ ಎಟ್ ಸ್ಪೆಸ್ ಸಂವಿಧಾನವಾಗಿದೆ. ತಂತ್ರಜ್ಞಾನ ಮತ್ತು ಅಭಿವೃದ್ಧಿಯ ನಡುವೆ, ಟ್ರಾನ್ಸ್‌ಹ್ಯೂಮನಿಸಮ್ (ಮಾನವ ಸಾಮರ್ಥ್ಯ ವೃದ್ಧಿ) ಮತ್ತು ಪೋಸ್ಟ್‌ಹ್ಯೂಮನಿಸಮ್ (ಮಾನವನನ್ನೇ ಬದಲಾಯಿಸುವ ಕನಸು) ಎಂಬ ಎರಡು ಧ್ರುವಗಳ ನಡುವೆ ಕ್ರೈಸ್ತ ನಂಬಿಕೆ ಕ್ರಿಸ್ತನಲ್ಲಿ ಸಮತೋಲನ ಕಂಡುಕೊಳ್ಳಲು ಕರೆಯುತ್ತದೆ. ದೇವಮಾನವನಾದ ಕ್ರಿಸ್ತನಲ್ಲಿ ಮಾನವೀಯ ಉದ್ವೇಗಗಳು ಸಮನ್ವಯವಾಗುತ್ತವೆ ಎಂದು ದಸ್ತಾವೇಜು ಹೇಳುತ್ತದೆ.
ಡಿಜಿಟಲ್ ತಂತ್ರಜ್ಞಾನ ಈಗ ಕೇವಲ ಸಾಧನವಾಗಿರದೆ, ಜೀವಂತ ಪರಿಸರವಾಗಿದೆ ಅದು ಮಾನವ ಸಂಬಂಧಗಳು ಮತ್ತು ಚಟುವಟಿಕೆಗಳನ್ನು ರೂಪಿಸುತ್ತದೆ. ಈ ಡಿಜಿಟಲ್ ಯುಗವು ಅರ್ಥದ ಹೊಸ ಗಗನವನ್ನು ತೆರೆದಿದ್ದರೂ, ಪರಿಸರ ಶೋಷಣೆ, ಜಾಗತಿಕ ಉತ್ತರ-ದಕ್ಷಿಣ ಅಸಮತೆ, ಮತ್ತು ವರ್ಚುವಲ್ ಏಕಾಂತತೆಯಂತಹ ಅಪಾಯಗಳನ್ನುಂಟುಮಾಡಿದೆ. ಮಾಹಿತಿಯ ಅತಿಯಾದ ಪ್ರವಾಹವು ವ್ಯಕ್ತಿಯ ಆತ್ಮಪರಿಚಯಕ್ಕೂ ಸವಾಲಾಗುತ್ತಿದೆ.
ಕೃತಕ ಬುದ್ಧಿಮತ್ತೆಯ (ಎಐ) ಹೆಚ್ಚುತ್ತಿರುವ ಪ್ರಭಾವವು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಿಯಂತ್ರಣ ಕಷ್ಟವಾಗುವ ಪರಿಸ್ಥಿತಿಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ “ಲೈಕ್ಸ್” ಆಧಾರಿತ ಅಭಿಪ್ರಾಯ ನಿರ್ಮಾಣವು ಜನರಾಜ್ಯದಲ್ಲಿ ಧ್ರುವೀಕರಣ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತಿದೆ. ನಿಜವಾದ ಸಾಮಾಜಿಕ ಸಂವಾದ ಮತ್ತು ಸೌಹಾರ್ದತೆಯ ಕೊರತೆ ಹೆಚ್ಚುತ್ತಿದೆ ಎಂದು ಐಟಿಸಿ ಗಮನಿಸುತ್ತದೆ.
ಮಾನವ ವೃದ್ಧಿ ಮತ್ತು ಜೈವಿಕ ತಂತ್ರಜ್ಞಾನಗಳ ಪ್ರಗತಿ ಒಳ್ಳೆಯದಾಗಿದ್ದರೂ, ತಂತ್ರಜ್ಞಾನದಿಂದ ಸಾಧ್ಯವಾದದ್ದು ಮತ್ತು ಮಾನವೀಯವಾಗಿ ಸೂಕ್ತವಾದದ್ದು ನಡುವಿನ ಸಮತೋಲನ ಅಗತ್ಯವೆಂದು ದಸ್ತಾವೇಜು ಹೇಳುತ್ತದೆ. ಧರ್ಮ ಮತ್ತು ಡಿಜಿಟಲ್ ಜಗತ್ತಿನ ಸಂಬಂಧದಲ್ಲೂ ಬೆಳಕು ಮತ್ತು ನೆರಳು ಎರಡೂ ಇವೆ ಜ್ಞಾನಕ್ಕೆ ಸುಲಭ ಪ್ರವೇಶ ಒಳ್ಳೆಯದಾದರೂ, ಧರ್ಮದ ವಾಣಿಜ್ಯೀಕರಣ ಮತ್ತು ವರ್ಚುವಲ್ ಆಧ್ಯಾತ್ಮಿಕತೆಯ ಅಪಾಯಗಳೂ ಉಂಟು.
ಮಾನವನ ಸಂಪೂರ್ಣ ಕರೆಯ ಭಾಗವಾಗಿ ಕಾಲ, ಸ್ಥಳ ಮತ್ತು ಸಂಬಂಧಗಳ ಮಹತ್ವವನ್ನು ದಸ್ತಾವೇಜು ಒತ್ತಿ ಹೇಳುತ್ತದೆ. ಇತಿಹಾಸ ಜ್ಞಾನ ಕಳೆದುಹೋಗಿ ಸಂಸ್ಕೃತಿಯ ಅಮ್ನೀಷಿಯಾ ಬೆಳೆಯುತ್ತಿರುವುದು ಅಪಾಯಕರ. ಕುಟುಂಬ, ಜನಾಂಗ ಮತ್ತು ಸಂಸ್ಕೃತಿಯ ಸಂಬಂಧಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ ಅವು ಜಾಗತೀಕರಣದ ಏಕರೂಪತೆಗೆ ತಡೆಗೋಡೆಯಾಗುತ್ತವೆ. ಬಡವರು ತಂತ್ರಜ್ಞಾನ ಪ್ರಗತಿಯ ಪಾರ್ಶ್ವ ಹಾನಿಯಾಗಬಾರದು ಎಂಬುದು ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಪುರುಷ ಮತ್ತು ಸ್ತ್ರೀ ನಡುವಿನ ಭೇದವು ದೇವರ ವರವಾಗಿದ್ದು, ಅದನ್ನು ನಿರಾಕರಿಸುವುದು ಮಾನವ ವ್ಯಕ್ತಿತ್ವದ ಅಸಲಿತನವನ್ನು ಹಾಳುಮಾಡುತ್ತದೆ ಎಂದು ದಸ್ತಾವೇಜು ತಿಳಿಸುತ್ತದೆ. ಭೌತಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಸಮನ್ವಯವು ಪುನರುತ್ಥಾನದ ಬೆಳಕಿನಲ್ಲಿ ಪೂರ್ಣ ಅರ್ಥ ಪಡೆಯುತ್ತದೆ. ಅಂತಿಮವಾಗಿ, ಮಾನವಕುಲದ ಭವಿಷ್ಯ ಬಯೋಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ನಿರ್ಧಾರವಾಗುವುದಿಲ್ಲ ಅದು ಇಂದಿನ ಉದ್ವೇಗಗಳನ್ನು ಸಮತೋಲನದಿಂದ ಎದುರಿಸಿ, ಮಿತಿಯ ಅರಿವಿನೊಂದಿಗೆ ಕ್ರಿಸ್ತನ ರಹಸ್ಯಕ್ಕೆ ತೆರೆದ ಮನಸ್ಸಿನಿಂದ ಬದುಕುವ ಸಾಮರ್ಥ್ಯದಲ್ಲಿದೆ. ದೇವರ ವರವನ್ನು ಸ್ವೀಕರಿಸಿದ ಮಾತೆ ಮರಿಯಮ್ಮನವರ , ಸಂಪೂರ್ಣ ಮಾನವೀಯತೆಯ ಮಾದರಿಯಾಗಿದ್ದಾರೆ ಎಂದು ದಸ್ತಾವೇಜು ಸಾರುತ್ತದೆ.